varthabharthi


ಕ್ರೀಡೆ

ವೀಕ್ಷಕ ವಿವರಣೆ ನೀಡುವಾಗ ಅನಾರೋಗ್ಯ: ರಿಕಿ ಪಾಂಟಿಂಗ್ ಆಸ್ಪತ್ರೆಗೆ ದಾಖಲು

ವಾರ್ತಾ ಭಾರತಿ : 2 Dec, 2022

 ಪರ್ತ್,ಡಿ.2: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರನ್ನು ಅನಾರೋಗ್ಯದ ಕಾರಣಕ್ಕೆ ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಟ್ರೇಲಿಯದ ಪರ್ತ್ ಕ್ರೀಡಾಂಗಣದಲ್ಲಿ ಆತಿಥೇಯ ತಂಡ ಹಾಗೂ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶುಕ್ರವಾರ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ವೇಳೆ ಪಾಂಟಿಂಗ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭೋಜನ ವಿರಾಮದ ವೇಳೆ ಪಾಂಟಿಂಗ್ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತಿದ್ದಂತೆಯೇ ಅವರು ಕ್ರೀಡಾಂಗಣದಿಂದ ಹೊರ ನಡೆದಿದ್ದಾರೆ ಎಂದು ವರದಿಯಾಗಿದೆ.

47 ವರ್ಷದ ಪಾಂಟಿಂಗ್ ಅವರು ತವರಿನಲ್ಲಿ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆವೆನ್ ನೆಟ್‌ವರ್ಕ್ ವಾಹಿನಿಯ ವೀಕ್ಷಕವಿವರಣೆ ತಂಡದಲ್ಲಿದ್ದಾರೆ.

 ರಿಕಿ ಪಾಂಟಿಂಗ್ ಆರೋಗ್ಯದಲ್ಲಿ ಏರುಪೇರಾಗಿದೆ. ಅವರು ಈ ದಿನದ ವೀಕ್ಷಕವಿವರಣೆಯಲಿ ಭಾಗವಹಿಸುವುದಿಲ್ಲ ಎಂದು ಸೆವೆನ್ ನೆಟ್‌ವರ್ಕ್ ವಾಹಿನಿಯ ವಕ್ತಾರರು ತಿಳಿಸಿದ್ದಾರೆ.

2012ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಪಾಂಟಿಂಗ್ ಆಸ್ಟ್ರೇಲಿಯದ ಪರ 168 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಕ್ರಿಕೆಟ್‌ನ ಓರ್ವ ಅತ್ಯಂತ ಯಶಸ್ವಿ ನಾಯಕನಾಗಿರುವ ಅವರು 77 ಟೆಸ್ಟ್ ಪಂದ್ಯಗಳಲ್ಲಿ 48ರಲ್ಲಿ ಜಯ ಸಾಧಿಸಿದ್ದರು.ಟೆಸ್ಟ್ ಕ್ರಿಕೆಟ್‌ನಲ್ಲಿ 51.85ರ ಸರಾಸರಿಯಲ್ಲಿ 41 ಶತಕ ಹಾಗೂ 62 ಅರ್ಧಶತಕಗಳ ಸಹಿತ 13,378 ರನ್ ಗಳಿಸಿದ್ದಾರೆ.

375 ಏಕದಿನ ಪಂದ್ಯದಲ್ಲಿ 30 ಶತಕ ಹಾಗೂ 82 ಅರ್ಧಶತಕಗಳ ಸಹಿತ 13,704 ರನ್ ಗಳಿಸಿದ್ದಾರೆ.

1999, 2003 ಹಾಗೂ 2007ರಲ್ಲಿ ಸತತ ಮೂರು ಬಾರಿ 50 ಓವರ್ ವಿಶ್ವಕಪ್ ಜಯಿಸಿದ್ದ ಆಸ್ಟ್ರೇಲಿಯ ತಂಡದ ಭಾಗವಾಗಿದ್ದರು. 2003 ಹಾಗೂ 2007ರಲ್ಲಿ ವಿಶ್ವಕಪ್ ಜಯಿಸಿದಾಗ ತಂಡದ ನಾಯಕನಾಗಿದ್ದರು.
ನಿವೃತ್ತಿಯ ನಂತರ ಐಪಿಎಲ್‌ನ ಮುಂಬೈ ಇಂಡಿಯನ್ಸ್ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿದ್ದರು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)