ಹಿಮ್ಮುಖ ವೈಚಾರಿಕತೆ, ಬೆಳೆಯುತ್ತಿರುವ ಭ್ರಷ್ಟತೆ
ಭಾರತದಲ್ಲಿ ಭ್ರಷ್ಟಾಚಾರ ರಹಿತ ಸರಕಾರ ಇರಬಹುದೇ? ಈ ಪ್ರಶ್ನೆಯು, ಜಾತಿ ರಹಿತ ಹಿಂದೂ ಸಮಾಜ ಇರಲು ಸಾಧ್ಯವೇ, ವರದಕ್ಷಿಣೆ ರಹಿತ ವಿವಾಹಗಳು ಇರಬಹುದೇ ಎನ್ನುವ ರೀತಿಯದ್ದೇ ಮತ್ತೊಂದು ಪ್ರಶ್ನೆಯೇನೋ ಎನ್ನಿಸುತ್ತದೆ.
ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಸಾಮಾನ್ಯವಾಗಿ ಚರ್ಚಿಸಲಾಗುತ್ತದೆ ಆದರೆ ಇತರ ರೀತಿಯ ಸಾಮಾಜಿಕ ಭ್ರಷ್ಟಾಚಾರಗಳ ಬಗ್ಗೆ ಚರ್ಚೆಯಾಗುವುದು ಕಡಿಮೆ. ಆಗಸ್ಟ್ನಲ್ಲಿ, ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಸಚಿವ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತು. ಇನ್ನೊಬ್ಬ ಸಚಿವ ಸತ್ಯೇಂದರ್ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಜೂನ್ನಲ್ಲಿ ಬಂಧಿಸಿತ್ತು. ಕರ್ನಾಟಕದಲ್ಲಿಯೂ, ಗುತ್ತಿಗೆದಾರರ ಸಂಘ ಬಿಜೆಪಿ ಆಡಳಿತದಲ್ಲಿ ಶೇ.40 ಕಮಿಷನ್ ಆರೋಪ ಮಾಡಿತ್ತು. ಆ ವೇಳೆಯೂ ಗುತ್ತಿಗೆದಾರರು ಸಿಟ್ಟಾದದ್ದು ಕಮಿಷನ್ ನೀಡಬೇಕಾಗಿರುವ ವಿಚಾರಕ್ಕಲ್ಲ; ಬದಲಿಗೆ ಹೆಚ್ಚು ಕಮಿಷನ್ ನೀಡಬೇಕಾಗಿದೆ ಎಂಬುದಕ್ಕೆ.
ಹಾಗಾದರೆ, ಸ್ವೀಕಾರಾರ್ಹ ಭ್ರಷ್ಟಾಚಾರವೂ ಒಂದಿದೆಯೇ ಎಂಬ ಮತ್ತೊಂದು ಪ್ರಮುಖ ಪ್ರಶ್ನೆಯನ್ನು ಇದು ಹುಟ್ಟುಹಾಕುತ್ತದೆ. ಸಮಾಜಕ್ಕೆ ಸ್ವೀಕಾರಾರ್ಹವಾದ ಒಂದು ನಿರ್ದಿಷ್ಟ ಮಟ್ಟದ ಭ್ರಷ್ಟಾಚಾರ ಇರಬೇಕೇ? ಹಾಗಾದರೆ, ಸ್ವೀಕಾರಾರ್ಹವಾದ ರಾಜಕೀಯ ಹಿಂಸಾಚಾರದ ಮಟ್ಟ ಯಾವುದು? ಯಾವ ರೀತಿಯ ಅಸ್ಪೃಶ್ಯತೆ ಸ್ವೀಕಾರಾರ್ಹ? ಭ್ರಷ್ಟತೆಯ ಎಲ್ಲ ಸ್ವರೂಪಕ್ಕೂ ಒಂದು ರಾಜಿ ಮೌಲ್ಯ ಇರುವಂತೆ ಕಂಡುಬರುತ್ತದೆ.
ನನಗೆ ಸರಕಾರಿ ಗ್ರಾಮೀಣಾಭಿವೃದ್ಧಿ ಏಜೆನ್ಸಿಯೊಂದಿಗೆ ಕೆಲಸ ಮಾಡುವ ಅವಕಾಶವಿತ್ತು. ಭಾರತೀಯ ಜನತಾ ಪಕ್ಷದ ಸಮಿತಿಯು ಅಧಿಕಾರ ವಹಿಸಿಕೊಂಡಂತೆ, ನಮ್ಮ ತ್ರೈಮಾಸಿಕ ಸಭೆಗಳನ್ನು ಪ್ರಾರಂಭಿಸುವ ಮತ್ತು ಮುಕ್ತಾಯಗೊಳಿಸುವ ಮೊದಲು ನಾವು ಸಂಸ್ಕೃತ ಪ್ರಾರ್ಥನೆಗಳನ್ನು ಓದುತ್ತಿದ್ದೆವು. ಅದೇ ಸಮಯದಲ್ಲಿ, ಮಂಜೂರಾದ ಅಭಿವೃದ್ಧಿ ಅನುದಾನವನ್ನು ತಲುಪಿಸುವ ಮುಂಚೆ ಕಡಿತಗೊಳಿಸುವ ಕೆಲಸ ನಡೆಯುತ್ತಿರುವ ಬಗ್ಗೆ ದೂರುಗಳೂ ಇದ್ದವು. ಪ್ರಾರ್ಥನೆಗೂ ಭ್ರಷ್ಟಾಚಾರಕ್ಕೂ ಸಂಘರ್ಷವಿರಲಿಲ್ಲ. ಅವೆರಡೂ ಒಟ್ಟೊಟ್ಟಿಗೇ ನಡೆಯುತ್ತಿತ್ತು.
ಭ್ರಷ್ಟಾಚಾರ ಭಾರತದ ರಾಜಕೀಯದ ಹೃದಯಭಾಗದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದಾಗ್ಯೂ, ಬಿಜೆಪಿಯ ಹಿಂದುತ್ವದ ಅಡಿಯಲ್ಲಿ ಕಾಣಿಸುತ್ತಿರುವುದು, ಧರ್ಮದ ಸುತ್ತಲಿನ ಪುರಾತನ ವಿಚಾರಗಳ ಮೌಲ್ಯವರ್ಧನೆ ಮತ್ತು ಅದಕ್ಕೆ ಸಮಾನಾಂತರವಾಗಿ ಭ್ರಷ್ಟಾಚಾರದ ಒಪ್ಪಿಕೊಳ್ಳುವಿಕೆ. ತಳಮಟ್ಟದ ರಾಜಕಾರಣಿಗಳು ಭ್ರಷ್ಟಾಚಾರವನ್ನು ಬೆಳೆಸುವ ಮತ್ತು ಬೇರುಬಿಡುವ ಪಕ್ಷದ ಪರಿಚಿತ ಮಾದರಿಯನ್ನು ಅನುಸರಿಸುತ್ತಿರುವುದು, ನೈತಿಕ ಮತ್ತು ಆರ್ಥಿಕ ಭ್ರಷ್ಟಾಚಾರವನ್ನು ಸಾಮಾನ್ಯೀಕರಿಸುವ ಸೈದ್ಧಾಂತಿಕ ದುರಹಂಕಾರವನ್ನು ತೋರಿಸುವುದು ಇಲ್ಲಿ ಕಾಣಿಸುತ್ತಿದೆ.
ಇದು ಯಾವ ರೀತಿಯ ಸಮಾಜವನ್ನು ರೂಪಿಸುತ್ತಿದೆ? ಭಾರತೀಯ ದಾರ್ಶನಿಕ ಬಸವೇಶ್ವರರ ಪ್ರಗತಿಪರ ವಿಚಾರಗಳಿಂದ ಇದ್ದಕ್ಕಿದ್ದಂತೆ ವಿ.ಡಿ. ಸಾವರ್ಕರ್ ಜೈಲಿನಿಂದ ಹೊರಬಂದು ಬುಲ್ಬುಲ್ ಹಕ್ಕಿಯ ಮೇಲೆ ಹಾರುವ ಕಥೆಯನ್ನು ಇತಿಹಾಸ ಪಠ್ಯಪುಸ್ತಕದಲ್ಲಿ ಸೇರಿಸುವ ಹಂತಕ್ಕೆ ನಾವು ಹೇಗೆ ಹಿಂದಕ್ಕೆ ಹೋಗುತ್ತಿದ್ದೇವೆ?
ಒಂದು ಸಮಾಜವಾಗಿ ನಾವು ಶೇ. 5 ಅಥವಾ ಶೇ. 40ರಷ್ಟು ಭ್ರಷ್ಟಾಚಾರದ ಮಟ್ಟವನ್ನು ಸ್ವೀಕರಿಸುವ, ಸಾಮಾನ್ಯವೆಂದುಕೊಳ್ಳುವ ಮಟ್ಟಕ್ಕೆ ಹೋಗಬಾರದು. ಪ್ರಜಾಪ್ರಭುತ್ವವು ಜಾತ್ಯತೀತವಲ್ಲದ ಸೀಮಿತ ಮತ್ತು ನಿರ್ದಿಷ್ಟವಾದ ಅಜೆಂಡಾಗಳ ಮೇಲೆ ನಡೆಯಲು ಸಾಧ್ಯವಿಲ್ಲ. ಇದನ್ನು ತುರ್ತಾಗಿ ನಾವು ಅರಿತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ, ಭ್ರಷ್ಟ ನೈತಿಕತೆಯನ್ನು ಆಚರಿಸುವ ಮತ್ತು ಭದ್ರಪಡಿಸುವ ರೀತಿಯನ್ನೇ ಪ್ರಜಾಪ್ರಭುತ್ವದ ಹೆಸರಿನಲ್ಲಿ ಮುಂದುವರಿಸುವ ಅಪಾಯವಿದೆ.
(ಕೃಪೆ: scroll.in)