ಪರಿಷತ್ತಿನ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಕಣಕ್ಕೆ
ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.22: ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಚುನಾವಣೆ ಪೂರ್ಣಗೊಂಡ ಬೆನ್ನಲ್ಲೇ ಇದೀಗ ಉಪಸಭಾಪತಿ ಸ್ಥಾನದ ಚುನಾವಣಾ ಪ್ರಕ್ರಿಯೆ ಶುರುವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.
ಉಪಸಭಾಪತಿ ಸ್ಥಾನದ ಅಭ್ಯರ್ಥಿಯಾಗಿ ಮೇಲ್ಮನೆಯ ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್, ಪ್ರತಿಪಕ್ಷ ಕಾಂಗ್ರೆಸ್ಸಿನ ಸದಸ್ಯ ಅರವಿಂದ ಕುಮಾರ್ ಅರಳಿ ಅವರು ನಾಮಪತ್ರ ಪ್ರಸ್ತಾವವನ್ನು ಗುರುವಾರ ಬೆಳಗಾವಿಯ ಸುವರ್ಣ ವಿಧಾನಸೌದಲ್ಲಿ ವಿಧಾನ ಪರಿಷತ್ತಿನ ಕಾರ್ಯದರ್ಶಿಗಳಿಗೆ ಸಲ್ಲಿಸಿದರು.
ಪ್ರಾಣೇಶ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಮಾಧುಸ್ವಾಮಿ, ಗೋವಿಂದ ಕಾರಜೋಳ, ಬಿಜೆಪಿ ನಾಯಕ ಸಿ.ಟಿ.ರವಿ, ಮೇಲ್ಮನೆ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ರವಿಕುಮಾರ್, ಅ.ದೇವೇಗೌಡ, ಸಂಕನೂರ ಸೇರಿದಂತೆ ಹಲವು ನಾಯಕರು ಪ್ರಮುಖರಿದ್ದರು. ಕಾಂಗ್ರೆಸ್ಸಿನ ಅರವಿಂದ ಅವರು ನಾಮಪತ್ರ ಸಲ್ಲಿಸುವಾಗ ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಸದಸ್ಯರಾದ ಸಲೀಂ ಅಹ್ಮದ್, ಪಿ.ಆರ್. ರಮೇಶ್ ಸೇರಿದಂತೆ ಪ್ರಮುಖರಿದ್ದರು.
ಶುಕ್ರವಾರ (ಡಿ.23) ಪರಿಷತ್ತಿನಲ್ಲಿ ಚುನಾವಣೆ ನಡೆಯಲಿದ್ದು, ಆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಏರ್ಪಡುವ ಸಂಭವವಿದೆ. ಇನ್ನೂ, ಆಡಳಿತರೂಢ ಬಿಜೆಪಿ ಬಹುಮತ ಹೊಂದಿದ ಕಾರಣ, ಪ್ರಾಣೇಶ್ ಅವರ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.
ಬಿಜೆಪಿ ಗೆಲುವು ಖಚಿತ?:
ಆಡಳಿತರೂಢ ಬಿಜೆಪಿ 39, ಕಾಂಗ್ರೆಸ್ 26 ಹಾಗೂ ಜೆಡಿಎಸ್ 8 ಸದಸ್ಯರ ಬಲವನ್ನು ಹೊಂದಿದೆ. ಓರ್ವ ಪಕ್ಷೇತರ ಸದಸ್ಯರಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಒಂದುಗೂಡಿದರೂ, ಬಿಜೆಪಿ ಗೆಲುವಿನ ಹಾದಿ ಅಡ್ಡಿಯಾಗುವ ಸಾಧ್ಯತೆ ಇಲ್ಲ.
''ಉಪಸಭಾಪತಿ ಸಂಪ್ರದಾಯ ಬಿಜೆಪಿ ಮುರಿದಿದೆ..!''
ಆಡಳಿತ ಪಕ್ಷಕ್ಕೆ ಸಭಾಪತಿ ಹಾಗೂ ವಿರೋಧ ಪಕ್ಷಕ್ಕೆ ಉಪ ಸಭಾಪತಿ ಎಂಬ ಸಂಪ್ರದಾಯ ಮೊದಲಿನಿಂದಲೂ ಇತ್ತು. ಆದರೆ, ಬಿಜೆಪಿ ಸಂಪ್ರದಾಯ ಮುರಿದಿದೆ. ಆದ್ದರಿಂದ ಕಾಂಗ್ರೆಸ್‍ನಿಂದ ಅರವಿಂದ ಅರಳಿಅವರನ್ನು ಉಪ ಸಭಾಪತಿ ಅಭ್ಯರ್ಥಿಯಾಗಿ ಘೋಷಿಸಿ, ನಾಮಪತ್ರ ಸಲ್ಲಿಸಿದ್ದೇವೆ. ಬಿಜೆಪಿಯ ಪ್ರಾಣೇಶ್ ಆರು ಮತಗಳಿಂದ ಗೆಲುವು ಸಾಧಿಸಿದ್ದು, ಅವರ ಸದಸ್ಯತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಯಾವ ಸಮಯದಲ್ಲಿ ಅವರ ಸ್ಥಾನ ಹೋಗಬಹುದು. ಇನ್ನೂ, ಬಿಜೆಪಿ ಮಹಿಳೆಯರಿಗೆ ಉಪಸಭಾಪತಿ ನೀಡಿದ್ದರೆ, ನಾವು ನಾಮಪತ್ರ ಸಲ್ಲಿಸುತ್ತಿರಲಿಲ್ಲ ಎಂದು ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದರು.
[ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರು ನಾಮಪತ್ರ ಸಲ್ಲಿಸುತ್ತಿರುವುದು]