ಬಲಿಷ್ಠರಿಗೆ ಮೀಸಲಾತಿ ಪರಿಶಿಷ್ಟರಿಗೆ ಉಪಸಮಿತಿ!?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಷಯ, ಪಂಚಮಸಾಲಿ ಲಿಂಗಾಯತರನ್ನು 2-ಎ ಪ್ರವರ್ಗಕ್ಕೆ ಸೇರಿಸುವ ವಿಷಯ ಹಾಗೂ ಒಕ್ಕಲಿಗರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಆಗ್ರಹ ಇತ್ಯಾದಿಗಳು ಈಗ ಹಾಲಿ ಕರ್ನಾಟಕದ ರಾಜಕೀಯ ಹವಾಮಾನದಲ್ಲಿ ಜಾತಿ ಮೀಸಲಾತಿಯ ವಿಷಯವನ್ನು ಮುನ್ನೆಲೆಗೆ ತಂದಿದೆ. ಇದರಲ್ಲಿ ಪರಿಶಿಷ್ಟ ಒಳಮೀಸಲಾತಿಗಾಗಿ ಕಳೆದ ಎರಡು ದಶಕಗಳಿಂದ ಹೋರಾಟ ನಡೆಯುತ್ತಿದ್ದು ಅದು ನ್ಯಾ. ಸದಾಶಿವ ಆಯೋಗ ವರದಿಯ ಅನುಷ್ಠಾನವನ್ನು ಒತ್ತಾಯಿಸುವ ಚಳವಳಿಯಾಗಿ ಹರಳುಗಟ್ಟಿದೆ. ಪಂಚಮಸಾಲಿ ಲಿಂಗಾಯತರನ್ನು ಶೇ.5ರಷ್ಟು ಮೀಸಲಾತಿ ದೊರಕುವ 3-ಬಿ ಪ್ರವರ್ಗದಿಂದ ಶೇ. 15ರಷ್ಟು ಮೀಸಲಾತಿ ನಿಗದಿಯಾಗಿರುವ 2-ಎ ಪ್ರವರ್ಗಕ್ಕೆ ಸೇರಿಸಬೇಕೆಂಬ ಚಳವಳಿ ಕಳೆದ ಎರಡು ಮೂರು ವರ್ಷಗಳಿಂದ ಸದ್ದು ಮಾಡುತ್ತಿದೆ. ಈ ಬಗ್ಗೆ ಮೊನ್ನೆ ಬೆಳಗಾವಿಯಲ್ಲಿ ದೊಡ್ಡ ರ್ಯಾಲಿ ನಡೆದಿದ್ದು ಅವರದೇ ಪಕ್ಷದ ಶಾಸಕರ ಪ್ರಕಾರ ಇದೇ ಡಿಸೆಂಬರ್ 29ರಂದು ಆ ಆಗ್ರಹವನ್ನು ಸರಕಾರ ಒಪ್ಪಿಕೊಳ್ಳಲಿದೆ!
ಇದರ ಜೊತೆಗೆ ಒಕ್ಕಲಿಗರ ಮೀಸಲಾತಿಯನ್ನು ಶೇ.4ರಿಂದ ಶೇ.12ಕ್ಕೆ ಏರಿಸಬೇಕೆಂಬ ಚಳವಳಿಯು ಒಕ್ಕಲಿಗ ಸ್ವಾಮೀಜಿ ನೇತೃತ್ವದಲ್ಲಿ ರೂಪುಗೊಳ್ಳುತ್ತಿದೆ. ಇದಲ್ಲದೆ ಕುರುಬರನ್ನು ಎಸ್‌ಟಿ ವರ್ಗಕ್ಕೆ ಸೇರಿಸಬೇಕೆಂಬ ಹಾಗೂ ಸವಿತಾ ಸಮಾಜವನ್ನು ಪ್ರವರ್ಗ 1ಕ್ಕೆ ಸೇರಿಸಬೇಕೆಂಬ ಕೂಗುಗಳು ಸಹ ಅಷ್ಟೇ ಹಳೆಯದಾಗಿವೆ. ಕಿರಿದಾಗುತ್ತಿರುವ ಸಂಪನ್ಮೂಲದಲ್ಲಿ ಪ್ರಬಲರು ಮತ್ತು ದುರ್ಬಲರು ಹೆಚ್ಚೆಚ್ಚು ಪಾಲು ಕೇಳುತ್ತಿರುವಾಗ ಸರಕಾರವು ವೈಜ್ಞಾನಿಕವಾದ ಹಾಗೂ ಪ್ರಜಾತಾಂತ್ರಿಕ ಮಾರ್ಗವನ್ನು ಅನುಸರಿಸಬೇಕು. ಆದರೆ ಅಂಥ ಧೋರಣೆಯೇ ಇಲ್ಲದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಮುಂದುವರಿದ ಪಂಚಮಸಾಲಿ ಲಿಂಗಾಯತರನ್ನು ಅವರಿಗಿಂತ ಸಾಕಷ್ಟು ಹಿಂದುಳಿದಿರುವ ಜಾತಿಗಳ ವರ್ಗವಾದ 2-ಎ ಪ್ರವರ್ಗದಲ್ಲಿ ಸೇರಿಸುವುದು ಸಾಮಾಜಿಕ ಅನ್ಯಾಯ ಎಂಬ ಪರಿಜ್ಞಾನವನ್ನು ಹೊಂದಿರುವಂತೆ ಕಾಣುತ್ತಿಲ್ಲ.
ಇಂತಹ ಯಾವುದೇ ಮರುವರ್ಗೀಕರಣ ಮಾಡುವಾಗ ಜನಸಂಖ್ಯೆ, ಹಾಲಿ ಇರುವ ಪ್ರಾತಿನಿಧ್ಯ, ಸಾಮಾಜಿಕ ಶೈಕ್ಷಣಿಕ ಹಿಂದುಳಿದಿರುವಿಕೆ ಎಷ್ಟು ಎಂಬ ಮಾನದಂಡಗಳನ್ನು ಅತ್ಯಗತ್ಯವಾಗಿ ಪರಿಗಣಿಸಬೇಕು. ಅದಿಲ್ಲದೆ ಒಕ್ಕಲಿಗರನ್ನಾಗಲೀ, ಲಿಂಗಾಯತರನ್ನಾಗಲೀ ಅತ್ಯಂತ ಹಿಂದುಳಿದ ಜಾತಿಗಳ ಜೊತೆ ಸೇರಿಸುವುದು ಅಧಿಕಾರ, ಸಂಪನ್ಮೂಲ ಹಾಗೂ ಸಂಖ್ಯಾತ್ಮಕವಾಗಿ ಬಲಿಷ್ಠವಾಗಿರುವ ಜಾತಿಗಳ ಚುನಾವಣಾ ತುಷ್ಟೀಕರಣವೇ ಆಗುತ್ತದೆ. ಅದರ ಬದಲಿಗೆ ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನಾದರೂ ಬಯಲುಗೊಳಿಸಿದರೆ ಯಾವ್ಯಾವ ಜಾತಿಗಳು ಎಷ್ಟೆಷ್ಟು ಪಾಲಿಗೆ ಅರ್ಹವಾಗುತ್ತವೆ ಎಂಬುದು ತಿಳಿದುಬರುತ್ತದೆ. ಆದರೆ ಬಲಿಷ್ಠ ಜಾತಿಗಳ ಪಕ್ಷಗಳು ಅದನ್ನು ಬಿಡುಗಡೆ ಮಾಡದೆ ಊಹಾಪೋಹಗಳ ಮೇಲೆ ತಮಗೆ ಬೇಕಾದಂತಹ ಜಾತಿ ರಾಜಕಾರಣ ಮಾಡಲು ಅನುವು ಮಾಡಿಕೊಂಡಿವೆ. ಇದರಲ್ಲಿ ಬಿಜೆಪಿಯದ್ದು ಒಂದು ಹೆಜ್ಜೆ ಮುಂದು. ಆ ಪಕ್ಷದ ಶಾಸಕ ಯತ್ನಾಳ್ ಅವರ ಪ್ರಕಾರ ಮುಸ್ಲಿಮರಿಗೆ 2-ಬಿ ಪ್ರವರ್ಗದಲ್ಲಿ ಕೊಟ್ಟಿರುವ ಶೇ.4 ಮೀಸಲಾತಿಯನ್ನು ರದ್ದು ಮಾಡಿ ಅದನ್ನು ಲಿಂಗಾಯತರಿಗೆ ಕೊಡಬೇಕು. ಹಾಗಾದಲ್ಲಿ, ಆ ಮೂಲಕ ಏಕಕಾಲದಲ್ಲಿ ಲಿಂಗಾಯತ ಸಮಾಜದ ಬೆಂಬಲವನ್ನು ಸದೃಢೀಕರಿಸಿಕೊಳ್ಳುವ ಹಾಗೂ ಸಮಾಜವನ್ನು ಕೋಮುವಾದಿ ಧ್ರುವೀಕರಣ ಮಾಡುವ ಗುರಿಗಳನ್ನು ಸಾಧಿಸಿಕೊಳ್ಳುತ್ತಿದೆ.
ಮತ್ತೊಂದು ಕಡೆ ಇರುವ ಮೀಸಲಾತಿಯಲ್ಲೇ ಪರಿಶಿಷ್ಟ ಜಾತಿಗಳ ಮರುವರ್ಗೀಕರಣ ಕೋರಿ, ಅದನ್ನು ಸಲಹೆ ಮಾಡಿದ್ದ ಸದಾಶಿವ ಆಯೋಗದ ವರದಿ ಕೋರಿ ಎರಡು ದಶಕಗಳಿಂದ ಸಮಾಜದ ಕಟ್ಟಕಡೆಯ ದುರ್ಬಲ ಸಮುದಾಯಗಳು ಹೋರಾಟ ನಡೆಸುತ್ತಿದ್ದರೂ, ಬಿಜೆಪಿ ಸರಕಾರ ಅದರ ಬಗ್ಗೆ ಅತ್ಯಂತ ಇಬ್ಬಗೆಯ ನೀತಿಗಳನ್ನು ಅನುಸರಿಸುತ್ತ ಬಂದಿದೆ. ಸೋರಿಕೆಯಾದ ಸದಾಶಿವ ವರದಿಯ ಮೇಲೆ ಊಹಾತ್ಮಕ ಅವೈಜ್ಞಾನಿಕತೆಯನ್ನು ಆರೋಪಿಸಲು ಅವಕಾಶ ಮಾಡಿಕೊಟ್ಟಿರುವ ಸರಕಾರಗಳು ಈಗಾಗಲೇ ದಲಿತ ಸಮುದಾಯಗಳ ನಡುವೆ ಕಂದಕಗಳನ್ನು ನಿರ್ಮಿಸಿದೆ. ಈಗಲೂ ಸದಾಶಿವ ವರದಿಯ ಒಳ ಮೀಸಲು ಹಂಚಿಕೆಯ ಬಗ್ಗೆ ಇರುವ ಈ ಅನುಮಾನಗಳನ್ನೇ ದಾಳವಾಗಿಸಿಕೊಂಡು ಒಳಮೀಸಲಾತಿಯ ನೀತಿಯನ್ನೇ ನಿರಾಕರಿಸುವ ಹುನ್ನಾರವನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪರಿಶಿಷ್ಟ ಮರುವರ್ಗೀಕರಣದ ಬಗ್ಗೆ ಹೋರಾಟವು ಕಾವು ಪಡೆಯುತ್ತಿರುವಾಗ ಬಿಜೆಪಿ ಸರಕಾರ ಸಂಪುಟ ಉಪಸಮಿತಿ ರಚಿಸಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಆ ಸಂಪುಟ ಉಪಸಮಿತಿ ಒಂದು ಸಭೆ ನಡೆಸಿದ ಶಾಸ್ತ್ರ ಮಾಡಿ ಯಾವ ತೀರ್ಮಾನವನ್ನು ತೆಗೆದುಕೊಳ್ಳದೆ ಮುಂದೂಡಿರುವುದು ಇದಕ್ಕೆ ಒಂದು ನಿದರ್ಶನ.
ಪರಿಶಿಷ್ಟ ಜಾತಿಯೊಳಗಿನ ಅಲೆಮಾರಿಗಳಿಗೆ ಇನ್ನಷ್ಟು ಹೆಚ್ಚಿನ ಅವಕಾಶ ಕಲ್ಪಿಸುವ ಒಳಮೀಸಲಾತಿ ಬದಲಿಗೆ ಚುನಾವಣೆಗೆ ಮುನ್ನ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳಿಗೆ ಅಭಿವೃದ್ಧಿ ನಿಗಮದ ಘೋಷಣೆ ಮತ್ತೊಂದು ಅಂತಹದೇ ತಂತ್ರ. ಏಕೆಂದರೆ ಇಂತಹ ಜಾತಿವಾರು ನಿಗಮಗಳು ಈಗಾಗಲೇ ಸರಕಾರದಲ್ಲಿ ಹಲವಾರು ಇದ್ದು ಯಾವುದೇ ಅನುದಾನವಿಲ್ಲದೆ, ಅದರ ಅಧ್ಯಕ್ಷರ ಭತ್ತೆಗಳೂ ಸಿಗದೇ ಸೊರಗುತ್ತಿವೆ.ಹೀಗೆ ಬಿಜೆಪಿ ಸರಕಾರ ಒಳಮೀಸಲಾತಿ ಜಾರಿಯ ಒತ್ತಡವನ್ನು ಒಳಗಿಂದ ಮತ್ತು ಹೊರಗಿಂದ ದುರ್ಬಲಗೊಳಿಸುವ ಎಲ್ಲ ಪ್ರಯತ್ನಗಳನ್ನು ಪ್ರಾರಂಭಿಸಿದೆ. ಒಳ ಮೀಸಲಾತಿ ಎಂಬುದು ಅಡಿಪಾಯ. ಸದಾಶಿವ ವರದಿ ಎಂಬುದು ಆ ನೀತಿಯ ಆಧಾರದಲ್ಲಿರುವ ಹಂಚಿಕೆ ಸೂತ್ರ. ಹಂಚಿಕೆ ಸೂತ್ರದ ಚರ್ಚೆ ಒಳ ಮೀಸಲಾತಿಯ ನೀತಿ ಸಾಂವಿಧಾನಿಕವಾದ ನಿಯಮವಾಗಿದ್ದರೆ ಮಾತ್ರ ಮಾನ್ಯ.
ಈಗ ಪರಿಶಿಷ್ಟ ಒಳ ಮೀಸಲಾತಿ ಸಾಂವಿಧಾನಿಕವಾಗಿ ಮಾನ್ಯವಾಗಿಲ್ಲ. ಅದು ಮಾನ್ಯವಾಗಲೂ ಸಂವಿಧಾನದ 341ನೇ ವಿಧಿಗೆ 341 (3) ಎಂಬ ತಿದ್ದುಪಡಿಯಾಗಬೇಕು ಅಥವಾ ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠದಲ್ಲಿ ಬಹುಮತದ ತೀರ್ಪು ಬರಬೇಕು. ಆದರೆ ಬಿಜೆಪಿ ಸರಕಾರಕ್ಕೆ ಸಂಸತ್ತಿನಲ್ಲಿ 341(3) ತಿದ್ದುಪಡಿ ತರುವ ಸಂಖ್ಯಾ ಬಲ 2014ರಿಂದಲೂ ಇದ್ದೇ ಇದೆ. ಬಿಜೆಪಿ ಸರಕಾರ ಯಾವ ಹೋರಾಟವಿಲ್ಲದಿದ್ದರೂ EWS ಮೀಸಲಾತಿ ತಂದಿದ್ದು ಹಾಗೆ... ಪರಿಶಿಷ್ಟ ಒಳ ಮೀಸಲಾತಿ ಬಗ್ಗೆ ಸಾಂವಿಧಾನಿಕ ತಿದ್ದುಪಡಿ ತರಲು ಉಷಾ ಮೆಹ್ರಾ ಆಯೋಗ ವರದಿ ಕೊಟ್ಟಿದ್ದು 2008ರಲ್ಲಿ....EWS ಮೀಸಲಾತಿಯ ಬಗ್ಗೆ ಸಿನ್ಹೊ ಸಮಿತಿ ವರದಿ ಕೊಟ್ಟಿದ್ದು 2010ರಲ್ಲಿ. ಆದರೆ ಬಿಜೆಪಿ EWS ಮೀಸಲಾತಿ ಜಾರಿ ಮಾಡಿತೇ ವಿನಾ ಉಷಾ ಮೆಹ್ರಾ ಆಯೋಗದ ಬಗ್ಗೆ ಮಾತೂ ಆಡುತ್ತಿಲ್ಲ.
ಈ ವಿಷಯದಲ್ಲಿ ಕಾಂಗ್ರೆಸನ್ನು ಒಳಗೊಂಡು ಇತರ ವಿರೋಧ ಪಕ್ಷಗಳ ನಡೆಯೋ ಭಿನ್ನವಾಗಿಲ್ಲ.ಆದ್ದರಿಂದ ಈಗಲಾದರೂ ಪರಿಶಿಷ್ಟರ ಒಳಮೀಸಲಾತಿಯ ಬಗ್ಗೆ ಸಂವಿಧಾನ ತಿದ್ದುಪಡಿ ತರಲು ಬೆಳಗಾವಿ ಅಧಿವೇಶನ ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಕಳಿಸಿಕೊಡಬೇಕು. ಸಂಸತ್ತಿನ ಈ ಚಳಿಗಾಲದ ಅಧಿವೇಶನದಲ್ಲೇ ಅಂತಹ ಸಂವಿಧಾನ ತಿದ್ದುಪಡಿಯಾಗಲು ಬಿಜೆಪಿ ಹಾಗೂ ವಿರೋಧ ಪಕ್ಷಗಳು ಮುಂದಾಗಬೇಕು. ಒಮ್ಮೆ ಪರಿಶಿಷ್ಟರ ಒಳಮೀಸಲಾತಿಗೆ ಸಂವಿಧಾನ ತಿದ್ದುಪಡಿಯಾಗಿ ರಾಜ್ಯ ಶಾಸನಸಭೆಗಳಿಗೆ ಆ ಒಳವರ್ಗೀಕರಣದ ಅಧಿಕಾರ ಪ್ರಾಪ್ತಿಯಾದರೆ ಸದಾಶಿವ ಅಯೋಗದ ವರದಿಯ ಮೇಲಿನ ಚರ್ಚೆಗೆ ಅರ್ಥ ಬಂದೀತು.
ಇನ್ನುಳಿದಂತೆ ಹಿಂದುಳಿದ ಜಾತಿಗಳ ವರ್ಗೀಕರಣದಲ್ಲಿ ಸಾಪೇಕ್ಷವಾಗಿ ಮುಂದುವರಿದ ಜಾತಿಗಳನ್ನು ಸಾಪೇಕ್ಷವಾಗಿ ಹಿಂದುಳಿದ ಜಾತಿಗಳ ಪ್ರವರ್ಗಗಳ ಒಳಗೆ ಸೇರಿಸುವುದರ ಬದಲಿಗೆ ಆಯಾ ಪ್ರವರ್ಗಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದು ಎಲ್ಲರಿಗೂ ಒಳಿತಾಗುವ ಮಾರ್ಗ. ಹಾಗಾಗಬೇಕೆಂದರೆ ಮೀಸಲಾತಿ ಪ್ರಮಾಣವನ್ನು ಶೇ. 50ರ ಮಿತಿಗಿಂತ ಶೇ.75ಕ್ಕೆ ಏರಿಸಬೇಕು. ಸಮಾಜದ ಶೇ. 5ರಷ್ಟಿರುವ ಮೇಲ್ಜಾತಿಗಳಿಗೆಂದೇ ಸಂವಿಧಾನ ತಿದ್ದುಪಡಿಯ ಮೂಲಕ EWS ಮೀಸಲಾತಿ ಹೆಚ್ಚಿಸುವಾಗ ಅಡ್ಡಬರದ ಶೇ.50ರ ಮೀಸಲಾತಿಯ ಮೇಲ್ಮಿತಿ ಇತರ ಹಿಂದುಳಿದ ಜಾತಿಗಳ ಮೀಸಲು ಪ್ರಮಾಣವನ್ನು ಏರಿಸಲು ಅಡ್ಡ ಬರಬಾರದು. ಹೀಗಾಗಿ ಲಿಂಗಾಯತರು, ಒಕ್ಕಲಿಗರು, ಇತರ ಹಿಂದುಳಿದ ಜಾತಿಗಳು ಮತ್ತು ಪರಿಶಿಷ್ಟರು ಈ ಶೇ.50ರ ಮೇಲ್ಮಿತಿ ರದ್ದತಿಗಾಗಿ ಸಂವಿಧಾನ ತಿದ್ದುಪಡಿ ತರಲು ಒಗ್ಗೂಡಬೇಕು. ಬಿಜೆಪಿಗೆ ಆ ಬಗೆಯ ರಾಜಕೀಯ ನಿಲುವಿದ್ದರೆ ಅದು ಸುಲಭವಾಗಿ ಆಗುತ್ತದೆ.