ಜೇನು ಹಬ್ಬ: ಮಡಿಕೇರಿಯ ರಾಜಾಸೀಟ್ ನಲ್ಲಿ ಗಮನ ಸೆಳೆಯುತ್ತಿರುವ ಸವಿಜೇನು
ಮಡಿಕೇರಿ ಡಿ.24 : ವಿವಿಧ ಋತುಗಳ ಜೇನಿನ ಸವಿಯುಣಿಸುವ ಮತ್ತು ಜೇನು ಕೃಷಿಗೆ ಉತ್ತೇಜನ ನೀಡುವ ‘ಜೇನು ಹಬ್ಬ’ ನಗರದ ಪ್ರಕೃತಿ ರಮಣೀಯ ತಾಣ ರಾಜಾಸೀಟಿನಲ್ಲಿ ಪ್ರಕೃತಿ ಪ್ರಿಯರ ಗಮನ ಸೆಳೆಯುತ್ತಿದೆ.
ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ‘ಜೇನು ಹಬ್ಬ’ದಲ್ಲಿ ಸವಿಜೇನು ಕೈಬೀಸಿ ಕರೆಯುತ್ತಿದೆ. ಕೊಡಗು ಮತ್ತು ನೆರೆಯ ದಕ್ಷಿಣ ಕನ್ನಡದ ವಿವಿಧ ಸಂಘ ಸಂಸ್ಥೆಗಳ ಹದಿನೇಳು ಮಳಿಗೆಗಳು, ಜೇನು ಕೃಷಿಗೆ ಸಂಬಂಧಿಸಿದ ಉಪಕರಣಗಳ ಸಹಿತ ಜೇನಿನ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
‘ಕೊಡಗು’ ಎಂದರೆ ಅತ್ಯಂತ ಸ್ವಾದಿಷ್ಟ ಜೇನು ಮತ್ತು ಕಾಫಿಗೆ ಹೆಸರು ವಾಸಿ. ಕೆಲವು ದಶಕಗಳ ಹಿಂದೆ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಜೇನಿನ ಉತ್ಪಾದನೆಯಾಗುತಿತ್ತು. ಯಾವಾಗ ಜೇನು ಹುಳುಗಳು ‘ಥಾಯಿ ಸ್ಯಾಕ್ ಬ್ರೂಡ್’ ಎನ್ನುವ ಕಾಯಿಲೆಗೆ ತುತ್ತಾಗಲಾರಂಭಿಸಿದ್ದವು. ಅಲ್ಲಿಂದ ಜೇನಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿದು ಹೋಯಿತು. ಇತ್ತೀಚಿನ ವರ್ಷಗಳಲ್ಲಿ ನಿಧಾನವಾಗಿ ಮತ್ತೆ ಜೇನಿನ ಉತ್ಪಾದನೆ ಹೆಚ್ಚುತ್ತಿದೆ. ಹೀಗಿದ್ದೂ, ಜೇನು ಕೃಷಿಯತ್ತ ಕೃಷಿಕರ ಆಸಕ್ತಿ ನಿರೀಕ್ಷೆಯ ಮಟ್ಟದಲ್ಲಿ ಇಲ್ಲ. ಕೃಷಿಕರಲ್ಲಿ ಮತ್ತೆ ಜೇನು ಕೃಷಿಯತ್ತ ಆಸಕ್ತಿ ಮೂಡಿಸುವ ಪ್ರಯತ್ನ ‘ಜೇನು ಹಬ್ಬ’ದ್ದಾಗಿದೆ.
ಆಯಾ ಋತು ಮಾನಗಳಲ್ಲಿ ಪರಿಸರದಲ್ಲಿ ಹೆಚ್ಚಾಗಿ ಅರಳುವ ನಿರ್ದಿಷ್ಟ ಸಸ್ಯ ಸಂಪತ್ತಿನ ವನಸುಮಗಳು ಜೇನಿನ ರುಚಿಯನ್ನು ನಿರ್ಧರಿಸುತ್ತವೆ. ಜೇನು ಹಬ್ಬದಲ್ಲಿರುವ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಮಳಿಗೆಯಲ್ಲಿ ಕೊಡಗಿನಲ್ಲಿ ವಿವಿಧ ಹೂಗಳು ಅರಳುವ ಸಂದರ್ಭ ಸಂಗ್ರಹಿಸಿದ ಜೇನು, ಕಾಫಿ ಹೂ ಅರಳುವ ಸಂದರ್ಭ ಸಂಗ್ರಹವಾಗುವ ಒಂದಷ್ಟು ಕಹಿ ವಗರಿನ ಜೇನು ಗಮನ ಸೆಳೆಯುತ್ತಿದೆ. ಹೆಚ್.ಡಿ.ಕೋಟೆಯಲ್ಲಿ ಸಂಗ್ರಹಿತವಾಗುವ ಏಕ ರೂಪದ ಹೂ ಅರಳುವ ಸಂದರ್ಭದ ಅತ್ಯಂತ ಸಿಹಿಯ ಜೇನು ರುಚಿ ರಚಿಯಾಗಿದೆ.
ಜೇನು ಪೆಟ್ಟಿಗೆಗಳಲ್ಲಿ ಕುತೂಹಲ ಮೂಡಿಸುವುದು ‘ಮುಜೆಂಟಿ ಜೇನು’ ಕೃಷಿಗೆ ಸಂಬಂಧಿಸಿದ ಜೇನು ಪೆಟ್ಟಿಗೆ. ಮುಜೆಂಟಿ ಎಂದು ಕರೆಯುವ ಈ ಜೇನು ಹುಳುಗಳು ಅತ್ಯಂತ ಸಣ್ಣದಾಗಿದ್ದು, ಇವುಗಳನ್ನು ಪೆಟ್ಟಿಗೆಯಲ್ಲಿ ಕೂಡಿ ಹಾಕಿ ಜೇನು ಸಂಗ್ರಹಿಸುವುದು ಅತ್ಯಂತ ತ್ರಾಸದಾಯಕ. ಆದರೆ, ಇಂದು ಅದಕ್ಕಾಗಿಯೇ ವಿನೂತನವಾದ ಪೆಟ್ಟಿಗೆ. ಪರಿಸರದಲ್ಲಿ ನಮ್ಮ ನೋಟಕ್ಕೆ ಸಿಲುಕದ ಸಣ್ಣ ಸಣ್ಣ ಹೂಗಳಿಂದ ಮುಜೆಂಟಿ ಜೇನು ಹುಳುಗಳು ಪರಾಗವನ್ನು ಸಂಗ್ರಹಿಸುತ್ತವೆ. ಇದು ಅತ್ಯಂತ ಹೆಚ್ಚಿನ ಔಷಧೀಯ ಮೌಲ್ಯಗಳನ್ನು ಹೊಂದಿರುವ ವಿಶೇಷವಾದ ಜೇನು.
ಜೇನು ಪೆಟ್ಟಿಗೆಯೊಂದಿಗೆ ಕೃಷಿಕ ಎರಿ(ಜೇನು ಪೆಟ್ಟಿಗೆಯಲ್ಲಿ ಜೇನು ಹುಳುಗಳು ಜೇನು ಸಂಗ್ರಹಿಸಿಡಲು ಮಾಡಿಕೊಡುವ ವ್ಯವಸ್ಥೆ)ಗಳ ಮಾರಾಟ, ಜೇನು ಎರಿಗಳಿಂದ ಜೇನನ್ನು ತೆಗೆಯುವ ಯಂತ್ರ, ಕೈಗವಸು ಹೀಗೆ ಹತ್ತಾರು ಸಾಮಾಗ್ರಿಗಳು, ಜೇನು ಕೃಷಿಯ ಮಾಹಿತಿಗಳು ಜೇನು ಹಬ್ಬದ ಮಹತ್ವವನ್ನು ಹೆಚ್ಚಿಸಿದೆ.
► ವಿಭಿನ್ನ ದರಗಳು
ಪ್ರತಿ ಕೆ.ಜಿ. ಜೇನಿಗೆ 315 ರೂ ಗಳಿಂದ 800 ರೂ.ಗಳ ವರೆಗೆ ವಿಭಿನ್ನವಾಗಿರುವುದು ಒಂದಷ್ಟು ಅಚ್ಚರಿ ಮೂಡಿಸುತ್ತದೆ. ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಲ್ಲಿ ಪ್ರತಿ ಕೆ.ಜಿ. ಜೇನು 315 ರೂ.ಗಳಿಗೆ ಲಭ್ಯವಿದ್ದರೆ, ಭಾಗಮಂಡಲ ಕಾವೇರಿ ಹನಿ ಇಂಡಸ್ಟ್ರೀಸ್ ಮಳಿಗೆಯಲ್ಲಿ ಈ ದರ 800 ರೂ.ಗಳು.
ಕಾಫಿ ತೋಟಗಳಲ್ಲಿ ಪೆಟ್ಟಿಗೆ ಜೇನು ಕೃಷಿ ನಡೆಸಿದಲ್ಲಿ ಫಸಲಿನ ಹೆಚ್ಚಳವಾಗುವುದು ಪ್ರಾಯೋಗಿಕವಾಗಿಯೇ ರುಜುವಾತಾಗಿರುವ ವಿಚಾರ, ಇದು ಕೇವಲ ಒಂದು ಫಸಲಿಗೆ ಮಾತ್ರವಲ್ಲ, ಪ್ರತಿಯೊಂದು ಕೃಷಿಯಲ್ಲೂ ಜೇನು ಹುಳುಗಳು ತಮ್ಮ ಕರಾಮತ್ತನ್ನು ತೋರಿಸಿ ಕೃಷಿಕರ ಕೈಹಿಡಿಯುತ್ತವೆ. ಇಂತಹ ಪರಿಸರ ಸ್ನೇಹಿ ಜೇನು ಕೃಷಿಯತ್ತ ಒಲವು ಮೂಡಿಸುವ ಜೇನು ಹಬ್ಬ ಡಿ.25ರ ರವಿವಾರವೂ ನಡೆಯಲಿದೆ.