ರಿಯಾದ್: ಮಲೆನಾಡು ಗಲ್ಫ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ "ಮಲೆನಾಡ ಸಂಗಮ" ಕಾರ್ಯಕ್ರಮ
ರಿಯಾದ್: ಮಲೆನಾಡು ಗಲ್ಫ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್, ಸೌದಿ ಅರೇಬಿಯಾದ ರಿಯಾದ್ ಘಟಕದ ವತಿಯಿಂದ "ಮಲೆನಾಡ ಸಂಗಮ" ಕಾರ್ಯಕ್ರಮವು ನಝೀರ್ ಜಯಪುರ ಅವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ಇತ್ತೀಚೆಗೆ ನಡೆಯಿತು.
ಇಲ್ಯಾಸ್ ಲತೀಫಿ ಅವರ ಪ್ರಾರ್ಥನೆ (ದುಆ)ಯೊಂದಿಗೆ ಸಭಾ ಕಾರ್ಯಕ್ರಮವನ್ನು ಪ್ರಾರಂಭಗೊಳಿಸಲಾಯಿತು. ಸಿರಾಜ್ ಚಕ್ಕಮಕ್ಕಿ ಸ್ವಾಗತಿಸಿದರು.
ಮುಖ್ಯ ಅತಿಥಿಯಾಗಿ ಭಾರತದಿಂದ ಆಗಮಿಸಿದ ಎಂಜಿಟಿ ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷರಾದ ಯೂಸುಫ್ ಹಾಜಿ ಉಪ್ಪಳ್ಳಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯ ಮಹತ್ವ ಮತ್ತು ತಾಯ್ನಾಡಿನಲ್ಲಿ ರಾಷ್ಟ್ರೀಯ ಸಮಿತಿಯ ಮುಂದಿನ ಜವಾಬ್ದಾರಿಗಳ ಬಗ್ಗೆ ವಿವರಿಸಿದರು.
ತಾಯ್ನಾಡಿನಿಂದ ಆಗಮಿಸಿದ ಮತ್ತೋರ್ವ ಅತಿಥಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಕ್ರಂ ಹಾಜಿ ಮೂಡಿಗೆರೆ ಸಭೆಯನ್ನೂ, ಸಮಿತಿಯ ಕಾರ್ಯವೈಖರಿಯನ್ನೂ ಪ್ರಶಂಸಿಸಿ ಮುಂದಿನ ದಿನಗಳಲ್ಲಿ ತಾಯ್ನಾಡಿನಲ್ಲಿ ಸಂಘಟನೆಯ ಕಾರ್ಯ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸ್ಥಾಪಕ ಅಧ್ಯಕ್ಷರಾದ ಬಶೀರ್ ಬಾಳುಪೇಟೆ ಅವರು ಸಮಿತಿ ನಡೆದು ಬಂದ ಹಾದಿಯನ್ನು ವಿವರಿಸಿದರು.
ಕೇಂದ್ರ ಸಮಿತಿ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಜಯಪುರ (ಕ್ಲೌಡ್ ಸೆವೆನ್ ಕಂಪೆನಿ ಮಾಲಕರು) ಸಮಿತಿಯ ಮುಂದಿನ ಕನಸಿನ ಯೋಜನೆಯ 3D ವೀಡಿಯೊವನ್ನು ಅನಾವರಣಗೊಳಿಸಿ, ಕಾರ್ಯವೈಖರಿಯನ್ನು ವಿವರಿಸಿದರು.
ಸಂಘಟನೆಯ ಪ್ರಮುಖ ಉದ್ದೇಶವಾದ ಶೈಕ್ಷಣಿಕ ವಿದ್ಯಾರ್ಥಿವೇತನ, ವೃತ್ತಿಪರ ತರಬೇತಿ ಕೋರ್ಸ್‌ಗಳನ್ನು ನೀಡುವ ಬಗ್ಗೆ, ನಾಗರಿಕ ಸೇವಾ ಪರೀಕ್ಷೆಗಳ ತರಬೇತಿ ನೀಡುತ್ತಿರುವ ಬಗ್ಗೆ ವಿವರಣೆ ನೀಡಿ ವಿಷನ್ -2027 ಇದನ್ನು ಕಾರ್ಯರೂಪಕ್ಕೆ ತರಲು ಎಲ್ಲರ ಸಹಕಾರ ಕೋರಿದರು.
ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಇರ್ಶಾದ್ ಚಕ್ಕಮಕ್ಕಿ ಮತ್ತು ಕೇಂದ್ರ ಸಮಿತಿಯ ಅಂತರರಾಷ್ಟ್ರೀಯ ಸಂಯೋಜಕರಾದ ಇಕ್ಬಾಲ್ ಗಬ್ಗಲ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಸುಮಾರು ಸಾವಿರದ ಇನ್ನೂರಕ್ಕೂ ಮೀರಿದ ಜನರು ಸಂಘಟನೆಯ ಯೋಜನೆಯನ್ನೂ, ಸಮಿತಿಯ ಬೆಳವಣಿಗೆಯನ್ನೂ ಶ್ಲಾಘಿಸಿದರು.
ವೇದಿಕೆಯಲ್ಲಿ ಸಮಿತಿಯ ಉಪದೇಶಕರಾದ ಫಾರೂಖ್ (ಅರಬ್ ಎನರ್ಜಿ ಕಂಪೆನಿ ಮಾಲಕರು), ಎಂಜಿಟಿ ಜಿದ್ದಾ ಘಟಕದ ಅಧ್ಯಕ್ಷರಾದ ಮುಷ್ತಾಕ್ ಗಬ್ಗಲ್, ಜುಬೈಲ್ ಘಟಕದ ಅಧ್ಯಕ್ಷರಾದ ಅಬೂಬಕರ್ ಹಂಡುಗುಳಿ ಮತ್ತು ಸಂಪನ್ಮೂಲ ವ್ಯಕ್ತಿಯೂ, ಹಿತೈಷಿಯೂ, ಮಲೆನಾಡ ಹೆಮ್ಮೆಯ ವೈದ್ಯ, ಕೋವಿಡ್ ಸಮಯದಲ್ಲಿ ಹಲವಾರು ರೋಗಿಗಳ ಆಶಾಕಿರಣವಾಗಿ "ಕೋವಿಡ್ ವಾರಿಯರ್" ಬಿರುದು ಪಡೆದ ಡಾ. ಮೋಯಿನ್ ಬ್ಯಾರಿ ಕೊಪ್ಪ ಅವರು ಉಪಸ್ಥಿತರಿದ್ದರು.
ತುರ್ತು ರಜೆಯ ನಿಮಿತ್ತ ತಾಯ್ನಾಡಿನಲ್ಲಿದ್ದ ಗೌರವಾಧ್ಯಕ್ಷರಾದ ಶರೀಫ್ ಸ್ಯಾಂಕಾನ್ ಕಳಸ ಅವರು ಭಾರತದಿಂದಲೇ ಶುಭ ಹಾರೈಸಿದರು. ಝುಬೈರ್ ಬಾಳೇಹೊನ್ನೂರು ವಂದಿಸಿದರು.
ಈ ಸಂದರ್ಭ ಹಲವಾರು ಆಟೋಟ ಸ್ಪರ್ಧೆಗಳು ನಡೆದು ಜನಮನವನ್ನು ರಂಜಿಸಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ ನಡೆಯಿತು.
ಇಬ್ರಾಹಿಂ ತೆಂಗಿನಮನೆ ಮತ್ತು ಕೇಂದ್ರ ಸಮಿತಿಯ ಎಜುಕೇಷನ್ ವಿಭಾಗದ ಮುಖ್ಯಸ್ಥರಾದ ಮುಹಮ್ಮದ್ ರಫಿ, ಜುಬೈಲ್ ಅವರು ನಡೆಸಿಕೊಟ್ಟ ರಸಪ್ರಶ್ನೆಗಳು ತುಂಬಾ ವ್ಯತಿರಿಕ್ತವಾಗಿತ್ತು. ಇವಕ್ಕೆಲ್ಲಾ ಆಕರ್ಷಕ ಬಹುಮಾನವನ್ನು ಕೂಡಾ ನೀಡಲಾಗಿತ್ತು. ಈ ಎಲ್ಲಾ ಕಾರ್ಯಕ್ರಮಗಳೂ ತುಂಬಾ ಅಚ್ಚುಕಟ್ಟಾಗಿ ನೆರೆವೇರಿತು.
ರಿಯಾದ್ ಘಟಕದ ಅಧ್ಯಕ್ಷರಾದ ನಝೀರ್ ಮತ್ತು ಕಾರ್ಯದರ್ಶಿ ಅನ್ಸಾರ್ ಚಕ್ಕಮಕ್ಕಿ ಅವರು ಈ ಕಾರ್ಯಕ್ರಮಕ್ಕೆ ತನು, ಮನ, ಧನ ಸಹಾಯ ಮಾಡಿದ ಎಲ್ಲಾ ದಾನಿಗಳಿಗೂ, ಕಾರ್ಯಕ್ರಮದ ವಿಜಯಕ್ಕೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದ ಅರ್ಪಿಸಿದರು.