ಬಳಕೆಯಾಗದ ಸರಕಾರಿ ವಾಹನಗಳು ಗುಜರಿಗೆ: ಸಚಿವ ಮಾಧುಸ್ವಾಮಿ
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.23: ರಾಜ್ಯದಲ್ಲಿನ ಸರಕಾರಿ ಕಚೇರಿಗಳಲ್ಲಿ ಹಾಗೂ ಸಾರಿಗೆ ಇಲಾಖೆಗಳಲ್ಲಿ ಬಳಕೆಯಾಗದ ಹಳೆಯ ವಾಹನಗಳನ್ನು ಪರಿಶೀಲಿಸಿ, ಗುಜರಿ ಹಾಕುವ ಸಂಬಂಧ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಬಿ.ಹರ್ಷವರ್ಧನ್ ಗಮನ ಸೆಳೆದ ಸೂಚನೆಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಪರವಾಗಿ ಉತ್ತರಿಸಿದ ಅವರು, ಅಬಕಾರಿ ಇಲಾಖೆಯಲ್ಲಿ ಈಗಾಗಲೆ ಬಳಕೆಯಾಗದ ವಾಹನಗಳನ್ನು ಹರಾಜು ಹಾಗೂ ಗುಜರಿಗೆ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನುಳಿದ ಇಲಾಖೆಗಳಲ್ಲಿಯೂ ಇದೇ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಷಯ ಪ್ರಸ್ತಾಪಿಸಿದ ಹರ್ಷವರ್ಧನ್, ಸರಕಾರಿ ಕಚೇರಿಗಳ ಆವರಣದಲ್ಲಿ 15-20 ವರ್ಷಗಳಿಂದ ಒಂದೆ ಕಡೆ ವಾಹನಗಳು ನಿಂತಿರುತ್ತವೆ. ಇದರಿಂದಾಗಿ, ಕಚೇರಿಗಳಿಗೆ ಬರುವಂತಹ ಸಾರ್ವಜನಿಕರ ವಾಹನಗಳನ್ನು ನಿಲುಗಡೆ ಮಾಡಲು ಸ್ಥಳದ ಆಭಾವ ಉಂಟಾಗುತ್ತಿದೆ.ಇಂತಹ ಬಳಕೆಯಾಗದ ವಾಹನಗಳನ್ನು ಗುಜರಿ ಹಾಕುವುದರಿಂದ ಸರಕಾರದ ಬೊಕ್ಕಸಕ್ಕೆ ಆದಾಯವು ಬರುತ್ತದೆ ಎಂದರು.
ಇದಕ್ಕೆ ದನಿಗೂಡಿಸಿದ ಸ್ಪೀಕರ್ ಕಾಗೇರಿ, ಸರಕಾರಿ ಕಚೇರಿಗಳ ಆವರಣದಲ್ಲಿ ಬಳಕೆಯಾಗದ ವಾಹನಗಳು ತುಕ್ಕು ಹಿಡಿಯುತ್ತಿವೆ. ಅಂತಹ ವಾಹನಗಳನ್ನು ವಿಲೇವಾರಿ ಮಾಡಲು ಮೊದಲು ಆರ್‍ಟಿಒ ಅಧಿಕಾರಿಗಳು ಮೌಲ್ಯಮಾಪನ ಮಾಡಬೇಕು, ಆನಂತರ ಅದನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಪರಿಶೀಲಿಸಿ ಆದೇಶ ನೀಡಬೇಕು.ಆರ್‍ಟಿಒ ಅಧಿಕಾರಿಗಳು ವಾಹನಗಳನ್ನು ಹರಾಜು ಹಾಕಿದರೆ ಅದನ್ನು ಯಾರು ತೆಗೆದುಕೊಳ್ಳುತ್ತಿಲ್ಲ. ಪುರಾತನ ಯುದ್ಧ ಸ್ಮಾರಕಗಳ ರೀತಿಯಲ್ಲಿ ಆ ವಾಹನಗಳು ಸರಕಾರಿ ಕಚೇರಿಗಳ ಆವರಣದಲ್ಲಿ ಸ್ಮಾರಕಗಳಂತೆ ಉಳಿದುಕೊಳ್ಳುತ್ತಿವೆ ಎಂದರು.
ಈ ವೇಳೆ ಮಾತು ಮುಂದುವರಿಸಿದ ಹರ್ಷವರ್ಧನ್, ಶಾಸಕರ ಭವನದ ಆವರಣದಲ್ಲಿರುವ ಬಳಕೆಯಾಗದ ವಾಹನಗಳು ತಕ್ಷಣವೇ ವಿಲೇವಾರಿಯಾಗುತ್ತವೆ. ಆದರೆ, ಗ್ರಾಮೀಣ ಭಾಗದಲ್ಲಿ, ತಾಲೂಕು ಮಟ್ಟದಲ್ಲಿನ ಕಚೇರಿಗಳ ಆವರಣದಲ್ಲಿನ ವಾಹನಗಳು ವಿಲೇವಾರಿಯಾಗುವುದಿಲ್ಲ ಎಂದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ವಿಪಕ್ಷ ಉಪ ನಾಯಕ ಯು.ಟಿ.ಖಾದರ್, ಸರಕಾರಿ ಕಚೇರಿಗಳ ಜೊತೆಗೆ ಪೊಲೀಸ್ ಠಾಣೆಗಳ ಆವರಣದಲ್ಲಿಯೂ ವಾಹನಗಳು ಸಾಲು ಸಾಲು ನಿಂತಿರುತ್ತವೆ. ಆ ವಾಹನಗಳನ್ನು ತಂದು ರಸ್ತೆ ಬದಿಯಲ್ಲಿ ಶಾಶ್ವತವಾಗಿ ನಿಲುಗಡೆ ಮಾಡುತ್ತಾರೆ.ಇದರಿಂದಾಗಿ, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.ಆದುದರಿಂದ, ಇಂತಹ ವಾಹನಗಳನ್ನು ನಿಲ್ಲಿಸಲು ಎರಡು ಎಕರೆ ಜಾಗ ಗುರುತಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಪೊಲೀಸ್ ಠಾಣೆಗಳ ಎದುರು ನಿಲ್ಲಿಸಿರುವ ವಾಹನಗಳಿಂದಲೆ ಸ್ಟೀರಿಯೋ ಸಿಸ್ಟಮ್ ಸೇರಿದಂತೆ ಇನ್ನಿತರ ಭಾಗಗಳನ್ನು ಕಳುವು ಮಾಡಲಾಗುತ್ತಿದೆ. ಹೊರವಲಯದಲ್ಲಿ ಹೋಗಿ ನಿಲ್ಲಿಸಿದರೆ ವಾಹನಗಳ ಎಂಜಿನ್ ಕೂಡ ಬಿಡದೆ ಕೊಂಡೊಯ್ಯುತ್ತಾರೆ ಎಂದರು. ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಕೆ.ಜೆ.ಜಾರ್ಜ್, ಬೆಂಗಳೂರು ಹೊರವಲಯದಲ್ಲಿ 100 ಎಕರೆ ಜಾಗವನ್ನು ಗುರುತಿಸಿ, ಸ್ಕ್ರಾಪ್ ಯಾರ್ಡ್ ನಿರ್ಮಾಣ ಮಾಡಿ, ಸರಕಾರಿ ವಾಹನಗಳನ್ನು ಹರಾಜು ಹಾಕುವ ಬದಲು ಸ್ಕ್ರಾಪ್ ಮಾಡಿದರೆ ಸರಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ ಎಂದರು.