ಸಿ.ಟಿ ರವಿ ಹೆಸರಲ್ಲಿದೆ 3 ಸಾವಿರ ಕೋಟಿ ರೂ.ಬೇನಾಮಿ ಆಸ್ತಿ: ಎಂ.ಲಕ್ಷ್ಮಣ್ ಆರೋಪ
ಬೆಂಗಳೂರು, ಡಿ. 14: ‘ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ 1996ರಿಂದ 1999ರ ವರೆಗೆ ಅವರ ಬಳಿ ಏನೂ ಇರಲಿಲ್ಲ. ಅವರು ರೌಡಿಶೀಟರ್ ಆಗಿದ್ದು, ಚಿಕ್ಕಮಗಳೂರು ನಗರ-ಗ್ರಾಮಾಂತರ ಠಾಣೆಗಳಲ್ಲಿ ಇವರ ಹೆಸರು ರೌಡಿ ಪಟ್ಟಿಯಲ್ಲಿತ್ತು. ಇತ್ತೀಚಿನ ವರೆಗೂ ಆ ಪಟ್ಟಿಯಲ್ಲಿ ಹೆಸರಿತ್ತು. ಇದೀಗ ಅದನ್ನು ತೆಗೆಸಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಆರೋಪ ಮಾಡಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಮೇಲೆ 4 ಕ್ರಿಮಿನಲ್ ಮೊಕದ್ದಮೆಗಳಿವೆ. ಅವರು ಅಫಡವಿಟ್ನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ನಮೂದಿಸಿದ್ದಾರೆ. ಐಪಿಸಿ ಸೆಕ್ಷನ್ 409, 420, 120, 463, 466, 123 ಅಡಿಯಲ್ಲಿ ಕೇಸು ದಾಖಲಾಗಿವೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಸೇರಿ ಅನೇಕ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿವೆ. ಅವರೆ ನಮೂದಿಸಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ನಾನು ಅವರನ್ನು ‘ಕ್ರಿಮಿನಲ್, 420 ರವಿ ಎಂದು ಕರೆಯುತ್ತೇನೆ’ ಎಂದು ಟೀಕಿಸಿದರು.
‘ಇವರು ತಮ್ಮ ಜಿಲ್ಲೆಯನ್ನು ‘ರಿಪಬ್ಲಿಕ್ ಆಫ್ ಚಿಕ್ಕಮಗಳೂರು’ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನ ಶೇ.95ರಷ್ಟು ಕಾಮಗಾರಿಗಳನ್ನು ಇವರ ಭಾವ ಎಚ್.ಪಿ.ಸುದರ್ಶನ್ ಗುತ್ತಿಗೆ ಪಡೆದಿದ್ದಾರೆ. ಕೆಲವನ್ನು ಅವರ ಹೆಸರಿನಲ್ಲಿ ಪಡೆದರೆ, ಮತ್ತೆ ಕೆಲವು ಬೇನಾಮಿ ಹೆಸರಲ್ಲಿ ಪಡೆದಿದ್ದಾರೆ. ವೈದ್ಯಕೀಯ ಕಾಲೇಜು ನಿರ್ಮಾಣದ ಒಟ್ಟಾರೆ 350ಕೋಟಿ ರೂ., ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 190 ಕೋಟಿ ರೂ., ಕಾಮಗಾರಿ ಅವರೆ ಮಾಡುತ್ತಿದ್ದಾರೆ. ಬಾಲಾಜಿ ಶೇಖರ್ ಎಂಬ ಗುತ್ತಿಗೆದಾರರ ಜತೆ ಸಹಭಾಗಿತ್ವದಲ್ಲಿ ಮಾಡುತ್ತಿದ್ದಾರೆ. ಇದಕ್ಕೆ ಟೆಂಡರ್ ಹಾಕಲು ಈ ಯೋಜನೆಯ ಮೊತ್ತದ ಅರ್ಧದಷ್ಟು ಯೋಜನೆ ಮಾಡಿರಬೇಕು. ಆದರೆ, ಇವರು ಮಾಡದ ಕಾರಣ ರಾಮಲಿಂಗಂ ಕನ್ಟ್ರಕ್ಷನ್ ಸಹಾಯ ಪಡೆದಿದ್ದಾರೆ.
‘ಜತೆಗೆ ಬಸವನಳ್ಳಿ ಕೆರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ 36ಕೋಟಿ ರೂ.ಅನುದಾನ ನೀಡಿದೆ. ಇದು ಸುದರ್ಶನ್ ತೆಗೆದುಕೊಂಡಿದ್ದಾರೆ. ಈ ಕೆರೆ ಹೂಳು ತೆಗೆಯಲು 7.5ಕೋಟಿ ರೂ.ಪಡೆದಿದ್ದಾರೆ. ಈ ಹೂಳು ಮಳೆಯಲ್ಲಿ ಕೊಚ್ಚಿ ಹೋಗಿದೆಯಂತೆ. ಇನ್ನು 60ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇವರು ಬೇನಾಮಿ ಹೆಸರಲ್ಲಿ ಮಾಡುತ್ತಿದ್ದಾರೆ. ಇನ್ನು ಮುಂದಿನ ತಿಂಗಳು ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ಆರಂಭವಾಗುತ್ತಿದ್ದು, ಪ್ರಹ್ಲಾದ್ ಜೋಷಿ ಅವರಿಂದ ಈ ಗುತ್ತಿಗೆಯನ್ನು ಸುದರ್ಶನ್ಗೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಲಕ್ಷ್ಮಣ್ ಆರೋಪಿಸಿದರು.
‘ರವಿ ಅವರ ತಂದೆ ಹೆಸರು ತಿಮ್ಮೇಗೌಡರು ರೈತರು, ಹತ್ತಿಕಟ್ಟೆ ಜಗನ್ನಾಥ್ ಎಂಬುವವರ ಮನೆಯಲ್ಲಿ ಟ್ರ್ಯಾಕ್ಟರ್ ಚಾಲಕರಾಗಿದ್ದರು. ಈಗ ಜಗನ್ನಾಥ್ ಅವರನ್ನೆ ತನ್ನ ಡ್ರೈವರ್ ಆಗಿ ಮಾಡಿಕೊಳ್ಳುವುದಾಗಿ ರವಿ ಅವರು ಹೇಳಿದ್ದಾರೆ. ಸುದರ್ಶನ್ ಅವರು ಡಿಸಿ, ಪೊಲೀಸ್ ಆಯುಕ್ತರು, ಎಸ್ಪಿ, ಡಿವೈಎಸ್ಪಿಗಳಿಗೆ ಕರೆ ಮಾಡಿ ಅವರನ್ನು ತಮ್ಮ ಮನೆಗೆ ಕರೆಸಿ ಅನಧಿಕೃತ ಸಭೆ ಮಾಡುತ್ತಾರೆ. ಅವರ ನಿರ್ದೇಶನದಂತೆ ಅಧಿಕಾರಿಗಳು ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.
3 ಸಾವಿರ ಕೋಟಿ ರೂ. ಬೇನಾಮಿ ಆಸ್ತಿ: ನಮ್ಮ ಮಾಹಿತಿ ಪ್ರಕಾರ ರವಿ ಅವರು ಬೇನಾಮಿ ಹೆಸರಲ್ಲಿ ದುಬೈನಲ್ಲಿ 2 ಹೋಟೆಲ್, ದೇವನಹಳ್ಳಿಯಲ್ಲಿ 2-3ಅಪಾರ್ಟ್ಮೆಂಟ್, ಎಚ್ಎಎಲ್ ರಸ್ತೆ ಬಳಿ 10 ಮನೆಗಳಿವೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಇದೆಲ್ಲವೂ ಹೇಗೆ ಬಂತು ಎಂಬುದನ್ನು 100ಕ್ಕೆ 100ರಷ್ಟು ತನಿಖೆ ಮಾಡುತ್ತೇವೆ. 3 ಸಾವಿರ ಕೋಟಿ ರೂ.ಹೆಚ್ಚು ಆಸ್ತಿ ಅವರ ಬೇನಾಮಿ ಹೆಸರಲ್ಲಿದೆ. ಚಿಕ್ಕಮಗಳೂರಿನಲ್ಲಿ ಯಾವುದೇ ಕಾಮಕಾಗಾರಿ, ಯಾರೇ ಮನೆ ಕಟ್ಟಬೇಕಾದರೆ ಸುದರ್ಶನ್ ಅಂಗಡಿಯಲ್ಲೆ ಸಿಮೆಂಟ್, ಇಟ್ಟಿಗೆ ಖರೀದಿ ಮಾಡಬೇಕು’ ಎಂದು ಅವರು ಆರೋಪಿಸಿದರು.
‘1996ರಿಂದ ಇಂದಿಗೂ ದತ್ತ ಜಯಂತಿ ನಡೆಯುವಾಗ ಈತ ವಸೂಲಿ ಮಾಡುತ್ತಿದ್ದಾರೆ. ಹಣ ನೀಡದವರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಪ್ರತಿ ಅಂಗಡಿಯಲ್ಲಿ ವಸೂಲಿ ಇಟ್ಟುಕೊಂಡಿದ್ದಾರೆ. ರವಿ ಅವರೇ ನಿಮ್ಮ ಸರಕಾರವೇ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ತಂದಿದೆ. ನೀವು ಉನ್ನತ ಮಟ್ಟದ ತನಿಖೆ ನಡೆಸಿ. ನೀವು ಮಾತೆತ್ತಿದರೆ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುತ್ತೀರಿ. ನೀವು ಸತ್ಯವಂತರಾಗಿದ್ದರೆ ನಿಮ್ಮ ಆದಾಯ, ಆಸ್ತಿಗಳು ಎಲ್ಲಿಂದ ಹೇಗೆ ಬಂತು ಎಂದು ತನಿಖೆ ಮಾಡಿಸಿ’ ಎಂದು ಲಕ್ಷ್ಮಣ್ ಸವಾಲು ಹಾಕಿದರು.
‘ಇದು ಕೇವಲ ಪ್ರಾಸ್ತಾವಿಕ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಚಿಕೆಗಳಲ್ಲಿ ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ. ನಾನು ಬೇಕಾದರೆ ನಿಮ್ಮ ಕಚೇರಿಗೆ ಒಬ್ಬನೇ ಬರುತ್ತೇನೆ. ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ. ನಿಮ್ಮ ಇತಿಹಾಸವೇನು? 20 ವರ್ಷ ನೀವು ಏನಾಗಿದ್ದಿರಿ? ನಿಮ್ಮ ವಿರುದ್ಧ ಯಾವ ಕಾರಣಕ್ಕೆ ಕ್ರಿಮಿನಲ್ ಪ್ರಕರಣಗಳಿವೆ? ಯಾವ ಕಾರಣಕ್ಕೆ ನೀವು ರೌಡಿ ಶೀಟರ್ ಆಗಿದ್ದೀರಿ? ರೌಡಿಶೀಟರ್ ಯಾಕೆ ಸಮರ್ಥಿಸಿಕೊಂಡಿದ್ದೀರಿ? ಎಂದು ಚರ್ಚೆ ಆಗಲಿ. ಇಲ್ಲದಿದ್ದರೆ ಈ ಬಗ್ಗೆ ತನಿಖೆ ಮಾಡಿಸಿ’ ಎಂದು ಲಕ್ಷ್ಮಣ್ ಆಗ್ರಹಿಸಿದರು.
‘ಸಿ.ಟಿ.ರವಿ ವಿರುದ್ಧ ಲೋಕಾಯುಕ್ತದಲ್ಲಿ ಈಗಾಗಲೇ ದೂರು ಇದೆ. ಆದರೆ, ಬೇನಾಮಿ ಕಾಯ್ದೆ ಅಡಿಯಲ್ಲಿ ಐಟಿ ಹಾಗೂ ಇಡಿ ಮುಂದೆ ದೂರು ಸಲ್ಲಿಸಲು ನಾವು ಸಿದ್ಧತೆ ಮಾಡುತ್ತಿದ್ದೇವೆ. ಇವರ ವ್ಯವಹಾರ ಬೇನಾಮಿ ಹೆಸರಲ್ಲಿ ನಡೆಯುತ್ತಿದೆ. ಸಿ.ಟಿ.ರವಿ ವಿಚಾರ ಐದಾರು ಸಂಚಿಕೆಗಳಲ್ಲಿ ಮಾಹಿತಿ ನೀಡುತ್ತೇವೆ. ರವಿ ಅವರ ವಿರುದ್ಧ ‘ಸುಲಿಗೆ, ಬೆದರಿಕೆ, ದರೋಡೆ ನಿರಂತರವಾಗಿ ಮಾಡಿದರೆ ಅಂತಹವರನ್ನು ರೌಡಿ ಪಟ್ಟಿಗೆ ಸೇರಿಸುತ್ತಾರೆ. ಇವರ ವಿರುದ್ಧ 10ಕ್ಕೂ ಹೆಚ್ಚು ಕೇಸ್ಗಳಿವೆ. ನಾನು ರೌಡಿ ಪಟ್ಟಿಯಲ್ಲಿದ್ದೆ ಎಂದು ರವಿ ಅವರೇ ಒಪ್ಪಿಕೊಂಡಿದ್ದಾರೆ’
-ಎಂಲಕ್ಷ್ಮಣ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಸಿ.ಟಿ ರವಿ ಅವರ 3,000 ಕೋಟಿಗೂ ಹೆಚ್ಚು ಆಸ್ತಿ ಬೇನಾಮಿ ಹೆಸರಲ್ಲಿದೆ.
— Karnataka Congress (@INCKarnataka) December 14, 2022
ರವಿ ಅವರ ಚರಿತ್ರೆ ಏನು, ಅಷ್ಟು ಆಸ್ತಿ ಹೇಗೆ ಬಂತು, ಅದರ ಹಿನ್ನೆಲೆ ಏನು ಎನ್ನುವುದನ್ನು ನಾವು ಹಂತ-ಹಂತವಾಗಿ ದಾಖಲೆಗಳ ಸಮೇತ ಜನರ ಮುಂದೆ ಇಡುತ್ತೇವೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ತನಿಖೆ ನಡೆಸುತ್ತೇವೆ.
- ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರರು pic.twitter.com/z0F7pdLWxy