ಕಳ್ಳಭಟ್ಟಿ ದುರಂತ: ಯಾರು ಹೊಣೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಿಹಾರದ ಛಾಪ್ರಾದಲ್ಲಿ ಘಟಿಸಿದ ಕಳ್ಳಭಟ್ಟಿ ದುರಂತ ಭಾರೀ ತಲ್ಲಣವನ್ನು ಸೃಷ್ಟಿಸಿದೆ. ಈ ಅವಘಡದಲ್ಲಿ 60ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.ವಿರೋಧ ಪಕ್ಷಗಳು ಆರೋಪಿಸುವಂತೆ, ಕಳ್ಳಭಟ್ಟಿ ಸಾರಾಯಿ ಕುಡಿದು 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸರಕಾರ ಸಾವಿನ ಭೀಕರತೆಯನ್ನು ಮುಚ್ಚಿಟ್ಟಿದೆ. ಈ ದುರಂತ ಅವಘಡವಲ್ಲ, ನಿಸ್ಸಂಶಯವಾಗಿ ಇದೊಂದು ಅಪರಾಧ. 200 ಮಂದಿಯನ್ನು ಪರೋಕ್ಷವಾಗಿ ಕಲಬೆರಕೆ ಸಾರಾಯಿಯನ್ನು ಕುಡಿಸಿ ಕೊಂದು ಹಾಕಲಾಗಿದೆ. ಸಾಧಾರಣವಾಗಿ ಕಳ್ಳಭಟ್ಟಿ ತಯಾರಿಯ ಹಿಂದಿರುವವರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದವರು. ಇದೇ ಸಂದರ್ಭದಲ್ಲಿ ಆ ಸಾರಾಯಿಯನ್ನು ಕುಡಿಯುವ ಬಹುತೇಕ ಜನರು ಕೂಲಿ ಕಾರ್ಮಿಕರು, ಬಡವರು. ಬಿಹಾರ 2016ರಿಂದ ಮದ್ಯ ಮುಕ್ತ ರಾಜ್ಯವಾಗಿ ಗುರುತಿಸಿಕೊಂಡಿದೆ. ಅಪರಾಧಗಳ ರಾಜ್ಯವಾಗಿ ಗುರುತಿಸಲ್ಪಟ್ಟಿದ್ದ ಬಿಹಾರವನ್ನು ಮದ್ಯಮುಕ್ತ ರಾಜ್ಯವಾಗಿ ಘೋಷಿಸಿದ್ದು ನಿತೀಶ್ ಕುಮಾರ್ ನೇತೃತ್ವದ ಸರಕಾರದ ಗಮನಾರ್ಹ ಸಾಧನೆಯಾಗಿದೆ. ಅಧಿಕೃತ ಮದ್ಯ ಮಾರಾಟಕ್ಕೆ ನಿಷೇಧ ಹೇರಿದಾಗ, ಅದನ್ನು ಅಕ್ರಮವಾಗಿ ಜನರಿಗೆ ತಲುಪಿಸುವ ದಾರಿಯೊಂದು ತೆರೆದುಕೊಳ್ಳುತ್ತದೆ. ಮದ್ಯ ಸೇವನೆಯ ಚಟವನ್ನು ಹೊಂದಿದವರು ತಕ್ಷಣ ಅದನ್ನು ತೊರೆಯಲು ಸಾಧ್ಯವಿಲ್ಲ. ಕ್ರಿಮಿನಲ್‌ಗಳು ಜನರ ಈ ದೌರ್ಬಲ್ಯವನ್ನು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಾರೆ. ಹಳ್ಳಿಗಳಲ್ಲಿ, ಕಾಡುಗಳಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿ ಅಡ್ಡೆಗಳು ತೆರೆದುಕೊಳ್ಳುತ್ತವೆ. ಆದುದರಿಂದ, ಮದ್ಯ ಮಾರಾಟ ನಿಷೇಧದ ಬೆನ್ನಿಗೇ ಇಂತಹ ಅಕ್ರಮ ಮದ್ಯ ತಯಾರಿಯ ಬಗ್ಗೆ ಸರಕಾರ ಹೆಚ್ಚು ಜಾಗರೂಕತೆಯನ್ನು ಹೊಂದಿರಬೇಕಾಗುತ್ತದೆ. ಇಲ್ಲದೇ ಹೋದರೆ ಛಾಪ್ರಾದಲ್ಲಿ ನಡೆದಂತಹ ದುರಂತಗಳಿಗೆ ರಾಜ್ಯ ಪದೇ ಪದೇ ಸಾಕ್ಷಿಯಾಗಬೇಕಾಗುತ್ತದೆ.
ದುರಂತದ ಬೆನ್ನಿಗೇ ಕಳ್ಳಭಟ್ಟಿ ದುರಂತಕ್ಕೆ ಯಾರು ಹೊಣೆ? ಎನ್ನುವ ಚರ್ಚೆ ಮಹತ್ವವನ್ನು ಪಡೆದುಕೊಂಡಿದೆ. ಮೃತಪಟ್ಟವರಿಗೆ ಸರಕಾರ ಪರಿಹಾರ ನೀಡಬೇಕೆ ಬೇಡವೆ? ಎನ್ನುವ ಪ್ರಶ್ನೆಯೊಂದಿಗೆ ಈ ಚರ್ಚೆ ಆರಂಭಗೊಂಡಿದೆ. ‘‘ದುರಂತದಲ್ಲಿ ಮೃತಪಟ್ಟವರಿಗೆ ಪರಿಹಾರವನ್ನು ನೀಡಲಾಗುವುದಿಲ್ಲ. ಅಕ್ರಮ ಸಾರಾಯಿ ಕುಡಿದರೆ ನೀವು ಸಾಯುತ್ತೀರಿ ಅಷ್ಟೆ’’ ಎನ್ನುವಂತಹ ನಿಷ್ಠುರ ಹೇಳಿಕೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿದ್ದಾರೆ. ಅಂದರೆ, ಕುಡಿದವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ತನ್ನ ಹೊಣೆಗಾರಿಕೆಯಿಂದ ಸರಕಾರ ಪಾರಾಗಲು ಹವಣಿಸುತ್ತಿದೆ. ಕುಡಿದು ಸತ್ತವರು ವಿಳಾಸವಿಲ್ಲದ ಬಡ ಕೂಲಿಕಾರ್ಮಿಕರಾಗಿರುವುದರಿಂದಲೇ ಸರಕಾರಕ್ಕೆ ಇಂತಹದೊಂದು ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಲು ಧೈರ್ಯ ಬಂದಿದೆ. ಮೃತರಿಗೆ ಜಾತಿ, ರಾಜಕೀಯ, ಆರ್ಥಿಕ ಹಿನ್ನೆಲೆಯಿದ್ದರೆ ಅವರು ಇಂತಹ ಹೇಳಿಕೆಯನ್ನು ನೀಡುವುದಕ್ಕೆ ಸಾಧ್ಯವಿರಲಿಲ್ಲ. ಸಾರಾಯಿಯೇ ಜೀವಕ್ಕೆ ಅಪಾಯ ಎನ್ನುವ ಸಂದರ್ಭದಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ಕುಡಿಯುವುದು ಸಾವನ್ನು ತಾವಾಗಿಯೇ ಆಹ್ವಾನಿಸಿದಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾರಾಯಿ ಕುಡಿದವರ ತಪ್ಪಿದೆ ಎನ್ನುವುದು ನಿಜ. ಆದರೆ ಅವರು ಕುಡಿದರು ಎನ್ನುವುದಕ್ಕಿಂತ ಕೆಲವು ಶಕ್ತಿಗಳು ಅವರನ್ನು ಕುಡಿಯುವಂತೆ ಮಾಡಿದವು ಎನ್ನುವುದು ಹೆಚ್ಚು ಸರಿ. ಮದ್ಯ ಮುಕ್ತ ರಾಜ್ಯವಾಗಿರುವ ಬಿಹಾರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ಸಾರಾಯಿ ಹೇಗೆ ಬಂತು? ಕಾನೂನು ವೈಫಲ್ಯ ಇದಕ್ಕೆ ಮುಖ್ಯ ಕಾರಣ. ಅಂದರೆ ಸರಕಾರದ ವೈಫಲ್ಯದಿಂದಾಗಿಯೇ ಅಕ್ರಮ ಸಾರಾಯಿ ಅಡ್ಡೆಗಳು ಸೃಷ್ಟಿಯಾದವು. ಆದುದರಿಂದ ತಪ್ಪು ಮೊದಲು ಸಂಭವಿಸಿದ್ದು ಸರಕಾರದ ಭಾಗದಿಂದ. ತನ್ನ ಹೊಣೆಗಾರಿಕೆಯಿಂದ ಸರಕಾರ ಯಾವ ಕಾರಣಕ್ಕೂ ನುಣುಚಿಕೊಳ್ಳುವಂತಿಲ್ಲ.
ರಾಜ್ಯದಲ್ಲಿ ಸಾರಾಯಿ ನಿಷೇಧವಾದ ಬೆನ್ನಿಗೇ ಅಕ್ರಮ ಸಾರಾಯಿ ತಯಾರಿ ಯಾಕೆ ಹೆಚ್ಚುತ್ತದೆ ಎನ್ನುವಪ್ರಶ್ನೆಗೂ ಸರಕಾರ ಉತ್ತರ ಕಂಡುಕೊಳ್ಳಬೇಕು. ಜನಸಾಮಾನ್ಯರ ಆಗ್ರಹದ ಮೇರೆಗೆ ಈ ಅಕ್ರಮ ಸಾರಾಯಿ ಅಡ್ಡೆಗಳು ತೆರೆಯುವುದಲ್ಲ. ಇದರ ಹಿಂದೆ ಅಪರಾಧ ಜಗತ್ತಿನ ಕಾಣದ ಕೈಗಳಿವೆ. ಅಪರಾಧ ಮತ್ತು ಸಾರಾಯಿ ಸೇವನೆಗೆ ನೇರ ಸಂಬಂಧವಿದೆ. ಸಾರಾಯಿ ನಿಷೇಧವಾದಾಗ ಈ ಅಪರಾಧ ಜಗತ್ತಿನೊಳಗೆ ತಲ್ಲಣಗಳು ಸೃಷ್ಟಿಯಾಗುತ್ತವೆ. ಅಪರಾಧ ಕೃತ್ಯಗಳನ್ನು ಎಸಗುವುದಕ್ಕೆ ಅಮಲು ಪದಾರ್ಥಗಳ ನೆರವಿನ ಅಗತ್ಯವಿದೆ. ಜನರನ್ನು ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದಕ್ಕಾಗಿಯೇ ಕಳ್ಳಭಟ್ಟಿ ತಯಾರಿಸಿ ಹಂಚಲಾಗುತ್ತದೆ. ಇದೇ ಸಂದರ್ಭದಲ್ಲಿ, ಇಂತಹ ಸಾರಾಯಿ ಸೇವಿಸಿ ಸಾವುಗಳು ಸಂಭವಿಸುವುದು ಕೂಡ ಆಕಸ್ಮಿಕವಾಗಿರುವುದಿಲ್ಲ. ಮದ್ಯ ನಿಷೇಧ ಘೋಷಣೆಯಾದ ಬೆನ್ನಿಗೇ ಇಂತಹ ಅಕ್ರಮ ಸಾರಾಯಿಗಳನ್ನು ಹಂಚಿ ಸಾವು ನೋವುಗಳು ಸಂಭವಿಸುವಂತೆ ಕೆಲವು ಶಕ್ತಿಗಳು ಯೋಜನೆ ರೂಪಿಸುತ್ತವೆ. ದುರಂತ ಸಂಭವಿಸಿದ ಬಳಿಕ ‘ಸರಕಾರದ ಮದ್ಯ ನಿಷೇಧವೇ ದುರಂತಕ್ಕೆ ಕಾರಣ’ ‘ಮದ್ಯ ನಿಷೇಧಿಸಿದರೆ ಅಕ್ರಮ ಸಾರಾಯಿ ಕುಡಿಯುವವರ ಸಂಖ್ಯೆ ಹೆಚ್ಚುತ್ತದೆ’ ಎನ್ನುವ ವಾದವನ್ನು ಮಾಧ್ಯಮಗಳ ಮೂಲಕ ತೇಲಿ ಬಿಡುತ್ತವೆ. ಆ ಮೂಲಕ ಮದ್ಯ ನಿಷೇಧ ಹಿಂದೆಗೆಯಲು ಸರಕಾರಕ್ಕೆ ಒತ್ತಡ ಹೇರುತ್ತವೆ. ಕಳ್ಳಭಟ್ಟಿ ಸಾರಾಯಿಯನ್ನು ಮುಂದಿಟ್ಟುಕೊಂಡು ಹಲವು ರಾಜ್ಯಗಳು ಮದ್ಯ ನಿಷೇಧವನ್ನು ಮುಂದೆ ಹಾಕುತ್ತಾ ಬಂದಿವೆ. ಆದುದರಿಂದ, ಕಳ್ಳ ಭಟ್ಟಿ ಸಾರಾಯಿ ತಯಾರಿಕೆಯ ಹಿಂದಿರುವವರು ಯಾರು? ಎನ್ನುವುದು ಮೊದಲು ತನಿಖೆಯಾಗಬೇಕು.
ಕಳ್ಳಭಟ್ಟಿ ಸಾರಾಯಿಗೆ ನೇರವಾಗಿ ಬಲಿಯಾಗುವವರು ಯಾರು? ಯಾಕೆ? ಎನ್ನುವುದನ್ನೂ ಸರಕಾರ ಗಮನಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುವ ಶ್ರಮಜೀವಿಗಳೇ ಇವರಲ್ಲಿ ಅಧಿಕ. ಇಡೀ ದಿನ ದುಡಿದು ಬೆಂಡಾಗಿರುವ ಇವರು ನಿದ್ದೆ ಹೋಗಬೇಕಾದರೆ ಮದ್ಯ ಸೇವಿಸಲೇ ಬೇಕಾದಂತಹ ಅನಿವಾರ್ಯ ಸ್ಥಿತಿಗೆ ಸಿಲುಕಿಕೊಂಡಿರುತ್ತಾರೆ. ಹಾಗೆಯೇ ರಸ್ತೆ ಗುಡಿಸುವ, ಚರಂಡಿ ಶುಚಿಗೊಳಿಸುವ ಪೌರಕಾರ್ಮಿಕರು ಕೂಡ ಅನಿವಾರ್ಯ ಕಾರಣಗಳಿಗಾಗಿ ಮದ್ಯ ಸೇವಿಸಬೇಕಾಗುತ್ತದೆ. ಸರಕಾರ ಮದ್ಯ ನಿಷೇಧ ಮಾಡಿದಾಕ್ಷಣ ಇವರು ತಕ್ಷಣ ಚಟದಿಂದ ಮುಕ್ತರಾಗಲು ಸಾಧ್ಯವಿಲ್ಲ. ಇವರ ಅಸಹಾಯಕತೆಯನ್ನು ಬಳಸಿಕೊಂಡು ಕಳ್ಳಭಟ್ಟಿ ಸಾರಾಯಿ ತಯಾರಿಸಿ ಇವರಿಗೆ ಕುಡಿಸಲಾಗುತ್ತದೆ. ಒಂದು ರೀತಿಯಲ್ಲಿ ಕೆಟ್ಟ ವ್ಯವಸ್ಥೆಯ ಬಲಿಪಶುಗಳು ಇವರು. ಇವರಿಗೆ ಮದ್ಯ ಕುಡಿಸಿದ ದುಷ್ಕರ್ಮಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವರಿಗೆ ಶಿಕ್ಷೆ ನೀಡಬೇಕೇ ಹೊರತು,ಸಾರಾಯಿಗೆ ಬಲಿಯಾದವರನ್ನು ಅಪರಾಧಿ ಸ್ಥಾನದಲ್ಲಿ ಯಾವ ಕಾರಣಕ್ಕೂ ನಿಲ್ಲಿಸಬಾರದು. ಸಾರಾಯಿ ಕುಡಿದು ಮೃತಪಟ್ಟವರಿಗೆ ಪರಿಹಾರ ನೀಡುವುದಿಲ್ಲ ಎನ್ನುವ ಸರಕಾರದ ನಿಲುವು ಈ ಕಾರಣಕ್ಕಾಗಿಯೇ ಪ್ರಶ್ನಾರ್ಹವಾಗಿದೆ. ಕುಡಿದವರೇನೋ ಸತ್ತರು. ಅದುವೇ ಅವರಿಗೆ ದೊರಕಿದ ಶಿಕ್ಷೆ ಎಂದು ಭಾವಿಸೋಣ. ಆದರೆ ಸತ್ತವರ ಕುಟುಂಬ ಏನು ತಪ್ಪು ಮಾಡಿದೆ? ಅವರನ್ನು ಅವಲಂಬಿಸಿದ ಕುಟುಂಬ ಬೀದಿಪಾಲಾಗಿದೆ. ಅವರನ್ನು ಕಾಪಾಡುವವರು ಯಾರು? ಇವರು ಮೊದಲೇ ಬಡವರು. ಈಗಾಗಲೇ ಊಟ, ವಸತಿಗಾಗಿ ಹೆಣಗಾಡುತ್ತಿರುವವರು. ಮನೆ ಯಜಮಾನನನ್ನು ಕಳೆದುಕೊಂಡ ಬಳಿಕ ಇವರಿಗೆ ಯಾರು ಆಸರೆ? ಅಕ್ರಮ ಸಾರಾಯಿ ಕುಡಿದವರು ಅಪರಾಧಿಗಳು ಎಂದೇ ಇಟ್ಟುಕೊಳ್ಳೋಣ. ಆದರೆ ಅದಕ್ಕಾಗಿ ಅವರ ಕುಟುಂಬಕ್ಕೆ ಯಾಕೆ ಶಿಕ್ಷೆ ನೀಡಬೇಕು? ಆದುದರಿಂದ ಮೃತರ ಕುಟುಂಬಕ್ಕೆ ಪರಿಹಾರ ನೀಡುವುದು ಸರಕಾರದ ಕರ್ತವ್ಯವಾಗಿದೆ.
ಮದ್ಯ ನಿಷೇಧದಿಂದ ಬಿಹಾರಕ್ಕಾಗಿರುವ ಲಾಭ ಗಮನಾರ್ಹವಾದುದು. ಮದ್ಯ ನಿಷೇಧದ ಬಳಿಕ ಬಿಹಾರದಲ್ಲಿ ಕ್ರಿಮಿನಲ್ ಚಟುವಟಿಕೆಗಳು ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿವೆ ಎನ್ನುವುದು ಅಂಕಿಅಂಶಗಳಿಂದ ಬಹಿರಂಗವಾಗಿದೆ. ಹಾಗೆಯೇ ಕೂಲಿಕಾರ್ಮಿಕರ ಜೀವನ ಮಟ್ಟದಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ಆದುದರಿಂದ ಅಕ್ರಮ ಸಾರಾಯಿ ತಯಾರಿಯನ್ನು ಮುಂದಿಟ್ಟುಕೊಂಡು ಯಾವ ಕಾರಣಕ್ಕೂ ಸರಕಾರ ಮದ್ಯ ನಿಷೇಧವನ್ನು ಹಿಂದೆಗೆಯಬಾರದು. ಬದಲಿಗೆ ಅಕ್ರಮ ಸಾರಾಯಿ ಮಾಫಿಯಾವನ್ನು ಗುರುತಿಸಿ ಅವರನ್ನು ಬಗ್ಗು ಬಡಿಯುವ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕು.