ಗಡಿ ವಿಚಾರವಾಗಿ ಕೇಂದ್ರಕ್ಕೆ ಕರ್ನಾಟಕದ ನಿಲುವು ಏನೆಂಬುದನ್ನು ತಿಳಿಸುತ್ತೇವೆ: ಸಿಎಂ ಬೊಮ್ಮಾಯಿ
ಮೈಸೂರು, ಡಿ.13: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬಗೆಹರಿಸಲೆಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದಿರುವುದು. ಈ ವೇಳೆ ಕರ್ನಾಟಕದ ನಿಲುವು ಏನು ಎಂಬುದನ್ನು ನಾವು ಆ ಸಭೆಯಲ್ಲಿ ತಿಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ತೆರಳಲು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮಂಗಳವಾರ ಆಗಮಿಸಿದ ಮುಖ್ಯಮಂತ್ರಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು
ಮಹರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವನ್ನು ತಿಳಿಸುತ್ತೇನೆ. ಈ ಹಿಂದೆ ಏನೆಲ್ಲಾ ಆಗಿದೆ, ಸದ್ಯ ಸುಪ್ರೀಂ ಕೋರ್ಟ್ ನಲ್ಲಿರುವ ವಿಚಾರವನ್ನು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.
ಮಾಂಡೋಸ್ ಚಂಡಮಾರುತ: ಬೆಳೆ ಹಾನಿ ಸಮೀಕ್ಷೆ
ಮಾಂಡೋಸ್ ಚಂಡ ಮಾರುತದಿಂದ ಕೆಲವು ತೊಂದರೆಗಳಾಗಿದ್ದು, ವಿಶೇಷವಾಗಿ ಬೆಳೆಗಳ ಮೇಲೆ ಆಗಿರುವ ಪ್ರಭಾವ ಏನೆಂದು ಸಮೀಕ್ಷೆ ಮಾಡಲಾಗುತ್ತಿದೆ. ರಾಗಿ, ಬೆಳೆದು ನಿಂತಿದೆ. ಕಟಾವ್ ಮಾಡಿದವರಿಗೆ ಕಷ್ಟವಾಗುತ್ತಿದೆ ಎಂಬ ವರದಿ ಬಂದಿದೆ. ಕೃಷಿ ಇಲಾಖೆಯಿಂದ ಸಂಪೂರ್ಣ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ನಮ್ಮನ್ನು ದಿಲ್ಲಿಗೆ ಕರೆದಿಲ್ಲ. ಕರೆದಿರುವುದು ಗಡಿ ವಿಚಾರಕ್ಕೆ ಸಂಬಂಧಪಟ್ಟಂತೆ. ಗಡಿ ವಿಚಾರ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ, ಅಥವಾ ಪುನರ್ ರಚನೆ ಬಗ್ಗೆ ಕೇಳಿದರೆ, ಅದಕ್ಕೆ ಸಂಬಂಧಪಟ್ಟಂತೆ ಸಿದ್ಧತೆ ಮಾಡಿಕೊಂಡೆ ಹೋಗಿರುತ್ತೇನೆ ಎಂದರು.
ನಾನು ಚಾಮರಾಜನಗರಕ್ಕೆ ಮೂರನೇ ಬಾರಿ ಭೇಟಿ ನೀಡುತ್ತಿದ್ದೇನೆ. ಇದರಲ್ಲಿ ವಿಶೇಷತೆ ಇದೆ ಅಂತ ನನಗನ್ನಿಸುವುದಿಲ್ಲ, 31 ಜಿಲ್ಲೆ ಗಳಂತೆ ಚಾಮರಾಜನಗರ ಒಂದು ಭಾಗ, ಇದು ಗಡಿ ಜಿಲ್ಲೆ, ನಿಸರ್ಗ ಭರ್ತಿ ಆಗಿರುವ ಜಿಲ್ಲೆ ಎಂದು ಹೇಳಿದರು.