ಮೂಗಿಗೆ ತುಪ್ಪ ಸವರುವ ಸಿದ್ದರಾಮಯ್ಯರ ಸುಳ್ಳು ಭರವಸೆಯನ್ನು ಯಾವ ದಲಿತರೂ ನಂಬುವುದಿಲ್ಲ: ಬಿಜೆಪಿ
ಬೆಂಗಳುರು, ಡಿ.12: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ.ಎ.ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗದುಕೊಮಡಿರುವ ಬಿಜೆಪಿ, 'ದಲಿತರ ಮೂಗಿಗೆ ತುಪ್ಪ ಸವರುವ ಸಿದ್ದರಾಮಯ್ಯರ ಸುಳ್ಳು ಭರವಸೆಯನ್ನು ಯಾವ ದಲಿತರೂ ನಂಬುವ ಸ್ಥಿತಿಯಲ್ಲಿಲ್ಲ' ಎಂದು ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ''ಸಿದ್ದರಾಮಯ್ಯರವರು ಐದು ವರ್ಷ ಅಧಿಕಾರದಲ್ಲಿದ್ದಾಗಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಂದಿದೆ. ಆಗ ವರದಿ ಜಾರಿ ಮಾಡುವ ಬಗ್ಗೆ ಆಲೋಚಿಸದ ಪ್ರತಿಪಕ್ಷದ ನಾಯಕರು, ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಮಾತನಾಡುತ್ತಿರುವುದು ಹಾಸ್ಯಾಸ್ಪದ'' ಎಂದು ಹೇಳಿದೆ.
''ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಮಾದಿಗ ಸಮುದಾಯ ದೊಡ್ಡ ಸಮಾವೇಶವನ್ನು ಮಾಡಿ, ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಮಾಡುವ ಘೋಷಣೆ ಮಾಡುತ್ತಾರೆಂಬ ದಲಿತರ ನಿರೀಕ್ಷೆಯನ್ನು ಹುಸಿ ಮಾಡಿ, ದಲಿತರ ಹೆಸರಲ್ಲಿ ಅಧಿಕಾರ ಅನುಭವಿಸಿದ್ದು ಮರೆತು ಹೋಯಿತಾ?'' ಎಂದು ಪ್ರಶ್ನೆ ಮಾಡಿದೆ.
''ಈಗ ಸಿದ್ದರಾಮಯ್ಯನವರು ಮತ್ತೆ ದಲಿತರಿಗೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಮಾಡುವ ಸುಳ್ಳು ಭರವಸೆ ನೀಡುತ್ತಿದ್ದು, ದಲಿತರ ಮೂಗಿಗೆ ತುಪ್ಪ ಸವರುವ ನಿಮ್ಮ ಸುಳ್ಳು ಭರವಸೆಯನ್ನು ಯಾವ ದಲಿತರು ನಂಬುವ ಸ್ಥಿತಿಯಲ್ಲಿಲ್ಲ'' ಎಂದು ಟೀಕಿಸಿದೆ.
'ಅಧಿಕಾರ ಇದ್ದಾಗ ಸಿದ್ದರಾಮಯ್ಯ ದಲಿತರ ಯಾವ ಬೇಡಿಕೆನೂ ಈಡೇರಿಸಿಲ್ಲ. ಹಾಗೇ ಅವರಿಂದ ತುಳಿತಕ್ಕೆ ಒಳಗಾದ ದಲಿತ ನಾಯಕರ ಪಟ್ಟಿಗೂ ಕೊನೆಯಿಲ್ಲ. ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್, ಮೋಟಮ್ಮ, ಶ್ರೀನಿವಾಸ್ ಪ್ರಸಾದ್' ಎಂದು ಬಿಜೆಪಿ ಪಟ್ಟಿ ಮಾಡಿದೆ.
'ಸಿದ್ದರಾಮಯ್ಯ ಅವರ ದಲಿತಪರ ಪ್ರೀತಿ ಯಾವತ್ತಿಗೂ ತೋರ್ಪಡಿಕೆಗೆ ಅಷ್ಟೇ. ಸಿದ್ದರಾಮಯ್ಯ ಅವರ ತೋರ್ಪಡಿಕೆಯ "ಅಹಿಂದ" ಹೋರಾಟದ ನಾಟಕದಲ್ಲಿ ಈಗ ದಲಿತರು ಇಲ್ಲ, ಹಿಂದುಳಿದವರೂ ಇಲ್ಲ. ಅವರ ವಕಾಲತ್ತೇನಿದ್ದರೂ ಒಂದು ಸಮುದಾಯದ ಪರ ಮಾತ್ರ. ಹಿಂದುಳಿದ ಹಾಗೂ ದಲಿತ ವರ್ಗಕ್ಕೆ ಸಿದ್ದರಾಮಯ್ಯ ಅವರಿಂದ ಯಾವತ್ತಿಗೂ ಸಿಗುವುದು ಕುತಂತ್ರದ ಒಳ ಏಟು ಮಾತ್ರ' ಎಂದು ಬಿಜೆಪಿ ಟ್ವೀಟಿಸಿದೆ.
ಮಾನ್ಯ @siddaramaiah ರವರು ಐದು ವರ್ಷ ಅಧಿಕಾರದಲ್ಲಿದ್ದಾಗಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಂದಿದೆ. ಆಗ ವರದಿ ಜಾರಿ ಮಾಡುವ ಬಗ್ಗೆ ಆಲೋಚಿಸದ ಪ್ರತಿಪಕ್ಷದ ನಾಯಕರು, ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಮಾತನಾಡುತ್ತಿರುವುದು ಹಾಸ್ಯಾಸ್ಪದ.
— BJP Karnataka (@BJP4Karnataka) December 12, 2022