ಕರ್ನಾಟಕ: ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ ಕೇಂದ್ರ ಚುನಾವಣಾ ಆಯೋಗ
ಬೆಂಗಳೂರು, ಡಿ. 9: ರಾಜ್ಯ ವಿಧಾನಸಭಾ ಚುನಾವಣೆಗೆ ಅಗತ್ಯವಿರುವ ಸಿದ್ಧತೆಗಳನ್ನು ಆರಂಭಿಸಿರುವ ಕೇಂದ್ರ ಚುನಾವಣಾ ಆಯೋಗವು, ಚುನಾವಣೆಗೆ ಸಂಬಂಧಪಡುವ ಅಧಿಕಾರಿಗಳ ನಿಯೋಜನೆ ಹಾಗೂ ವರ್ಗಾವಣೆ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮಾರ್ಗಸೂಚಿಗಳನ್ನು ನೀಡಿ, ಶುಕ್ರವಾರ ಪತ್ರ ಬರೆದಿದೆ.
ಪ್ರಸ್ತುತ ಅಸ್ಥಿತ್ವದಲ್ಲಿರುವ ವಿಧಾನಸಭೆಯ ಅವಧಿಯು 2023ರ ಮೇ 24ಕ್ಕೆ ಅಂತ್ಯಗೊಳ್ಳಲಿದೆ. ಚುನಾವಣೆಯನ್ನು ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು, ಚುನಾವಣೆಗೆ ನೇರವಾಗಿ ಸಂಬಂಧಪಡುವ ಅಧಿಕಾರಿಗಳನ್ನು ತವರು ಜಿಲ್ಲೆಗಳಿಗೆ ನಿಯೋಜನೆ ಮಾಡುವಂತಿಲ್ಲ ಹಾಗೂ ಒಂದೇ ಸ್ಥಳದಲ್ಲಿ ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ಸೂಚಿಸಿದೆ.
ಅಧಿಕಾರಿಗಳನ್ನು ತವರು ಜಿಲ್ಲೆಗೆ ನಿಯೋಜನೆ ಮಾಡುವುದು ಅಥವಾ ಈಗಿರುವ ಸ್ಥಳದಲ್ಲೇ ಮುಂದುವರೆಸಬೇಕಾಗಿದ್ದಲ್ಲಿ ಅದಕ್ಕೆ ಸಮರ್ಪಕವಾದ ಸ್ಪಷ್ಟೀಕರಣವನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಬೇಕು ಎಂದು ಸೂಚಿಸಲಾಗಿದೆ.
ಚುನಾವಣೆಗೆ ಸಂಬಂಧಿಸದ ಸಿಬ್ಬಂದಿಯ ವರ್ಗಾವಣೆ ಅಥವಾ ನಿಯೋಜನೆಗೆ ಯಾವುದೇ ತಕರಾರು ಇಲ್ಲ. ಚುನಾವಣಾಧಿಕಾರಿಗಳು, ಜಿಲ್ಲಾ, ತಾಲೂಕು ಚುನಾವಣಾಧಿಕಾರಿಗಳು ಸೇರಿದಂತೆ ನೋಡಲ್ ಅಧಿಕಾರಿಗಳಾಗಿ ನಿಯೋಜನೆಯಾಗುವವರನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಬೇಕು. ಪೊಲೀಸ್ ಇಲಾಖೆಯಲ್ಲಿಯೂ ಸಬ್ ಇನ್ಸ್‍ಪೆಕ್ಟರ್ ಹುದ್ದೆಯಿಂದ ಮೇಲ್ಪಟ್ಟ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ಆದರೆ, ಪೊಲೀಸ್ ಇಲಾಖೆಯಲ್ಲಿ ಕಂಪ್ಯೂಟರ್, ತರಬೇತಿ ಸೇರಿದಂತೆ ಇತರೆ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಇದು ಅನ್ವಯಿಸುವುದಿಲ್ಲ. ಸರಕಾರದ ಆಡಳಿತ ಯಂತ್ರಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಬೇಕು. ವೈದ್ಯರು, ಶಿಕ್ಷಕರು, ಸರಕಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ರಾಜಕೀಯ ಪಕ್ಷಪಾತ ಮಾಡುವಂತಹ ದೂರುಗಳಿದ್ದಲ್ಲಿ ಅಂತಹವರನ್ನು ಚುನಾವಣೆ ಕಾರ್ಯಕ್ಕೆ ನಿಯೋಜನೆ ಮಾಡಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಆರು ತಿಂಗಳಲ್ಲಿ ಸೇವೆಯಿಂದ ನಿವೃತ್ತಿಯಾಗುವ ಅಧಿಕಾರಿಗಳಿಗೆ ಚುನಾವಣೆ ಕೆಲಸದಿಂದ ವಿನಾಯಿತಿ ನೀಡಲಾಗಿದೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಕಾರ್ಯಕ್ಕೆ ನಿಯೋಜಿಸಲ್ಪಡುವ ಸಿಬ್ಬಂದಿಗಳ ಮೇಲೆ ನಿಗಾವಹಿಸಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಚುನಾವಣಾಧಿಕಾರಿಗೆ, ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.