ಪ್ರಜಾಪ್ರಭುತ್ವದ ಪಾಠ
ಪ್ರಜಾಪ್ರಭುತ್ವವೆಂಬ ದೀಪ ಉರಿಯಲು, ಬೆಳಕು ಬೀರಲು, ಕಾನೂನಿನ ಆಧಿಪತ್ಯವೆಂಬ ಬತ್ತಿಯಿರಬೇಕು. ಇವು ಯಾವುದೇ ದೇಶದ ಉಸಿರು. ಅದನ್ನು ಕಡೆಗಣಿಸುವುದೆಂದರೆ ದೇಶದ ಕತ್ತು ಹಿಸುಕಿದಂತೆ. ಸದ್ಯ ಕಳೆದ ಈ ಕೆಲವು ವರ್ಷಗಳಲ್ಲಿ ಪ್ರಜಾಪ್ರಭುತ್ವವೆಂಬ ಮೌಲ್ಯದ ಕತ್ತಿನ ಸುತ್ತ ಕುಣಿಕೆಯನ್ನು ಹೆಣೆಯಲಾಗಿದೆ. ಅದು ಬಿಗಿಯಾಗದಿರುವುದಕ್ಕೆ ಸಂವಿಧಾನವೇ ಅಡ್ಡಲಾಗಿದೆ. ಜನರು ನಿದ್ರಿಸಿದ್ದಾರೆ. ಆದರೆ ಕಾಲವೆಂಬುದು ನಿದ್ರಿಸುವುದಿಲ್ಲ.
ಈಚೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ಮಾನವಹಕ್ಕುಗಳ ಕುರಿತು ಚರ್ಚೆಯಾಗುತ್ತಿದ್ದಾಗ ಭಾರತದ ಖಾಯಂ ಪ್ರತಿನಿಧಿ ನಾವು ಪ್ರಜಾಪ್ರಭುತ್ವದ ಪಾಠವನ್ನು (ಇತರರಿಂದ) ಕಲಿಯಬೇಕಾಗಿಲ್ಲ ಎಂಬ ಹೇಳಿಕೆಯನ್ನಿತ್ತರು. ಈ ಪ್ರತಿನಿಧಿಯ ಹೆಸರು ಇಲ್ಲಿ ಗೌಣ. ಸರಕಾರದ ಪರವಾಗಿ ತಮ್ಮ ಆತ್ಮಸಾಕ್ಷಿಯನ್ನು ಅಡವಿಟ್ಟ ಇಂತಹ ಹಿರಿಯ ಅಧಿಕಾರಿಗಳು ತಮಗೊಪ್ಪಿಸಿದ ಗಿಣಿಪಾಠವನ್ನು ಉಚ್ಚರಿಸುವುದರ ಹೊರತಾಗಿ ಇನ್ನೇನೂ ಹೇಳರು. ಸತ್ಯ ಹೇಳಬೇಕಾದರೆ ಈ ಮಂದಿ ನಿವೃತ್ತಿಯಾಗಿ ಯಾವುದಾದರೂ ಪ್ರಕಾಶನ ಸಂಸ್ಥೆಯು ಅವರಿಂದ ಆತ್ಮಕಥೆಯೋ ಅನುಭವವೋ ಮುಂತಾದ ಬರಹವನ್ನು ಅಪೇಕ್ಷಿಸಿದಾಗ ಒಂದು ಪುಸ್ತಕ ಬಂದರೆ ಅದರಲ್ಲಿ ಈಗಿನ ಅಂಕಿ-ಅಂಶಗಳಿಗೆ ವಿರುದ್ಧವಾದ ವಿಚಾರವನ್ನು ಕಾಣಿಸುತ್ತಾರೆ. ಅದು ವಾಸ್ತವ; ಈಗ ಹೇಳುತ್ತಿರುವುದು ಅಂಕಿ-ಅಂಶಗಳೆಂಬ ಸುಳ್ಳುಗಳು. ಅವು ಅಧಿಕಾರಶಾಹಿ/ಕಾರ್ಯಾಂಗದ ಬೀರುವಿನಲ್ಲಿ ಬೇಕಾದಷ್ಟಿರುತ್ತವೆ. ಅವರು ಸತ್ಯ ಹೇಳುವುದರ ಕುರಿತು ಒಂದು ಪ್ರಸಂಗವಿದೆ: ಮಂತ್ರಿಯೊಬ್ಬರು ಪ್ರವಾಸದಲ್ಲಿದ್ದಾಗ ಒಮ್ಮೆ ಯಾವುದೋ ಊರಿಗಾಗಿ ಹಾದು ಹೋಗುತ್ತಿದ್ದಾಗ ಇರುಳಾಯಿತು. ಅಪರಿಚಿತ ಪ್ರದೇಶವಾದ್ದರಿಂದ ಮಂತ್ರಿ ತನ್ನೊಡನೆ ಕಾರಿನಲ್ಲಿದ್ದ ಅಧಿಕಾರಿಗೆ ನಾವೀಗ ಎಲ್ಲಿದ್ದೇವೆ? ಎಂದು ಕೇಳಿದರು. ಆ ಅಧಿಕಾರಿ ತಕ್ಷಣ ಕಾರೊಳಗಿದ್ದೇವೆ ಎಂದರು. ಇಂತಹ ಶತಾಂಶ ಸತ್ಯಗಳೇ ಅವರಲ್ಲಿರುವುದು.
ಇರಲಿ, ಭಾರತವು ಪ್ರಜಾಪ್ರಭುತ್ವದ ಪಾಠವನ್ನು ಯಾರಿಂದಲೂ ಕಲಿಯಬೇಕಾಗಿಲ್ಲ. ಭಾರತ ಅಂತಲ್ಲ, ಪ್ರಪಂಚದ ಯಾವುದೇ ದೇಶವಾದರೂ ಇದೇ ಮಾತನ್ನು ಹೇಳುತ್ತದೆ. ಮ್ಯಾನ್ಮಾರಿನ ಮಿಲಿಟರಿ ಸರಕಾರವೂ ಪ್ರಜಾಪ್ರಭುತ್ವವನ್ನು ಪಾಲಿಸುವುದಾಗಿ ಹೇಳುತ್ತದೆ; ಉತ್ತರ ಕೊರಿಯಾದ ಸರ್ವಾಧಿಕಾರಿಯೂ ಇದೇ ಮಾತನ್ನು ಹೇಳುತ್ತಾನೆ. ಪಾಕಿಸ್ತಾನ ಚೀನಾಗಳೂ ಇದೇ ಮಂತ್ರವನ್ನು ಜಪಿಸುತ್ತದೆ. ಅಮೆರಿಕವು ಇರಾನ್, ಇರಾಕ್, ಲಿಬಿಯಾ, ಸಿರಿಯಾ ಹೀಗೆ ಯಾವುದೇ ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪಮಾಡುವಾಗ ಪ್ರಜಾಪ್ರಭುತ್ವವನ್ನು ರಕ್ಷಿಸುವ ಮಾತನ್ನು ಹೇಳುತ್ತದೆ. ಅದಕ್ಕಾಗಿ ಆಯಾಯ ದೇಶದ ಪ್ರಜೆಗಳು ತೆರುವ ಬೆಲೆ ಅಪಾರವಾದರೂ ಈ ರಕ್ಷಣೆ ನಡೆದೇ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಭಾರತವು ತನ್ನ ನೆರೆಯ ರಾಷ್ಟ್ರಗಳೊಂದಿಗೆ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಕೈಗೊಳ್ಳುವ ಯಾವುದೇ ನಡೆಯೂ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಇಲ್ಲವೇ ವಿಸ್ತರಿಸುವ ಹೆಜ್ಜೆಯೆಂದು ಹೇಳಿಕೊಳ್ಳುತ್ತದೆ. ಅಫ್ಘಾನಿಸ್ಥಾನಕ್ಕೆ ಅವಿರತ ಸಹಾಯಕೊಟ್ಟು ಅದನ್ನು ಜೀವಂತ ಉಳಿಸುವ (ಭಾರತವೂ ಸೇರಿದಂತೆ) ಯಾವ ರಾಷ್ಟ್ರವೂ ಅಲ್ಲಿನ ಪ್ರಜೆಗಳ ಗೋಳನ್ನು ಲೆಕ್ಕಿಸುವುದೇ ಇಲ್ಲ. ಅಲ್ಲಿ ಪ್ರಜಾಪ್ರಭುತ್ವವು ಇಲ್ಲವೇ ಇಲ್ಲವೆನ್ನುವುದು ನಮ್ಮ ಕಾರ್ಯಸೂಚಿಯಲ್ಲಿರುವುದಿಲ್ಲ. ರಶ್ಯ-ಉಕ್ರೇನ್ ನಡುವಣ ಸಮರದಲ್ಲಿ ನಮ್ಮ ಇಬ್ಬಂದಿತನವು ಈಗಾಗಲೇ ಜಗಜ್ಜಾಹೀರಾಗಿದೆ. ಆದರೂ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಾಗಿಲ್ಲ.
ನಮ್ಮನ್ನು ವಿದೇಶೀಯರು ಹೊಗಳಿದಾಕ್ಷಣ ಅವನ್ನು ಭರ್ಜರಿಯಾಗಿ ಪ್ರಚಾರ-ಪ್ರಸಾರ ಮಾಡುತ್ತೇವೆ. ಆಗ ರೋಮಾಂಚ; ಅವರು ಒಳ್ಳೆಯವರು. ಆದರೆ ಅವರು ಟೀಕಿಸಿದಾಗ ನಮಗೆ ಮೈಯುರಿ. ಭಾರತದಲ್ಲಿ ಪ್ರಜಾಪ್ರಭುತ್ವವಿದೆ; ಅದು ಎಲ್ಲ ಪ್ರಜಾಪ್ರಭುತ್ವಗಳ ತಾಯಿ ಎಂದು ಯಾರಾದರೂ ಯಾವುದೇ ವೇದಿಕೆಯಲ್ಲಿ ಅಭಿನಂದನಾ ಭಾಷಣ ಮಾಡಿದರೆ ಸಾಕು; ನಾವು ಅದು ಸತ್ಯವೆಂದು ಬೀಗುತ್ತೇವೆ. ಅದಕ್ಕೆ ಸಮರ್ಥನೆ ನಮಗೆ ಬೇಕಿಲ್ಲ. ಆದರೆ ಇನ್ನೊಂದು ವೇದಿಕೆಯಲ್ಲಿ ಯಾರಾದರೂ ಭಾರತದ ಪ್ರಜಾಪ್ರಭುತ್ವ ಈಗ ಕ್ಷೀಣಿಸುತ್ತಿದೆ; ಅಲ್ಲಿ ಸರ್ವಾಧಿಕಾರ ನೆಲೆಯೂರುತ್ತಿದೆ ಎಂದು ಹೇಳಲಿ, ತಕ್ಷಣ ನಾವದನ್ನು ನಿರಾಕರಿಸುವುದು ಮಾತ್ರವಲ್ಲ, ಅದಕ್ಕೆ ಸಾಕ್ಷ್ಯ ಒದಗಿಸಿ ಎಂದು ಸವಾಲೊಡ್ಡುತ್ತೇವೆ. ಆ ಕುರಿತು ಆತ್ಮಾವಲೋಕನ ನಮ್ಮಲ್ಲಿ ನಡೆಯುವುದಿಲ್ಲ. ಈಚೆಗೆ ‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜ್ಯೂರಿಗಳ ಅಧ್ಯಕ್ಷರು ಟೀಕಿಸಿದ ನೆನಪು ಇನ್ನೂ ಒಣಗಿಲ್ಲ. ಕಲೆಯನ್ನು ಕಲಾವಿದರ ಪಾಲಿಗೆ ಬಿಟ್ಟು ಸುಮ್ಮನಿರುವುದರ ಬದಲಾಗಿ ಅದನ್ನು ರಾಜಕೀಯ ಪ್ರಭಾವದಿಂದ ಖಂಡಿಸುವ ಪ್ರಯತ್ನವನ್ನು ನಮ್ಮ ಸರಕಾರ ಮಾಡಿತು. ಆನಂತರದ ಬೆಳವಣಿಗೆಯಲ್ಲಿ ಜ್ಯೂರಿಗಳ ಎಲ್ಲಾ ವಿದೇಶಿ ಸದಸ್ಯರೂ ಅಧ್ಯಕ್ಷರ ಮಾತನ್ನು ಬೆಂಬಲಿಸಿದರು. ಉಳಿದದ್ದು ಹದಿನೆಂಟನೇ ದಿನದ ದುರ್ಯೋಧನನಂತೆ ನಮ್ಮ ಸರಕಾರಿ ಬೆಂಬಲಿತ ಭವ್ಯ ಭಾರತೀಯ ಸದಸ್ಯರು ಮಾತ್ರ! ಈ ಚಲನಚಿತ್ರದ ನಿರ್ಮಾಪಕ/ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರಂತೂ ವಿದೇಶಿಯ ಜ್ಯೂರಿಗಳೆಲ್ಲರನ್ನೂ ಮುಠ್ಠಾಳರೆಂಬಂತೆ ಪ್ರತಿಕ್ರಿಯಿಸಿದರು. ಅವರ ಪ್ರತಿಕ್ರಿಯೆ ಒಂದು ರೂಪಕ. ಚಲನಚಿತ್ರವೆಂದಲ್ಲ, ನಮ್ಮ ಸರಕಾರಕ್ಕೆ ವಿರೋಧವಾಗುವ ಎಲ್ಲ ಪ್ರತಿಕ್ರಿಯೆಗಳಿಗೂ ಇದು ಅನ್ವಯಿಸುತ್ತಿದೆ. ಒಟ್ಟಾರೆ ಅನುಕೂಲಕರ ವಾಕ್ಯಗಳೇ ನಮಗೆ ಮಂತ್ರ.
ಕಳೆದ ಎಂಟು ವರ್ಷಗಳಲ್ಲಿ ಅಂತರ್‌ರಾಷ್ಟ್ರೀಯ ಸಮುದಾಯದೆದುರು ಭಾರತದ ಸ್ಥಾನವೆಲ್ಲಿದೆಯೆಂಬುದನ್ನು ಸೂಚಿಸುವ ಅಂಕಿ-ಅಂಶಗಳಿವೆ. ಇವು ದ್ವೇಷದಿಂದಲೋ, ಕಲ್ಪನೆಯಿಂದಲೋ ಮೂಡಿಬಂದವುಗಳಲ್ಲ. ಅವನ್ನು ತಜ್ಞರೇ ತಯಾರಿಸುತ್ತಾರೆ. ಅವುಗಳಿರುವುದು ನಾವೆಲ್ಲಿ ಎಡವಿದ್ದೇವೆ ಮತ್ತು ನಾವು ಸರಿಯಾಗುವ ಅವಕಾಶಗಳೇನು ಎಂದು ಪರಿಶೀಲಿಸುವುದಕ್ಕೆ. ಉದಾಹರಣೆಗೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ನಾವು 2014ರಲ್ಲಿ 55ನೇ ಸ್ಥಾನದಲ್ಲಿದ್ದರೆ 2022ರಲ್ಲಿ 107ನೇ ಸ್ಥಾನಕ್ಕೆ ಇಳಿದಿದ್ದೇವೆ (ಏರಿದ್ದೇವೆ?). ಈ ಸೂಚ್ಯಂಕಗಳನ್ನು ಇತರ ಯಾವುದೇ ಕ್ಷೇತ್ರಗಳಿಗೆ (ಮಾಧ್ಯಮ ಸ್ವಾತಂತ್ರ್ಯ: 140ರಿಂದ 150; ಭ್ರಷ್ಟಾಚಾರ: 36ರಿಂದ 85; ಆಹಾರ ಭದ್ರತೆ: 56ರಿಂದ 71;) ಅನ್ವಯಿಸಿ. ಭೀತರಾಗುವ, ನಿರಾಶರಾಗುವ ಸತ್ಯ ಬೆಳಕಿಗೆ ಬರುತ್ತದೆ.
ಈ ಪೈಕಿ ಎರಡು ಕ್ಷೇತ್ರಗಳನ್ನು ಈಗ ಪ್ರಸ್ತುತವೆಂಬಂತೆ ಚರ್ಚಿಸಬಹುದು. ಮೊದಲನೆಯದು-ಕಾನೂನಿನ ಆಧಿಪತ್ಯ; ಎರಡನೆಯದು- ಪ್ರಜಾಪ್ರಭುತ್ವ. ಕಾನೂನಿನ ಆಧಿಪತ್ಯ (ಅಥವಾ Rule of Law) ಪ್ರಜಾಪ್ರಭುತ್ವದ ಸಮಭಾಗಾಂಶ. ಒಂದಿಲ್ಲದೆ ಇನ್ನೊಂದಿಲ್ಲ. ಇವುಗಳ ಬೆಳವಣಿಗೆಯನ್ನು ಗಮನಿಸಿದರೆ ಈ ಅಂಕಿ-ಅಂಶಗಳು ಪ್ರಕಟವಾಗುತ್ತವೆ: ಕಾನೂನಿನ ಅಧಿಪತ್ಯದಲ್ಲಿ ಭಾರತವು 2014ರಲ್ಲಿ 35ನೇ ಸ್ಥಾನದಲ್ಲಿದ್ದರೆ 2022ರಲ್ಲಿ 77ನೇ ಸ್ಥಾನಕ್ಕೂ ಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿ 2014ರಲ್ಲಿ 27ನೇ ಸ್ಥಾನದಲ್ಲಿದ್ದರೆ 2022ರಲ್ಲಿ 46ನೇ ಸ್ಥಾನಕ್ಕೂ ಇಳಿದಿದೆ. ಬೆಳವಣಿಗೆಯೆಂಬ ಪದವೇ ಹಾಸ್ಯಾಸ್ಪದ ಮತ್ತು ಅರ್ಥಹೀನ. ಮನುಷ್ಯನೊಬ್ಬನ ದೇಹದಲ್ಲಿ ಕ್ಯಾನ್ಸರ್ ಗೆಡ್ಡೆ ಬೆಳೆದಿದೆಯೆಂದರೆ ಅದು ಅವನ ಜೀವವು ಅವನತಿಯತ್ತ ಹಾಕುವ ಹೆಜ್ಜೆಯೆಂದು ಅರ್ಥ. ಉತ್ತರ ಕರ್ನಾಟಕದಲ್ಲಿ ಮರ ಇಳಿಯಾಕ ಹತ್ಯಾರ್ರೀ ಎನ್ನುತ್ತಾರೆ. ಆದರೆ ಅದು ನಿರ್ದಿಷ್ಟ ಸಂದರ್ಭಕ್ಕೆ ಅನ್ವಯವಾಗುವ ಪದಪುಂಜ.
ಕೆಲವು ಸೂಚ್ಯಂಕಗಳು ಮೂರ್ತ. ಆದರೆ ಇವೆರಡು ಅಮೂರ್ತ. ಯಾವುದೇ ದೇಶ ಇವನ್ನು ಮೂರ್ತರೂಪಕ್ಕಿಳಿಸುವಷ್ಟು ಅವನತಿಯಾಗುತ್ತದೆ ಯೆಂದರೆ ಅಲ್ಲಿ ಇವೆರಡೂ ಇಲ್ಲವೆಂದು ತಿಳಿಯಬಹುದು. ಉತ್ತರ ಕೊರಿಯಾದಲ್ಲಿ (ಮತ್ತು ಮೇಲೆ ಪ್ರಸ್ತಾವಿಸಿದ ಹಲವು ದೇಶಗಳಲ್ಲಿ) ಎಂಥ ಪ್ರಜಾ ಪ್ರಭುತ್ವವಿದೆ? ಹಾಗೆಂದು ಅವರಲ್ಲಿ ಹೇಳಿ; ನಿಮಗೆ ಬುದ್ಧಿಯಿಲ್ಲ ವೆಂದು ಅವರು ಉತ್ತರಿಸುತ್ತಾರೆ. ಯಾರಿಗೂ ತಮ್ಮ ತಮ್ಮ ಬೆನ್ನು ಕಾಣುವುದಿಲ್ಲ.
ಭಾರತಕ್ಕೂ ಈ ಕಾಯಿಲೆ ವ್ಯಾಪಿಸಿದೆ. ಕಾನೂನಿನ ಮತ್ತು ಪ್ರಜಾಪ್ರಭುತ್ವದ ಅನುಷ್ಠಾನದ ಪ್ರಚಾರದ ನಡುವೆ ದೇಶದೊಳಗೆ ಎಲ್ಲ ಬಗೆಯ ಭಿನ್ನಮತವನ್ನು ಹೊಸಕಿ ಹಾಕುವ ಯತ್ನವನ್ನು ಭಾರತ ಸರಕಾರ ಮಾಡುತ್ತಿದೆ ಮಾತ್ರವಲ್ಲ, ಈ ಎರಡೂ ಮೌಲ್ಯಗಳಿಗೆ ಆಂತರಿಕವಾಗಿ ಒಂದರ್ಥವನ್ನೂ ಅಂತರ್‌ರಾಷ್ಟ್ರೀಯವಾಗಿ ಇನ್ನೊಂದು ಅರ್ಥವನ್ನೂ ಮಾನದಂಡವಾಗಿ ಬಳಸುತ್ತಿದೆ. ಈಗ ನಮ್ಮಲ್ಲಿರುವ ಈ ಎರಡೂ ಕ್ಷೇತ್ರಗಳು ಸರಕಾರ ಹೇಳಿದ್ದಕ್ಕೆಲ್ಲ ತಲೆಯಾಡಿಸುವವರಿಗೂ, ಕೃಪಾಭಿಕ್ಷೆಗೆ ಮೈಯೊಡ್ಡುವವರಿಗೂ, ತೆವಳುವ ಅಕಶೇರುಕ ದ್ವಿಪದಿಗಳಿಗೂ ಸರಿ.
ಕುಮಾರವ್ಯಾಸ ಭಾರತದಲ್ಲಿ ಅರ್ಜುನನು ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿದಾಗ ಅದು ಎಲ್ಲರನ್ನೂ ಆವರಿಸಿತು; ಆದರೆ ಭೀಷ್ಮರ ಮೇಲೆ ಅದರ ಪ್ರಯೋಗ ನಡೆಯಲಿಲ್ಲ. ಹಾಗೆಯೇ ಸರಕಾರದ ಸಮ್ಮೋಹನ ತಂತ್ರವನ್ನು ದೇಶವ್ಯಾಪಿಯಾದರೂ ನಮ್ಮ ನ್ಯಾಯಾಂಗವನ್ನು ಗಂಭೀರವಾಗಿ ಬಾಧಿಸಿದಂತೆ ಕಾಣುವುದಿಲ್ಲ. ಭಾರತದಲ್ಲಿ ನ್ಯಾಯಾಂಗ ತಾನಿನ್ನೂ ಎಚ್ಚರವಾಗಿದ್ದೇನೆಂದು ತೋರಿಸುತ್ತಿದೆ. ಸರಕಾರದ ಅನೇಕ ನಡೆಗಳು ನ್ಯಾಯಾಲಯಗಳಲ್ಲಿ ಹಿನ್ನಡೆಯನ್ನು ಕಾಣುತ್ತಿವೆ. ಪಿಎಂಎಲ್‌ಎಯಾಗಲೀ, ಯುಎಪಿಎಯಾಗಲೀ ನ್ಯಾಯಾಲಯದ ಮೆಟ್ಟಲೇರಿದಾಗ ಉಷ್ಣಕ್ಕೆ ಕರಗುವ ಮಂಜಿನಂತಾಗುವುದನ್ನು ನಾವು ನಿತ್ಯ ಕಾಣುತ್ತೇವೆ. ನ್ಯಾಯಾಂಗಕ್ಕೆ ಎಲ್ಲವನ್ನೂ ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲಾಗುವುದಿಲ್ಲ. ನ್ಯಾಯಾಲಯಗಳಿಗೂ ಅವುಗಳದ್ದೇ ಆದ ನಿರ್ಬಂಧಗಳಿವೆ. ಆದರೆ ತಮ್ಮ ಮಿತಿಯಲ್ಲಿ ಅವು ಸರಕಾರಕ್ಕೆ ನೀವು ತಪ್ಪು ಮಾಡುತ್ತಿದ್ದೀರಿ ಮತ್ತು ಸರಿಪಡಿಸುವುದಕ್ಕೆ ನಾವಿದ್ದೇವೆ. ಏಕೆಂದರೆ ನಮಗೂ ಮಕ್ಕಳಿದ್ದಾರೆ; ಮುಂದಿನ ತಲೆಮಾರಿನ ಸುಖವನ್ನು ನಾವು ನಿಮ್ಮ ವರ್ತಮಾನಕ್ಕಾಗಿ ಮಾರಲಾರೆವು; ಬಲಿಕೊಡೆವು ಎಂದು ಎಚ್ಚರಿಸುತ್ತಿವೆ.
ಇದಕ್ಕೆ ತಕ್ಕ ಶಾಸ್ತಿ ಮಾಡಲು ಸರಕಾರವು ಸಾಂವಿಧಾನಿಕ ಮಾರ್ಗಗಳನ್ನು ಹುಡುಕುವುದು ಸ್ಪಷ್ಟವಿದೆ. ಸಂಸತ್ತು ಮಾಡಿದ ಕಾನೂನುಗಳನ್ನು ನ್ಯಾಯಾಂಗವು ಮನ್ನಿಸಲೇಬೇಕೆಂಬ ಹೊಸ ತರ್ಕವನ್ನು ಅದು ಹೂಡುವುದರಲ್ಲಿದೆ. ಈ ನಿಟ್ಟಿನಲ್ಲಿ ಅದು ನ್ಯಾಯಾಂಗವನ್ನು ದುರ್ಬಲ ಗೊಳಿಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಸರ್ವ ಪ್ರಯತ್ನವನ್ನು ಮಾಡುತ್ತಿದೆ. ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಾತಿಯಲ್ಲಿ ಸರಕಾರ ಮಾಡುವ ವಿಳಂಬ ನೀತಿ ಇದಕ್ಕೊಂದು ನಿದರ್ಶನ. ಚುನಾವಣಾ ಆಯುಕ್ತರನ್ನು ಡ್ರೈ ಕ್ಲೀನಿಂಗ್ ನಂತೆ ಕೆಲವೇ ಗಂಟೆಗಳಲ್ಲಿ ನೇಮಿಸುವ ಸರಕಾರವು ನ್ಯಾಯಾಧೀಶರ ಪಟ್ಟಿಯನ್ನು ಅಂಗೀಕರಿಸುವಲ್ಲಿ ತಿಂಗಳು-ವರ್ಷವನ್ನೇ ವ್ಯಯಿಸುತ್ತದೆ. ಇದರ ಹಿಂದೆ ಸರಕಾರವು ತಾನು ಅಂಗೀಕರಿಸಿದ 99ನೇ ಸಂವಿಧಾನ ತಿದ್ದುಪಡಿಯ ಮೂಲಕ ಸೃಷ್ಟಿಸಿದ್ದ (ವಿಧಿ 124-ಎ) ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸರ್ವೋಚ್ಚ ನ್ಯಾಯಾಲಯವು ಅಸಾಂವಿಧಾನಿಕವೆಂದು ತಳ್ಳಿಹಾಕಿ ಅದರ ಪೂರ್ವದಲ್ಲಿದ್ದ ಕೊಲಿಜಿಯಂ ಪದ್ಧತಿಯನ್ನು ಎತ್ತಿಹಿಡಿದದ್ದು ಕಾರಣವೆಂಬುದು ಸ್ಪಷ್ಟ. ಆದರೆ ಈ ನೇಮಕಾತಿಯ ವಿಳಂಬಕ್ಕೂ ಸರ್ವೋಚ್ಚ ನ್ಯಾಯಾಲಯವು ಕಂಗೆಟ್ಟಿಲ್ಲ. ಅದಿನ್ನೂ ಸರಕಾರದ ಸಂವಿಧಾನಬದ್ಧತೆಯನ್ನು ಎಚ್ಚರಿಸುತ್ತಲೇ ಇದೆ. ಯಾವುದೋ ಒಂದು ಹಂತದಲ್ಲಿ ಅದು ಸೂಕ್ತ ಆದೇಶವನ್ನು ಮಾಡುವ ಸಾಧ್ಯತೆಯಿದೆ. ಈಗಾಗಲೇ ಅದು ಸಂವಿಧಾನದ ವಿಧಿ 141ರಡಿ ಸರಕಾರಕ್ಕೆ ತನ್ನ ಆದೇಶಗಳು ದೇಶದೆಲ್ಲೆಡೆ ಅನ್ವಯಿಸುತ್ತದೆಂಬ ಪ್ರಾಥಮಿಕ ಪಾಠವನ್ನು ಮತ್ತು ವಿಧಿ 142ರಡಿ ತಾನು ಸಂವಿಧಾನವನ್ನು ರಕ್ಷಿಸಲು ಸೂಕ್ತ ಆದೇಶವನ್ನು ಮಾಡಲು ಅಧಿಕಾರ ಹೊಂದಿರುವುದನ್ನು ನೆನಪಿಸಿದೆ.
ಆದರೆ ಸಂವಿಧಾನವನ್ನೇ ಬುಡಮೇಲು ಮಾಡಲು ಗುಪ್ತಸೂಚಿಯನ್ನು ಹಾಕಿಕೊಂಡಿರುವ ಸರಕಾರವು ಅನಿವಾರ್ಯ ಒತ್ತಡದಿಂದ ತನ್ನ ಗುಪ್ತಸೂಚಿಯ ಪ್ರಕಟಣೆಯನ್ನು ಮುಂದೂಡಿದೆ. ಇಂದಿರಾಗಾಂಧಿಗೆ ತುರ್ತುಸ್ಥಿತಿಯನ್ನು ತರಲು ಒದಗಿದ ದುರ್ಭರತೆ ಮೋದಿಗಿನ್ನೂ ಒದಗಿಲ್ಲ. ಬದಲಾಗಿ ಕಾನೂನು ಸಚಿವರ ಮೂಲಕ, ಉಪರಾಷ್ಟ್ರಪತಿಗಳ ಮೂಲಕ ಸರಕಾರ ನ್ಯಾಯಾಂಗವನ್ನು ಟೀಕಿಸತೊಡಗಿದೆ. ಕಾನೂನು ಸಚಿವರು ನ್ಯಾಯಾಂಗಕ್ಕೆ ನ್ಯಾಯಾಧೀಶರ ನೇಮಕದಲ್ಲಿ ನಮ್ಮ ಪಾಲಿನ ವಿಳಂಬ ನಿಮಗೆ ಅಸಹ್ಯವಾದರೆ ನೀವೇ ನೇಮಕ ಮಾಡಿಕೊಳ್ಳಿ ಎಂಬ ಮೂರ್ಖ, ಧೂರ್ತ ಸವಾಲು ಹಾಕಿದ್ದಾರೆ. ಇದನ್ನು ಸರ್ವೋಚ್ಚ ನ್ಯಾಯಾಲಯವು ಸಾತ್ವಿಕವಾಗಿ ಆದರೂ ಬಿಗಿಯಾಗಿ ಖಂಡಿಸಿತು. ಛಲ ಬಿಡದ ಅಕ್ರಮ ತ್ರಿವಿಕ್ರಮನಂತೆ ಸರಕಾರವು ಈ ಬಾರಿ ಉಪರಾಷ್ಟ್ರಪತಿಯೆಂಬ ಇನ್ನೊಬ್ಬ ರಾಜಕಾರಣಿಯ ಮೂಲಕ ನ್ಯಾಯಾಂಗ ನೇಮಕಾತಿ ಆಯೋಗ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಟೀಕಿಸಿತು. ಉಪರಾಷ್ಟ್ರಪತಿಯವರು ಜೇಮ್ಸ್ ಬಾಂಡ್ ಶೈಲಿಯಲ್ಲಿ ಹಿಂದೆ ಪಶ್ಚಿಮ ಬಂಗಾಳದ ತನ್ನ ಮಿಷನನ್ನು ಪೂರೈಸಿ ಈಗ ದೇಶದ ತೆಕ್ಕೆಗೆ ತನ್ನನ್ನೊಡ್ಡಿಕೊಂಡಂತಿದ್ದಾರೆ. ಆರು ವರ್ಷಗಳ ಹಿಂದಿನ ತೀರ್ಪನ್ನು ಈಗ ಟೀಕಿಸುತ್ತ ಅದು ಜನರ ಮತವನ್ನು ತಳ್ಳಿಹಾಕಿದೆಯೆಂದು ಹೇಳಿದ್ದಾರೆ. ಜನರು ತಮ್ಮ ನಾಯಕರಾಗಿ, ಪ್ರತಿನಿಧಿಗಳಾಗಿ ಧೂರ್ತರನ್ನೂ ಮೂರ್ಖರನ್ನೂ ಆಯ್ಕೆಮಾಡಿದಾಗ, ಅಂತಹ ಮಂದಿ ಬಹುಮತವೆಂಬ ಏಕಮಾತ್ರ ಯೋಗ್ಯತೆಯಿಂದ ತಪ್ಪು ನಿರ್ಣಯವನ್ನು ಕೈಗೊಂಡಾಗ, ಅದನ್ನು ಸಂವಿಧಾನದ ಒರೆಗೆ ತಿಕ್ಕಿ ನಿರ್ಣಯಿಸುವುದು ನ್ಯಾಯಾಂಗದ ಕರ್ತವ್ಯ. ಸರ್ವೋಚ್ಚ ನ್ಯಾಯಾಲಯವು ಮಾಡಿದ್ದೂ ಇದನ್ನೇ. ಇಂದಿನ ಭಾರತದಲ್ಲಿ ಸರಕಾರ ಕೈಗೊಳ್ಳುವ ಪ್ರತಿಯೊಂದು ಯೋಜನೆಯೂ ರಾಜಕೀಯ ರಾಡಿಯಾಗಿ ಸರ್ವಮಾನ್ಯರ ಮಾನವನ್ನು ಕಳೆಯುವುದರಲ್ಲಿ ಯಶಸ್ವಿಯಾಗಿದೆ. ನೋಟು ಅಮಾನ್ಯೀಕರಣ, ಕೋವಿಡ್ ನಿರ್ವಹಣೆ (ನಿರುದ್ಯೋಗ, ಬೆಲೆಯೇರಿಕೆ ಹೀಗೆ ಅನೇಕ ಇತರ ರೋಗಗಳಿವೆ!) ಮುಂತಾದ ಅನೇಕ ಪ್ರಸಂಗಗಳಲ್ಲಿ ಸರಕಾರ ನಡೆದುಕೊಂಡ ರೀತಿ ಯಾವ ಕಾನೂನು ಆಧಿಪತ್ಯಕ್ಕೂ ಪ್ರಜಾಪ್ರಭುತ್ವಕ್ಕೂ ಶೋಭೆ ತಾರದು.
ಪ್ರಜಾಪ್ರಭುತ್ವವೆಂಬ ದೀಪ ಉರಿಯಲು, ಬೆಳಕು ಬೀರಲು, ಕಾನೂನಿನ ಆಧಿಪತ್ಯವೆಂಬ ಬತ್ತಿಯಿರಬೇಕು. ಇವು ಯಾವುದೇ ದೇಶದ ಉಸಿರು. ಅದನ್ನು ಕಡೆಗಣಿಸುವುದೆಂದರೆ ದೇಶದ ಕತ್ತು ಹಿಸುಕಿದಂತೆ. ಸದ್ಯ ಕಳೆದ ಈ ಕೆಲವು ವರ್ಷಗಳಲ್ಲಿ ಪ್ರಜಾಪ್ರಭುತ್ವವೆಂಬ ಮೌಲ್ಯದ ಕತ್ತಿನ ಸುತ್ತ ಕುಣಿಕೆಯನ್ನು ಹೆಣೆಯಲಾಗಿದೆ. ಅದು ಬಿಗಿಯಾಗದಿರುವುದಕ್ಕೆ ಸಂವಿಧಾನವೇ ಅಡ್ಡಲಾಗಿದೆ. ಜನರು ನಿದ್ರಿಸಿದ್ದಾರೆ. ಆದರೆ ಕಾಲವೆಂಬುದು ನಿದ್ರಿಸುವುದಿಲ್ಲ. ಅದು ಈ ದುಷ್ಟಶಕ್ತಿಗಳನ್ನು ಮಣಿಸಲು ತನ್ನದೇ ರೀತಿಯ ಕಡಿವಾಣವನ್ನು ತಯಾರುಮಾಡಿಕೊಂಡಿದೆ. ಶಾಶ್ವತವಲ್ಲದ ಅಧಿಕಾರವು ಪ್ರಜೆಗಳ ಮನಸ್ಥಿತಿಯು ಬದಲಾಗಲು ಕಾಯುತ್ತಿದೆ, ಅಷ್ಟೇ. ನ್ಯಾಯಾಂಗವು ಈ ಶಕ್ತಿಯ ಮೂರ್ತಸ್ವರೂಪವೇ ಆಗಿದೆ.
ಪ್ರಜಾಪ್ರಭುತ್ವದ ಪಾಠ ಇದೇ. ಇದನ್ನು ಬದಲಿಸಲು ಮನುಷ್ಯ ಇನ್ನೂ ಸಮರ್ಥನಾಗಿಲ್ಲ; ಸಮರ್ಥನಾಗುವುದೂ ಇಲ್ಲ.