ಮುಂಗಾರು ಅನಿಶ್ಚಿತತೆಗೆ ಕಾರಣವೇನೆಂದರೆ....
ಭಾರತದ ಮುಂಗಾರು ಕ್ಷಾಮಗಳಿಗೆ ಸಂಬಂಧಿಸಿದಂತೆ ನಡೆಯುವ ಎಲ್ಲಾ ಚರ್ಚೆಗಳಲ್ಲಿ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ವಿಷಯ ಮುಖ್ಯವಾಗಿ ಕೇಳಿಬರುತ್ತದೆ. ಆದರೆ ಇದೀಗ ಮಧ್ಯ ಅಕ್ಷಾಂಶ ಪ್ರಭಾವಗಳ ಕುರಿತೂ ಗಮನ ಕೇಂದ್ರೀಕರಿಸುವುದು ಜರೂರಿನ ಸಂಗತಿ ಎಂಬುದು ದೃಢಪಟ್ಟಿದೆ. ಮುಂಗಾರಿನಲ್ಲಿನ ವ್ಯತ್ಯಯವನ್ನು ಹೆಚ್ಚಿನ ನಿಖರತೆಯೊಂದಿಗೆ ಊಹಿಸಲು ಇದು ಅನುವು ಮಾಡಿಕೊಡಬಹುದು ಎಂಬುದು ಪರಿಣತರ ಅಭಿಪ್ರಾಯ.
ಭಾರತದಲ್ಲಿ ಕೋಟ್ಯಂತರ ಜನರು ನೆಚ್ಚಿರುವುದು ಮುಂಗಾರು ಮಳೆಯನ್ನೇ. ಜೂನ್‌ನಿಂದ ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ದೇಶಾದ್ಯಂತ ಉತ್ತಮ ಮಳೆಯನ್ನು ಸುರಿಸಬೇಕಾದ ಮುಂಗಾರು ಋತುವೇನಾದರೂ ಕೈಕೊಟ್ಟಿತೆಂದರೆ ಬರ ಅಡರುತ್ತದೆ. ಆಗಸ್ಟ್ ತಿಂಗಳಲ್ಲಿ ಮಳೆ ಸುರಿಯುವ ಪ್ರಮಾಣ ಹಠಾತ್ತಾಗಿ ಹಾಗೂ ತೀವ್ರವಾಗಿ ಕುಸಿದರೆ ಕಷ್ಟ ಕಟ್ಟಿಟ್ಟ ಬುತ್ತಿ. ಕಳೆದ ಶತಮಾನದಲ್ಲಿ ಭಾರತ ಕಂಡ ಮುಂಗಾರು ಕ್ಷಾಮಗಳ ಪೈಕಿ ಸುಮಾರು ಅರ್ಧದಷ್ಟಕ್ಕೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿನ ವಾತಾವರಣದ ಏರುಪೇರುಗಳೇ ಕಾರಣ ಎನ್ನುತ್ತದೆ ಅಧ್ಯಯನ.
ಇಲ್ಲಿನ ಮಳೆ ಅನಿಶ್ಚಿತತೆಗೆ ಕಾರಣ ಇಲ್ಲಿಯೂ ಇರುವಂತೆ ಮತ್ತೆಲ್ಲಿಯೋ ಕೂಡ ಇರುತ್ತದೆಂಬುದು ಇದರ ಅರ್ಥ. ಭಾರತೀಯ ವಿಜ್ಞಾನ ಸಂಸ್ಥೆಯ ವಾತಾವರಣ ಮತ್ತು ಸಾಗರ ವಿಜ್ಞಾನಗಳ ಕೇಂದ್ರದ ಸಂಶೋಧಕರು ನಡೆಸಿರುವ ಅಧ್ಯಯನದ ವಿಚಾರಗಳು ‘ಸೈನ್ಸ್’ ನಿಯತಕಾಲಿಕದಲ್ಲಿ ಪ್ರಕಟವಾಗಿವೆ.
ಈ ವರ್ಷ ಮುಂಗಾರು ಒಟ್ಟು ಮಳೆ ಸರಾಸರಿಗಿಂತ ಹೆಚ್ಚೇ ಆಗಿದೆ ಎನ್ನುತ್ತವೆ ವರದಿಗಳು. ಹಾಗಿದ್ದೂ ಕೆಲವು ರಾಜ್ಯಗಳಲ್ಲಿ ತೀವ್ರ ಬರ ಪರಿಸ್ಥಿತಿ ಎದುರಿಸುವಂತಾಗಿದೆ. ವಿಪರೀತ ಮಳೆ ಮತ್ತು ಅನಾವೃಷ್ಟಿ ಈ ಎರಡೂ ಬಗೆ ಕಳೆದ ಐದು ದಶಕಗಳಿಂದಲೂ ಸಾಮಾನ್ಯವೇ ಎನ್ನಿಸುವಂತಾಗಿದೆ. ಈ ಸಲ ಮಳೆಯ ಕೊರತೆಯು ದಿಲ್ಲಿಯಿಂದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಣಿಪುರ ಮತ್ತು ಮಿಜೋರಾಂವರೆಗೆ ವ್ಯಾಪಿಸಿದೆ. ಶೇ.೨೦ರಿಂದ ಶೇ.೪೫ರಷ್ಟು ಮಳೆ ಕೊರತೆಯಾಗಿದೆ. ಹೀಗೆ ಮಳೆಯ ವ್ಯತ್ಯಾಸವಾಗುವುದರ ಹಿಂದೆ ಜಾಗತಿಕ ತಾಪಮಾನದ ಬಲವಾದ ಕೈಗಳಿವೆ ಎಂಬುದನ್ನು ಪರಿಣತರು ಹೇಳುತ್ತಾರೆ.
ಜೂನ್‌ನಿಂದ ಸೆಪ್ಟಂಬರ್ ಅವಧಿಯಲ್ಲಿನ ಮಳೆ ಕೊರತೆಯಾದರೆ ಅದಕ್ಕೆ ಎಲ್ ನಿನೋ ಕಾರಣ ಎಂದು ಭಾವಿಸಲಾಗುತ್ತದೆ. ಎಲ್ ನಿನೋ ಎಂದರೆ, ಸಮಭಾಜಕ ವೃತ್ತದ ಬಳಿಯ ಪೆಸಿಫಿಕ್ ಸಾಗರದ ನೀರಿನ ಉಷ್ಣತೆಯು ಅಸಹಜವೆನ್ನುವ ರೀತಿಯಲ್ಲಿ ಜಾಸ್ತಿಯಾಗಿ, ಭಾರತ ಉಪಖಂಡ ಭಾಗದಿಂದ, ತೇವಾಂಶದಿಂದ ಕೂಡಿದ ಮೋಡಗಳನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಕ್ರಿಯೆ. ಹಾಗೆಯೇ, ಇದು ಪದೇಪದೇ ಮರುಕಳಿಸುವ ಪ್ರಕ್ರಿಯೆಯೂ ಹೌದು.
ಇದೇ ವೇಳೆ ಇನ್ನೂ ಒಂದು ಅಂಶವನ್ನು ಗಮನಿಸಬೇಕು. ದೇಶದಲ್ಲಿ ಕಳೆದ ಶತಮಾನದಲ್ಲಿ ಉಂಟಾದ ೨೩ ಕ್ಷಾಮಗಳ ಪೈಕಿ ೧೦ ಬರಗಾಲಗಳು ಎಲ್ ನಿನೋ ಇಲ್ಲದಿದ್ದಾಗ ಸಂಭವಿಸಿವೆ. ಹಾಗಾದರೆ, ಇದಕ್ಕೇನು ಕಾರಣ? ಹೀಗೆ ಮಳೆ ಸುರಿಯುವ ಪ್ರಮಾಣ ತೀವ್ರವಾಗಿ ಕುಸಿಯುವುದಕ್ಕೆ ಕಾರಣ, ಉತ್ತರ ಅಟ್ಲಾಂಟಿಕ್ ಸಾಗರದ ಮಧ್ಯ ಅಕ್ಷಾಂಶ (ಮಿಡ್ ಲ್ಯಾಟಿಟ್ಯೂಡ್) ಪ್ರದೇಶದಲ್ಲಿನ ವಾತಾವರಣದಲ್ಲಿ ಉಂಟಾದ ಏರುಪೇರು. ಈ ಏರುಪೇರು ಭಾರತ ಉಪಖಂಡವನ್ನು ವ್ಯಾಪಿಸಿದ ವಾತಾವರಣ ಸುಳಿಗಳ ಬಗೆಯನ್ನೂ ಬದಲಿಸುತ್ತದೆ. ಅಂತಿಮವಾಗಿ ಇದು ಮುಂಗಾರು ಕೊರತೆಯನ್ನು ಉಂಟುಮಾಡುತ್ತದೆ.
ಎಲ್ ನಿನೋ ಬರಕ್ಕಿಂತ ಭಿನ್ನವಾದ ‘ಮಧ್ಯ ಅಕ್ಷಾಂಶ ಪ್ರಭಾವ’ವೆಂಬ ಸಾಮಾನ್ಯ ಕಾರಣ ಇವುಗಳ ಹಿಂದಿದೆ ಎಂಬುದು ಇದೀಗ ಗೊತ್ತಾಗಿದೆ. ಎಲ್ ನಿನೋ ಹಾಗೂ ಎಲ್ ನಿನೋಗೆ ಹೊರತಾದ ಬರಗಾಲದ ವರ್ಷಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ ನಂತರ, ಜೂನ್‌ನಿಂದ ಸೆಪ್ಟಂಬರ್‌ವರೆಗಿನ ಅವಧಿಯಲ್ಲಿನ ವಾತಾವರಣದ ವಿನ್ಯಾಸಗಳಲ್ಲಿ ತೀವ್ರ ವ್ಯತ್ಯಾಸಗಳು ಗಮನಕ್ಕೆ ಬಂದವು.
ಎಲ್ ನಿನೋ ವರ್ಷಗಳಲ್ಲಿ ವಾಡಿಕೆ ಸರಾಸರಿ ಮಳೆಯಲ್ಲಿನ ಕೊರತೆ ಜೂನ್ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಇದರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಾ ಹೋಗಿ, ಆಗಸ್ಟ್ ಮಧ್ಯಭಾಗದ ವೇಳೆಗೆ ದೇಶವನ್ನೆಲ್ಲಾ ವ್ಯಾಪಿಸುತ್ತದೆ. ಕಡೆಗೆ ಬರಗಾಲದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಉಂಟಾಗುತ್ತದೆ.
ಎಲ್ ನಿನೋಯೇತರ ಬರಗಾಲಗಳ ಸಂದರ್ಭದಲ್ಲಿ ಮೊದಲಿಗೆ ಜೂನ್ ತಿಂಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆ ಕಡಿಮೆಯಾಗುತ್ತದೆ. ಮುಂಗಾರು ಜೋರಾಗಿರಬೇಕಾದ ಜುಲೈ ಮಧ್ಯದಿಂದ ಹಿಡಿದು ಆಗಸ್ಟ್ ಮಧ್ಯದವರೆಗೆ ಮಳೆ ಚೇತರಿಸಿಕೊಂಡಂತೆ ತೋರುತ್ತದೆ. ಆದರೆ, ಆಗಸ್ಟ್ ಮೂರನೇ ವಾರದ ಹೊತ್ತಿಗೆ ಮಳೆ ಪ್ರಮಾಣ ತೀವ್ರವಾಗಿ ಕುಸಿದು ಬರ ಆವರಿಸುತ್ತದೆ.
ಆಗಸ್ಟ್ ಕೊನೆಯ ಭಾಗದಲ್ಲಿ ಏಕೆ ಈ ರೀತಿ ಆಗುತ್ತದೆ? ಎಂಬ ಪ್ರಶ್ನೆಯೊಂದಿಗೆ ಅವಲೋಕಿಸಿದಾಗ ಕಂಡಿದ್ದೇ ಮಧ್ಯ ಅಕ್ಷಾಂಶ ವಲಯದಲ್ಲಿ ಅಸಹಜವೆನ್ನಿಸುವ ವಾತಾವರಣದ ಏರುಪೇರು. ಅಸಹಜವಾಗಿ ಶೀತಲವಾದ ಉತ್ತರ ಅಟ್ಲಾಂಟಿಕ್ ಜಲರಾಶಿಯ ವಾತಾವರಣದ ಮೇಲ್ಭಾಗದಲ್ಲಿನ ಗಾಳಿ ತೀವ್ರವಾದ ಚಂಡಮಾರುತದೊಂದಿಗೆ ವರ್ತಿಸುವುದೇ ಇದಕ್ಕೆ ಕಾರಣ. ಇದರಿಂದಾಗಿ ‘ರಾಸ್ ಬೈ ಅಲೆ’ ಎಂದು ಕರೆಯಲಾಗುವ ಗಾಳಿಯ ಸುಳಿಗಳು ಉಂಟಾಗುತ್ತವೆ. ಇವು ಉತ್ತರ ಅಟ್ಲಾಂಟಿಕ್‌ನಿಂದ ಸೆಳೆತಕ್ಕೊಳಗಾಗಿ, ನಂತರ ಟಿಬೆಟ್ ಪ್ರಸ್ಥಭೂಮಿಯೆಡೆಗೆ ಚಲಿಸಿ, ಆಗಸ್ಟ್ ಮಧ್ಯಭಾಗದ ವೇಳೆಗೆ ಭಾರತ ಉಪಖಂಡವನ್ನು ಅಪ್ಪಳಿಸಿ ಮಳೆ ಸುರಿಯದಂತೆ ತಡೆಯುತ್ತವೆ. ಅಲೆಗಳು ಸಾಮಾನ್ಯವಾಗಿ ಪಶ್ಚಿಮದಿಂದ ಪೂರ್ವದೆಡೆಗೆ ಚಲಿಸಬೇಕೇ ಹೊರತು ಸಮಭಾಜಕ ವಲಯದೆಡೆಗೆ ಅಲ್ಲ ಎನ್ನುತ್ತಾರೆ ಸಂಶೋಧಕರು.
ಭಾರತದ ಮುಂಗಾರಿನ ಮೇಲೆ ಉಷ್ಣವಲಯಕ್ಕೆ ಹೊರತಾದ ಅಂಶಗಳ ಪ್ರಭಾವ ಕೂಡ ಇದೆಯೆಂಬುದು ಇನ್ನೊಂದು ಗಮನೀಯ ಅಂಶ. ಭಾರತದ ಮುಂಗಾರು ಕ್ಷಾಮಗಳಿಗೆ ಸಂಬಂಧಿಸಿದಂತೆ ನಡೆಯುವ ಎಲ್ಲಾ ಚರ್ಚೆಗಳಲ್ಲಿ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ವಿಷಯ ಮುಖ್ಯವಾಗಿ ಕೇಳಿಬರುತ್ತದೆ. ಆದರೆ ಇದೀಗ ಮಧ್ಯ ಅಕ್ಷಾಂಶ ಪ್ರಭಾವಗಳ ಕುರಿತೂ ಗಮನ ಕೇಂದ್ರೀಕರಿಸುವುದು ಜರೂರಿನ ಸಂಗತಿ ಎಂಬುದು ದೃಢಪಟ್ಟಿದೆ. ಮುಂಗಾರಿನಲ್ಲಿನ ವ್ಯತ್ಯಯವನ್ನು ಹೆಚ್ಚಿನ ನಿಖರತೆಯೊಂದಿಗೆ ಊಹಿಸಲು ಇದು ಅನುವು ಮಾಡಿಕೊಡಬಹುದು ಎಂಬುದು ಪರಿಣತರ ಅಭಿಪ್ರಾಯ.