ದುಡ್ಡೇ ದೊಡ್ಡಪ್ಪ, ಮನಸ್ಸೇ ಭ್ರಷ್ಟವಾದ ಮೇಲೆ ಮತ್ತೇನಾದೀತು?
ಸಮಗ್ರತೆ, ಪಾರದರ್ಶಕತೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟವು ಒಟ್ಟು ವ್ಯವಸ್ಥೆಯ ಭಾಗವಾಗಿರಬೇಕು. ಅವುಗಳನ್ನು ನಾವಿರುವ ಸಮಾಜದ ಮೂಲಭೂತ ಮೌಲ್ಯಗಳೆಂದು ಭಾವಿಸಬೇಕು. ಅಂದರೆ ಮುಖ್ಯವಾಗಿ ಪ್ರತಿಯೊಬ್ಬರೂ ಆತ್ಮಸಾಕ್ಷಿಗೆ ಬದ್ಧರಾಗುವುದು ಮತ್ತು ಮನಸ್ಸನ್ನು ಭ್ರಷ್ಟಗೊಳಿಸಿಕೊಳ್ಳದೇ ಇರುವುದು ಎಂದರ್ಥ. ಆದರೆ ಮನಸ್ಸೇ ಭ್ರಷ್ಟವಾಗಿದ್ದಾಗ ಯಾವ ಕ್ರಮವೂ ಏನನ್ನೂ ಮಾಡಲಾರದು.
2005ರಲ್ಲಿ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ನಡೆಸಿದ ಅಧ್ಯಯನವು ದಾಖಲಿಸಿದ ಪ್ರಕಾರ, ಭಾರತದ ಶೇ.62ಕ್ಕಿಂತ ಹೆಚ್ಚು ಮಂದಿ ಒಂದಲ್ಲ ಒಂದು ಹಂತದಲ್ಲಿ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡುತ್ತಾರೆ. 2008ರಲ್ಲಿನ ಮತ್ತೊಂದು ಅಧ್ಯಯನವು ಹೇಳುವಂತೆ, ದೇಶದ ಸುಮಾರು ಶೇ.50ರಷ್ಟು ಜನರು ಲಂಚವನ್ನು ಪಾವತಿಸುವ ಅಥವಾ ಸಾರ್ವಜನಿಕ ಕಚೇರಿಗಳಲ್ಲಿನ ಉನ್ನತ ಮಟ್ಟದವರ ಪ್ರಭಾವವನ್ನು ಬಳಸುವ ಮೂಲಕ ಸರಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ.
ದೇಶದಲ್ಲಿ ಭ್ರಷ್ಟಾಚಾರ ಅವ್ಯಾಹತ ಎಂಬುದನ್ನೇ ಇಂಥ ಯಾವುದೇ ಅಧ್ಯಯನಗಳು, ಸಮೀಕ್ಷೆಗಳು ಸಾಬೀತುಪಡಿಸುತ್ತವೆ. ಮಿತಿಮೀರಿದ ನಿಯಮಗಳು, ಸಂಕೀರ್ಣ ತೆರಿಗೆ ಮತ್ತು ಪರವಾನಿಗೆ ವ್ಯವಸ್ಥೆಗಳು, ಪಾರದರ್ಶಕವಲ್ಲದ ಅಧಿಕಾರಶಾಹಿ, ಕೆಲವು ಸರಕು ಮತ್ತು ಸೇವೆಗಳ ವಿತರಣೆಯಲ್ಲಿ ಸರಕಾರಿ ನಿಯಂತ್ರಿತ ಸಂಸ್ಥೆಗಳ ಏಕಸ್ವಾಮ್ಯ ಮತ್ತು ಪಾರದರ್ಶಕ ಕಾನೂನುಗಳು ಮತ್ತು ಪ್ರಕ್ರಿಯೆಗಳ ಕೊರತೆ ಇವೆಲ್ಲವೂ ಭ್ರಷ್ಟಾಚಾರಕ್ಕೆ ಕಾರಣ ಎಂದು ಪಟ್ಟಿ ಮಾಡಲಾಗುತ್ತದೆ.
ದೇಶದಲ್ಲಿ ಭ್ರಷ್ಟಾಚಾರಕ್ಕೆ ಹಲವಾರು ಅಂಶಗಳು ಕಾರಣ. ಮೊದಲನೆಯದಾಗಿ ರಾಜಕೀಯ ಕಾರಣಗಳು. ಚುನಾವಣೆಯಲ್ಲಿ ಕಪ್ಪುಹಣದ ಬಳಕೆ ಹೆಚ್ಚುತ್ತಿರುವುದು ಬಹಿರಂಗ ಸತ್ಯದಂತಿದೆ. ಅಕ್ರಮ ಹಣದಿಂದ ಅಧಿಕಾರ ಹಾಗೂ ಅಧಿಕಾರದ ಮೂಲಕ ಅಕ್ರಮ ಸಂಪತ್ತಿನ ರಕ್ಷಣೆ ಹೀಗೆ ಇದೊಂದು ಅವ್ಯಾಹತ ಅನೈತಿಕ ಚಕ್ರ. ಕೆಲವು ಸಂಸದರ ಆಸ್ತಿಯು ಎರಡು ಚುನಾವಣೆಗಳ ನಡುವಿನ ಅವಧಿಯಲ್ಲಿಯೇ ಸಾವಿರ ಪ್ರತಿಶತ ಜಿಗಿತ ಕಾಣುವುದುಂಟು.
ದೇಶದ ಶೇ.30ಕ್ಕೂ ಹೆಚ್ಚು ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಕಾನೂನು ಮುರಿಯುವವರೇ ಕಾನೂನು ರೂಪಿಸುವ ಜಾಗದಲ್ಲಿ ಹೋಗಿ ಕುಳಿತಾಗ ಆಗುವ ಅನಾಹುತ ಎಂತಹದ್ದು ಎಂಬುದನ್ನು ವಿವರಿಸಬೇಕಿಲ್ಲ. ಇಂತಹ ರಾಜಕಾರಣಿಗಳ ನಂಟಿನೊಡನೆ ಖಾಸಗಿ ವಲಯವು ಎಲ್ಲವನ್ನೂ ಆಕ್ರಮಿಸಿಕೊಳ್ಳುವಲ್ಲಿ ಮತ್ತೊಂದು ಬಗೆಯ ಅಲ್ಲೋಲಕಲ್ಲೋಲ ಶುರುವಾಗುತ್ತದೆ. ರಾಜಕಾರಣಿಗಳು ಮತ್ತು ಉದ್ಯಮಿಗಳ ನಡುವಿನ ಅಪವಿತ್ರ ನಂಟು ದೇಶದ ಆರ್ಥಿಕತೆಯನ್ನು ಕುರಿತು ಚಿಂತಿಸಲಾರದು.
ಇನ್ನು ಆರ್ಥಿಕ ಕಾರಣಗಳನ್ನು ಗಮನಿಸುವುದಾದರೆ, ದೇಶದಲ್ಲಿ ಶೇ.80ಕ್ಕಿಂತ ಹೆಚ್ಚು ಉದ್ಯೋಗಿಗಳು ಅನೌಪಚಾರಿಕ ವಲಯದಲ್ಲಿದ್ದಾರೆ ಮತ್ತು ತೆರಿಗೆ ಅಥವಾ ಕಾರ್ಮಿಕ ಕಾನೂನುಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ. ದುಬಾರಿ ಮತ್ತು ಸಂಕೀರ್ಣವಾಗಿರುವ ಕಾನೂನಿನ ವ್ಯಾಪ್ತಿಯಿಂದ ಹೊರಗುಳಿಯಲು ಇಂತಹ ಉದ್ಯಮಗಳು ಸಾಮಾನ್ಯವಾಗಿ ಅಧಿಕಾರಿಗಳಿಗೆ ಲಂಚ ನೀಡುತ್ತವೆ. ಯಾವುದೇ ಪಾರದರ್ಶಕತೆ ಮತ್ತು ಕಾನೂನು ಹೊಣೆಗಾರಿಕೆಯಿಲ್ಲದ ವ್ಯವಹಾರವನ್ನು ಪ್ರಾರಂಭಿಸಲು ಅಗತ್ಯವಿರುವ ದೀರ್ಘಾವಧಿಯ ಅನುಮೋದನೆಗಳು, ಸಮಯದ ಮಿತಿಗಳಂತಹ ವಿಷಯಗಳಿಗೆ ಸಂಬಂಧಿಸಿದ ಕಾನೂನುಗಳ ವಿಚಾರ ಬಂದಾಗ ಆಗುವ ವಿಳಂಬವನ್ನು ನಿವಾರಿಸಿಕೊಳ್ಳಲು ಲಂಚವನ್ನು ಉದ್ಯಮಿ ಮುಂದೆ ಮಾಡುತ್ತಾನೆ. ವ್ಯಾಪಕ ಆರ್ಥಿಕ ಅಸಮಾನತೆ ಮತ್ತೊಂದೆಡೆಗಿದೆ. ದೇಶದಲ್ಲಿ ಶೇ.1ರಷ್ಟಿರುವ ಶ್ರೀಮಂತರು ಒಟ್ಟು ಸಂಪತ್ತಿನ ಶೇ.60ರಷ್ಟನ್ನು ಹೊಂದಿದ್ದಾರೆ. ಕಡಿಮೆ ಆದಾಯದ ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲು ಅಧಿಕಾರಿಗಳಿಗೆ ಲಂಚ ನೀಡುವ ಅನಿವಾರ್ಯ ಸಿಕ್ಕುಗಳಲ್ಲಿ ಸಿಲುಕಿಕೊಳ್ಳುತ್ತಾರೆ.
ಇದರೊಂದಿಗೆ ವಸಾಹತುಶಾಹಿ ಕಾಲದ ನೀತಿಗಳೇ ಹೆಚ್ಚಿರುವ ಆಡಳಿತ ವ್ಯವಸ್ಥೆ ಜನಸ್ನೇಹಿಯಾಗದೇ ಉಳಿದುಬಿಟ್ಟಿರುವುದು, ನೌಕರರ ಸಂಬಳವು ಖಾಸಗಿಯವರ ಸಂಬಳದ ಮಟ್ಟದಲ್ಲಿ ಇರದೇ ಇರುವುದು ಇಂತಹ ಆಡಳಿತಾತ್ಮಕ ಕಾರಣಗಳು ಒಂದೆಡೆಯಾದರೆ, ಜೀವನಶೈಲಿಯಲ್ಲಿನ ಬದಲಾವಣೆಗಳು, ಐಷಾರಾಮಿ ಜೀವನಶೈಲಿಯೆಡೆಗಿನ ಒಲವು ಹೆಚ್ಚಿನ ಹಣವನ್ನು ಗಳಿಸಲು ಜನರನ್ನು ಪ್ರೇರೇಪಿಸುವಂಥ, ಅದಕ್ಕಾಗಿ ಅಕ್ರಮ ಹಾದಿಯನ್ನು ತುಳಿಯುವುದಕ್ಕೂ ಒಂದು ಹಂತದಲ್ಲಿ ಹೇಸದಂಥ ಸಾಮಾಜಿಕ ಮತ್ತು ನೈತಿಕ ಕಾರಣಗಳು ಇನ್ನೊಂದೆಡೆ.
ಭ್ರಷ್ಟಾಚಾರ ತಡೆಗೆ ಸಾಕಷ್ಟು ಕಾನೂನು ಕ್ರಮಗಳು, ಆಡಳಿತಾತ್ಮಕ ಸುಧಾರಣೆಗಳು, ಆರ್ಥಿಕ ಸುಧಾರಣೆಗಳು, ಚುನಾವಣಾ ಸುಧಾರಣೆಗಳನ್ನು ಕೈಗೊಳ್ಳಲಾಗಿರುವುದು ನಿಜವಾದರೂ ಇವೆಲ್ಲವೂ ಫಲ ಕೊಟ್ಟಿವೆಯೇ ಎಂಬ ಪ್ರಶ್ನೆಯೂ ಇದೆ. ಇಲ್ಲಿಯೂ ಗಂಭೀರವಾದ ಚುನಾವಣಾ, ಆಡಳಿತಾತ್ಮಕ ಮತ್ತು ಕಾನೂನು ಸುಧಾರಣೆಗಳನ್ನು ತರಲು ರಾಜಕೀಯ ಇಚ್ಛಾ ಶಕ್ತಿಯದ್ದೇ ಕೊರತೆ.
ವಿವಿಧ ಆಯೋಗಗಳು ಪ್ರಬಲವಾದ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿರುವ ಪ್ರಮುಖ ಮತ್ತು ಕಾರ್ಯಸಾಧ್ಯವಾದ ಶಿಫಾರಸುಗಳನ್ನು ಮಾಡಿವೆ. ಆಡಳಿತದ ಮೇಲಿನ ಅತಿಯಾದ ರಾಜಕೀಯ ನಿಯಂತ್ರಣವನ್ನು ತಡೆಯಲು ನಾಗರಿಕ ಸೇವಾ ಮಂಡಳಿಯನ್ನು ಸ್ಥಾಪಿಸುವುದು, ಶಿಸ್ತಿನ ಕ್ರಮಗಳನ್ನು ಸರಳಗೊಳಿಸುವುದು ಮತ್ತು ಭ್ರಷ್ಟ ಅಧಿಕಾರಿಗಳು ಆಯಕಟ್ಟಿನ ಸೂಕ್ಷ್ಮಸ್ಥಾನವನ್ನು ಆಕ್ರಮಿಸದಂತೆ ನೋಡಿಕೊಳ್ಳಲು ಇಲಾಖೆಗಳಲ್ಲಿ ಜಾಗರೂಕತೆಯನ್ನು ಬಲಪಡಿಸುವುದು, ಕಾರ್ಯಕ್ಷಮತೆಯ ಮೌಲ್ಯಮಾಪನದಲ್ಲಿ ವಸ್ತುನಿಷ್ಠತೆ ಮತ್ತು ಅದಕ್ಕೆ ವೇತನ ಮತ್ತು ಭಡ್ತಿಯನ್ನು ಲಿಂಕ್ ಮಾಡುವುದು, ಪ್ರಮಾಣಪತ್ರಗಳ ವಿತರಣೆಯಂತಹ ಸರಕಾರದಲ್ಲಿನ ದಿನನಿತ್ಯದ ಕಾರ್ಯವಿಧಾನಗಳನ್ನು ಸ್ವಯಂಚಾಲಿತಗೊಳಿಸಲು ಹೊಸ ತಂತ್ರಜ್ಞಾನಗಳನ್ನು ಬಳಸುವುದು, ಅಪರಾಧಿಗಳು ಶಾಸನಸಭೆಗಳನ್ನು ಪ್ರವೇಶಿಸುವುದನ್ನು ತಡೆಯುವುದು, ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಯನ್ನು ನಿಷೇಧಿಸುವುದು ಮತ್ತು ರಾಜಕೀಯ ಪಕ್ಷಗಳ ಒಟ್ಟಾರೆ ವೆಚ್ಚದ ಮೇಲೆ ಮಿತಿಗಳನ್ನು ಹೇರುವುದು, ನಿಯಮಗಳ ಬಗ್ಗೆ ಪಾರದರ್ಶಕತೆ ಮತ್ತು ಅರಿವನ್ನು ಹೆಚ್ಚಿಸಲು ಆರ್ಥಿಕ ಸಮೀಕ್ಷೆಯ ಶಿಫಾರಸುಗಳ ಪ್ರಕಾರ ನಿಯಮಗಳ ಪಾರದರ್ಶಕತೆಯನ್ನು ತರುವುದು, ಸ್ಥಳೀಯ ಸಂಸ್ಥೆಯನ್ನು ನೇರ ಪ್ರಜಾಪ್ರಭುತ್ವಕ್ಕೆ ಪ್ರಬಲ ಸಾಧನವನ್ನಾಗಿ ಮಾಡಲು ಅಧಿಕಾರ ನೀಡುವುದು, ಭ್ರಷ್ಟ ಅಧಿಕಾರಿಗಳ ವಿರುದ್ಧ ವಿಚಾರಣೆಯನ್ನು ತ್ವರಿತಗೊಳಿಸಲು ನ್ಯಾಯಾಂಗ ಸುಧಾರಣೆಗಳು ಇವೆಲ್ಲವೂ ಸುಂದರ ರಾಜ್ಯವನ್ನು ಕಟ್ಟಬಲ್ಲವು. ಆದರೆ, ಇಲ್ಲಿಯೂ ಮತ್ತದೇ ಇಚ್ಛಾ ಶಕ್ತಿಯದ್ದೇ ಪ್ರಶ್ನೆ.
ಸಮಗ್ರತೆ, ಪಾರದರ್ಶಕತೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟವು ಒಟ್ಟು ವ್ಯವಸ್ಥೆಯ ಭಾಗವಾಗಿರಬೇಕು. ಅವುಗಳನ್ನು ನಾವಿರುವ ಸಮಾಜದ ಮೂಲಭೂತ ಮೌಲ್ಯಗಳೆಂದು ಭಾವಿಸಬೇಕು. ಅಂದರೆ ಮುಖ್ಯವಾಗಿ ಪ್ರತಿಯೊಬ್ಬರೂ ಆತ್ಮಸಾಕ್ಷಿಗೆ ಬದ್ಧರಾಗುವುದು ಮತ್ತು ಮನಸ್ಸನ್ನು ಭ್ರಷ್ಟಗೊಳಿಸಿಕೊಳ್ಳದೇ ಇರುವುದು ಎಂದರ್ಥ. ಆದರೆ ಮನಸ್ಸೇ ಭ್ರಷ್ಟವಾಗಿದ್ದಾಗ ಯಾವ ಕ್ರಮವೂ ಏನನ್ನೂ ಮಾಡಲಾರದು.
(ಮಾಹಿತಿ ಕೃಪೆ:10pointer.com)