ಬಿಡ್ ಹಿಂತೆಗೆದುಕೊಂಡ ಭಾರತ, 2027 ರ ಏಷ್ಯನ್ ಕಪ್ ಆತಿಥ್ಯಕ್ಕೆ ಸೌದಿ ಅರೇಬಿಯಾ ಸಜ್ಜು
ಬೆಂಗಳೂರು: ಭಾರತದ ಫುಟ್ಬಾಲ್ ಫೆಡರೇಶನ್ ಎಐಎಫ್ ಎಫ್ ತನ್ನ ಬಿಡ್ ಅನ್ನು ಹಿಂತೆಗೆದುಕೊಂಡಿದ್ದು, 2027ರ ಏಷ್ಯನ್ ಕಪ್‌ನ ಆತಿಥ್ಯ ವಹಿಸಲು ಸೌದಿ ಅರೇಬಿಯಾ ಏಕೈಕ ಬಿಡ್ಡರ್ ಆಗಿದೆ ಎಂದು ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್ (ಎಎಫ್‌ಸಿ) ಸೋಮವಾರ ತಿಳಿಸಿದೆ.
ಖತರ್ ದೇಶವು ಚೀನಾದ ಬದಲಿಗೆ 2023 ಆವೃತ್ತಿಯನ್ನು ಆಯೋಜಿಸುವ ನಿಟ್ಟಿನಲ್ಲಿ ಯಶಸ್ವಿ ಬಿಡ್ ಸಲ್ಲಿಸಿದ ನಂತರ AFC ಯ ಕಾರ್ಯಕಾರಿ ಸಮಿತಿಯು ಅಕ್ಟೋಬರ್‌ನಲ್ಲಿ ಭಾರತ ಹಾಗೂ ತ್ತು ಸೌದಿ ಅರೇಬಿಯಾದಿಂದ ಬಿಡ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿತ್ತು.
ಸೌದಿ ಒಕ್ಕೂಟದ (SAFF) ಬಿಡ್ ಅನ್ನು ಮುಂದಿನ ವರ್ಷ ಫೆಬ್ರವರಿಯಲ್ಲಿ AFC ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುತ್ತದೆ.
ಖತರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನ ಗುಂಪು ಹಂತದಲ್ಲಿ ಅರ್ಜೆಂಟೀನ ವಿರುದ್ಧದ ಸ್ಮರಣೀಯ 2-1 ಗೆಲುವಿನ ನಂತರ ಪಂದ್ಯಾವಳಿಯನ್ನು ಆಯೋಜಿಸುವುದು ಸೌದಿ ಅರೇಬಿಯಾ ದೇಶದ ಫುಟ್ಬಾಲ್ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
"ಭಾರತವು ಯಾವಾಗಲೂ ದೊಡ್ಡ ಪಂದ್ಯಾವಳಿಗಳಿಗೆ ಅದ್ಭುತ ಹಾಗೂ ಸಮರ್ಥ ಆತಿಥ್ಯವನ್ನು ವಹಿಸಿದೆ. ಇದು ಇತ್ತೀಚೆಗೆ ಮುಕ್ತಾಯಗೊಂಡ FIFA U-17 ಮಹಿಳಾ ವಿಶ್ವಕಪ್‌ನಲ್ಲಿ ಸಾಕಷ್ಟು ಬಿಂಬಿತವಾಗಿದೆ. ಆದಾಗ್ಯೂ, (ಕಾರ್ಯಕಾರಿ ಸಮಿತಿ) ಫೆಡರೇಶನ್‌ನ ಒಟ್ಟಾರೆ ಕಾರ್ಯತಂತ್ರವು ಸದ್ಯ ನಮ್ಮ ಫುಟ್ಬಾಲ್ ಅನ್ನು ತಳಮಟ್ಟದಿಂದ ಯುವ ಅಭಿವೃದ್ಧಿಯವರೆಗೆ ಪ್ರತಿ ಹಂತದಲ್ಲೂ ಬಲಪಡಿಸುವ ಮೂಲಭೂತ ಗುರಿಗಳ ಮೇಲೆ ಕೇಂದ್ರೀಕರಿಸುತ್ತದೆ’’ ಎಂದು AIFF ಅಧ್ಯಕ್ಷ ಕಲ್ಯಾಣ್ ಚೌಬೆ ಹೇಳಿದರು.