ಮನೋಸಂಸ್ಕೃತಿ
ಮುಸಲ್ಮಾನನೊಬ್ಬ ಗಣಪತಿಯ ವಿಗ್ರಹದ ಮುಂದೆ ಇರುವ ಗೋಲಕಕ್ಕೆ ಹಣ ಹಾಕಿ ಕೈ ಮುಗಿದುಕೊಂಡು ಹೋದರೆ, ಹಿಂದೂ ಒಬ್ಬನು ದರ್ಗಾಕ್ಕೆ ಹೋಗಿ ನವಿಲುಗರಿಯ ಪುಚ್ಛಕ್ಕೆ ತಲೆಗೊಟ್ಟು, ಗೋರಿಯ ಮೇಲೆ ಚಾದರ ಹಾಸಿ ನಮಿಸಿದರೆ ಸೌಹಾರ್ದ ಪ್ರೇಮಿಗಳು ಇದು ನನ್ನ ಭಾರತ ಎಂದು ಉದ್ಗರಿಸುತ್ತಾರೆ. ಇದು ನಾವು ಇಚ್ಛಿಸುವ ಸಾಮರಸ್ಯದ ಭಾರತ ಎಂದು ಅಂತಹುದನ್ನು ಪ್ರಶಂಸಿಸುವುದರ ಮೂಲಕ ಅಂತಹ ಪ್ರಕರಣಗಳನ್ನು ಎದುರು ನೋಡುತ್ತಾರೆ. ಕೆಲವು ಸೌಹಾರ್ದವನ್ನು ಮೆರೆದ ಉದಾಹರಣೆಯಾಗಿ ಅದನ್ನು ವೈರಲ್ ಮಾಡುವುದೂ ಉಂಟು. ಚರ್ಚೆಯ ಸಲುವಾಗಿ ಎಂದೇ ಒಂದು ಆಕ್ಷೇಪವನ್ನು ಎತ್ತೋಣ.
ಅದೇನೆಂದರೆ ಓರ್ವ ಮುಸಲ್ಮಾನ ತನ್ನ ಸೌಹಾರ್ದದ ಮನಸ್ಥಿತಿಯನ್ನು ಪ್ರಕಟಿಸಲು ಗಣೇಶನ ಮೂರ್ತಿಗೆ ನಮಿಸಲೇ ಬೇಕೇ? ಇಸ್ಲಾಮ್‌ನಲ್ಲಿ ವಿಗ್ರಹಾರಾಧನೆ ನಿಷೇಧವಿದೆಯಲ್ಲವೇ? ಹಾಗಿರಲು ಗಣಪತಿಗೆ ಆತ ನಮಿಸಿದ್ದರಲ್ಲಿ ಪ್ರಾಮಾಣಿಕತೆ ಇದೆಯೇ? ಒಂದು ವೇಳೆ ಪ್ರಾಮಾಣಿಕನೇ ಆಗಿದ್ದ ಪಕ್ಷದಲ್ಲಿ ಆ ಮುಸ್ಲಿಮ್ ತನ್ನ ಧಾರ್ಮಿಕ ನಿಷ್ಠೆಗೆ ವ್ಯತಿರಿಕ್ತವಾಗಿ ನಡೆದೇ ತನ್ನ ಸಾಮರಸ್ಯವನ್ನು ಪ್ರದರ್ಶಿಸಬೇಕೇ? ಅದರಂತೆ ಓರ್ವ ಹಿಂದೂ ಧಾರ್ಮಿಕ ವ್ಯಕ್ತಿಯು ತನ್ನ ಧರ್ಮ ನಿರಪೇಕ್ಷೆಯ ಮನಸ್ಥಿತಿಯನ್ನು ಬಿಂಬಿಸಲು ಚರ್ಚಿಗೆ ಹೋಗಿ ಮೊಣಕಾಲೂರಬೇಕೇ? ಮಸೀದಿಗೆ ಹೋಗಿ ಹಣೆಯನ್ನು ನೆಲಕ್ಕೆ ಹಚ್ಚಿ ಬಾಗಬೇಕೇ? ಭಗವದ್ಗೀತೆ ಕಂಠಪಾಠ ಮಾಡುವ ಮುಸ್ಲಿಮ್ ಹುಡುಗಿಗೆ, ಹಾಗೆಯೇ ಕುರ್‌ಆನ್ ಅಧ್ಯಾಯಗಳನ್ನು ನಿರರ್ಗಳವಾಗಿ ಹೇಳುವ ಹಿಂದೂ ಹುಡುಗಿಗೆ ಪ್ರಶಂಸೆಗಳು ಸಲ್ಲುತ್ತವೆ.
ಆಯಾ ಧರ್ಮೀಯರು ತಮ್ಮ ತಮ್ಮ ಪಾಡಿಗೆ ತಾವು ತಮ್ಮ ಆಚರಣೆಗಳನ್ನು ವೈಯಕ್ತಿಕವಾಗಿ ಮಾಡಿಕೊಂಡಿದ್ದು ಇತರರ ತಂಟೆಗೆ ಹೋಗದಿರುವುದು ಸಹನೆಯ ಗುರುತಲ್ಲವೇ? ಭಾರತದಂತಹ ಬಹುಸಂಸ್ಕೃತಿಯ ದೇಶದಲ್ಲಿ ಸಹನೆ ಮತ್ತು ಅಸಹನೆಗಳ ಮಾನದಂಡವು ಆಯಾ ಕಾಲದ ಒತ್ತಡದಲ್ಲಿ ರೂಪುಗೊಳ್ಳುತ್ತಿರುತ್ತದೆ. ಬಹುಸಂಸ್ಕೃತಿಯನ್ನು ಒಪ್ಪುವುದರೊಂದಿಗೆ ನಾನಾ ವಿಧದ ಸಂಧಾನಗಳಿಗೂ, ನಾನಾ ಬಗೆಯ ಒತ್ತಡಗಳಿಗೂ ಮಣಿಯಬೇಕಾಗುತ್ತದೆ ಎಂಬುದೂ ನಿಜ. ಆದರೆ ಭಾರತೀಯ ಸಂಸ್ಕೃತಿ ಎಂಬುದೇ ಬಹುತ್ವದ ಸಂಸ್ಕೃತಿ. ಇರಲಿ, ಮನುಷ್ಯನ ಮೇಲಾಗುವ ಸಂಸ್ಕೃತಿಯ ಪ್ರಭಾವಗಳನ್ನೂ ಮತ್ತು ಅದೇ ರೀತಿಯಲ್ಲಿ ಮನುಷ್ಯನ ಮಾನಸಿಕ ಒತ್ತಡಗಳನ್ನೂ ಗಮನಿಸೋಣ. ಸಂಸ್ಕೃತಿ ಎಂದ ಕೂಡಲೇ ಭಾಷೆ, ಅದರ ಸೊಗಡು, ಉಡುಗೆ ತೊಡುಗೆ, ಊಟ, ನಿರ್ದಿಷ್ಟ ಹಬ್ಬ, ಆಚರಣೆಗಳು ನೆನಪಿಗೆ ಬರುತ್ತವೆ. ಸಾಮಾನ್ಯವಾಗಿ ಜನ ಸಾಮಾನ್ಯರು ತಮ್ಮ ತಮ್ಮ ಸಂಸ್ಕೃತಿಯನ್ನು ಬಹಳ ಹೆಮ್ಮೆ ಮತ್ತು ಅಭಿಮಾನದಿಂದ ಭಾವಿಸುತ್ತಾರೆ.
ಹಾಗೆ ಅದನ್ನು ಉಪಚರಿಸುವುದು, ಅಭಿಮಾನಿಸುವುದು ತಮ್ಮ ಕರ್ತವ್ಯವೆಂದೂ ತಿಳಿಯುತ್ತಾರೆ. ಹಾಗಾಗಿಯೇ ಪ್ರಾದೇಶಿಕವಾಗಿಯೋ, ಧಾರ್ಮಿಕವಾಗಿಯೋ, ಜಾತಿ, ಕುಲಾಧಾರಿತವಾಗಿಯೋ ರೂಪುಗೊಂಡ ಸಂಸ್ಕೃತಿಯನ್ನು ವೈಭವೀಕರಿಸುವುದು ಮತ್ತು ಅದಕ್ಕೆ ಇತರರು ಕುಂದುಂಟಾಗುವಂತೆ ವರ್ತಿಸಿದರೆ ಅಥವಾ ವಿಮರ್ಶಿಸಿದರೆ ಅದಕ್ಕೆ ಪ್ರತಿಭಟನೆಯನ್ನು ತೋರುವುದು ಕೂಡಾ ಉಂಟು. ಯಾವುದೇ ಒಂದು ವಿಷಯದಲ್ಲಿ ಭಾವಿಸುವುದು, ಸ್ವೀಕರಿಸುವುದು, ತಿರಸ್ಕರಿಸುವುದು, ಕ್ರೋಧಗೊಳ್ಳುವುದು, ಪ್ರತಿಭಟಿಸುವುದು; ಇತ್ಯಾದಿಗಳು ನಡೆಯುತ್ತಿದ್ದರೆ, ಆ ವಿಷಯವು ಮಾನಸಿಕವಾಗಿ ವ್ಯಕ್ತಿಯಲ್ಲಿ ರೂಪುಗೊಂಡಿದೆ ಎಂದೇ ಅರ್ಥ.
ಲಂಬಾಣಿಯವರ ಗಾಜಿನ ಚೂರುಗಳಿಂದ ಅಲಂಕೃತ ಬಣ್ಣ ಬಣ್ಣದ ಉಡುಗೆಗಳನ್ನು ಓರ್ವ ಕ್ರೈಸ್ತ ಹುಡುಗಿ ತೊಡುತ್ತಾಳೆಂದರೆ ಅವಳು ಆ ಉಡುಪಿನ ವಿನ್ಯಾಸಕ್ಕೆ, ರಂಗುರಂಗಾದ ವೈಭವಕ್ಕೆ ಮಾರು ಹೋಗಿದ್ದಾಳೆಂದಷ್ಟೇ ಅರ್ಥ. ನರ್ತಿಸಲು ಚಂದ ಎಂದೋ, ಫ್ಯಾನ್ಸಿ ಡ್ರೆಸ್ ಕಾಂಪಿಟಿಷನ್‌ಗೆ ಸೂಕ್ತವೆಂದೋ ಆಕೆ ತೊಟ್ಟಿರುತ್ತಾಳೆ. ಹೊರತಾಗಿ ಅವಳು ಆ ಸಂಸ್ಕೃತಿಯನ್ನು ಅಪ್ಪಿಕೊಂಡಳೆಂದೋ, ಅವರ ಆಚಾರ ವಿಚಾರಗಳನ್ನು ಸ್ವೀಕರಿಸಿದ್ದಾಳೆಂದೋ ಅರ್ಥವಲ್ಲ. ಹೀಗೆ ಸಂಸ್ಕೃತಿಯನ್ನು ಮಾನಸಿಕವಾಗಿ ಸ್ವೀಕರಿಸುವುದಕ್ಕೂ, ಬಾಹ್ಯಾಕರ್ಷಣೆಗೆ ಸ್ವೀಕರಿಸುವುದಕ್ಕೂ ವ್ಯತ್ಯಾಸವಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ಒಂದು ಸಂಸ್ಕೃತಿಯನ್ನು ಸ್ವೀಕರಿಸುವ ಮಟ್ಟದಲ್ಲಿ ನಾನಾ ಸ್ತರಗಳಿದ್ದು ಅವು ನಾನಾ ಭಾವಗಳಿಂದ ಕೂಡಿರುತ್ತವೆ. ಹೀಗಾಗಿ ಮಾನಸಿಕ ಆರೋಗ್ಯಕ್ಕೂ ಮತ್ತು ಸಂಸ್ಕೃತಿಗೂ ಸಂಬಂಧ ಇದೆ. ಅದನ್ನು ಪ್ರತಿಯೊಂದು ಸಮಾಜವೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅನುಭವಿಸುತ್ತದೆ. ಜಾತ್ಯತೀತ ಮತ್ತು ಧರ್ಮ ನಿರಪೇಕ್ಷ ಭಾರತದಲ್ಲಿ ಜಾತಿ ಮತ್ತು ಧರ್ಮಗಳನ್ನು, ತಾನು ಗುರುತಿಸಿಕೊಂಡಿರುವ ಸಂಸ್ಕೃತಿ ಮತ್ತು ಇತರ ಸಂಸ್ಕೃತಿಗಳನ್ನು ಹೇಗೆ ನೋಡುವುದೆಂಬುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಆಗಲೇ ತಿಳಿಸಿದಂತೆ ಓರ್ವ ಕ್ರೈಸ್ತ ಹುಡುಗಿ ಕಾಲೇಜಿನ ಫ್ಯಾನ್ಸಿ ಡ್ರೆಸ್ಸಿನ ಸ್ಪರ್ಧೆಗೆಂದು ರಂಗು ರಂಗಾದ ಲಂಬಾಣಿ ಉಡುಗೆಯನ್ನು ತೊಟ್ಟಂತೆ ಆಗುವುದಿಲ್ಲ. ಏಕದೇವನ ಆರಾಧನೆ ಮಾಡುವ ಧಾರ್ಮಿಕರು ಅದನ್ನೇ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಒಪ್ಪಿಕೊಂಡಿರುವಾಗ ಬಹುದೇವತೆಗಳನ್ನು ಆರಾಧನೆ ಮಾಡುವ ಸಹಜನರ ತಾತ್ವಿಕತೆಯನ್ನು ಸಮ್ಮತಿಸುವುದೋ, ಸಹಿಸುವುದೋ; ಒಟ್ಟಾರೆ ಮನಸ್ಸಿಗೆ ಅದು ಒತ್ತಡವೇ. ಜಾತ್ಯತೀತ ತತ್ವವನ್ನು ಎತ್ತಿ ಹಿಡಿಯುತ್ತಲೇ ಜಾತಿಯ ಆಧಾರದಲ್ಲಿ ರಾಜಕೀಯ ಪಕ್ಷಗಳು ಆಯಾ ಪ್ರದೇಶಗಳಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವುದನ್ನು, ಇಂತಹ ಜಾತಿಯವರ ಇಷ್ಟು ವೋಟುಗಳಿವೆ, ಅಂತಹ ಜಾತಿಯವರ ಅಷ್ಟು ವೋಟುಗಳಿವೆ ಎಂದು ನೋಡುವುದು, ಇಂತಹ ಜಾತಿಯವರ ಪ್ರಾತಿನಿಧ್ಯ ಬೇಕೆನ್ನುವುದು; ಇತ್ಯಾದಿ ಜಾತಿ ಆಧಾರದ ಗಂಭೀರ ನಿರ್ಣಯಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ. ಮನ್ನಿಸಲಿ, ಮನ್ನಿಸದೇ ಇರಲಿ, ಇಂತಹ ಒತ್ತಡಗಳು ಮನಸ್ಸಿನ ಮೇಲೆ ನಾನಾ ಬಗೆಯ ಪರಿಣಾಮಗಳನ್ನು ಬೀರುತ್ತವೆ.
ಜಾತಿ ಆಧಾರಿತ ದೌರ್ಜನ್ಯಗಳನ್ನು ನೋಡುವಂತಹ ನಮ್ಮ ದೇಶದಲ್ಲಿ ದಲಿತ, ಶೂದ್ರ ಮತ್ತು ಸವರ್ಣೀಯ ಜಾತಿಗಳ ಹಿನ್ನೆಲೆಗಳನ್ನು ಹೊಂದಿರುವಂತಹ ವ್ಯಕ್ತಿಗಳು ಎಂತಹದ್ದೇ ವಿಶ್ವಮಾನವ ಪರಿಕಲ್ಪನೆಯನ್ನು ಹೊಂದಿದ್ದರೂ, ಸರಕಾರದ ಕಚೆೇರಿಗಳಲ್ಲಿ, ವ್ಯವಸ್ಥೆಗಳಲ್ಲಿ, ವರದಿಗಳನ್ನು ಜಾರಿಗೆ ತರುವಲ್ಲಿ ಜಾತಿ ಮತ್ತು ಪಂಗಡಗಳನ್ನು ತಮ್ಮ ತಮ್ಮ ಸ್ನೇಹಿತರ ನಡುವೆ ಪರಿಗಣಿಸುವುದು ಮತ್ತು ಭ್ರಾತೃತ್ವದ ಬಗ್ಗೆ ಕನಸುತ್ತಲೇ ವ್ಯವಸ್ಥೆಯಲ್ಲಿಯೇ ಭೇದಗಳನ್ನು ಹೊಂದುವುದು ಅವರಿಗೇ ತಿಳಿಯದಂತೆ ವಿವಿಧ ರೀತಿಯ ಮಾನಸಿಕ ಒತ್ತಡಗಳನ್ನು ಉಂಟುಮಾಡುತ್ತವೆ. ವೈರುಧ್ಯಗಳನ್ನು ಹೊಂದಿರುವ ವಿವಿಧ ಸಂಸ್ಕೃತಿಗಳು ನೇರವಾಗಿ ಮನಸ್ಸಿನ ಮೇಲೆ ಬೀರುವ ಪ್ರಭಾವಗಳಿಂದಾಗಿ ಭಾರತ, ನೇಪಾಳ, ಶ್ರೀಲಂಕಾದಂತಹ ದೇಶಗಳಲ್ಲಿ ಧಾತ್ ಸಿಂಡ್ರೋಮ್, ನೈಜೀರಿಯಾದಂತಹ ದೇಶದಲ್ಲಿ ಬ್ರೈನ್ ಫ್ಯಾಗ್ ಸಿಂಡ್ರೋಮ್, ಜಪಾನಿನಲ್ಲಿ ಹಿಕಿಕೊಮೊರಿ ಸಿಂಡ್ರೋಮ್, ಅಮೆರಿಕ ಮತ್ತು ಆಂಗ್ಲ ರಾಷ್ಟ್ರಗಳಲ್ಲಿ ವ್ಹೈಟ್ ಸೇವಿಯರ್ ಸಿಂಡ್ರೋಮ್; ಹೀಗೆ ನಾನಾ ಬಗೆಯ ಮಾನಸಿಕ ಸಮಸ್ಯೆಗಳನ್ನು ಕಾಣುತ್ತೇವೆ. ಒಟ್ಟಾರೆ ಭಾರತದಂತಹ ಬಹು ಸಂಸ್ಕೃತಿಯ ಸಮಾಜದಲ್ಲಿ ವಿವಿಧತೆಯನ್ನು ಕೊಂಡಾಡುವ ಮತ್ತು ಮಾನಸಿಕವಾಗಿ ಸಮಸ್ಯೆಗಳನ್ನು ಉಂಟು ಮಾಡದ ಬಗೆಯನ್ನೇ ಕಂಡುಕೊಳ್ಳಬೇಕಾಗಿರುವ ಅನಿವಾರ್ಯತೆ ಖಂಡಿತ ಇದೆ. ಸವರ್ಣೀಯರಲ್ಲಿ ಶ್ರೇಷ್ಠತೆಯ ವ್ಯಸನಗಳಿರುವಂತೆ, ತಳ ಸಮುದಾಯದ ಜಾತಿ ಮತ್ತು ಸಂಸ್ಕೃತಿಗಳಲ್ಲಿ ಬೇರೆ ಬೇರೆ ರೀತಿಯ ಅರಿಮೆ (ಕಾಂಪ್ಲೆಕ್ಸ್) ಮತ್ತು ಮಾನಸಿಕ ಒತ್ತಡಗಳನ್ನು ಉಂಟು ಮಾಡುತ್ತಿರುವುದು ಸುಳ್ಳಲ್ಲ. ಭಾರತದಂತಹ ದೇಶದಲ್ಲಿ ಇಂತಹದ್ದೊಂದು ಗಂಭೀರ ಅಧ್ಯಯನದ ಅಗತ್ಯವಿದೆ.