ತೊಗರಿಗೆ ನೆಟೆ ರೋಗ; ಪರಿಹಾರಕ್ಕೆ ಒತ್ತಾಯಿಸಿ ಕಲಬುರಗಿಯಲ್ಲಿ ಕಾಂಗ್ರೆಸ್ ಧರಣಿ
ಕಲಬುರಗಿ, ಡಿ.14: ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಯಲ್ಲಿ 10 ವರ್ಷಗಳ ಬಳಿಕ ಮತ್ತೆ ನೆಟೆ ರೋಗ ಕಾಣಿಸಿಕೊಂಡಿದ್ದು, ನೆಟೆರೋಗದಿಂದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದೆ. ಈ ಕೂಡಲೇ ಸರ್ಕಾರ ರೈತರಿಗೆ ಪರಿಹಾರ ಘೋಷಿಸಬೇಕೆಂದು ರೈತರೊಂದಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂದು ಕಲಬುರಗಿಯಲ್ಲಿ ಧರಣಿ ನಡೆಸಿದರು.
ಶಾಸಕ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ಹೊರಟ ನೂರಾರು ಕಾರ್ಯಕರ್ತರು ಹಾಗೂ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಟ್ರ್ಯಾಕ್ಟರ್ ಗಳಲ್ಲಿ ಒಣಗಿದ ತೊಗರಿಯನ್ನು ಹೇರಿಕೊಂಡು ಹಾಗೂ ಕೈಯಲ್ಲಿ ಹಿಡಿದುಕೊಂಡು ಮೆರವಣಿಗೆ ಮೂಲಕ ಹೊರಟ ಕಾರ್ಯಕರ್ತರು ರೈತವಿರೋಧಿ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.