ಜನಸಾಮಾನ್ಯರ ಧ್ವನಿಯಾಗದ ಮಾಧ್ಯಮಗಳು
ದೇಶದಲ್ಲಿನ ಬಡತನ, ನಿರುದ್ಯೋಗ, ಬೆಲೆ ಏರಿಕೆ, ಅಸ್ಪಶ್ಯತೆ ಆಚರಿಸುತ್ತಿರುವ ಜನರು, ಹೆಣ್ಣುಮಕ್ಕಳನ್ನು ಹಿಂಸಿಸುತ್ತಿರುವ ಕಿರಾತಕರ ಬಗ್ಗೆ ಸುದ್ದಿ ಮಾಡುವ ಟಿವಿ ಚಾನೆಲ್ಗಳು ಈಗ ನಮಗೆ ತುರ್ತಾಗಿ ಬೇಕಿವೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಕರೆಯಲ್ಪಡುವ ಮಾಧ್ಯಮಗಳು ಸ್ವಲ್ಪವಾದರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿದೆ.
ಪ್ರಸಕ್ತ ದೇಶದ ಮುಖ್ಯ ಭಾಷೆಗಳಲ್ಲಿ ಒಟ್ಟು 900 ಟಿವಿ ಚಾನೆಲ್ಗಳು ಕಾರ್ಯ ನಿರ್ವಹಿಸುತ್ತಿದ್ದು 197 ದಶಲಕ್ಷ ಮನೆಗಳು ಟಿವಿಗಳನ್ನು ಹೊಂದಿವೆ ಎನ್ನಲಾಗಿದೆ. ದೂರದರ್ಶನ, ರೇಡಿಯೊ, ಸಿನೆಮಾ, ವೃತ್ತಿಪತ್ರಿಕೆಗಳು- ನಿಯತಕಾಲಿಕೆಗಳು, ಅಂತರ್ಜಾಲ ಆಧಾರಿತ ವೆಬ್ಸೈಟ್ಗಳು ಮತ್ತು ಪೋರ್ಟಲ್ಗಳು ಭಾರತದ ಮಾಧ್ಯಮದ ವಿವಿಧ ಅಂಗಗಳಾಗಿವೆ. ಒಟ್ಟು ಸುಮಾರು 900 ಸ್ಯಾಟಲೈಟ್ ಟಿವಿ ಚಾನೆಲ್ಗಳಲ್ಲಿ 380 ಚಾನೆಲ್ಗಳು ಸುದ್ದಿ ಚಾನೆಲ್ಗಳಾಗಿವೆ. ಇವು ದಿನದ 24 ಗಂಟೆಗಳ ಕಾಲ ಸುದ್ದಿಗಳನ್ನು ಬಿತ್ತರಿಸುತ್ತಿರುತ್ತವೆ. ಆದರೆ ಹೆಚ್ಚಿನ ಸಂಖ್ಯೆಯ ಚಾನೆಲ್ಗಳು ಮಾಧ್ಯಮ ಮಾಲಕತ್ವದ ಕೇಂದ್ರೀಕರಣ ಮತ್ತು ಸಾರ್ವಜನಿಕ ಅಭಿಪ್ರಾಯದ ನಿಯಂತ್ರಣದ ಬಗ್ಗೆ ಧ್ವನಿಯೆತ್ತುತ್ತಿಲ್ಲ.
ದೇಶದಲ್ಲೀಗ ಮಾಧ್ಯಮ, ವ್ಯವಹಾರ ಮತ್ತು ರಾಜಕೀಯದ ನಡುವೆ ಬಲವಾದ ಸಂಬಂಧ ಏರ್ಪಟ್ಟಿದೆ. ಹೆಚ್ಚಿನ ಪ್ರಮುಖ ಮಾಧ್ಯಮ ಕಂಪೆನಿಗಳು ದೊಡ್ಡ ಉದ್ಯಮ ಸಮೂಹಗಳ ಮಾಲಕತ್ವವನ್ನು ಹೊಂದಿದ್ದು, ಅವು ಮಾಧ್ಯಮವನ್ನು ಹೊರತುಪಡಿಸಿದ ವಿಶಾಲ ಶ್ರೇಣಿಯ ವ್ಯಾಪಾರ ಹಿತಾಸಕ್ತಿಯನ್ನು ಹೊಂದಿವೆ. ಇತ್ತೀಚೆಗೆ ‘ಎನ್ಡಿಟಿವಿ’ಯನ್ನು ಅದಾನಿ ಕಂಪೆನಿ ಸ್ವಾಧೀನಪಡಿಸಿಕೊಳ್ಳುವ ವಿಷಯ ಭಾರೀ ಚರ್ಚೆಗೆ ಒಳಗಾಗಿತ್ತು.
ಹಲವು ಚಾನೆಲ್ಗಳು ಪ್ರಮುಖ ಪಕ್ಷಗಳ ಪರ ನೇರವಾಗಿಯೇ ಕೆಲಸ ಮಾಡುತ್ತಿವೆ. ಅಂಬಾನಿ, ಅದಾನಿ ಮತ್ತು ಟಾಟಾ ಕಂಪೆನಿಗಳು ಹೆಚ್ಚು ಚಾನೆಲ್ಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿವೆ. ದೇಶದ ನಾನಾ ರಾಜ್ಯಗಳ ರಾಜಕಾರಣಿಗಳೂ ಟಿವಿ ಚಾನೆಲ್ಗಳ ಮಾಲಕತ್ವವನ್ನು ಹೊಂದಿದ್ದಾರೆ. ಈಗ ದೇಶದ ಎಲ್ಲಾ ಮುಖ್ಯ ಭಾಷೆಗಳ ಬಹಳಷ್ಟು ಸುದ್ದಿ ಚಾನೆಲ್ಗಳು ಯಾವುದೇ ನಿಯಂತ್ರಣವಿಲ್ಲದೆ ಕೂಗಾಡುತ್ತಿವೆ. ಯಾವುದೇ ಸಣ್ಣ ಸುದ್ದಿಯಾದರೂ ಸಾಕು ನಾಲ್ಕೈದು ‘ತಜ್ಞ’ರನ್ನು ಕರೆಸಿ ಜಗಳಕ್ಕೆ ಬಿಟ್ಟುಬಿಡುತ್ತಾರೆ.
ಆಯಾ ಚಾನೆಲ್ಗಳಿಗೆ ಬೇಕಾದ ಸುದ್ದಿಗಳನ್ನು ವಾರ-ತಿಂಗಳುಗಟ್ಟಲೇ ಬಿತ್ತರಿಸುತ್ತಲೇ ಇರುತ್ತವೆ. ತಮಗೆ ಬೇಡವಾದ ಸುದ್ದಿಯ ಕಡೆಗೆ ಅವು ಕಣ್ಣೆತ್ತಿಯೂ ನೋಡುವುದಿಲ್ಲ. ಇನ್ನು ಕಾರ್ಯಕ್ರಮಗಳನ್ನು ನಡೆಸುವ ಆ್ಯಂಕರ್ಗಳು ತಮಗೆ ಬೇಕಾದ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿ ತಾವೇ ಉತ್ತರ ಕೊಡುತ್ತಿರುತ್ತಾರೆ. ಹಾಗಾದರೆ ತಜ್ಞರು ಹೇಳುವುದೇನಿದೆ? ಬಹಳಷ್ಟು ಜನರು ಈಗ ಸುದ್ದಿ ಚಾನೆಲ್ಗಳು ನೋಡುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಒಟ್ಟಿನಲ್ಲಿ ಇದೊಂದು ಇಂಡಿಯನ್ ಸರ್ಕಸ್ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ.
ಹೀಗಾಗಿಯೇ ಮಾಧ್ಯಮವನ್ನೀಗ ‘ಗೋದಿ ಮೀಡಿಯಾ’ ಎಂದು ಕರೆಯಲಾಗುತ್ತಿದೆ. ಇಂತಹ ಸುದ್ದಿ ಚಾನೆಲ್ಗಳ ನಡುವೆ ಪ್ರಸಕ್ತ ದೇಶದ ನಿಜವಾದ ಸಮಸ್ಯೆಗಳ ಬಗ್ಗೆ ಸುದ್ದಿ ಮಾಡುವ ಚಾನೆಲ್ಗಳನ್ನು ಭೂತಗನ್ನಡಿಯಲ್ಲಿ ಹುಡುಕಬೇಕಾಗಿದೆ. ಬಡತನ, ನಿರುದ್ಯೋಗ, ಅನಾರೋಗ್ಯ-ಅಪೌಷ್ಟಿಕತೆ, ಬೆಲೆ ಏರಿಕೆ, ರೈತ ಕೃಷಿ-ಕೈಗಾರಿಕೆ ಇತ್ಯಾದಿಗಳ ಬಗ್ಗೆ ಹೇಳುವವರೂ ಇಲ್ಲ, ಕೇಳುವವರೂ ಇಲ್ಲವಾಗಿದೆ. ಹಾಗೇನಾದರೂ ಸುದ್ದಿ ಮಾಡುವವರಿದ್ದರೂ ಅವರಿಗೆ ಉಳಿಗಾಲ ಇರುವುದಿಲ್ಲ.
ಇನ್ನು ದಲಿತ ಸಂಸದರು, ರಾಜಕಾರಣಿಗಳು ಆಯಾ ಪಕ್ಷಗಳ ಜೀತುದಾಳುಗಳಾಗಿ ತಮ್ಮತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ತಮಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಿದ್ದರೆ ಸಾಕು ಎನ್ನುವುದು ಅವರ ರಾಜಕೀಯ ಸೂತ್ರ. ಕಳೆದ ಇಪ್ಪತ್ತೈದು ವರ್ಷಗಳಿಂದ ನಾನಾ ಕಾರಣಗಳಿಂದ ಚದುರಿಹೋಗಿದ್ದ ರಾಜ್ಯದ ವಿವಿಧ ದಲಿತ ಸಂಘಟನೆಗಳು ಮತ್ತು ಸಮಾನಮನಸ್ಕರು ಬಾಬಾಸಾಹೇಬ್ ಅಂಬೇಡ್ಕರ್ ಅವರ 66ನೇ ಪರಿನಿರ್ವಾಣ ದಿನ (ಡಿಸೆಂಬರ್ 6) ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಒಟ್ಟುಗೂಡಿ ತಮ್ಮ ದಲಿತಪ್ರಜ್ಞೆ ಮತ್ತು ಐಕ್ಯತೆಯನ್ನು ಬೃಹತ್ ಪ್ರತಿರೋಧ ಸಭೆಯ ಮೂಲಕ ತೋರಿಸಿದರು.
ಎಲ್ಲಾ ದಲಿತ ಸಂಘಟನೆಗಳು ಮತ್ತು ಅವುಗಳ ನಾಯಕರು ಕೋಮುವಾದಿ ಶಕ್ತಿಗಳು ಹಾಗೂ ರಾಜಕೀಯ ಪಕ್ಷಗಳನ್ನು ದೂರವಿಟ್ಟು ಒಂದು ಸೈದ್ಧಾಂತಿಕ ಚೌಕಟ್ಟಿನ ಆಧಾರದ ಮೇಲೆ ಒಗ್ಗೂಡಿ ಶಕ್ತಿ ಪ್ರದರ್ಶನ ಮಾಡಿದ್ದು ರಾಜ್ಯದಲ್ಲಿ ದಲಿತ ಸಂಘಟನೆಗಳು ಮತ್ತು ಅದರ ಸಾಕ್ಷಿಪ್ರಜ್ಞೆ ಇನ್ನೂ ಉಸಿರಾಡುತ್ತಿದೆ ಎನ್ನುವುದನ್ನು ಪ್ರದರ್ಶಿಸಿವೆ.
ವಿಪರ್ಯಾಸವೆಂದರೆ ಇಷ್ಟೊಂದು ಬೃಹತ್ ಪ್ರತಿರೋಧ ಸಭೆಯ ಬಗ್ಗೆ ಅದು ರಾಜಧಾನಿಯಲ್ಲಿ ನಡೆದರೂ ಒಂದೆರಡು ಪತ್ರಿಕೆಗಳನ್ನು ಹೊರತುಪಡಿಸಿದರೆ ಉಳಿದ ಯಾವ ಕನ್ನಡ ಪತ್ರಿಕೆಗಳೂ ಸುದ್ದಿ ಮಾಡಲಿಲ್ಲ. ಇನ್ನು ಟಿವಿ ಚಾನೆಲ್ಗಳಿಗಂತೂ ಡಿಸೆಂಬರ್ ಚಳಿಯಲ್ಲಿ ಕಣ್ಣೇ ಕಾಣಿಸಲಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಈಗ ಹಿಂದೆಂದಿಗಿಂತ ಬಹಳ ಜರೂರಿ ಇದೆ.
ಮತ್ತೊಮ್ಮೆ ಬಾಬಾಸಾಹೇಬ್ ಅವರು ತೋರಿಸಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಹಾದಿಯನ್ನು ತುಳಿಯಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ಅಸ್ಪಶ್ಯರಿಗೆ ಮಾತ್ರ ಮೀಸಲಾತಿ ಎಂದು ಪ್ರಾರಂಭವಾದ ಸಂವಿಧಾನದ ಹಕ್ಕು ಈಗ ಎಲ್ಲಾ ಜಾತಿ-ಜನಾಂಗಗಳೂ ಬೀದಿಗೆ ಬಂದು ಕೇಳುವ ಹಂತ ತಲುಪಿವೆ. ಕೇಂದ್ರದಲ್ಲಿ ಆಡಳಿತ ನಡೆಸುವ ಸರಕಾರಗಳು ಕಾಲಕಾಲಕ್ಕೆ ಅಧಿಕಾರ ಹಿಡಿಯುವ ದಾವಂತದಲ್ಲಿ ಜನರಿಗೆ ವಿವಿಧ ರೀತಿಯ ಆಸೆ ಆಮಿಷಗಳನ್ನು ಒಡ್ಡಿ ಸಂವಿಧಾನದ ಹಕ್ಕುಗಳಿಗೆ ಅನೇಕ ಮಂಡನೆಗಳನ್ನು ತಂದಿವೆ.
ಈಗಿನ ಸಮಸ್ಯೆಗಳನ್ನು ಗಣನೆಗೆ ತೆಗೆದು ಕೊಂಡರೆ, ದೇಶದಲ್ಲಿನ ಬಡತನ, ನಿರುದ್ಯೋಗ, ಬೆಲೆ ಏರಿಕೆ, ಅಸ್ಪಶ್ಯತೆ ಆಚರಿಸುತ್ತಿರುವ ಜನರು, ಹೆಣ್ಣುಮಕ್ಕಳನ್ನು ಹಿಂಸಿಸುತ್ತಿರುವ ಕಿರಾತಕರ ಬಗ್ಗೆ ಸುದ್ದಿ ಮಾಡುವ ಟಿವಿ ಚಾನೆಲ್ಗಳು ಈಗ ನಮಗೆ ತುರ್ತಾಗಿ ಬೇಕಿವೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಕರೆಯಲ್ಪಡುವ ಮಾಧ್ಯಮಗಳು ಸ್ವಲ್ಪವಾದರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿದೆ. ಇಂತಹ ಟಿವಿ ಚಾನೆಲ್ಗಳನ್ನು ಸ್ಥಾಪಿಸುವ ಜರೂರಿ ಹಿಂದೆಂದಿಗಿಂತ ಈಗ ಅವಶ್ಯಕತೆ ಇದೆ.