ಬಿಎಸ್ ವೈ, ವಿಜಯೇಂದ್ರ ವಿಚಾರಣೆ ಯಾವಾಗ?: ರಾಜ್ಯ ಸರಕಾರಕ್ಕೆ 10 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ್ ಖರ್ಗೆ
PSI ನೇಮಕಾತಿ ಹಗರಣ
ಬೆಂಗಳೂರು, ಡಿ.17: ಪಿಎಸ್ಸೈ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಆಡಿಯೋಗಳು ಹರಿದಾಡುತ್ತಿವೆ. ಅಭ್ಯರ್ಥಿಯೊಬ್ಬರು ಗೃಹಸಚಿವರ ಜತೆ ಮಾತನಾಡುತ್ತಿದ್ದಾರೆ. ಈ ಆಡಿಯೋ ಹಿನ್ನೆಲೆಯಲ್ಲಿ ನಾವು ಸರಕಾರಕ್ಕೆ ಹಾಗೂ ಮುಖ್ಯಮಂತ್ರಿಗೆ 10 ಪ್ರಶ್ನೆಗಳನ್ನು ಕೇಳಬಯಸುತ್ತೇವೆ. ಈ ಆಡಿಯೋ ವಿಚಾರಕ್ಕೂ ನಮಗೆ ನೋಟಿಸ್ ನೀಡುತ್ತಾರೋ ಏನೋ? ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 402 ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿದ್ದು, ಅದಕ್ಕೆ ಸಂಬಂಧಿಸಿದಂತೆ ನಾವು ಸಿಐಡಿಗೆ ಸಾಕ್ಷಿ ಪುರಾವೆ ಸಲ್ಲಿಸಿದ್ದೇವೆ ಎಂದು ಅಭ್ಯರ್ಥಿ ಗೃಹಸಚಿವರಿಗೆ ಹೇಳಿದ್ದಾರೆ. ಆದರೂ ತನಿಖೆಗೂ ಮುನ್ನ ಮತ್ತೆ ನೇಮಕಾತಿ ಪ್ರಕ್ರಿಯೆ ಮುಂದುವರಿಯುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ನೀವು ಕೇವಲ ಉತ್ತರ ಪರೀಕ್ಷೆ ವಿಚಾರವಾಗಿ ತನಿಖೆ ಮಾಡುತ್ತಿದ್ದೀರಿ. ದೈಹಿಕ ಪರೀಕ್ಷೆಯಲ್ಲೂ ಅಕ್ರಮವಾಗಿದೆ. ಪ್ರಶ್ನೆ ಪತ್ರಿಕೆ 1ರಲ್ಲೂ ಅಕ್ರಮ ನಡೆದಿದ್ದು, ಅದಕ್ಕೂ ನಾವು ಸಾಕ್ಷಿ ನೀಡಿದ್ದು ಹೇಳಿದ್ದು, ಸರಕಾರ ಯಾಕೆ ತನಿಖೆ ಮಾಡುತ್ತಿಲ್ಲ?. 56 ಸಾವಿರ ಯುವಕರಿಗೆ ಅನ್ಯಾಯವಾಗುತ್ತಿರುವಾಗ ಅದನ್ನು ಸರಿಯಾಗಿ ವಾದ ಮಾಡಲಾಗದೇ ಆರೋಪಿಗಳಿಗೆ ಜಾಮೀನು ಸಿಗುತ್ತಿದೆ ಎಂದರೆ ಸರಕಾರ ಹಗರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆಯೇ? ಎಂದು ಅವರು ಕೇಳಿದರು.
ನಾವು ಡಿಜಿ, ಐಜಿ, ಕಲಬುರ್ಗಿ ಆಯುಕ್ತರ ಬಗ್ಗೆಯೂ ಸಾಕ್ಷಿ ನೀಡಿದ್ದು, ತನಿಖೆಯನ್ನು ಕೇವಲ ಅಮೃತ್ ಪೌಲ್‍ಗೆ ಮಾತ್ರ ಸೀಮಿತಗೊಳಿಸಿರುವುದೇಕೆ? ದೂರುಗಳು ಕೇಳಿಬಂದಿರುವ ಮೂವರು ಶಾಸಕರು ಯಾರು? ಅವರ ವಿರುದ್ಧ ಯಾವ ತನಿಖೆ ನಡೆದಿದೆ? ಈ ವಿಚಾರವನ್ನು ಅಧಿವೇಶನದಲ್ಲೂ ಚರ್ಚೆ ಮಾಡುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಶಾಸಕರೊಬ್ಬರ ಆಡಿಯೋ ಸೋರಿಕೆಯಾದಾಗ ಆ ಧ್ವನಿ ನನ್ನದೇ, ಸರಕಾರ ಸಚಿವರ ಪರವಾಗಿ ಡೀಲ್ ಮಾತನಾಡಿ ಶಾಸಕರ ಭವನದಲ್ಲಿ ಹಣ ಪಡೆದಿರುವುದಾಗಿಯೂ ಹೇಳಿದ್ದರು. ಆ ಬಗ್ಗೆ ತನಿಖೆ ಏನಾಯ್ತು?. 402 ನೇಮಕಾತಿ ಅಕ್ರಮದ ಎಲ್ಲ ಸಾಕ್ಷಿಗಳನ್ನು ನಿಮಗೆ ತಲುಪಿಸಿದ್ದು, ಅದನ್ನು ಸಿಐಡಿಗೆ ತಲುಪಿಸಿದ್ದೀರಾ? ಸಿಐಡಿಯಿಂದ ಸಾಕ್ಷಿ ಪರಿಶೀಲನೆ ಮಾಡಿಸಿದ್ದೀರಾ? ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಶಾಸಕ ಯತ್ನಾಳ್ ಈ ಡೀಲ್‍ನಲ್ಲಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಇದ್ದಾರೆ. ಈ ಡೀಲ್ ವಿಧಾನಸೌಧದಲ್ಲೇ ಆಗಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಅವರ ವಿಚಾರಣೆ ನಡೆಸಿದ್ದೀರಾ? ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿಚಾರಣೆ ಮಾಡಿದ್ದಾರಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಅಮೃತ್ ಪೌಲ್ ಸೆಕ್ಷನ್ 164ಎ ನಲ್ಲಿ ಹೇಳಿಕೆ ನೀಡಲು ಸಿದ್ಧ ಎಂದು ಹೇಳಿದ್ದರೂ ಹೇಳಿಕೆ ದಾಖಲಿಸಿಕೊಳ್ಳಲು ಹಿಂಜರಿಯುತ್ತಿರುವುದೇಕೆ? ಜನಸ್ಪಂದನೆ ಕಾರ್ಯಕ್ರಮದಲ್ಲಿ ಧಮ್ಮು, ತಾಕತ್ತು ಬಗ್ಗೆ ಮಾತನಾಡುವುದಲ್ಲ. ನಿಮಗೆ ತಾಕತ್ತಿದ್ದರೆ ನೇಮಕಾತಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಪೌಲ್ ಹೇಳಿಕೆ ದಾಖಲಿಸಿಕೊಳ್ಳಿ ಎಂದು ಅವರು ಆಗ್ರಹಿಸಿದರು.
ಈ ವಿಚಾರವಾಗಿ ಈ.ಡಿ ತನಿಖೆ ನಡೆಸಿದ್ದು, ಇದಾದ ನಂತರವೂ ಅನುಮಾನ ಯಾಕೆ? ನ್ಯಾಯಾಂಗ ತನಿಖೆಗೆ ನೀಡುತ್ತಿಲ್ಲ ಯಾಕೆ? ಕೇವಲ ಪಿಎಸ್ಸೈ ಮಾತ್ರವಲ್ಲ, ಜೆಇಇ, ಲೋಕೋಪಯೋಗಿ, ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಎಲ್ಲ ನೇಮಕಾತಿ ಹುದ್ದೆ ಅಕ್ರಮದ ಚರ್ಚೆ ಆಗಬೇಕು ಎಂದು ಅವರು ಹೇಳಿದರು.
ಈ ಸರಕಾರದ ಎಲ್ಲ ಇಲಾಖೆಗಳಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, 1 ಲಕ್ಷ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಒಬ್ಬರಿಗೂ ಕೆಲಸ ನೀಡಿಲ್ಲ. ಸರಕಾರ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವವರೆಗೂ ನಾವು ಪ್ರಶ್ನೆ ಕೇಳುತ್ತಲೇ ಇರುತ್ತೇವೆ. ಸರಕಾರಕ್ಕೆ ಮಾನ ಮಾರ್ಯಾದೆ ಇದ್ದರೆ ಮೊದಲು ಗೃಹ ಸಚಿವರಿಂದ ರಾಜೀನಾಮೆ ಪಡೆಯಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.