varthabharthi


ಮನೋ ಚರಿತ್ರ

ಮನಸ್ಸು ಮಿತ್ರ ಮತ್ತು ಶತ್ರು

ವಾರ್ತಾ ಭಾರತಿ : 4 Dec, 2022
ಯೋಗೇಶ್ ಮಾಸ್ಟರ್

‘‘ಉದ್ಧರೇದಾತ್ಮನಾತ್ಮಾನಂ ನಾತ್ಮನಮವಸಾಧಯೇತ್
ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ’’

ಭಗವದ್ಗೀತೆಯ 6:5 ಶ್ಲೋಕದಲ್ಲಿ ಆತ್ಮ ಎಂಬ ಪದವನ್ನು ಮನಶಕ್ತಿಯನ್ನಾಗಿಯೇ ಹೆಸರಿಸಿದ್ದಾರೆ. ಉದ್ಧಾರ ಅಂತ ಏನಾದರೂ ಆಗುವುದಿದ್ದರೆ ಅದು ನಿನ್ನ ಮನಸ್ಸಿನಿಂದಲೇ ಆಗುವುದು. ಅದರಿಂದಲೇ ಪತನಗೊಳ್ಳುವುದು ಬೇಡ. ಮನಸ್ಸೇ ಮನಸ್ಸಿಗೆ ಸ್ನೇಹಿತ. ಮನಸ್ಸೇ ಮನಸ್ಸಿಗೆ ಶತ್ರುವಾಗಬಹುದು. ಬಹಳ ಸ್ಪಷ್ಟವಾಗಿ ಮನಸ್ಸಿಂದಲೇ ಮನಸ್ಸು. ಮನಸ್ಸಿನ ಆಲೋಚನೆಗಳಿಂದಲೇ ಮನಸ್ಸಿನ ಚಟುವಟಿಕೆಗಳು. ಆ ಆಲೋಚನೆಗಳು ರೂಪಿಸಿಕೊಂಡಿರುವ ತನ್ನತನಕ್ಕೆ ಪೂರಕವಾಗಿದ್ದರೆ ಮನಸ್ಸೆಂಬುದು ಗೆಳೆಯನಂತೆ. ಅದೇ ತನ್ನತನಕ್ಕೆ ಮಾರಕವಾಗಿದ್ದರೆ ಶತ್ರುವಿನಂತೆ. ತತ್ವಗಳು, ಸಿದ್ಧಾಂತಗಳು, ಆಧ್ಯಾತ್ಮದ ಚಿಂತನೆಗಳು ಮತ್ತು ಪ್ರಯೋಗಗಳು; ಎಲ್ಲವೂ ಈ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲೇ ಸಾವಿರಾರು ವರ್ಷಗಳಿಂದ ತಮ್ಮ ಸಮಯ, ಶ್ರಮ, ಸಂಪನ್ಮೂಲ, ಪ್ರತಿಭೆಗಳನ್ನೆಲ್ಲಾ ಬಳಸಿವೆ. ಆದರೂ ನಾವು ಇನ್ನೂ ಸಶಕ್ತವಾದ ಮನಸ್ಸನ್ನು ಹೊಂದದೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದೇವೆ.

ಇದಕ್ಕೆ ಕಾರಣವೆಂದರೆ ಮನಸ್ಸೆಂಬ ಸೂಕ್ಷ್ಮಚೈತನ್ಯವನ್ನು ನಿಭಾಯಿಸುವ ಎಲ್ಲಾ ವಿಧಾನಗಳನ್ನು ಅಥವಾ ಮಾರ್ಗಗಳನ್ನು ಸಾಂಪ್ರದಾಯಿಕ ಆಚರಣೆಗಳನ್ನಾಗಿಸಿ ಮೇಲಿನ ಸ್ತರದಲ್ಲಿಯೇ ಉಳಿಸಿಬಿಟ್ಟಿದ್ದು. ಚಟುವಟಿಕೆಗಳ ಜೊತೆಜೊತೆಗೆ ಬಹಳ ಮುಖ್ಯವಾಗಿ ದೃಷ್ಟಿ ಮತ್ತು ಗಮನವೆರಡನ್ನೂ ಹೊಂದುವ ಬದಲು, ಬರಿದೇ ಗೊಡ್ಡು ಆಚರಣೆಗಳನ್ನಾಗಿಸಿದ್ದು. ಆಸೆ ಮತ್ತು ಭಯಗಳ ಮೂಲಧಾತುಗಳ ಮೇಲೆಯೇ ಆಧರಿಸಿರುವ ಲೌಕಿಕವಾದ ಹೊರದೃಷ್ಟಿಯನ್ನು ಒಳದೃಷ್ಟಿಯನ್ನಾಗಿಸಿಕೊಳ್ಳದೇ ಹೋದದ್ದು. ಆಧ್ಯಾತ್ಮ, ಸಿದ್ಧಾಂತಗಳು, ಧಾರ್ಮಿಕ ಆಚರಣೆಗಳು, ದೈವಿಕ ಪರಿಕಲ್ಪನೆಗಳು; ಯಾವುದ್ಯಾವುದು ಮನುಷ್ಯನ ಉದ್ಧಾರಕ್ಕಾಗಿ ಮನಸ್ಸನ್ನು ತರಬೇತಿಗೊಳಿಸಲು ಬಂದವೋ ಅವೆಲ್ಲವೂ ಬಹುಪಾಲು ವಿಫಲಗೊಂಡವು. ಇಂದು ಇನ್ನೂ ಮಾನಸಿಕ ಸಮಸ್ಯೆಗಳು ಅಸ್ತಿತ್ವದಲ್ಲಿ ಬಹುದೊಡ್ಡ ಸ್ವರೂಪದಲ್ಲಿ ಇರಲು ಕಾರಣ ಅದನ್ನು ಅರಿಯುವ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಬೆಳೆಸಿಕೊಳ್ಳದೆ ಬರಿಯ ಆಚರಣೆಗಳ ಮಟ್ಟಕ್ಕೆ ನಿಂತದ್ದು. ನಿಜಕ್ಕೂ ಇವುಗಳ ಯಶಸ್ಸಿಗೆ ಬೇಕಾಗಿದ್ದದ್ದು ಅರಿವು. ಸಂವೇದನಾಶೀಲ ಅರಿವು.

ಸುಮ್ಮನೆ ಆಲೋಚಿಸಿ ನೋಡಿ. ನಮ್ಮ ಮನಸ್ಸೇ ಸಬ್ಜೆಕ್ಟ್. ಆ ಸಬ್ಜೆಕ್ಟಿಗೆ ತಾನೇ ಅಂದರೆ ಮನಸ್ಸೇ ಆಬ್ಜೆಕ್ಟ್. ನಿಜಕ್ಕೂ ಮನಸ್ಸು ಬಹಳ ಕುತೂಹಲಕಾರಿಯಾದ, ಆಸಕ್ತಿಕರವಾಗಿ ಮತ್ತು ಸೃಜನಶೀಲ ಪ್ರಯೋಗಗಳಿಗೆ ಒಡ್ಡಿಕೊಳ್ಳಲಾಗುವಂತಹ ವಸ್ತು. ಬೌದ್ಧರಲ್ಲಿಯೂ ಈ ಮನಸ್ಸಿನ ಸೂಕ್ಷ್ಮತೆಯ ಬಗ್ಗೆ ಬಹಳಷ್ಟು ಸಂವೇದನಾಶೀಲವಾದ ಮತ್ತು ಸೃಜನಶೀಲವಾದ ಪ್ರಯೋಗಗಳು ನಡೆದಿವೆ. ಅದರಲ್ಲೂ ಜೆನ್ ಮತ್ತು ಟಾವೋ ಹಾದಿಗಳು ಬಹಳ ಮುಕ್ತವಾಗಿಯೂ ಮತ್ತು ಆಳವಾಗಿಯೂ ಇವೆ. ೆನ್ ಗುರು ಲಾಟ್ಸೆ ಒಂದು ದಿನ ನಿದ್ರೆಯಿಂದ ಎದ್ದಾದ ಮೇಲೆ ಗಂಭೀರವಾಗಿ ಚಿಂತಿಸುತ್ತಿದ್ದನಂತೆ. ಶಿಷ್ಯರು ಕಾರಣ ಕೇಳಿದರೆ, ನಾನು ನನ್ನ ಕನಸಿನಲ್ಲಿ ಚಿಟ್ಟೆಯಾಗಿ ಹಾರಾಡುತ್ತಿದ್ದೆ ಎಂದನಂತೆ. ಸರಿ, ಈಗ ಅದಕ್ಕೇನೆಂದು ಕೇಳಿದರೆ, ನಾನು ಚಿಟ್ಟೆಯಾಗಿ ಹಾರಾಡುವಂತೆ ಕನಸು ಕಂಡೆ. ಒಂದು ವೇಳೆ ಆ ಚಿಟ್ಟೆಯೇ ಲಾಟ್ಸೆಯಾಗಿರುವ ಕನಸನ್ನು ಕಾಣುತ್ತಿದೆಯೇ? ಯಾವುದು ನಿಜ? ಎಂದನಂತೆ. ಹೀಗೆ ಆಲೋಚಿಸುವಷ್ಟು ಸೂಕ್ಷ್ಮ ಸಂವೇದನೆಯ ದೃಷ್ಟಿಗಳು ಮನಸ್ಸನ್ನು ಅರಿಯುವಲ್ಲಿ, ಅದರ ಜಾಡನ್ನು ಅನುಸರಿಸುವಲ್ಲಿ, ಅದರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿಯುವಲ್ಲಿ ಆನಂದವನ್ನು ಪಡೆಯುತ್ತವೆ.

ತನ್ನ ಮನಸ್ಸನ್ನು ತಾನು ಕಾಣುವುದೇ ಒಂದು ಮಜ. ಮನಸ್ಸಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಕಾಣುವ ಮತ್ತು ಅಸ್ತಿತ್ವದಲ್ಲಿರುವ ಎಲ್ಲಾ ಕ್ಷೇತ್ರಗಳಿಂದಲೂ ಸಹಾಯ ಪಡೆದುಕೊಳ್ಳಬೇಕಾಗಿರುವ ಅಗತ್ಯತೆ ಇದೆ. ಸಾಹಿತ್ಯ, ವಿಜ್ಞಾನ, ಕಲೆ, ರಾಜಕೀಯ, ಕೈಗಾರಿಕೆ, ಧಾರ್ಮಿಕ, ಆಧ್ಯಾತ್ಮಿಕ, ದೈನಂದಿನ ಚಟುವಟಿಕೆಗಳು; ಹೀಗೆ ಮನುಷ್ಯರು ಭಾಗವಾಗಿರುವ ಅಥವಾ ಪಾಲುಗೊಳ್ಳುವ ಯಾವುದೇ ಕ್ಷೇತ್ರದ ಚಟುವಟಿಕೆಗಳು ಪೂರ್ಣಪ್ರಮಾಣದಲ್ಲಿ ಮನಸ್ಸಿನ ಚಟುವಟಿಕೆಗಳ ಮೇಲೆಯೇ ಆಧರಿಸಿರುತ್ತದೆ. ಮನುಷ್ಯನೊಬ್ಬನ ವೈಯಕ್ತಿಕ ಸಾಧನೆ ಅಥವಾ ಸಾಮೂಹಿಕ ಸಾಧನೆಗಳೂ ಕೂಡ ಮನಸ್ಸಿನ ಸಂಕಲ್ಪ, ಸಾಮರ್ಥ್ಯ ಮತ್ತು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯದ ಮೇಲೆಯೇ ಅವಲಂಬಿತವಾಗಿರುತ್ತದೆ. ಹಾಗೆಯೇ ಯುದ್ಧ, ನಾಗರಿಕ ದಂಗೆ, ಸರಕಾರದ ವೈಫಲ್ಯ, ವ್ಯವಸ್ಥೆಯ ವೈಫಲ್ಯ, ವ್ಯಕ್ತಿಗಳ ಮತ್ತು ಸಮೂಹಗಳ ಅಪರಾಧಗಳು, ಗುಂಪು ಘರ್ಷಣೆ; ಇತ್ಯಾದಿ ಅವಘಡಗಳಿಗೆಲ್ಲಾ ಅನಿಯಂತ್ರಿತ ಮತ್ತು ಅನುಚಿತ ಸ್ಥಿತಿಗಳ ಮನಸ್ಸಿನ ಚಟುವಟಿಕೆಗಳೇ ಕಾರಣವಾಗಿರುತ್ತವೆ. ಹೀಗಿರುವಾಗ ಮನಶಾಸ್ತ್ರ ಅಥವಾ ಮನೋವಿಜ್ಞಾನವನ್ನು ಗಂಭೀರವಾಗಿ ಪರಿಗಣಿಸದಿರುವುದು ಅತ್ಯಂತ ನಿರಾಶಾದಾಯಕ ಸ್ಥಿತಿ. ಅದಕ್ಕೆ ತೀರಾ ಘನ ಪಾಂಡಿತ್ಯವಲ್ಲ ಬೇಕಾಗಿರುವುದು. ಸಾಮಾನ್ಯ ತಿಳುವಳಿಕೆ. ಸದಾ ಜಾಗೃತಿಯಲ್ಲಿರುವ ಸಾದಾ ಅರಿವು. ಅದೇ ನಮ್ಮೆಲ್ಲಾ ಒಳಗಿನ ಮತ್ತು ಹೊರಗಿನ ಸಮಸ್ಯೆಗಳನ್ನು ಗುಡಿಸಿ ಹಾಕುವುದು. ಮನಮೂಲದಿಂದ ಸ್ಥಿತಿಗತಿಗಳು

ಮನವೇ ಅವುಗಳ ಮುಂದಾಳು
ನಡೆಯುವ ಎತ್ತಿನ ಹೆಜ್ಜೆಯ ಹಿಂದೆ
ಗಾಡಿಯು ನಡೆಯಲೇ ಬೇಕಹುದಂತೆ (ದಮ್ಮಪದ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)