ಭಾಷಣಕ್ಕೀಗ ಬೆಲೆ ಇದೆಯೇ?
ಮಾನ್ಯರೇ,
ಇತ್ತೀಚಿನ ದಿನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಅವರು ನಡೆಸುವ ಸಮಾವೇಶದಲ್ಲಿ ಲಕ್ಷಾಂತರ ಮಂದಿ ಸೇರುತ್ತಿದ್ದಾರೆ. ಜನರನ್ನು ಸೇರಿಸುವುದರಲ್ಲಿ ಪೈಪೋಟಿಯೇ ನಡೆಯುತ್ತಿದೆ. ಆದರೆ ಇಲ್ಲಿ ಒಂದು ವಿಷಯವನ್ನು ಗಮನಿಸಬೇಕಾಗಿದೆ. ನಾಷ್ಯನಲ್ ಹೈಸ್ಕೂಲ್ ಮೈದಾನ, ಅರಮನೆ ಮೈದಾನ ಅಥವಾ ರಾಜ್ಯದ ಯಾವುದೇ ಮೈದಾನಗಳಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಲಕ್ಷಾಂತರ ಮಂದಿ ಸೇರುತ್ತಿದ್ದರು. ಅವರು ಪಾದಯಾತ್ರೆಯಲ್ಲಿ ಬರುತ್ತಿದ್ದರು, ತಮ್ಮ ಸ್ವಂತ ವಾಹನಗಳಲ್ಲಿ ಬರುತ್ತಿದ್ದರು, ವಿಶೇಷವಾಗಿ ಕಾರ್ಮಿಕ ಬಂಧುಗಳು ತಮ್ಮ ಸಮವಸ್ತ್ರದಲ್ಲಿಯೇ ಸಹಸ್ರಾರು ಮಂದಿ ಸಭೆಗಳಲ್ಲಿ ಭಾಗವಹಿಸಿ ಭಾಷಣವನ್ನು ಸಂಪೂರ್ಣವಾಗಿ ಕೇಳಿ ಭಾಷಣ ಮುಗಿದ ನಂತರ ನಾಯಕರು ಆಡಿದ ಮಾತುಗಳನ್ನು ಮೆಲುಕು ಹಾಕುತ್ತಾ ಗುಂಪು ಗುಂಪಾಗಿ ಮನೆಗಳಿಗೆ ಮರಳುತ್ತಿದ್ದರು. ಆಗ ನಮ್ಮನ್ನಾಳುವ ನಾಯಕರು ಮತ್ತು ವಿರೋಧ ಪಕ್ಷದ ನಾಯಕರ ಮಾತಿನಲ್ಲಿ ಗಾಂಭೀರ್ಯವಿರುತ್ತಿತ್ತು, ವಿಚಾರ ಇರುತ್ತಿತ್ತು, ಆರೋಗ್ಯಕರವಾದ ವಿಮರ್ಶೆಗಳು ನಡೆಯುತ್ತಿತ್ತು, ಮಿಗಿಲಾಗಿ ಇವರ ಮೇಲೆ ಜನರಿಗೆ ವಿಶ್ವಾಸವಿತ್ತು.
ಆಗ ಸಭೆಗಳನ್ನು ನಡೆಸಲು ಲಾರಿಗಳು ಬೇಕಾಗಿರಲಿಲ್ಲ, ಬಸ್‌ಗಳು ಬೇಕಾಗಿರಲಿಲ್ಲ, ಹಣದ ಹೊಳೆಯನ್ನೂ ಹರಿಸಬೇಕಾಗಿರಲಿಲ್ಲ. ಮಣ್ಣಿನ ನೆಲದ ಮೇಲೆ ಕುಳಿತು ಶ್ರದ್ಧೆಯಿಂದ ಮಾತುಗಳನ್ನು ಕೇಳಿ ಚಪ್ಪಾಳೆ ತಟ್ಟಿ ಭಾಷಣಕಾರರನ್ನು ಹುರಿದುಂಬಿಸುತ್ತಿದ್ದರು. ಇಂದು ಕಾಲ ಬದಲಾಗಿದೆ. ಎಲ್ಲಾ ಸಭೆಗಳಲ್ಲಿ ಲಕ್ಷಾಂತರ ಮಂದಿಯ ಸಂಖ್ಯೆಯಲ್ಲಿಯೇ ಇರುತ್ತಾರೆ. ಆದರೆ ಇವರೆಲ್ಲರಲ್ಲಿ ಸ್ಥಳದಲ್ಲೇ ಸೇರಿದ ಶೇ. 10ರಷ್ಟು ಮಂದಿ ಹೊರತುಪಡಿಸಿ ಉಳಿದವರೆಲ್ಲ ಸಭೆಗೆ ಕರೆದುಕೊಂಡು ಬಂದವರಷ್ಟೆ, ಅವರು ಮಾತುಗಳನ್ನು ಕೇಳುವುದೂ ಇಲ್ಲ, ಕುರ್ಚಿಗಳಲ್ಲಿ ಕುಳಿತು ತಮ್ಮನ್ನು ಕರೆತಂದ ನಾಯಕ ಕರೆದಾಗ ಅವನ ಹಿಂದೆ ಸಭೆಯು ಮುಗಿಯುವ ಮುನ್ನವೇ ಮಾಯವಾಗುತ್ತಾರೆ. ಇಂದು ಸಭೆಗಳು ನಡೆದರೆ ಬಸ್‌ಗಳು, ವ್ಯಾನ್‌ಗಳು ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ತರಲು ಬಳಕೆಯಾಗುತ್ತಿದೆ. ಹಣವಿಲ್ಲದೆ ಸಭೆಗೆ ಬರುವ ಜನರ ಸಂಖ್ಯೆ ಅತಿ ವಿರಳವಾಗಿದೆ. ಎಲ್ಲರ ಸಭೆಗೂ ಜನ ಸೇರಿಸುತ್ತಾರೆ, ಸೇರಿಸುವವರು ಬೇರೆ ಬೇರೆಯವರಾದರೂ ಬರುವ ಬಹುತೇಕ ಮಂದಿ ಎಲ್ಲರ ಸಭೆಗೂ ಬರುವವರೇ ಆಗಿರುತ್ತಾರೆ. ಇಂದು ನಡೆಯುವ ಸಭೆಗಳಲ್ಲಿ ಗಾಂಭೀರ್ಯತೆ ಇಲ್ಲ, ಆರೋಗ್ಯ ಪೂರ್ಣ ಚರ್ಚೆಗಳಿಲ್ಲ. ಕೇವಲ ಅಬ್ಬರದ, ಆರ್ಭಟದ ದ್ವೇಷದ ಕಿಚ್ಚು ಹಚ್ಚುವ ಮಾತುಗಳು, ಜಾತಿ, ಧರ್ಮದ ಚೌಕಟ್ಟುಗಳಲ್ಲಿಯೇ ಮಾತನಾಡುವ ನಾಯಕರ ಬಗ್ಗೆ ಜನರಿಗೆ ಭರವಸೆ ಇಲ್ಲ, ವಿಶ್ವಾಸವೂ ಇಲ್ಲ. ಹೀಗಾಗಿ ರಾಜಕೀಯಾಸಕ್ತ ಸಾಮಾನ್ಯ ಜನರು ಇಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಜನ ಸೇರಿದ್ದನ್ನು ನೋಡಿ ರಾಜಕೀಯ ನಾಯಕರೆಲ್ಲರೂ ಸಂಭ್ರಮಿಸುತ್ತಾರೆ. ಇಷ್ಟೊಂದು ಜನ ಬೆಂಬಲವಿದೆ ಎಂದು ತಮ್ಮನ್ನು ತಾವೇ ಬೆನ್ನು ತಟ್ಟಿಕೊಳ್ಳುತ್ತಾರೆ. ಆದರೆ ಸಭೆ ಮುಗಿದ ನಂತರ ಹೊರಡುವ ಜನ ಯಾರ ಮಾತನ್ನೂ ನೆನಪಲ್ಲಿ ಇಟ್ಟುಕೊಂಡಿರುವುದಿಲ್ಲ. ತಮ್ಮ ವಾಹನವನ್ನು ಹಿಡಿಯುವ ಚಿಂತೆ, ಮನೆಗೆ ಸೇರುವ ಆತುರ, ಎಷ್ಟೋ ಬಾರಿ ಸಭೆ ಮುಗಿಯುವ ಮುನ್ನ ಖಾಲಿ ಕುರ್ಚಿಗಳು ವಂದನಾರ್ಪಣೆಯ ಮಾತುಗಳನ್ನು ಕೇಳುತ್ತಿರುತ್ತವೆ.
ಇದು ಈಗಿನ ಲಕ್ಷಗಟ್ಟಲೆ ಜನ ಸೇರುವ ಸಭೆಗಳ ಪರಿಸ್ಥಿತಿ!