ನಾಸಿಕ್‌ನಲ್ಲಿ ಬಸ್ ಅಪಘಾತ: ಕನಿಷ್ಠ 12 ಜನರು ಮೃತ್ಯು, 38 ಮಂದಿಗೆ ಗಾಯ
ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಹಾಗೂ 38 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, ಇತರ 38 ಮಂದಿ ಗಾಯಗೊಂಡಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯಲ್ಲಿ ದೃಢಪಡಿಸಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಕಚೇರಿ( ಸಿಎಂಒ)ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಧಿಕಾರಿಗಳ ಪ್ರಕಾರ, ಶನಿವಾರ ಮುಂಜಾನೆ ನಾಸಿಕ್-ಔರಂಗಾಬಾದ್ ಹೆದ್ದಾರಿಯಲ್ಲಿ ಐಷಾರಾಮಿ ಪ್ರಯಾಣಿಕ ಬಸ್ ಅಪಘಾತಕ್ಕೀಡಾಗಿದೆ. ಯವತ್ಮಾಲ್‌ನಿಂದ ಮುಂಬೈಗೆ ತೆರಳುತ್ತಿದ್ದ ಬಸ್ ನಾಸಿಕ್‌ನಿಂದ ಪುಣೆಗೆ ಹೋಗುತ್ತಿದ್ದ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಹೊತ್ತಿ ಉರಿಯುತ್ತಿರುವ ವಾಹನದಲ್ಲಿ ಹಲವಾರು ಪ್ರಯಾಣಿಕರು ಸಿಲುಕಿಕೊಂಡಿದ್ದು, ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಪ್ರಯಾಣಿಕರಲ್ಲಿ ಹಲವರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ.
ನಾಸಿಕ್‌ನಲ್ಲಿ ಸಂಭವಿಸಿದ ಅಪಘಾತದ ಕಾರಣಗಳನ್ನು ತನಿಖೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.