ಒಂದಾದರೆ ಮಾತ್ರ ಜನತಂತ್ರದ ಉಳಿವು
ಈಗ ಕಾಂಗ್ರೆಸ್ ಸೇರಿ ಎಲ್ಲರೂ ಒಂದಾದರೆ ಮಾತ್ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಫ್ಯಾಶಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಸಾಧ್ಯ. ಇದರ ಏಕೈಕ ಗುರಿ ಬಿಜೆಪಿಯನ್ನು ಸೋಲಿಸುವುದು ಆಗಿರಬೇಕು. ಕಾಂಗ್ರೆಸ್ ಪಕ್ಷದ ಆರ್ಥಿಕ ಧೋರಣೆಗಳ ಬಗ್ಗೆ ಎಡಪಂಥೀಯರಿಗೆ ಭಿನ್ನಾಭಿಪ್ರಾಯ ಇರಬಹುದು ಅವುಗಳನ್ನು ಬದಿಗಿಟ್ಟು ಜೊತೆಗೂಡಬೇಕು. ಅಷ್ಟೇ ಅಲ್ಲ ಎಲ್ಲ ಪ್ರಾದೇಶಿಕ ಪಕ್ಷಗಳು ಬಿಜೆಪಿ ವಿರೋಧಿ ಮಹಾ ಕೂಟದಲ್ಲಿ ಸೇರಬೇಕು. ಹೀಗೆ ಒಂದಾಗದಿದ್ದರೆ 2024ರ ಲೋಕಸಭಾ ಚುನಾವಣೆಯಲ್ಲೂ ಅವರೇ ಗೆದ್ದು ಬಂದು ಸಂವಿಧಾನವನ್ನು ಇಟ್ಟುಕೊಂಡೇ ಅದರ ಸಮಾಧಿ ಮಾಡುತ್ತಾರೆ.
8 ವರ್ಷಗಳ ಹಿಂದೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಆಗಿನಿಂದ ನಾವು ಅಂದರೆ ಎಡಪಂಥೀಯರು ಮತ್ತು ಪ್ರಗತಿಪರರು ಮಾತ್ರವಲ್ಲ ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಅದನ್ನು ವಿರೋಧಿಸುತ್ತಲೇ ಇದ್ದೇವೆ. ನಾಗಪುರದ ಆರೆಸ್ಸೆಸ್ ಕೇಂದ್ರದಿಂದ ನಿಯಂತ್ರಿಸಲ್ಪಡುವ ಅಂಬಾನಿ, ಅದಾನಿ ಮುಂತಾದ ಕಾರ್ಪೊರೇಟ್ ಲಾಬಿಯ ಹಿತರಕ್ಷಣೆ ಮಾಡುವ ಈ ಸರಕಾರ ಭಿನ್ನಮತ, ಪ್ರತಿರೋಧ, ಪ್ರತಿಭಟನೆಗಳನ್ನು ಅತ್ಯಂತ ಕ್ರೂರವಾಗಿ ಹತ್ತಿಕ್ಕುತ್ತಲೇ ಬಂದಿದೆ. ನಾವೆಷ್ಟೇ ಬರೆದರೂ, ಪ್ರತಿಭಟನೆ ಮಾಡಿದರೂ ಅದನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲ. ರೈತರ ದಿಲ್ಲಿಯ ಚಾರಿತ್ರಿಕ ಹೋರಾಟ ಗೆಲುವಿನ ಬಾವುಟ ಹಾರಿಸಿದರೂ ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ರಾಜಕೀಯವಾಗಿ ಬಿಜೆಪಿಯನ್ನು ಹಿಂದೆ ಸರಿಸಲು ಆಗಲೇ ಇಲ್ಲ.
ಮೋದಿ ಸರಕಾರ ಬಂದ ನಂತರ ಜೀವನಾವಶ್ಯಕ ಪದಾರ್ಥಗಳ ಬೆಲೆಗಳು ಗಗನಕ್ಕೇರಿದವು, ಜಿಎಸ್‌ಟಿ ಎಂಬ ತೆರಿಗೆ ಕಟ್ಟದೇ ಒಂದು ಕಪ್ ಚಹಾ ಕುಡಿಯಲೂ ಸಾಧ್ಯವಿಲ್ಲ. ಶೈಕ್ಷಣಿಕ ರಂಗದ ಖಾಸಗೀಕರಣ ಮಾತ್ರವಲ್ಲ, ಕೋಮುವಾದೀಕರಣ ಅತ್ಯಂತ ವೇಗವಾಗಿ ನಡೆಯುತ್ತಿದೆ. ವರ್ಷಕ್ಕೆ 2 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ಹಳ್ಳ ಹಿಡಿದಿದೆ. ಅಲ್ಪಸಂಖ್ಯಾತ ಮುಸ್ಲಿಮರ ದೈನಂದಿನ ಬದುಕು ಅತ್ಯಂತ ಅಸಹನೀಯವಾಗಿದೆ. ನಿತ್ಯವೂ ಜೀವ ಕೈಯಲ್ಲಿ ಹಿಡಿದುಕೊಂಡು ಅವರು ಉಸಿರಾಡುತ್ತಿದ್ದಾರೆ. ಇನ್ನು ದಲಿತರು ಮತ್ತು ಹಿಂದುಳಿದವರ ಸಾಂವಿಧಾನಿಕ ಹಕ್ಕುಗಳನ್ನು ಒಂದೊಂದಾಗಿ ದೋಚುವ ಷಡ್ಯಂತ್ರ ರೂಪುಗೊಂಡಿದೆ. ಜನರ ಹಕ್ಕುಗಳಿಗಾಗಿ ಧ್ವನಿ ಎತ್ತುವ ಆನಂದ ತೇಲ್ತುಂಬ್ಡೆ, ವರವರರಾವ್, ಗೌತಮ್ ನವ್ಲಾಕ ಅವರಂಥ ಚಿಂತನಶೀಲರನ್ನು ಅರ್ಬನ್ ನಕ್ಸಲರೆಂದು ಕರೆದು ಜೈಲಿಗೆ ಅಟ್ಟಿ ಅತ್ಯಂತ ಕೆಟ್ಟ ಕಲಮುಗಳಡಿ ಅವರ ಮೇಲೆ ಖಟ್ಲೆಗಳನ್ನು ದಾಖಲಿಸಲಾಗಿದೆ. ಇನ್ನು ಬಿಜೆಪಿಯೇತರ ಪಕ್ಷಗಳನ್ನು ಮುಖ್ಯವಾಗಿ ಕಾಂಗ್ರೆಸ್ ಮತ್ತಿತರ ಪಕ್ಷಗಳನ್ನು ನಿರ್ನಾಮ ಮಾಡಲು ಸಿಬಿಐ, ಜಾರಿ ನಿರ್ದೇಶನಾಲಯ, ಐಟಿಗಳನ್ನು ಮನ ಬಂದಂತೆ ಬಳಸಲಾಗುತ್ತಿದೆ. ಕೆಲ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತರೂ ಗೆದ್ದ ಪಕ್ಷದ ಶಾಸಕರನ್ನು ಬೆದರಿಸಿ, ಆಮಿಷವೊಡ್ಡಿ ಜನಾದೇಶವನ್ನೇ ಉಲ್ಟಾಪಲ್ಟಾ ಮಾಡಲಾಗುತ್ತಿದೆ. ಸಮಾಜದ ಅತ್ಯಂತ ಶೋಷಿತ ವರ್ಗಗಳಿಗಾಗಿ ತಂದ ಮೀಸಲು ವ್ಯವಸ್ಥೆಯನ್ನು ಬುಡಮೇಲು ಮಾಡಿ ಶೇ.2ರಷ್ಟಿರುವ ಮೇಲ್ಜಾತಿ, ಮೇಲ್ವರ್ಗಗಳಿಗೆ (ಇಡಬ್ಲೂಎಸ್) ಶೇ.10 ಮೀಸಲಾತಿ ನೀಡಲಾಗಿದೆ.
ನಾವೆಷ್ಟೇ ವಿರೋಧಿಸಿದರೂ ರಾಜಕೀಯ ಮತ್ತು ಸಾಂವಿಧಾನಿಕ ಅಧಿಕಾರ ಅವರ ಕೈಯಲ್ಲಿ ಇದೆ. ಅದರ ಮೂಲಕ ಸಾಂವಿಧಾನಿಕ ಸಂಸ್ಥೆಗಳನ್ನೆಲ್ಲ ನಿಷ್ಕ್ರಿಯಗೊಳಿಸಿ ಕೈ ವಶ ಮಾಡಿಕೊಳ್ಳುತ್ತಿದ್ದಾರೆ.
ನ್ಯಾಯಾಂಗವನ್ನು ಇನ್ನು ಪೂರ್ತಿ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದಕ್ಕಾಗಿ ತಮ್ಮ ಇಷ್ಟದ ಕೈಗೊಂಬೆಗಳನ್ನು ನ್ಯಾಯಸ್ಥಾನದಲ್ಲಿ ಕೂರಿಸಲು ತಂತ್ರ ರೂಪಿಸಿದ್ದಾರೆ. ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟಿನ ಕೊಲಿಜಿಯಂ ವ್ಯವಸ್ಥೆಯನ್ನು ಬದಲಿಸಿ ನೇಮಕಾತಿ ಪ್ರಕ್ರಿಯೆಯ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದ್ದಾರೆ. ಹಿಂದೆ ಮುಖ್ಯ ನ್ಯಾಯಾಧೀಶರಾಗಿದ್ದವರು ಹೇಗೆ ರಾಜ್ಯಸಭೆಯ ಸದಸ್ಯರಾದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗೆ ನ್ಯಾಯಾಂಗ ವ್ಯವಸ್ಥೆಯೂ ಅಪಾಯದಲ್ಲಿ ಇದೆ.
ಇಷ್ಟೇ ಅಲ್ಲ, ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ನೀಲ ನಕ್ಷೆ ಸಿದ್ಧವಾಗಿದೆ. ಇಷ್ಟೆಲ್ಲಾ ನಡೆದರೂ ಜನರು, ಮುಖ್ಯವಾಗಿ ಯುವಜನರು ಅದರ ವಿರುದ್ಧ ಸಿಡಿದೇಳದಂತೆ ಹಿಂದುತ್ವದ ಅಮಲನ್ನು ಏರಿಸಲಾಗಿದೆ. ಇಂಥ ಸಂಕಟದ ಸಂದರ್ಭದಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಿದ್ದ ಸಂಘಟಿತ ಕಾರ್ಮಿಕ ವರ್ಗ ತಮ್ಮ ಹಕ್ಕುಗಳನ್ನು ದೋಚುತ್ತಿದ್ದರೂ ಆರ್ಥಿಕ ಬೇಡಿಕೆಗಳ ಆಚೆ ಸಂಘ ಪರಿವಾರ ನಿಯಂತ್ರಿತ ಬಿಜೆಪಿ ಸರಕಾರದ ವಿರುದ್ಧ ರಾಜಕೀಯ ಸಂಘರ್ಷಕ್ಕೆ ತಯಾರಾಗಿಲ್ಲ. ಈಗ ಚುನಾವಣೆ ಬರುವವರೆಗೆ ಹೋರಾಟ, ಚುನಾವಣೆಯಲ್ಲಿ ಬಿಜೆಪಿಗೆ ಮತದಾನ ಎಂಬಂತಾಗಿದೆ. ಆದರೆ, ಅವರು ಗೆಲುವಿನ ದಿಕ್ಕಿನಲ್ಲಿ ಚಲಿಸುತ್ತಲೇ ಇದ್ದಾರೆ. ಅವರು ಇಷ್ಟು ಆಕ್ರಮಣಕಾರಿಯಾಗಿ ತಮ್ಮ ಅಜೆಂಡಾವನ್ನು ಜಾರಿಗೆ ತರಲು ಸಾಧ್ಯವಾಗಿದ್ದು ಚುನಾವಣೆಯಲ್ಲಿ ದೊರತೆ ರಾಜಕೀಯ ಅಧಿಕಾರದಿಂದ. ಬರೀ ಹೋರಾಟಗಳಿಂದ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಹೋರಾಟಗಳು ಓಟುಗಳಾಗಿ ಪರಿವರ್ತನೆಯಾದಾಗ ಮಾತ್ರ ಪ್ರಭುತ್ವದ ಅಧಿಕಾರದಿಂದ ಅವರನ್ನು ದೂರವಿಡಲು ಸಾಧ್ಯ.
ಇನ್ನೊಂದೆಡೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹಣದುಬ್ಬರ ಮಿತಿ ಮೀರಿದೆ. ಜನಸಾಮಾನ್ಯರು ಬವಣೆಗಳಲ್ಲಿ ಬೆಂದು ಹೋಗುತ್ತಿದ್ದಾರೆ. ಇನ್ನೊಂದೆಡೆ ಹತ್ತು ಸಾವಿರ ಕೋಟಿ ರೂಪಾಯಿ ಕಾರ್ಪೊರೇಟ್ ಸಾಲವನ್ನು ಮನ್ನಾ ಮಾಡಲಾಗಿದೆ. ಇವರ ದುರಾಡಳಿತದ ಆರ್ಥಿಕ ಬಿಕ್ಕಟ್ಟಿನ ಹೊಣೆಯನ್ನು ಜನಸಾಮಾನ್ಯರು ಹೊರಬೇಕಾಗಿದೆ. ಹೊಸದಾಗಿ ಯಾವುದೇ ಉದ್ದಿಮೆಗಳನ್ನು ಸ್ಥಾಪಿಸದೇ ಇರುವ ಸಾರ್ವಜನಿಕ ರಂಗದ ಉದ್ಯಮಗಳನ್ನು ಅಗ್ಗದ ಬೆಲೆಗೆ ಮಾರಲಾಗುತ್ತಿದೆ.
ಒಂದೇ ಧರ್ಮ, ಒಂದೇ ಸಂಸ್ಕೃತಿ, ಒಂದೇ ಭಾಷೆ ಎಂದೆಲ್ಲ ಭಾರತದ ಬಹುತ್ವ ವ್ಯವಸ್ಥೆಗೆ ಗಂಡಾಂತರ ತಂದು ಪ್ರಾಣ ಭಾಷೆಗಳ ಮೇಲೆ ಹಿಂದಿಯನ್ನು ಏಕೈಕ ರಾಷ್ಟ್ರಭಾಷೆಯನ್ನಾಗಿ ಹೇರುವ ಹುನ್ನಾರ ನಡೆದಿದೆ.ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತಂದು ಕೇಂದ್ರದ ಯಜಮಾನಿಕೆ ಹೇರುವ ಮಸಲತ್ತು ನಡೆದಿದೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಅನೇಕ ಹೋರಾಟಗಳು ನಡೆದವು. ಆದರೆ ಇವು ಗುರಿಯನ್ನು ತಲುಪಲಿಲ್ಲ. ಆದರೆ ದಕ್ಷಿಣ ಆಫ್ರಿಕಾದಿಂದ ಮೋಹನದಾಸ ಕರಮಚಂದ ಗಾಂಧಿ ಬಂದ ನಂತರ ಅವರ ನೇತೃತ್ವದಲ್ಲಿ ನಡೆದ ಹೋರಾಟ ಮಾತ್ರ ಗುರಿ ತಲುಪಿತು. ಬ್ರಿಟಿಷರು ಭಾರತವನ್ನು ಬಿಟ್ಟು ಹೋದರು. ಇದು ಸಾಧ್ಯವಾಗಿದ್ದು ಜಾತಿ, ಮತ, ಭಾಷೆಯೆನ್ನದೇ ಭಾರತೀಯರನ್ನೆಲ್ಲ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅಣಿಗೊಳಿಸಿದ ಮಹಾತ್ಮಾ ಗಾಂಧೀಜಿಯವರ ಪರಿಶ್ರಮದಿಂದ. ಭಿನ್ನಾಭಿಪ್ರಾಯ ಇದ್ದ ಬ್ಯಾರಿಸ್ಟರ್ ಜಿನ್ನಾ ಜೊತೆಗೂ ಗಾಂಧಿ ಚೆನ್ನಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಾಮಾಜಿಕ ನ್ಯಾಯದ ಧ್ವನಿಯೆತ್ತಿದ ಬಾಬಾಸಾಹೇಬ ಅಂಬೇಡ್ಕರ್ ಅವರ ಮನವೊಲಿಸಿದ್ದು ಗಾಂಧಿ ಸಾಧನೆ. ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಖ್, ಜೈನ ಹೀಗೆ ಎಲ್ಲರನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿದ್ದರಿಂದ ಅದು ಯಶಸ್ವಿಯಾಯಿತು.
ಈ ಬಿಕ್ಕಟ್ಟಿನಿಂದ ಫ್ಯಾಶಿಸ್ಟ್ ಅಪಾಯದಿಂದ ಭಾರತವನ್ನು ಪಾರು ಮಾಡಬೇಕೆಂದರೆ ಈ ಜನ ವಿರೋಧಿ ಸರಕಾರದ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳಬೇಕು. ಈ ಜನಾಭಿಪ್ರಾಯ ಚುನಾವಣೆಗಳಲ್ಲಿ ಓಟುಗಳಾಗಿ ಪರಿವರ್ತನೆಯಾಗಬೇಕು. ಹಾಗಾಗಬೇಕಾದರೆ ಏನು ಮಾಡಬೇಕು? ಜನಾಂಗೀಯ ದ್ವೇಷದ ವಿಷವನ್ನು ಸಾಮಾಜಿಕ ಜೀವನದಲ್ಲಿ ತುಂಬುತ್ತಿರುವ ಈ ದುಷ್ಟ ಶಕ್ತಿಯನ್ನು ಹಿಮ್ಮೆಟ್ಟಿಸಲು ಇದನ್ನು ಅಂದರೆ ಕೋಮುವಾದವನ್ನು ವಿರೋಧಿಸುವ ವ್ಯಕ್ತಿ, ಶಕ್ತಿಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಬೇಕು. ಹೀಗೆ ಭಾರತದ ಜನರನ್ನೆಲ್ಲ ಒಟ್ಟು ಗೂಡಿಸಿ ನಡೆದ ಬೆರಳೆಣಿಕೆಯಷ್ಟು ಹೋರಾಟಗಳು ಈ ದೇಶದಲ್ಲಿ ಯಶಸ್ವಿಯಾಗಿವೆ.
ಇದೆಲ್ಲವನ್ನೂ ಎಲ್ಲರೂ ಒಪ್ಪಿಕೊಳ್ಳುತ್ತೇವೆ. ನನ್ನನ್ನೂ ಸೇರಿಸಿದಂತೆ ಸಮಾನ ಮನಸ್ಕರಾದ ನಾವು ಅತ್ಯಂತ ಪರಿಣಾಮಕಾರಿಯಾಗಿ ಈ ನವ ಫ್ಯಾಶಿಸ್ಟ್ ಸರಕಾರವನ್ನು ಟೀಕಿಸುತ್ತೇವೆ. ಇವರ ಎಲ್ಲ ಹಗರಣಗಳ ಮೇಲೂ ಬೆಳಕು ಚೆಲ್ಲಿದ್ದೇವೆ. ಆದರೆ, ಇದಕ್ಕೆ ಪರಿಹಾರವೇನು? ಅಧಿಕಾರದಿಂದ ಇವರನ್ನು ದೂರವಿಡುವುದು ಹೇಗೆ? ಬಹುತ್ವ ಭಾರತದ ಸಂರಕ್ಷಣೆ ಮಾಡುವುದು ಯಾವ ಮಾರ್ಗದಿಂದ? ಎಂಬ ಪ್ರಶ್ನೆಗಳಿಗೆ ಟೀಕಾಕಾರರಾದ ನಾವು ಈವರೆಗೆ ಸರಿಯಾಗಿ ಉತ್ತರಿಸಿಲ್ಲ. ಯಾಕೆ ಎಂಬುದು ಗೊತ್ತಿಲ್ಲ.
ಜೆಪಿ ಚಳವಳಿಯನ್ನು ಸಿಪಿಎಂ ಸೇರಿದಂತೆ ಬಹುತೇಕ ಪ್ರತಿಪಕ್ಷಗಳು ಬೆಂಬಲಿಸಿದ್ದರೂ ಸಿಪಿಐ ಅದನ್ನು ವಿರೋಧಿಸಿತ್ತು. ಅದು ಸಂಘ ಪರಿವಾರದ ಕೋಮುವಾದಿ ಶಕ್ತಿಗಳ ಬೆಳವಣಿಗೆಗೆ ನೆರವಾಯಿತು ಎಂಬ ಅಭಿಪ್ರಾಯ ಸಿಪಿಐ ಜೊತೆಗಿದ್ದ ನನ್ನದೂ ಆಗಿತ್ತು. ಈಗ ಅದು ಸತ್ಯವಾಗಿದೆ. ಆದರೆ ಅದು ಇಂದಿರಾ ಗಾಂಧಿಯವರ ಸರಕಾರವನ್ನು ಅಲುಗಾಡಿಸಿದ್ದು ನಿಜ. ಆ ನಂತರ ಎಲ್ಲರನ್ನೂ ಒಳಗೊಂಡ ಹೋರಾಟವೆಂದರೆ ದಿಲ್ಲಿಯಲ್ಲಿ ನಡೆದ ರೈತ ಹೋರಾಟ. ಆದರೆ, ಅದು ರಾಜಕೀಯವಾಗಿ ಬಿಜೆಪಿಗೆ ಅಂಥ ಏಟು ಕೊಡಲಿಲ್ಲ.
ಸ್ವಾತಂತ್ರಾ ನಂತರ ಬಹುತೇಕ ಎಲ್ಲರನ್ನೂ ಒಳಗೊಂಡ ಹೋರಾಟವೆಂದರೆ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದ 1976ರ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ. ಅದೂ ತನ್ನ ಗುರಿ ತಲುಪಿತು. ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಸ್ವಾತಂತ್ರ ಹೋರಾಟದ ಜೊತೆ ಜೊತೆಗೆ ಬಾಬಾಸಾಹೇಬರು ಕೈಗೊಂಡ ಅಸ್ಪಶ್ಯತೆ ವಿರುದ್ಧದ ಚಳವಳಿಯೂ ಯಶಸ್ವಿಯಾಯಿತು. ಪುಣೆ ಒಪ್ಪಂದದ ಕೆಲವು ಲೋಪಗಳೇನೇ ಇರಲಿ ಮೀಸಲು ವ್ಯವಸ್ಥೆ ಜಾರಿಗೆ ಬಂತು. ಇನ್ನು ಎಡಪಂಥೀಯ ಸಂಘಟನೆಗಳು ಜನ ಹೋರಾಟಗಳಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ.
ಈಗ ಕಾಂಗ್ರೆಸ್ ಸೇರಿ ಎಲ್ಲರೂ ಒಂದಾದರೆ ಮಾತ್ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಫ್ಯಾಶಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಸಾಧ್ಯ. ಇದರ ಏಕೈಕ ಗುರಿ ಬಿಜೆಪಿಯನ್ನು ಸೋಲಿಸುವುದು ಆಗಿರಬೇಕು. ಕಾಂಗ್ರೆಸ್ ಪಕ್ಷದ ಆರ್ಥಿಕ ಧೋರಣೆಗಳ ಬಗ್ಗೆ ಎಡಪಂಥೀಯರಿಗೆ ಭಿನ್ನಾಭಿಪ್ರಾಯ ಇರಬಹುದು ಅವುಗಳನ್ನು ಬದಿಗಿಟ್ಟು ಜೊತೆಗೂಡಬೇಕು. ಅಷ್ಟೇ ಅಲ್ಲ ಎಲ್ಲ ಪ್ರಾದೇಶಿಕ ಪಕ್ಷಗಳು ಬಿಜೆಪಿ ವಿರೋಧಿ ಮಹಾ ಕೂಟದಲ್ಲಿ ಸೇರಬೇಕು. ಹೀಗೆ ಒಂದಾಗದಿದ್ದರೆ 2024ರ ಲೋಕಸಭಾ ಚುನಾವಣೆಯಲ್ಲೂ ಅವರೇ ಗೆದ್ದು ಬಂದು ಸಂವಿಧಾನವನ್ನು ಇಟ್ಟುಕೊಂಡೇ ಅದರ ಸಮಾಧಿ ಮಾಡುತ್ತಾರೆ.
ಬರೀ ಹೋರಾಟಗಳಿಂದ, ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಲು ಸಾಧ್ಯವಿಲ್ಲ. ಹೋರಾಟಗಳು ರಾಜಕೀಯ ಅಸ್ತ್ರವಾಗಿ ಚುನಾವಣೆಯಲ್ಲಿ ಮತಗಳಾಗಿ ರೂಪಾಂತರಗೊಂಡಾಗ ಮಾತ್ರ ಫ್ಯಾಶಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗುತ್ತದೆ. ಮೊದಲ ಗುರಿ ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವುದಾಗಿರಬೇಕು. ಆಗ ಮಾತ್ರ ಭಾರತದ ಜಾತ್ಯತೀತ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿಯುತ್ತದೆ.ಇದಕ್ಕಾಗಿ ಕಾಂಗ್ರೆಸ್ ಕೂಡ ಬದಲಾಗಬೇಕಾಗಿದೆ. ಏಕಾಂಗಿಯಾಗಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂಬ ಭ್ರಮೆಯಿಂದ ಅದು ಹೊರಗೆ ಬರಬೇಕು. ತನ್ನ ಆರ್ಥಿಕ ಧೋರಣೆಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಬೇಕು. ಆಗ ಮಾತ್ರ ಚುನಾವಣೆ ಗೆಲುವು ಸಾಧ್ಯ. ಬಿಜೆಪಿ ಕಳೆದ ಚುನಾವಣೆಯಲ್ಲಿ ಗೆದ್ದು ಬಹುಮತ ಪಡೆದರೂ ಅದು ಪಡೆದ ಶೇಕಡಾವರು ಮತಗಳ ಪ್ರಮಾಣ ಶೇ.50ನ್ನು ದಾಟಿಲ್ಲ. ಭಾರತದ ಬಹುತೇಕ ಮತದಾರರು ಕೋಮುವಾದ ವಿರೋಧಿಸುತ್ತಾರೆ. ಆದರೆ ಅವರ ಮತಗಳು ವಿಭಜನೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಅದೊಂದೇ ಈಗ ಉಳಿದ ದಾರಿ.
ಇದು ಜನತಂತ್ರದ ಅಳಿವು, ಉಳಿವಿನ ಸಂಘರ್ಷ. ಕೋಮುವಾದ, ಮನುವಾದವನ್ನು, ಫ್ಯಾಶಿಸಮ್ ಅನ್ನು ವಿರೋಧಿಸುವವರೆಲ್ಲ ಒಂದಾದರೆ ಮಾತ್ರ ಉಳಿವು. ಇಲ್ಲವಾದರೆ ಅಳಿವು.