10 ದಿನದೊಳಗೆ ಮಂಗಳೂರು ವಿವಿ ಫಲಿತಾಂಶ: ಸಚಿವ ಅಶ್ವತ್ಥನಾರಾಯಣ
ಸದನದಲ್ಲಿ ಯು.ಟಿ ಖಾದರ್ ಪ್ರಶ್ನೆಗೆ ಸಚಿವರ ಉತ್ತರ
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.22: ‘ಮಂಗಳೂರು ವಿಶ್ವ ವಿದ್ಯಾಲಯದ ಪದವಿ ಪ್ರಥಮ ಸೆಮಿಸ್ಟರ್ ಫಲಿತಾಂಶವನ್ನು ಇನ್ನೂ 10 ದಿನಗಳ ಒಳಗಾಗಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಮಂಗಳೂರು ವಿವಿ ಫಲಿತಾಂಶ ಪ್ರಕಟಲು ವಿಳಂಬವಾಗಿದ್ದು, ಶೀಘ್ರದಲ್ಲೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಯು.ಟಿ.ಖಾದರ್, ಮಂಗಳೂರು ವಿವಿ ಫಲಿತಾಂಶ ಪ್ರಕಟ ವಿಳಂಬವಾಗಿದೆ.ಇದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಅಂಕಪಟ್ಟಿ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಸಾಧ್ಯವಾಗಿಲ್ಲ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ.ಫಲಿತಾಂಶ ಪ್ರಕಟಿಸಲು ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಂಗಳೂರು ವಿವಿಯು ನ್ಯಾಕ್ ‘ಎ’ ಗ್ರೇಡ್‍ನಲ್ಲಿತ್ತು. ಇದೀಗ ‘ಬಿ’ ಗ್ರೇಡ್‍ಗೆ ಕುಸಿದಿದೆ.ಹೀಗಿ ಫಲಿತಾಂಶ ವಿಳಂಬದಿಂದ ಮುಂದಿನ ದಿನಗಳಲ್ಲಿ ‘ಸಿ’ ಗ್ರೇಡ್‍ಗೆ ಕುಸಿಯಲಿದೆ ಎಂದು ಎಚ್ಚರಿಸಿದ ಯು.ಟಿ.ಖಾದರ್, ವಿವಿಗಳ ಗುಣಮಟ್ಟ ಉತ್ತಮಪಡಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.