ಕೊರೋನ ಆತಂಕ | ಡಿ.27ರಂದು ರಾಜ್ಯದ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್: ಸಚಿವ ಡಾ.ಕೆ. ಸುಧಾಕರ್
ಬೆಂಗಳೂರು, ಡಿ.23: ಆಕ್ಸಿಜನ್ ಪ್ಲಾಂಟ್, ಆಕ್ಸಿಜನ್ ಜನರೇಟರ್ ಸೇರಿದಂತೆ ಕೋವಿಡ್ ಉಪಕರಣಗಳು ಸರಿಯಾಗಿದೆಯೇ ಅನ್ನುವುದನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯಂತೆ ಡಿ.27ರಂದು ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ವಿಶ್ವದಲ್ಲಿ 5ಲಕ್ಷ ಕೊರೋನ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಪೈಕಿ ಚೀನಾ, ಜಪಾನ್, ತೈವಾನ್, ಅಮೆರಿಕಾ, ಯುರೋಪ್, ನ್ಯೂಜಿಲೆಂಡ್‍ನಲ್ಲಿ ಶೇ.80ರಷ್ಟು ಹೊಸ ಕೇಸ್‍ಗಳು ಕಾಣಿಸಿಕೊಳ್ಳುತ್ತಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.03ರಷ್ಟು ಇದ್ದು, ಎರಡು ಡೋಸ್‍ಗಳ ಲಸಿಕಾಕರಣ ಆಗಿರುವುದರಿಂದ ಸೋಂಕು ಪ್ರಕರಣ ಕಡಿಮೆ ಇದೆ ಎಂದರು.
ಅಮೆರಿಕಾದ ಸಂಸ್ಥೆಯೊಂದು ಮಾಡಿರುವ ವರದಿ ಪ್ರಕಾರ ಮುಂದಿನ ವರ್ಷದಲ್ಲಿ ಚೀನಾ ಒಂದರಲ್ಲೇ 10 ಲಕ್ಷ ಜನರು ಕೊರೋನದಿಂದ ಸಾವನ್ನಪ್ಪುವ ಸಾಧ್ಯತೆ ಇದೆ. ಚೀನಾದ ಲಸಿಕೆ, ಲಸಿಕಾಕರಣದ ಪ್ರಕ್ರಿಯೆ, ಜನರ ಅಜಾಗರೂಕತೆ, ವಯೋವೃದ್ಧರ ಜನಸಂಖ್ಯೆ ಮತ್ತು ಅವರಿಗೆ ಇರುವ ಆರೋಗ್ಯ ಸಮಸ್ಯೆ ಇದಕ್ಕೆ ಕಾರಣವಾಗಬಹುದು ಎಂದು ಹೇಳಿದರು.
ರಾಜ್ಯದಲ್ಲಿ ಪಾಸಿಟಿವ್ ಕೇಸ್‍ಗಳು ಕಂಡು ಬಂದರೆ, ಕಡ್ಡಾಯವಾಗಿ ಜಿನೋಮಿಕ್ ಸೀಕ್ವೆನ್ಸ್‍ಗೆ ಕಳುಹಿಸಲಾಗುವುದು. ಹಿರಿಯರಿಗೆ ಪ್ರಾಶಸ್ತ್ಯ ನೀಡಿ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಏರ್ಪೋರ್ಟ್‍ನಲ್ಲಿ ಶೇ.2ರಷ್ಟು ಪ್ರಯಾಣಿಕರಿಗೆ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ. ಹೊಸ ವರ್ಷ ಸೇರಿದಂತೆ ಹೆಚ್ಚು ಜನರು ಸೇರುವ ಸಮಾರಂಭಗಳ ಆಯೋಜನೆಯನ್ನು ಮುಂದೂಡುವುದು ಉತ್ತಮ ಎಂದು ಅವರು ಸಲಹೆ ನೀಡಿದರು.