ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಪುತ್ತೂರು ಮೂಲದ ವೈದ್ಯನ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ದಾಖಲು
ಭಟ್ಕಳ: ಏಳು ವರ್ಷದ ಬಾಲಕನೊಬ್ಬನಿಗೆ ತನ್ನ ನಿವಾಸದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವೈದ್ಯರೊಬ್ಬರ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ದಾಖಲಾಗಿರುವುದಾಗಿ ವರದಿಯಾಗಿದೆ.
ಆರೋಪಿ ವೈದ್ಯನನ್ನು ಡಾ. ಶೈಲೇಶ್ ಎಂ. ದೇವಾಡಿಗ ಎಂದು ಗುರುತಿಸಲಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆತ ತಲೆಮರೆಸಿಕೊಂಡಿರುದಾಗಿ ತಿಳಿದುಬಂದಿದೆ.
ಡಿಸೆಂಬರ್ 1ರಂದು ಆರೋಪಿ ವೈದ್ಯನು ತನ್ನನಿವಾಸದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿಯು ತಮ್ಮ ನಿವಾಸದಲ್ಲಿ ಬಾಡಿಗೆಗೆ ಇದ್ದು, ತಮ್ಮ ಕುಟುಂಬದ ಸದಸ್ಯರಿಗೆಲ್ಲ ಪರಿಚಿತನಾಗಿದ್ದ ಎಂದು ಸಂತ್ರಸ್ತ ಬಾಲಕನ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಡಾ. ಶೈಲೇಶ್ ಡಿಸೆಂಬರ್ 1ರಂದು ತನ್ನ ಮನೆಯಲ್ಲಿದ್ದಾಗ ಸಂತ್ರಸ್ತ ಬಾಲಕನನ್ನು ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಸ್ಥಳೀಯ ಸಾಮಾಜಿಕ ಮಾಧ್ಯಮಗಳಲ್ಲಿ ಶೈಲೇಶ್ ಕುರಿತು ವದಂತಿಗಳು ಹರಿದಾಡುತ್ತಿದ್ದು, ಶೈಲೇಶ್ ಅವ್ಯವಹಾರದ ಕುರಿತು ಪ್ರಸ್ತಾಪಿಸಿವೆ. ಈ ಪೈಕಿ ಆತ ಶೈಲೇಶ್ ಎಂ. ದೇವಾಡಿಗ ಎಂಬ ಫಲಕ ತೂಗು ಹಾಕಿ ಅದರ ಮುಂದೆ ಎಂಡಿ ಎಂದು ಬರೆದುಕೊಂಡಿದ್ದ. ತಾನು ಎಂಡಿ ಮುಗಿಸಿರುವ ವೈದ್ಯ ಎಂದು ಬಿಂಬಿಸಿಕೊಳ್ಳುವುದು ಅದರ ಉದ್ದೇಶವಾಗಿತ್ತು ಎಂದೂ ಹೇಳಲಾಗಿದೆ.
ಆತ ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನವನಾಗಿದ್ದು, ಆಯರ್ವೇದ ವೈದ್ಯನಾಗಿದ್ದಾನೆ. ಹೀಗಿದ್ದೂ ಆತ ತನ್ನನ್ನು ತಾನು ಎಂಡಿ ಪೂರೈಸಿರುವ ವೈದ್ಯಎಂದು ಬಿಂಬಿಸಿಕೊಂಡಿದ್ದ. ಪಟ್ಟಣದಲ್ಲಿನ ಬಹುತೇಕರು ಆತ ಎಂಡಿ ಪೂರೈಸಿರುವ ವೈದ್ಯ ಎಂದೇ ನಂಬಿಕೊಂಡಿದ್ದರು. ಆದರೆ, ಅದು ಸುಳ್ಳು ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದು, ಡಾ. ಶೈಲೇಶ್ ಪಟ್ಟಣದಿಂದ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದೆ. ಈ ನಡುವೆ ಪೊಲೀಸರು ಆರೋಪಿ ವೈದ್ಯನಿಗಾಗಿ ಶೋಧಕೈಗೊಂಡಿದ್ದಾರೆ.