ಹಸಿದು ಕೂತ ಭಾರತ !
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ದೇಶದ ನಿಜವಾದ ಸಮಸ್ಯೆಗಳೇನು? ಟಿವಿ ಚಾನೆಲ್ ಮತ್ತು ಮಾಧ್ಯಮಗಳ ಪ್ರಕಾರ, ಪಠಾಣ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ತೊಟ್ಟ ಬಿಕಿನಿಯ ಬಣ್ಣ, ಆಹಾರ ಹಲಾಲ್ ಹೌದೋ ಅಲ್ಲವೋ, ಟಿಪ್ಪು ಸುಲ್ತಾನ್ ಮತಾಂಧನೆ?, ಸಾವರ್ಕರ್ ಭಾವಚಿತ್ರ ಇತ್ಯಾದಿಗಳೇ ಸದ್ಯಕ್ಕೆ ಭಾರತ ಇತ್ಯರ್ಥ ಮಾಡಬೇಕಾಗಿರುವ ಮಹತ್ವದ ವಿಷಯಗಳು. ಇವೆಲ್ಲ ಇತ್ಯರ್ಥವಾಯಿತು ಎಂದಾದರೆ ಭಾರತ ಭವಿಷ್ಯದಲ್ಲಿ ವಿಶ್ವಗುರುವಾಗಲಿದೆ. ಭಾರತದೊಳಗಿರುವ ಸಕಲ ಸಮಸ್ಯೆಗಳು ನಿವಾರಣೆಯಾಗಿ ಜನರು ಸುಖ ಸಂತೋಷದಿಂದ ಜೀವಿಸಲಿದ್ದಾರೆ. ಭಾರತದ ನಿಜವಾದ ಸಮಸ್ಯೆಗಳು ಏನು ಎನ್ನುವುದನ್ನು ಗುರುತಿಸುವವರು ಈ ದೇಶದಲ್ಲಿ ಹೊಟ್ಟೆ ತುಂಬಿದ ಜನರೇ ಆಗಿರುವುದರಿಂದ, ಅವರು ಇಂತಹ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಈ ದೇಶದ ಹಸಿದ ಜನರನ್ನು ದಾರಿತಪ್ಪಿಸುತ್ತಾ ಬರುತ್ತಿದ್ದಾರೆ. ಒಂದೆಡೆ ದೇಶ ಹಸಿವಿನಿಂದ ಕಂಗೆಡುತ್ತಿರುವಾಗ, ಶೇ. 2ರಷ್ಟು ಜನರ ಭಾವನೆಗಳನ್ನು ಮುಂದಿಟ್ಟು ಗೋಮಾಂಸ ಸೇವನೆಯನ್ನು ಸರಕಾರ ನಿಷೇಧಿಸುತ್ತದೆ. ಭಾರತದಲ್ಲಿ ಅಪೌಷ್ಟಿಕತೆ ಹೆಚ್ಚುವುದಕ್ಕೆ ಈ ಗೋಮಾಂಸದ ವಿರುದ್ಧ ನಡೆಯುತ್ತಿರುವ ರಾಜಕೀಯ ಕುತಂತ್ರಗಳು ಬಹುಮುಖ್ಯ ಕಾರಣವಾಗಿದೆ. ಜನರು ಆಹಾರದ ಕೊರತೆಯಿಂದ ನರಳುತ್ತಿರುವಾಗ, ಹಲಾಲ್‌ನ ವಿವಾದಗಳನ್ನು ರಾಜಕಾರಣಿಗಳು ಹುಟ್ಟು ಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜನರ ಮೂಲಭೂತ ಅಗತ್ಯಗಳ ಕುರಿತ ಚರ್ಚೆ ಮೂಲೆಗುಂಪಾಗುತ್ತಿದೆ.
ಭಾರತವು ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ಆಹಾರ ಉತ್ಪಾದಕ ದೇಶವಾಗಿದೆ. ಅದೂ ಅಲ್ಲದೆ, ಹಾಲು, ದ್ವಿದಳ ಧಾನ್ಯಗಳು, ಅಕ್ಕಿ, ಮೀನು, ತರಕಾರಿಗಳು ಮತ್ತು ಗೋಧಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಇದೇ ಸಂದರ್ಭದಲ್ಲಿ ದೇಶದ ಜನಸಂಖ್ಯೆಯ ದೊಡ್ಡ ಭಾಗ ಅಪೌಷ್ಟಿಕತೆಯಿಂದ ಬಳಲುತ್ತಿದೆ. ಕೊರೋನ ಸಾಂಕ್ರಾಮಿಕದ ದಾಳಿಯ ಬಳಿಕ, ಅಂದರೆ 2019ರಿಂದ ಹಸಿವೆಯ ವಿರುದ್ಧದ ಜನರ ಹೋರಾಟವು ಗಣನೀಯವಾಗಿ ಹೆಚ್ಚಿದೆ ಎಂಬುದಾಗಿ ವಿಶ್ವಸಂಸ್ಥೆಯು, ‘‘ಜಗತ್ತಿನಲ್ಲಿ ಆಹಾರ ಭದ್ರತೆ ಮತ್ತು ಪೌಷ್ಟಿಕತೆಯ ಸ್ಥಿತಿಗತಿ, 2022’’ ಎಂಬ ತನ್ನ ವರದಿಯಲ್ಲಿ ಹೇಳಿದೆ. 2021ರಲ್ಲಿ, ಜಗತ್ತಿನ ಜನಸಂಖ್ಯೆಯ ಪೈಕಿ 76.8 ಕೋಟಿ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಎನ್ನುವುದನ್ನು ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿತ್ತು. ಈ ಪೈಕಿ 22.4 ಕೋಟಿ ಮಂದಿ, ಅಂದರೆ 29 ಶೇಕಡ ಭಾರತೀಯರು. ಅಂದರೆ, ಜಗತ್ತಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರ ಪೈಕಿ ಕಾಲು ಭಾಗಕ್ಕೂ ಹೆಚ್ಚು ಮಂದಿ ಭಾರತೀಯರು. ಭಾರತದಲ್ಲಿ ಹಸಿವೆ ಮತ್ತು ಅಪೌಷ್ಟಿಕತೆ ಅತ್ಯಂತ ಗಂಭೀರ ಮಟ್ಟಗಳಲ್ಲಿ ಇವೆ ಎನ್ನುವುದರತ್ತ ವರದಿಯು ಬೆಟ್ಟು ಮಾಡುತ್ತಿದೆ.
ಭಾರತದ ಅತ್ಯಂತ ಗಂಭೀರ ಸಮಸ್ಯೆಗಳ ಪೈಕಿ ಅಪೌಷ್ಟಿಕತೆಯೂ ಒಂದಾಗಿದೆ. ಆದರೂ, ಅದಕ್ಕೆ ಅತ್ಯಂತ ಕನಿಷ್ಠ ಗಮನವನ್ನು ನೀಡಲಾಗಿದೆ. ಇಂದು ಭಾರತದಲ್ಲಿ, ಬೆಳವಣಿಗೆ ಕುಂಠಿತಗೊಂಡಿರುವ 2.55 ಕೋಟಿ ಮಕ್ಕಳಿದ್ದಾರೆ. ಇಂದು 51 ಶೇಕಡದಷ್ಟು ಕಡಿಮೆ ಆದಾಯದ ಕುಟುಂಬಗಳ ಅರ್ಧಕ್ಕಿಂತಲೂ ಹೆಚ್ಚು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ಅಕ್ಟೋಬರ್ 14ರಂದು ಬಿಡುಗಡೆಯಾಗಿರುವ ಜಾಗತಿಕ ಹಸಿವೆ ಸೂಚ್ಯಂಕ ವರದಿಯ ಪ್ರಕಾರ, ‘‘ಭಾರತದಲ್ಲಿನ ಹಸಿವಿನ ಮಟ್ಟ ಗಂಭೀರವಾಗಿದೆ’’. ಈ ಸೂಚ್ಯಂಕದಲ್ಲಿ, ಭಾರತವು ಜಗತ್ತಿನ 121 ದೇಶಗಳ ಪೈಕಿ 107ನೇ ಸ್ಥಾನ ಹೊಂದಿದೆ. ಈ ಸೂಚ್ಯಂಕದಲ್ಲಿ ಭಾರತವು ತನ್ನ ನೆರೆಯ ದೇಶಗಳಾದ ನೇಪಾಳ (81), ಬಾಂಗ್ಲಾದೇಶ (84), ಶ್ರೀಲಂಕಾ (64) ಮತ್ತು ಪಾಕಿಸ್ತಾನ (99)ಕ್ಕಿಂತಲೂ ಹಿಂದಿದೆ.
ಐದು ವರ್ಷಕ್ಕಿಂತ ಕೆಳಗಿನ ಸರಾಸರಿ 20 ಶೇಕಡ ಮಕ್ಕಳು ಎದ್ದು ಕಾಣುವ ಹಾಗೂ ಜೀವಕ್ಕೆ ಬೆದರಿಕೆಯಾಗುವ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬುದಾಗಿ ಅಂದಾಜಿಸಲಾಗಿದೆ. 35 ಶೇಕಡದಷ್ಟು ಮಕ್ಕಳು ಎಷ್ಟು ಎತ್ತರಕ್ಕೆ ಬೆಳೆಯಬೇಕಿತ್ತೋ ಅಷ್ಟು ಎತ್ತರಕ್ಕೆ ಬೆಳೆದಿಲ್ಲ.. 140 ಕೋಟಿ ಜನಸಂಖ್ಯೆಯ ಭಾರತದಲ್ಲಿನ ಹಸಿವಿನ ಪರಿಸ್ಥಿತಿಯು ಅತ್ಯಂತ ಕಳವಳಕಾರಿಯಾಗಿದೆ. ಆಹಾರ ಭದ್ರತಾ ಕಾಯ್ದೆ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಪೋಷಣ್ ಮಿಶನ್, ಅನೀಮಿಯಾ ಮುಕ್ತ ಮಿಶನ್ ಮುಂತಾದ ಯೋಜನೆಗಳಿಗೆ ಹಸಿವೆಯನ್ನು ನೀಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗುತ್ತಿದೆ. ಅಪೌಷ್ಟಿಕತೆ ಈ ದೇಶವನ್ನು ಇನ್ನಷ್ಟು ರೋಗಪೀಡಿತವಾಗಿಸುತ್ತಿದೆ. ಕೊರೋನದ ಗದ್ದಲದಲ್ಲಿ ಭಾರತವನ್ನು ಕಾಡುವ ಕ್ಷಯ, ಎಚ್‌ಐವಿಯಂತಹ ಮಾರಕ ರೋಗಗಳು ಮರೆಗೆ ಸರಿದಿದ್ದವು. ಅಂದರೆ, ಅದು ಇಳಿಮುಖವಾಗಿತ್ತು ಎಂದು ಅರ್ಥವಲ್ಲ. ಕೊರೋನದ ಹಿಂದಿದ್ದ ಅಂತರ್‌ರಾಷ್ಟ್ರೀಯ ಮಟ್ಟದ ಕಾರ್ಪೊರೇಟ್ ಶಕ್ತಿಗಳು ಲಸಿಕೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯನ್ನು ತನ್ನದಾಗಿಸಿಕೊಂಡವು. ಕೊರೋನದ ಜಾತ್ರೆಯಲ್ಲಿ ಉಂಡವನೇ ಜಾಣ ಎನ್ನುವಂತೆ ಕಾರ್ಪೊರೇಟ್ ಸಂಸ್ಥೆಗಳು ಸರಕಾರದ ಮೇಲೆ ಒತ್ತಡಗಳನ್ನು ಹಾಕಿ ತಮ್ಮ ತಮ್ಮ ಲಸಿಕೆಗಳನ್ನು ಮಾರುಕಟ್ಟೆಗೆ ಇಳಿಸಿದವು. ಕ್ಷಯ, ಎಚ್‌ಐವಿಯಂತಹ ರೋಗಗಳಿಗೆ ಮೀಸಲಿಟ್ಟ ಹಣವನ್ನು ಕೊರೋನ ಲಸಿಕೆಗಳಿಗೆ ವೆಚ್ಚ ಮಾಡಲಾಯಿತು. ಇಂದು ಕ್ಷಯ, ಎಚ್‌ಐವಿ ರೋಗಿಗಳು ಅಗತ್ಯ ಔಷಧಗಳು ಸಿಗದೆ, ಬೀದಿಯಲ್ಲಿ ನಿಂತು ಪ್ರತಿಭಟಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ, ಬ್ಲ್ಯಾಕ್‌ಮೇಲ್ ರೂಪದಲ್ಲಿ ಲಸಿಕೆಗಳನ್ನು ಜನಸಾಮಾನ್ಯರ ಮೇಲೆ ಹೇರಿದ ಸರಕಾರ, ಅದರ ಅಡ್ಡ ಪರಿಣಾಮಗಳ ಹೊಣೆಯಿಂದ ಜಾರಿಕೊಳ್ಳುತ್ತಿದೆ.
ದೇಶವನ್ನು ಕಾಡುತ್ತಿರುವ ಅಪೌಷ್ಟಿಕತೆಯ ಬಗ್ಗೆ ಸರಕಾರ ಎಚ್ಚೆತ್ತುಕೊಳ್ಳದೇ ಇದ್ದರೆ, ಮುಂದಿನ ದಿನಗಳಲ್ಲಿ ಈ ಅಪೌಷ್ಟಿಕತೆ ಬೇರೆ ಬೇರೆ ರೋಗಗಳ ರೂಪದಲ್ಲಿ ಜನಸಾಮಾನ್ಯರನ್ನು ಬಲಿ ಹಾಕಲಿದೆ. ಕ್ಷಯ ರೋಗವನ್ನು ನಿಯಂತ್ರಿಸಲು ಸರಕಾರ ಬಹುದೊಡ್ಡ ಆಂದೋಲನವನ್ನೇ ಮಾಡಿತ್ತು. ಕೋಟ್ಯಂತರ ರೂಪಾಯಿಯನ್ನು ಅದಕ್ಕಾಗಿ ವೆಚ್ಚ ಮಾಡಿತ್ತು. ಆದರೆ ಇದೀಗ ಅಪೌಷ್ಟಿಕತೆ ಮಲಗಿದ್ದ ಕ್ಷಯರೋಗವನ್ನು ಮತ್ತೆ ಎಬ್ಬಿಸುತ್ತಿದೆ. ಕ್ಷಯ ರೋಗ ಒಮ್ಮೆ ಎದ್ದು ಕೂತರೆ ಅದನ್ನು ಮತ್ತೆ ಮಲಗಿಸುವುದು ಕಷ್ಟಕರ. ಆದುದರಿಂದ, ಜನರು ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ಅನಾರೋಗ್ಯಗಳ ಬಗ್ಗೆ ಜಾಗೃತವಾಗಬೇಕಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಬೀದಿ ಕಾಳಗವನ್ನು ನಿಲ್ಲಿಸಿ, ದೈನಂದಿನ ಮೂಲಭೂತ ಅಗತ್ಯಗಳಿಗಾಗಿ ಸರಕಾರದ ವಿರುದ್ಧ ಬೀದಿಗಿಳಿಯುವ ವಾತಾವರಣ ಸೃಷ್ಟಿಯಾಗಬೇಕು. ಒಂದೆಡೆ ಆಹಾರವನ್ನು ಕಿತ್ತುಕೊಳ್ಳುತ್ತಿರುವ ಸರಕಾರ, ಮಗದೊಂದೆಡೆ ಬಡವರ ಸಬ್ಸಿಡಿಗಳನ್ನೂ ಒಂದೊಂದಾಗಿ ಕಿತ್ತುಕೊಳ್ಳುತ್ತಿದೆ. ಸರಕಾರಿ ಆಸ್ಪತ್ರೆಗಳು ಹಂತ ಹಂತವಾಗಿ ಖಾಸಗಿಯವರ ಕೈವಶವಾಗುತ್ತಿವೆ. ಸರಕಾರಿ ಶಾಲೆಗಳು ಕೂಡ ಮುಚ್ಚಲ್ಪಡುತ್ತಿವೆ. ಸರಕಾರಿ ಶಾಲೆಗಳ ಮೂಲಭೂತ ಅಗತ್ಯಗಳನ್ನು ಈಡೇರಿಸುವ ಆರ್ಥಿಕ ಶಕ್ತಿ ಸರಕಾರದ ಬಳಿಯಿಲ್ಲ. ತನ್ನ ಈ ಎಲ್ಲ ವೈಫಲ್ಯಗಳನ್ನು ಮುಚ್ಚಿ ಹಾಕುವುದಕ್ಕಾಗಿ, ಸಾವರ್ಕರ್, ಮತಾಂತರ, ಹಲಾಲ್-ಜಟ್ಕಾ ಮೊದಲಾದ ವಿವಾದಗಳನ್ನು ಬಡಿದೆಬ್ಬಿಸುತ್ತಿದೆ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಂಡಾಗಷ್ಟೇ ದೇಶ ಮುಂದಕ್ಕೆ ಚಲಿಸುವುದಕ್ಕೆ ಸಾಧ್ಯ. ಇಲ್ಲವಾದರೆ, ಸ್ವಾತಂತ್ರ್ಯಪೂರ್ವದ ಸ್ಥಿತಿಗೆ ಭಾರತವನ್ನು ನಮ್ಮನ್ನಾಳುವವರು ತಂದು ನಿಲ್ಲಿಸಲಿದ್ದಾರೆ.