ಫಲಾನುಭವಿಗಳಿಗೆ DBT ಮೂಲಕ ಹಣ ತಲುಪುತ್ತಿಲ್ಲ: ಕೆಪಿಸಿಸಿ ವಕ್ತಾರ ರಮೇಶ್ ಬಾಬು
ಬೆಂಗಳೂರು, ಡಿ.22: ಮೂರು ವರ್ಷಗಳಿಂದ ನೇರ ಹಣ ವರ್ಗಾವಣೆ(ಡಿಬಿಟಿ) ಮೂಲಕ ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ. ಇದನ್ನು ಲೆಕ್ಕಪರಿಶೋಧಕರ ಇಲಾಖೆಯು ಆಡಿಟ್ ವರದಿಯಲ್ಲಿ ಬಹಿರಂಗ ಪಡಿಸಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ತಿಳಿಸಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೋದಿ ಅವರ ಸರಕಾರ ಹಣ ದುರ್ಬಳಕೆ ಆಗಬಾರದು ಎಂದು ಡಿಬಿಟಿಯನ್ನು ಜಾರಿ ಮಾಡಿದ್ದು, ಹಂತಹಂತವಾಗಿ ಎಲ್ಲ ಇಲಾಖೆಯಲ್ಲೂ ಇದನ್ನು ಜಾರಿಗೆ ತರಲಾಗುವುದು ಎಂದು ಹೇಳಲಾಗಿತ್ತು. ಆದರೆ, ರಾಜ್ಯದಲ್ಲಿ ಇದನ್ನು ಜಾರಿ ಮಾಡಿಲ್ಲ. ಫಲಾನುಭವಿಗಳಿಗೆ ಹಣ ವರ್ಗಾವಣೆ ವಿಚಾರದಲ್ಲಿ ಅಕ್ರಮ ನಡೆದಿದ್ದು, ಕೋಟ್ಯಂತರ ರೂಪಾಯಿ ಹಣ ದುರ್ಬಳಕೆಯಾಗಿದೆ. ದಲಿತರು, ರೈತರು, ಅಲ್ಪಸಂಖ್ಯಾತರಿಗೆ, ಕಾರ್ಮಿಕರಿಗೆ ಆಯಾ ಇಲಾಖೆ ಮೂಲಕ ಸಿಗಬೇಕಾದ ಸಹಾಯಧನ ಸಿಗುತ್ತಿಲ್ಲ ಎಂದರು.
ಪಶುಸಂಗೋಪನಾ ಇಲಾಖೆಯಲ್ಲಿ ಹಾಲಿಗೆ ನೀಡಲಾಗುವ ಪ್ರೋತ್ಸಾಹ ಧನ ಸಾಕಷ್ಟು ರೈತರಿಗೆ ತಲುಪಿಲ್ಲ. ಸಾಮಾನ್ಯವಾಗಿ ಒಂದು ಹಸುವಿನಿಂದ ನಿತ್ಯ ಗರಿಷ್ಠ 40 ಲೀ. ಹಾಲು ನೀಡುತ್ತದೆ. ಆದರೆ ವರದಿಯಲ್ಲಿ ಒಂದು ಹಸು 400 ಲೀ. ಹಾಲು ನೀಡಿದೆ ಎಂದು ಬಹಿರಂಗವಾಗಿದೆ. ಕೆಎಂಎಫ್‍ನಲ್ಲಿ ರೈತರಿಗೆ ಹೋಗಬೇಕಾದ ಸಹಾಯಧನವನ್ನು ಈ ರೀತಿ ತಪ್ಪು ಲೆಕ್ಕದ ಮೂಲಕ ದುರುಪಯೋಗಪಡಿಸಿಕೊಳ್ಳಲಾಗಿದೆ. ಇನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದಲ್ಲಿ 92 ಕೋಟಿ ರೂ.ನಷ್ಟು ಹಣ ರೈತರಿಗೆ ಪಾವತಿಯಾಗಿಲ್ಲ ಎಂದರು.
ರೈತಸಿರಿ ಯೋಜನೆಯಲ್ಲಿ ಸಿರಿಧಾನ್ಯ ಬೆಳೆಯಲು ಪ್ರತಿ ಹೆಕ್ಟೇರ್ ಗೆ ವಾರ್ಷಿಕ 10 ಸಾವಿರ ಪ್ರೋತ್ಸಾಹಧನ ನೀಡಲಾಗುವುದು. ಈ ಹಣ ಡಿಬಿಟಿ ಮೂಲಕ ರೈತರಿಗೆ ತಲುಪಬೇಕಿತ್ತು. ಆದರೆ 5516 ಫಲಾನುಭವಿಗಳಿಗೆ ಹಣ ಪಾವತಿ ಮಾಡಿಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಲ್ಲಿ ಎಣ್ಣೆ ಕಾಳು, ಬೀಜ ಉತ್ಪಾದನೆ ಪ್ರೋತ್ಸಾಹಧನ ನೀಡುವಲ್ಲಿ ತಪ್ಪು ಅಂಕಿ ಅಂಶ ನೀಡಿದ್ದಾರೆ ಎಂದರು.
ಈ ಮಧ್ಯೆ ಮುಖ್ಯಮಂತ್ರಿಗಳು ನೇಕಾರರಿಗೆ ಡಿಬಿಟಿ ಮೂಲಕ ಹಣ ನೀಡುತ್ತೇವೆ ಎಂದು ಹೇಳುತ್ತಾರೆ. ಚುನಾವಣೆ ಸಮೀಪಿಸಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಇದರಲ್ಲೂ ಶೇ.40 ಕಮಿಷನ್ ಬೇಕಾದರೆ, ಹೇಗಿದ್ದರೂ ನಾವು ಪೇಸಿಎಂ ಸ್ಕಾನ್ ಕೋಡ್ ಮಾಡಿದ್ದೇವೆ. ನೀವು ನಿಮ್ಮ ಖಾತೆ ವಿವರ ನೀಡಿದರೆ ನಿಮ್ಮ ಕಮಿಷನ್ ನೀಡಿಯಾದರೂ ಫಲಾನುಭವಿಗಳು ಈ ಪ್ರೋತ್ಸಾಹಧನವನ್ನು ಪಡೆಯುತ್ತಾರೆ ಎಂದರು.