46 ಸಾವಿರ ನೇಕಾರರ ಕುಟುಂಬದ ಮಕ್ಕಳಿಗೆ ವಿದ್ಯಾನಿಧಿ ಯೋಜನೆ: ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು, ಡಿ.16: ನೇಕಾರರ ಮಕ್ಕಳ ವಿದ್ಯಾನಿಧಿ ಯೋಜನೆಗೆ 46 ಸಾವಿರ ನೇಕಾರ ಕುಟುಂಬಗಳ ವಿದ್ಯಾರ್ಥಿಗಳಿಗೆ ಗುರುತಿಸಲಾಗಿದ್ದು, ಶೀಘ್ರವಾಗಿ ವಿದ್ಯಾನಿಧಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ನೇಕಾರ್ ಸಮ್ಮಾನ್ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಡಿಬಿಟಿ ಮೂಲಕ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಿ ಮಾತನಾಡಿದ ಅವರು, 46 ಸಾವಿರ ನೇಕಾರ ಕುಟುಂಬದ ವಿದ್ಯಾರ್ಥಿಗಳ ದಾಖಲೆಗಳನ್ನು ಹದಿನೈದು ದಿನದೊಳಗೆ ಪಡೆದು ಪಟ್ಟಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯಾರ್ಥಿಗಳಿಗೆ ಕೂಡಲೇ ವಿದ್ಯಾನಿಧಿಯನ್ನು ಬಿಡುಗಡೆ ಮಾಡಲಾಗುವುದು. ಮಕ್ಕಳಿಂದ ಯಾವುದೇ ರೀತಿಯ ಅರ್ಜಿಯನ್ನು ಪಡೆಯುವುದಿಲ್ಲ. ವಿದ್ಯಾನಿಧಿ ಮಕ್ಕಳ ಹಕ್ಕು ಎಂದು ಮುಖ್ಯಮಂತ್ರಿ ತಿಳಿಸಿದರು.
ನೇಕಾರರಿಗೆ ಕಾಯಕ ಯೋಜನೆ: ನೇಕಾರರ ಕಸುಬನ್ನು ಉನ್ನತೀಕರಿಸಿ ಉಳಿಸುವುದು ಬಹಳ ಮುಖ್ಯ. ಬಹಳ ಗಂಟೆಗಳ ಕಾಲ ಹತ್ತಿಯ ಮಧ್ಯೆಯೆ ಕೆಲಸ ಮಾಡಬೇಕಾಗುವುದರಿಂದ ನೇಕಾರರಿಗೆ ಅಸ್ತಮಾ, ಟಿಬಿಯಂತಹ ಸಮಸ್ಯೆಗಳು ಕಾಡುತ್ತವೆ. ಆದುದರಿಂದ, ಕೈಮಗ್ಗ ನೇಕಾರರ ಕಾಳಜಿ ವಹಿಸಲು ನೇಕಾರ ಸಮ್ಮಾನ್ ಯೋಜನೆಯಡಿ 2000 ರೂ.ಗಳ ಆರ್ಥಿಕ ನೆರವನ್ನು 5ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಅವರ ಹತ್ತು ಹಲವಾರು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ನಾಳೆ ವಿದ್ಯುತ್ಛಕ್ತಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
46,864 ನೇಕಾರರಿಗೆ ಧನಸಹಾಯ: ನೇಕಾರ ಸಮ್ಮಾನ್ ಯೋಜನೆಯಡಿ 46,864 ಫಲಾನುಭವಿಗಳಿಗೆ 5000 ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಒಟ್ಟು 23.43 ಕೋಟಿ ರೂ.ಗಳು ನೇರವಾಗಿ ನೇಕಾರರ ಬ್ಯಾಂಕ್ ಖಾತೆಗೆ ವರ್ಗಾವಣೆಗೆ ಇಂದು ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಸಂದರ್ಭದಲ್ಲಿ ಸಕ್ಕರೆ, ಜವಳಿ ಮತ್ತು ಕೈಮಗ್ಗ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕಿ ಪೂರ್ಣಿಮಾ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.