ಮೈಸೂರು ವಿವಿ ಕುಲಪತಿ ನೇಮಕ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು, ಡಿ.23: ಮೈಸೂರು ವಿಶ್ವವಿದ್ಯಾಲಯದ ನೂತನ ಕುಲಪತಿ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ.ಎಚ್.ರಾಜಶೇಖರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಅಲ್ಲದೆ, ರಾಜ್ಯ ಸರಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ನಮ್ಮ ಕಕ್ಷಿದಾರರಾದ ಪ್ರೊ. ಎಚ್.ರಾಜಶೇಖರ್ ಅವರು ಪ್ರಸ್ತುತ ಪ್ರಭಾರಿ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜತೆಗೆ, ಕುಲಪತಿಯಾಗುವುದಕ್ಕೆ ಅಗತ್ಯವಿರುವ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ. ಆದರೆ, ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕಕ್ಕೆ ರಚನೆಯಾಗಿರುವ ಶೋಧನಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರೂ, ಅವರನ್ನು ಹೊರತು ಪಡಿಸಿ ಇತರೆ ಮೂವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ವಿರುದ್ಧ ಯಾವುದೇ ಪ್ರಕರಣ ವಿಚಾರಣೆಗೆ ಸೂಚನೆ ನೀಡಿಲ್ಲ. ಯಾವುದೇ ಪ್ರಕರಣ ಬಾಕಿಯಿಲ್ಲ. ಹೀಗಾಗಿ ನೇಮಕ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ಕುಲಪತಿ ನೇಮಕ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ.