varthabharthi


ತಿಳಿ ವಿಜ್ಞಾನ

ಆಹಾರ ಸರಪಳಿಗೂ ಲಗ್ಗೆ ಇಟ್ಟಿತೇ ಪ್ಲಾಸ್ಟಿಕ್!?

ವಾರ್ತಾ ಭಾರತಿ : 11 Dec, 2022
ಆರ್.ಬಿ.ಗುರುಬಸವರಾಜ

ನನ್ನ ಆತ್ಮೀಯ ಗೆಳೆಯನೊಬ್ಬ ಕಾಲಿಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಅವನನ್ನು ಮಾತಾಡಿಸಲೆಂದು ಆಸ್ಪತ್ರೆಗೆ ಹೋಗಿದ್ದೆ. ಅವನೊಂದಿಗೆ ಮಾತಾಡುತ್ತಾ ಕುಳಿತಾಗಲೇ ಅಲ್ಲಿದ್ದ ಇತರ ರೋಗಿಗಳ ಕಡೆಗೂ ಗಮನ ಹರಿಸಿದೆ. ನಾನು ಹೋಗಿದ್ದು ಬೆಳಗಿನ ಒಂಭತ್ತು ಗಂಟೆ. ಅದು ಬಹುತೇಕ ರೋಗಿಗಳಿಗೆ ಬೆಳಗಿನ ಉಪಾಹಾರ ಸೇವನೆಯ ಸಮಯ. ರೋಗಿಗಳ ಸಹಾಯಕ್ಕೆ ಇದ್ದವರು ಹೊರಗಿನಿಂದ ಉಪಾಹಾರ ತರುತ್ತಿದ್ದರು. ಬಹುತೇಕವಾಗಿ ಹೊರಗಿನಿಂದ ತಂದ ಉಪಾಹಾರವೆಲ್ಲವೂ ಪ್ಲಾಸ್ಟಿಕ್ ಪೊಟ್ಟಣದಲ್ಲಿ ಬಂದಿಯಾಗಿತ್ತು. ಗೆಳೆಯನೊಂದಿಗೆ ಮಾತನಾಡುತ್ತ ಕುಳಿತಿರುವಾಗಲೇ ಅವನ ಸಹಾಯಕ ಚಹಾ ತಂದ. ಅದೂ ಸಹ ಪ್ಲಾಸ್ಟಿಕ್ ಚೀಲದಲ್ಲಿ ತಂದಿದ್ದ. ಗೆಳೆಯನಿಗೆ ಅದರಿಂದಾಗುವ ಅನಾಹುತಗಳ ಬಗ್ಗೆ ತಿಳಿಸಿ ಅದನ್ನು ಕುಡಿಯದೇ ಡಸ್ಟ್‌ಬಿನ್‌ಗೆ ಚೆಲ್ಲಿಸಿದೆ. ತಂದವನಿಗೆ ಚಹಾ ವ್ಯರ್ಥವಾದ ಬಗ್ಗೆ ನೋವಿತ್ತು. ಹಾಗೆಯೇ ಅಲ್ಲಿನ ವಾರ್ಡ್‌ಗಳ ಡಸ್ಟ್‌ಬಿನ್ ಗಮನಿಸಿದೆ. ಅಲ್ಲೆಲ್ಲಾ ಪ್ಲಾಸ್ಟಿಕ್ ಚೀಲಗಳೇ ತುಂಬಿದ್ದವು. ಆಸ್ಪತ್ರೆಯಿಂದ ಹೊರಬಂದ ಮೇಲೆ ತಳ್ಳುಗಾಡಿಯ ಹೊಟೇಲ್‌ನತ್ತ ಹೆಜ್ಜೆಹಾಕಿದೆ. ಅಲ್ಲಿ ನಾಲ್ಕಾರು ತಳ್ಳುಗಾಡಿಯವರು ಬಿಸಿ ಬಿಸಿಯಾದ ಉಪಾಹಾರ ತಯಾರಿಸುತ್ತಿದ್ದರು. ಐದು ನಿಮಿಷ ನಿಂತುಕೊಂಡು ಅಲ್ಲಿನ ವ್ಯವಹಾರವನ್ನು ಗಮನಿಸಿದೆ. ಆಸ್ಪತ್ರೆಯಲ್ಲಿ ದಾಖಲಾದ ಬಹುತೇಕ ರೋಗಿಗಳಿಗೆ ಇಲ್ಲಿನ ಹೋಟೆಲ್‌ಗಳಿಂದಲೇ ಉಪಾಹಾರ ಸರಬರಾಜು ಆಗುತ್ತಿತ್ತು. ಪ್ಲಾಸ್ಟಿಕ್‌ನ ಬಳಕೆ ಇಲ್ಲದೆ ಯಾವ ಉಪಾಹಾರವೂ ಸರಬರಾಜು ಆಗುತ್ತಿರಲಿಲ್ಲ. ಇಡ್ಲಿ ಬೇಯಿಸಲೂ ಪ್ಲಾಸ್ಟಿಕ್ ಬಳಕೆಯಾಗುತ್ತಿತ್ತು. ಬಿಸಿಯಾದ ಚಹಾ/ಕಾಫಿಗಳಂತೂ ಎಗ್ಗಿಲ್ಲದೇ ಪ್ಲಾಸ್ಟಿಕ್ ಚೀಲದಲ್ಲಿ ಸರಬರಾಜು ಆಗುತ್ತಿತ್ತು. ಇದನ್ನೆಲ್ಲಾ ನೋಡಿ ಒಂದು ಕ್ಷಣ ದಂಗಾದೆ. ಇದೇನು ರೋಗಿಗಳ ಕಾಯಿಲೆ ವಾಸಿ ಮಾಡುವ ತಾಣವೋ ಅಥವಾ ಹೊಸ ಹೊಸ ಕಾಯಿಲೆಗಳನ್ನು ಉತ್ಪತ್ತಿ ಮಾಡುವ ತಾಣವೋ ಅರ್ಥವಾಗಲಿಲ್ಲ.

ಅಲ್ಲಿಂದ ಮನೆಗೆ ಬರುವ ವೇಳೆಗೆ ಇಡೀ ಪ್ಲಾಸ್ಟಿಕ್ ಮನಸ್ಸನ್ನು ಆವರಿಸಿಕೊಂಡಿತ್ತು. ಒಂದು ನಿಮಿಷದಲ್ಲಿ ಪ್ಲಾಸ್ಟಿಕ್‌ನ ಬಳಕೆಯ ಎಲ್ಲಾ ದೃಶ್ಯಗಳು ಕಣ್ಣಮುಂದೆ ಹಾದುಹೋದಂತಾಯಿತು. ಹೌದು. ಇಂದು ನಮ್ಮ ಬದುಕಿನ ಎಲ್ಲಾ ಮಜಲುಗಳಲ್ಲಿ ಪ್ಲಾಸ್ಟಿಕ್ ಆವರಿಸಿಕೊಂಡಿರುವುದು ಸತ್ಯ. ಪ್ಲಾಸ್ಟಿಕ್ ಇಲ್ಲದ ಸಂದರ್ಭವನ್ನು ಅಥವಾ ದಿನವನ್ನು ಊಹಿಸಿಕೊಳ್ಳುವುದು ಕಷ್ಟ ಎನಿಸಿದೆ. ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಆಗುವ ಹಾನಿಯನ್ನು ತಿಳಿಸಲು ತಜ್ಞರೇ ಬೇಕಿಲ್ಲ. ಅಲ್ಲದೇ ಪ್ಲಾಸ್ಟಿಕ್‌ನಿಂದ ಆರೋಗ್ಯದ ಮೇಲೆ ಆಗುವ ಅಪಾಯಗಳನ್ನು ತಿಳಿಸಲು ವಿಜ್ಞಾನಿ ಅಥವಾ ವೈದ್ಯರು ಬೇಕಿಲ್ಲ. ನಮಗೀಗಾಗಲೇ ಅದರ ಅಪಾಯಗಳ ಅರಿವು ಆಗುತ್ತಿದೆ. ಆದರೂ ನಾವಿನ್ನೂ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಪದೇ ಪದೇ ಬಳಸುತ್ತಿರುವುದು ಅಪಾಯಗಳಿಗೆ ಆಹ್ವಾನ ನೀಡಿದಂತೆ ಅಲ್ಲವೇ? ಶಾಲಾ ಕಾಲೇಜು ಅಥವಾ ಆಫೀಸಿಗೆ ಕಟ್ಟುವ ಊಟದ ಡಬ್ಬಿಯಲ್ಲೂ ಪ್ಲಾಸ್ಟಿಕ್ ಸ್ಥಾನ ಪಡೆದಿರುವುದು ದುರಂತ. ಬಿಸಿಯಾದ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ತುಂಬುವುದರಿಂದ ಆಹಾರದ ಮೂಲಕ ಪ್ಲಾಸ್ಟಿಕ್ ದೇಹ ಸೇರುತ್ತಿದೆ. ಅಲ್ಲದೆ ಬಿಸಿಯಾದ ಚಹಾ ಅಥವಾ ಕಾಫಿಯನ್ನು ಪ್ಲಾಸ್ಟಿಕ್ ಕಪ್‌ಗಳಲ್ಲಿ ಹಾಕಿದಾಗಲೂ ಅಲ್ಪ ಪ್ರಮಾಣದಲ್ಲಿ ಪ್ಲಾಸ್ಟಿಕ್ ಕರಗಿ ದೇಹ ಸೇರುತ್ತಿದೆ. ಪ್ಲಾಸ್ಟಿಕ್ ಸಂಪೂರ್ಣವಾಗಿ ಸ್ಥಿರವಸ್ತುವಲ್ಲ ಎಂಬ ಅರಿವು ನಮಗಿದೆ. ಹೊರಗಿನ ನೈಸರ್ಗಿಕ ತಾಪಕ್ಕೆ ಅಲ್ಪ ಪ್ರಮಾಣದಲ್ಲಿ ಕರಗುವ ಪ್ಲಾಸ್ಟಿಕ್ ಬಿಸಿ ತಾಕಿದೊಡನೆ ಹೆಚ್ಚು ವೇಗವಾಗಿ ಕರಗಲು ಪ್ರಾರಂಭಿಸುತ್ತದೆ. ಇಂತಹ ಕರಗುವ ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ಆಹಾರ ವಸ್ತುಗಳನ್ನು ಸಂಗ್ರಹಿಸಿಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಬಳಕೆದಾರರೇ ಪ್ರಶ್ನಿಸಿಕೊಳ್ಳಬೇಕಿದೆ.

ಈ ಹಿಂದೆ ಬಳಸುತ್ತಿದ್ದ ಪಿಂಗಾಣಿ ಅಥವಾ ಗಾಜಿನ ಉಪ್ಪಿನಕಾಯಿ ಜಾಡಿ ಮಾಯವಾಗಿ ಅಲ್ಲಿಯೂ ಪ್ಲಾಸ್ಟಿಕ್ ಲಗ್ಗೆ ಇಟ್ಟಿದೆ. ಉಪ್ಪಿನಕಾಯಿಗೆ ಬಳಸಿದ ಅರಿಷಿನ ಪುಡಿ, ಮಸಾಲೆ ಪದಾರ್ಥಗಳು, ಉಪ್ಪು ಮತ್ತು ಎಣ್ಣೆ ಇವುಗಳ ನಡುವೆ ರಸಾಯನಿಕ ಸಂಯೋಗವು ನಡೆಯುತ್ತದೆ. ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಉಪ್ಪಿನಕಾಯಿ ತುಂಬಿಡುವುದರಿಂದ ಪ್ಲಾಸ್ಟಿಕ್‌ನ ಕಣಗಳು ಒಡೆದು ಮೈಕ್ರೋಪ್ಲಾಸ್ಟಿಕ್‌ಗಳು ಉಪ್ಪಿನಕಾಯಿಯೊಂದಿಗೆ ಸೇರಿಕೊಳ್ಳುತ್ತವೆ. ಇನ್ನು ಕೆಲವು ಆಹಾರ ವಸ್ತುಗಳು ತಾಜಾತನ ಕಳೆದುಕೊಳ್ಳದಂತೆ ಬಳಸುವ ಪ್ಲಾಸ್ಟಿಕ್ ಸಹ ಆರೋಗ್ಯಕ್ಕೆ ಹಾನಿಕರ ಎಂಬುದು ಸಾಬೀತಾಗಿದೆ. ಬಿಸ್ಕತ್, ಬ್ರೆಡ್ ಹಾಗೂ ಇನ್ನಿತರ ಆಹಾರ ವಸ್ತುಗಳ ಪ್ಯಾಕೇಜಿಂಗ್‌ಗೆ ಬಳಸುವ ಪ್ಲಾಸ್ಟಿಕ್ ಸಹ ಆರೋಗ್ಯಕ್ಕೆ ಮಾರಕ. ಅಲ್ಲದೆ ನಿತ್ಯವೂ ಬಳಸುವ ನೀರಿನ ಬಾಟಲ್‌ಗಳೂ ಆರೋಗ್ಯದ ದೃಷ್ಟಿಯಿಂದ ಹಿತಕರವಲ್ಲ. ಮಾರುಕಟ್ಟೆಯಲ್ಲಿ ಸಿಗುವ ಏಕಮುಖ ಬಳಕೆಯ ನೀರಿನ ಬಾಟಲಿಗಳ ಮೇಲೆ ‘ಬಳಸಿದ ನಂತರ ಬಿಸಾಡಿ’ ಎಂಬ ಸಂಕೇತ ಇರುತ್ತದೆ. ಆದರೆ ಬಹುತೇಕರು ಅದೇ ಬಾಟಲಿಯನ್ನು ಪದೇ ಪದೇ ಬಳಸುವುದರಿಂದ ಪ್ಲಾಸ್ಟಿಕ್ ಡೀಕಾಂಪೋಸ್ ಆಗಿ ನೀರಿನೊಂದಿಗೆ ಬೆರೆತು ದೇಹವನ್ನು ಸೇರುತ್ತದೆ. ಇಂದು ಪ್ಲಾಸ್ಟಿಕ್ ಇಲ್ಲದ ಕ್ಷಣವನ್ನು ಊಹಿಸಿಕೊಳ್ಳಲಾಗದು. ಹಾಗಾದರೆ ಯಾವ ಪ್ಲಾಸ್ಟಿಕನ್ನು ಎಷ್ಟು ಬಳಸಬೇಕು ಎಂಬುದರ ಬಗ್ಗೆ ಒಂದಿಷ್ಟು ಅರಿವು ಅಗತ್ಯ.

PET ಅಥವಾ ಪಾಲಿಥಿಲೀನ್ ಟೆರೆಫ್ತಾಲೇಟ್ ಒಂದು ಹಗುರವಾದ ಪ್ಲಾಸ್ಟಿಕ್ ಆಗಿದ್ದು, ಇದನ್ನು ಅರೆ ಗಟ್ಟಿ ಅಥವಾ ಗಟ್ಟಿಯಾಗಿ ಬಳಸಲಾಗುತ್ತದೆ. ಇದು ಹೆಚ್ಚು ಪರಿಣಾಮ ನಿರೋಧಕವಾಗಿದ್ದು, ಆಹಾರ ಮತ್ತು ದ್ರವಗಳನ್ನು ವಾತಾವರಣದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ತಂಪು ಪಾನೀಯಗಳು, ಕ್ರೀಡಾ ಪಾನೀಯಗಳು, ಏಕ ಬಳಕೆಯ ನೀರು, ಕೆಚಪ್, ಸಲಾಡ್ ಡ್ರೆಸ್ಸಿಂಗ್, ಜೀವಸತ್ವಗಳು, ಸಸ್ಯಜನ್ಯ ಎಣ್ಣೆ ಬಾಟಲಿಗಳು ಮತ್ತು ಬೆಣ್ಣೆ ಮುಂತಾದವುಗಳ ಆಹಾರ ಪ್ಯಾಕೇಜಿಂಗ್‌ನಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಇಂತಹ PET ಗಳ ಮೇಲೆ ಸಂಖ್ಯೆ 1ನ್ನು ಮುದ್ರಿಸಲಾಗಿರುತ್ತದೆ. ಇದನ್ನು ಒಂದು ಬಾರಿ ಮಾತ್ರ ಮರುಬಳಕೆ ಮಾಡಬಹುದು ಎಂದರ್ಥ.

HDPE ಅಥವಾ ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್ ಒಂದು ಗಟ್ಟಿಯಾದ, ಅಪಾರದರ್ಶಕ ಪ್ಲಾಸ್ಟಿಕ್ ಹಗುರವಾಗಿದ್ದು ತುಂಬಾ ಬಲವಾಗಿರುತ್ತದೆ. HDPE ಅನ್ನು ಸಾಮಾನ್ಯವಾಗಿ ಜ್ಯೂಸ್, ಹಾಲು ಪ್ಯಾಕೇಜಿಂಗ್, ಬೆಣ್ಣೆ ಮತ್ತು ವಿನೆಗರ್ ಬಾಟಲಿಗಳು ಮತ್ತು ಚಾಕೊಲೇಟ್ ಸಿರಪ್ ಕಂಟೈನರ್‌ಗಳು ಮತ್ತು ಕಿರಾಣಿ ಚೀಲಗಳಿಗೆ ಆಹಾರ ಪ್ಯಾಕೇಜಿಂಗ್‌ನಲ್ಲಿ ಬಳಸಲಾಗುತ್ತದೆ.  HDPEಗಳನ್ನು 2 ಬಾರಿ ಮರುಬಳಕೆ ಮಾಡಬಹುದಾಗಿದೆ.

PVC ಅಥವಾ ಪಾಲಿವಿನೈಲ್ ಕ್ಲೋರೈಡ್‌ನ್ನು ಕ್ಲೋರಿನ್‌ನಿಂದ ತಯಾರಿಸಲಾಗು ತ್ತದೆ. ಇದು ಜೈವಿಕವಾಗಿ ಮತ್ತು ರಾಸಾಯನಿಕವಾಗಿ ನಿರೋಧಕವಾಗಿರುವ ಒಂದು ಸಾಮಾನ್ಯ ರೀತಿಯ ಪ್ಲಾಸ್ಟಿಕ್ ಆಗಿದೆ. PVC ಈ ಎರಡು ಗುಣಲಕ್ಷಣಗಳನ್ನು ಹೊಂದಿರುವುದರಿಂದ ಔಷಧಿಗಳೂ ಸೇರಿದಂತೆ ಒಳಗಿನ ಉತ್ಪನ್ನಗಳ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪಾಲಿವಿನೈಲ್ ಕ್ಲೋರೈಡ್‌ನ್ನು ಔಷಧಿಗಳಿಗೆ ಪ್ಯಾಕೇಜಿಂಗ್ ಆಗಿ ಬಳಸಲಾಗುತ್ತದೆ, ಜೊತೆಗೆ ವಿವಿಧ ಉತ್ಪನ್ನಗಳಿಗೆ ಕುಗ್ಗಿಸುವ ಹೊದಿಕೆಯನ್ನು ಬಳಸಲಾಗುತ್ತದೆ. ವಿನೈಲ್ ಅನ್ನು ಬ್ಲಿಸ್ಟರ್ ಪ್ಯಾಕೇಜಿಂಗ್‌ನಲ್ಲಿ ಬಳಸಲಾಗುತ್ತದೆ. PVC ಮೂರು ಬಾರಿ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಆಗಿದೆ.

LDPE ಅಥವಾ ಕಡಿಮೆ ಸಾಂದ್ರತೆಯ ಪಾಲಿಥಿಲೀನ್ ಇತರ ಕೆಲವು ಪ್ಲಾಸ್ಟಿಕ್‌ಗಳಿಗಿಂತ ತೆಳ್ಳಗಿರುತ್ತದೆ ಮತ್ತು ಹೆಚ್ಚಿನ ಶಾಖದ ಸ್ಥಿತಿಸ್ಥಾಪಕತ್ವವನ್ನು ಹೊಂದಿದೆ. ಅದರ ಗಡಸುತನ ಮತ್ತು ನಮ್ಯತೆಯಿಂದಾಗಿ, ಔಈಉ ಅನ್ನು ಪ್ರಾಥಮಿಕವಾಗಿ ಫಿಲ್ಮ್ ಅಪ್ಲಿಕೇಶನ್‌ಗಳಲ್ಲಿ ಬಳಸಲಾಗುತ್ತದೆ, ಅಲ್ಲಿ ಶಾಖದ ಸೀಲಿಂಗ್ ಅಗತ್ಯವಿರುತ್ತದೆ. ಹಾಗಾಗಿ ಇದನ್ನು ಕಟ್ಟುನಿಟ್ಟಾಗಿ ಬಳಸಲಾಗುತ್ತದೆ. LDPE ಅನ್ನು ಸಾಮಾನ್ಯವಾಗಿ ಆಹಾರ ಪ್ಯಾಕೇಜಿಂಗ್‌ನಲ್ಲಿ ಕಾಫಿ ಕ್ಯಾನ್ ಮುಚ್ಚಳಗಳು, ಬ್ರೆಡ್ ಬ್ಯಾಗ್‌ಗಳು, ಸಿಕ್ಸ್ ಪ್ಯಾಕ್ ಸೋಡಾ ಕ್ಯಾನ್ ರಿಂಗ್‌ಗಳು ಹಾಗೆಯೇ ಕಿರಾಣಿ ಅಂಗಡಿಗಳಲ್ಲಿ ಬಳಸುವ ಹಣ್ಣು ಮತ್ತು ತರಕಾರಿ ಚೀಲಗಳನ್ನು ತಯಾರಿಸಲು ಬಳಸಲಾಗುತ್ತದೆ. LDPEಯನ್ನು ನಾಲ್ಕು ಬಾರಿ ಮರುಬಳಕೆ ಮಾಡಬಹುದಾಗಿದೆ. 

PP ಅಥವಾ ಪಾಲಿಪ್ರೊಪಿಲೀನ್ ಸ್ವಲ್ಪಗಟ್ಟಿಯಾಗಿರುತ್ತದೆ, ಆದರೆ ಇತರ ಪ್ಲಾಸ್ಟಿಕ್‌ಗಳಿಗಿಂತ ಕಡಿಮೆ ದುರ್ಬಲವಾಗಿರುತ್ತದೆ. ಇದನ್ನು ತಯಾರಿಸಿದಾಗ ಅರೆಪಾರದರ್ಶಕ, ಅಪಾರದರ್ಶಕ ಅಥವಾ ಬೇರೆ ಬಣ್ಣವನ್ನು ಮಾಡಬಹುದು.  ಸಾಮಾನ್ಯವಾಗಿ ಹೆಚ್ಚಿನ ಕರಗುವ ಬಿಂದುವನ್ನು ಹೊಂದಿರುತ್ತದೆ. ಇದು ಮೈಕ್ರೋವೇವ್‌ಗಳಲ್ಲಿ ಬಳಸುವ ಅಥವಾ ಡಿಶ್‌ವಾಶರ್‌ಗಳಲ್ಲಿ ಸ್ವಚ್ಛಗೊಳಿಸುವ ಆಹಾರ ಪ್ಯಾಕೇಜಿಂಗ್ ಉತ್ಪನ್ನಗಳಿಗೆ ವಿಶೇಷವಾಗಿ ಸೂಕ್ತವಾಗಿದೆ. ಮೊಸರು ಕಂಟೈನರ್‌ಗಳು, ಕ್ರೀಮ್ ಚೀಸ್ ಕಂಟೇನರ್‌ಗಳು ಮತ್ತು ಹುಳಿ ಕ್ರೀಮ್ ಕಂಟೇನರ್‌ಗಳು ಮತ್ತು ಪ್ರಿಸ್ಕ್ರಿಪ್ಷನ್ ಡ್ರಗ್ ಬಾಟಲಿಗಳನ್ನು ತಯಾರಿಸಲು, ಆಹಾರ ಪ್ಯಾಕೇಜಿಂಗ್‌ನಲ್ಲಿ ಪಿಪಿಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದನ್ನು ಐದು ಬಾರಿ ಮರುಬಳಕೆ ಮಾಡಬಹುದಾಗಿದೆ.

PS  ಅಥವಾ ಪಾಲಿಸ್ಟೈರೀನ್ ಹೆಚ್ಚು ನಮ್ಯತೆ ಇಲ್ಲದ ಬಣ್ಣರಹಿತ, ಗಟ್ಟಿಯಾದ ಪ್ಲಾಸ್ಟಿಕ್ ಆಗಿದೆ. ಇದನ್ನು ಫೋಮ್ ಆಗಿ ಮಾಡಬಹುದು ಅಥವಾ ಅಚ್ಚುಗಳಾಗಿ ಬಿತ್ತರಿಸಬಹುದು ಮತ್ತು ಅದನ್ನು ವಿವಿಧ ಆಕಾರದಲ್ಲಿ ತಯಾರಿಸಬಹುದು. PS ಅನ್ನು ಸಾಮಾನ್ಯವಾಗಿ ಪ್ಲಾಸ್ಟಿಕ್ ಕಪ್‌ಗಳು ಮತ್ತು ಬೇಕರಿ ಟ್ರೇಗಳು, ಫಾಸ್ಟ್ ಫುಡ್ ಕಂಟೇನರ್‌ಗಳು ಮತ್ತು ಮುಚ್ಚಳಗಳು, ಬಿಸಿ ಕಪ್‌ಗಳು ಮತ್ತು ಮೊಟ್ಟೆಯ ಪೆಟ್ಟಿಗೆಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಆರು ಬಾರಿ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಆಗಿದೆ.

‘ಇತರ’ ಅಥವಾ O ಸಂಕೇತವುಳ್ಳ ಪ್ಲಾಸ್ಟಿಕ್‌ನ್ನು ವಿವಿಧ ಪ್ಯಾಕೇಜಿಂಗ್‌ನಲ್ಲಿ ಬಳಸಲಾಗುತ್ತದೆ. ಪಾಲಿಕಾರ್ಬೊನೇಟ್ ಅಥವಾ ಬಯೋಪ್ಲಾಸ್ಟಿಕ್ ಪಾಲಿಲ್ಯಾಕ್ಟೈಡ್ (ಪಿಎಲ್‌ಎ)ಯಿಂದ ತಯಾರಾದ ಈ ಪ್ಲಾಸ್ಟಿಕ್ ಒಂದಕ್ಕಿಂತ ಹೆಚ್ಚು ಪ್ಲಾಸ್ಟಿಕ್ ರಾಳ ವಸ್ತುಗಳಿಂದ ತಯಾರಾಗಿರುತ್ತದೆ. ಸಾಮಾನ್ಯವಾಗಿ ಇದನ್ನು ತಂಪು ನೀರಿನ ಬಾಟಲಿಗಳು, ಕೆಲವು ಸಿಟ್ರಸ್ ಜ್ಯೂಸ್ ಮತ್ತು ಕೆಚಪ್ ಬಾಟಲಿಗಳು ಹಾಗೂ ಕಪ್‌ಗಳು, ಕಾಫಿ ಮುಚ್ಚಳಗಳು ಮುಂತಾದವುಗಳ ಕಂಟೇನರ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ಈ ವಿಧದ ಪ್ಲಾಸ್ಟಿಕ್‌ನ್ನು ಏಳು ಬಾರಿ ಮರುಬಳಕೆ ಮಾಡಬಹುದು. ನಾವು ಬಳಸುವ ಪ್ರತೀ ಪ್ಲಾಸ್ಟಿಕ್ ವಸ್ತುವಿನ ಮೇಲೆ ಅದನ್ನು ಎಷ್ಟು ಬಾರಿ ಮರುಬಳಕೆ ಮಾಡಬಹುದೆಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇರುತ್ತದೆ. ಅದಕ್ಕನುಸಾರವಾಗಿ ಅದನ್ನು ಬಳಸಿದರೆ ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ. ಆದರೆ ಅದನ್ನು ಮೀರಿ ಬಳಸಿದರೆ ಖಂಡಿತವಾಗಿಯೂ ಅದು ವಿಷವಾಗಿ ಪರಿಣಮಿಸುತ್ತದೆ. ಗೊತ್ತಿದ್ದೂ ವಿಷವನ್ನು ಸ್ವಾಹ ಮಾಡಿದಂತಾಗುತ್ತದೆ. ಈಗಾಗಲೇ ನಮಗರಿವಿಲ್ಲದಂತೆ ನಾವು ಪ್ಲಾಸ್ಟಿಕನ್ನು ವಿವಿಧ ಮೂಲಗಳಿಂದ ದೇಹದೊಳಗೆ ಸೇರಿಸಿಕೊಳ್ಳುತ್ತಲೇ ಇದ್ದೇವೆ. ದಿನೇ ದಿನೇ ಪರಿಸರದಲ್ಲಿ ಮತ್ತು ಗಾಳಿಯಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಸಾಂದ್ರತೆಯು ಘಾತೀಯವಾಗಿ ಹೆಚ್ಚುತ್ತಿದೆ. ಏಕೆಂದರೆ ಪ್ಲಾಸ್ಟಿಕ್ ನಾಶವಾಗುವುದಿಲ್ಲ ಆದರೆ ಸಣ್ಣ ತುಂಡುಗಳಾಗಿ ಒಡೆಯುತ್ತದೆ. ಪ್ಲಾಸ್ಟಿಕ್ ನಮ್ಮ ಆಹಾರ, ನಾವು ಕುಡಿಯುವ ನೀರು ಮತ್ತು ನಾವು ಉಸಿರಾಡುವ ಗಾಳಿಯಲ್ಲಿದೆ. ವಾಸ್ತವವಾಗಿ, ನಾವು ಹೆಚ್ಚು ಹೆಚ್ಚು ಪ್ಲಾಸ್ಟಿಕ್ ಅನ್ನು ಉಸಿರಾಡುತ್ತೇವೆ, ಕುಡಿಯುತ್ತಿದ್ದೇವೆ ಮತ್ತು ತಿನ್ನುತ್ತಿದ್ದೇವೆ. ಈಗಾಗಲೇ ಪ್ಲಾಸ್ಟಿಕ್ ನಮ್ಮ ಆಹಾರ ಸರಪಳಿಯನ್ನು ಪ್ರವೇಶಿಸಿದೆ. ಬಹುತೇಕ ಪ್ರಾಣಿಗಳು ಮೈಕ್ರೊಪ್ಲಾಸ್ಟಿಕ್ ಅನ್ನು ತಮ್ಮ ದೇಹ ದಲ್ಲಿ ಸೇರಿಸಿಕೊಂಡಿವೆ. ವಿವಿಧ ಮೂಲಗಳಿಂದ ಮೈಕ್ರೋಪ್ಲಾಸ್ಟಿಕ್‌ಗಳು ದೇಹ ಸೇರಿವೆ. ಒಂದು ಪ್ರಾಣಿ ಇನ್ನೊಂದನ್ನು ತಿನ್ನುವುದರಿಂದ, ಮೈಕ್ರೋಪ್ಲಾಸ್ಟಿಕ್‌ಗಳು ಆಹಾರ ಸರಪಳಿಯ ಮೂಲಕ ವರ್ಗಾವಣೆಯಾಗಬಹುದು. ಆಹಾರ ಸರಪಳಿಯ ಮೂಲಕ ಪ್ಲಾಸ್ಟಿಕ್‌ನೊಂದಿಗೆ, ಜೀವಾಣುಗಳ ವರ್ಗಾವಣೆಯೂ ಆಗುತ್ತದೆ. ಜೈವಿಕ ಶೇಖರಣೆ ಎಂಬ ಪ್ರಕ್ರಿಯೆಯ ಮೂಲಕ ಪ್ರಾಣಿಗಳ ಕೊಬ್ಬು ಮತ್ತು ಅಂಗಾಂಶಗಳಲ್ಲಿ ಪ್ಲಾಸ್ಟಿಕ್ ಸೇರಿಕೊಳ್ಳಬಹುದು ಮತ್ತು ಸಂಗ್ರಹಗೊಳ್ಳಬಹುದು. ಮಾನವ ಆಹಾರಕ್ಕಾಗಿ ಮೀನು, ಕೋಳಿ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಅವಲಂಬಿಸಿದ್ದಾನೆ. ಮೀನಿನ ದೇಹದಲ್ಲಿ ಸಮುದ್ರದಲ್ಲಿನ ಮೈಕ್ರೋಪ್ಲಾಸ್ಟಿಕ್ ಸೇರಿಕೊಂಡಿದೆ. ಕೋಳಿಯು ಆಹಾರಕ್ಕಾಗಿ ತಿಪ್ಪೆಹಾಗೂ ಇನ್ನಿತರ ಕಡೆಗಳಲ್ಲಿ ಕುಟುಕುವಾಗ ಅದರ ಆಹಾರದಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳು ಸೇರಿವೆ. ಇವುಗಳನ್ನು ಆಹಾರಕ್ಕಾಗಿ ಮಾನವ ಬಳಸುವುದರಿಂದ ಇವುಗಳ ಮೂಲಕವೂ ಮೈಕ್ರೊಪ್ಲಾಸ್ಟಿಕ್‌ಗಳು ನಮ್ಮ ದೇಹ ಸೇರಲಿವೆ. ಪ್ಲಾಸ್ಟಿಕ್ ಕೇವಲ ಮಾನವರಿಗಷ್ಟೇ ಅಲ್ಲದೇ ಇನ್ನಿತರ ಪ್ರಾಣಿಗಳಿಗೂ ತೊಂದರೆಯನ್ನುಂಟು ಮಾಡುತ್ತಿದೆ. ಪ್ಲಾಸ್ಟಿಕ್‌ನಿಂದ ಬಾಧಿತವಾಗಿರುವ ಪ್ರಾಣಿಗಳ ಸಂಖ್ಯೆಯನ್ನು ಅಂದಾಜು ಮಾಡುವುದು ತುಂಬಾ ಕಷ್ಟಕರ. ಪ್ಲಾಸ್ಟಿಕ್ ಒಂದು ನಿರ್ದಿಷ್ಟ ಜಾತಿಯ ಉಳಿವಿಗೆ ಬೆದರಿಕೆಯನ್ನುಂಟು ಮಾಡುತ್ತದೆಯೇ ಎಂದು ನಿರ್ಧರಿಸುವುದು ಇನ್ನೂ ಕಷ್ಟಕರವಾಗಿದೆ, ಆಹಾರ ಸರಪಳಿಯ ಮೇಲೆ ಪ್ಲಾಸ್ಟಿಕ್‌ನ ಪ್ರಭಾವವನ್ನು ಮಾತ್ರ ಕಡೆಗಣಿಸುವಂತಿಲ್ಲ. ಅದಕ್ಕಾಗಿ ಕೆಲವು ತಂತ್ರಗಳನ್ನು ಅನಿವಾರ್ಯ ವಾಗಿಯಾದರೂ ಪಾಲಿಸಲೇಬೇಕಿದೆ. ಅವುಗಳೆಂದರೆ, ಪ್ಲಾಸ್ಟಿಕ್ ಚೀಲಗಳಿಗೆ ಬದಲಾಗಿ ಬಟ್ಟೆ ಚೀಲಗಳನ್ನು ಬಳಸುವುದು, ಪ್ಲಾಸ್ಟಿಕ್ ಬಾಟಲಿಗಳಿಗೆ ಬದಲಾಗಿ ಗಾಜಿನ ಅಥವಾ ಲೋಹದ ಬಾಟಲಿ ಬಳಸುವುದು, ಏಕಮುಖ ಬಳಕೆಯ ಬಾಟಲಿಗಳನ್ನು ಬಳಸಿದ ನಂತರ ಕ್ರಶ್ ಮಾಡಿ ಡಸ್ಟ್‌ಬಿನ್‌ಗೆ ಹಾಕುವುದು, ಕೊಬ್ಬಿನ ಅಥವಾ ಎಣ್ಣೆಯುಕ್ತ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸಿಡದೆ ಇರುವುದು, ಮೈಕ್ರೋಪ್ಲಾಸ್ಟಿಕ್‌ಗೆ ಹೆಚ್ಚು ಕೊಡುಗೆ ನೀಡುವ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸದಿರುವುದು, ಪ್ಲಾಸ್ಟಿಕ್ ಕಪ್‌ಗಳ ಬಳಕೆ ನಿಲ್ಲಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಅನುಸರಿಸುವ ಮೂಲಕ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)