ನಾಮಕರಣ ಮಾಡಲು ಪುರೋಹಿತರು ಇದ್ದಾರೆ, ಸಿದ್ದರಾಮಯ್ಯಗೆ ಬೇರೆ ಹೆಸರಿಡಲು ಸಿ.ಟಿ.ರವಿ ಯಾರು?: ಬಿ.ಕೆ.ಹರಿಪ್ರಸಾದ್
ಬೆಂಗಳೂರು, ಡಿ. 5: ‘ನಾಮಕರಣ ಮಾಡಲು ಪುರೋಹಿತರಿದ್ದಾರೆ. ಸಿದ್ದರಾಮಯ್ಯರಿಗೆ ಅವರ ತಂದೆ- ತಾಯಿ ಈಗಾಗಲೇ ನಾಮಕರಣ ಮಾಡಿದ್ದಾರೆ. ಹೀಗಿರುವಾಗ ಅವರಿಗೆ ಹೆಸರಿಡಲು ಸಿ.ಟಿ.ರವಿ ಯಾರು? ಎಂದು ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಮೊದಲು ತಮ್ಮ ಹೆಸರೇನು ಅನ್ನುವುದನ್ನು ತಿಳಿದುಕೊಳ್ಳಬೇಕು. ಚಿಕ್ಕಮಗಳೂರಿನಲ್ಲಿ ಇವರು ಏನು ಎನ್ನುವುದು ಎಲ್ಲರಿಗೂ ತಿಳಿದಿದೆ. ಯಾರೊಬ್ಬರ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಅದರ ಬಗ್ಗೆ ಚರ್ಚೆ ಮಾಡಬೇಕೇ ಹೊರತು, ಹೆಸರುಗಳನ್ನು ಬದಲಾಯಿಸುವುದು ತಪ್ಪು. ಆದರೆ, ವ್ಯಕ್ತಿಗಳಿಗೆ ಬೇರೆ ಹೆಸರು ಇಡುವುದು ಬಿಜೆಪಿಯ ಸಂಪ್ರದಾಯವಾಗಿದೆ’ ಎಂದು ಟೀಕಿಸಿದರು.
‘ಈ ಹಿಂದೆ ಪ್ರಧಾನಿ ಮೋದಿ ಬಂದಾಗ ಸಿದ್ದರಾಮಯ್ಯಗೆ ಸಿದಾರೋಪಯ್ಯ ಎಂದು ಹೆಸರು ಕೊಟ್ಟಿದ್ದರು. ಇದೀಗ ಆ ಕೆಲಸವನ್ನು ಅವರ ಚೇಲಾಗಳು ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಬಾಗಿಲು ಮುಚ್ಚಲಿದೆ ಎಂದು ಹರಿಪ್ರಸಾದ್ ಎಚ್ಚರಿಕೆ ನೀಡಿದರು.
ಕರ್ನಾಟಕ ಹಾಗೂ ಮರಾಹಾಷ್ಟ್ರದಲ್ಲಿನ ಬಿಜೆಪಿ ಸರಕಾರವಿದ್ದು, ಕೇಂದ್ರದಲ್ಲಿಯೂ ಇವರದ್ದೇ ಸರಕಾರವೇ ಇದೆ. ಬೆಳಗಾವಿ ಗಡಿ ವಿವಾದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕೂಡಲೇ ಸಮಸ್ಯೆ ಇತ್ಯರ್ಥಪಡಿಸಬೇಕು. ಆದರೆ, ಸಮಸ್ಯೆ ಬಗೆಹರಿಸಲು ಆಗದಿರುವ ಕಾರಣ ಗಡಿ ವಿಚಾರ ಮುಂದಿಟ್ಟುಕೊಂಡು ಜನರ ಮನಸ್ಸು ಬೇರೆ ಕಡೆ ತಿರುಗಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಶ್ರೀರಂಗಪಟ್ಟಣ | ಮನೆ ಮೇಲಿನ ಹಸಿರು ಧ್ವಜ ಕಿತ್ತೆಸೆದು ಕೇಸರಿ ಧ್ವಜ ಹಾರಾಟ, ಸ್ವತ್ತುಗಳಿಗೆ ಹಾನಿ ಆರೋಪ: FIR ದಾಖಲು