ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಗೆ ಅನುಮೋದನೆ
ಹೊಸದಿಲ್ಲಿ, ಡಿ. 23: ಲಸಿಕೀಕರಣ ಕಾರ್ಯಕ್ರಮದಲ್ಲಿ ಮೂಗಿನ ಮೂಲಕ ನೀಡುವ ಕೋವಿಡ್(Covid) ಲಸಿಕೆಯನ್ನು ವಯಸ್ಕರಿಗೆ ಬೂಸ್ಟರ್ ಡೋಸ್(Booster dose) ಆಗಿ ಸೇರಿಸಲು ಕೇಂದ್ರ ಸರಕಾರ ಶುಕ್ರವಾರ ಅನುಮೋದನೆ ನೀಡಿದೆ. ಚೀನಾ ಹಾಗೂ ಇತರ ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಸೇರಿಸಲಾಗಿದೆ.
ಮೂಗಿನ ಮೂಲಕ ನೀಡುವ ಭಾರತ ತಯಾರಿಸಿದ ಎರಡು ಹನಿಗಳ ಇನ್ಕೋವ್ಯಾಕ್ ಲಸಿಕೆಯನ್ನು ಕೋವಿನ್ ವೇದಿಕೆಯಲ್ಲಿ ಶುಕ್ರವಾರ ಸಂಜೆ ಪರಿಚಯಿಸಲಾಗಿದೆ. ಭಾರತ್ ಬಯೋಟೆಕ್ ಉತ್ಪಾದಿಸಿದ ಈ ಲಸಿಕೆ ಈಗ ಖಾಸಗಿ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಂಡವರು ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯನ್ನು ವಿಜಾತಿಯ ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳಬಹುದು.
ವಿಜಾತಿಯ ಬೂಸ್ಟಿಂಗ್ನಲ್ಲಿ ವ್ಯಕ್ತಿಯೋರ್ವ ಪ್ರಾಥಮಿಕ ಡೋಸ್ಗೆ ಬಳಸಿದ ಲಸಿಕೆಗಿಂತ ಭಿನ್ನವಾದ ಲಸಿಕೆಯನ್ನು ಪಡೆದುಕೊಂಡಿರುತ್ತಾನೆ. ತುರ್ತು ಪರಿಸ್ಥಿತಿ ಸಂದರ್ಭ ನಿರ್ಬಂಧಿತ ಬಳಕೆಗೆ ಸೂಜಿ ರಹಿತ ಈ ಲಸಿಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ನವೆಂಬರ್ನಲ್ಲಿ ಅನುಮೋದನೆ ನೀಡಿತ್ತು.