ರೂಢಿಗೇಡಿ
ನಮ್ಮ ಬದುಕಿನ ಯಶಸ್ಸು ಅಥವಾ ವೈಫಲ್ಯಗಳ ಕಾರಣ ನಮ್ಮ ನಿರ್ಣಯಗಳೇ ಆಗಿರುತ್ತವೆ. ತಮ್ಮ ವಿಫಲತೆಗಳ ಹೊಣೆಯನ್ನು ತಾವೇ ಹೊರಲಾಗದವರು ಹಣೆ ಬರಹದ ಮೇಲೋ, ಅದೃಷ್ಟ - ದುರಾದೃಷ್ಟದ ಮೇಲೋ, ಸಹವಾಸಗಳ ಮೇಲೋ, ಪರಿಸರದ ಮೇಲೋ; ಹೀಗೆ ಯಾವುದೋ ಒಂದನ್ನು ಆರೋಪಿಸಿ ತಾವು ಪಾಪದ ಬಲಿಪಶು ಎಂದು ವಿಕ್ಟಿಮೈಸ್ ಮಾಡಿಕೊಳ್ಳುತ್ತಾ ತಮ್ಮನ್ನು ಆರೋಪಮುಕ್ತರನ್ನಾಗಿಸಿಕೊಳ್ಳಲು ಯತ್ನಿಸುತ್ತಾರೆ. ಅವರೂ ಪಾಪದವರೇ. ತಮ್ಮ ದೌರ್ಬಲ್ಯವನ್ನು ಗುರುತಿಸಿಕೊಳ್ಳಲಾಗದೆ, ಅದರಿಂದ ಹೊರಬರಲಾಗದೆ, ಅದರಲ್ಲೇ ಇರುವುದು ರೂಢಿಯಾಗುತ್ತಾ, ಅದರಲ್ಲೇ ತೃಪ್ತಿಯಿಂದ ಇದ್ದುಬಿಡುತ್ತಾರೆ. ಹೌದು, ದೌರ್ಬಲ್ಯದಲ್ಲಿಯೂ ತೃಪ್ತಿಯಿಂದ ಇರಲು ಸಾಧ್ಯ! ಅದೊಂದು ತರಹದ ತೃಪ್ತಿ. ತಮಗೆ ಯಾವುದು ರೂಢಿಯಾಗಿರುವುದೋ ಅದರಲ್ಲಿ ತಾನು ಸಲೀಸಾಗಿ ಇರಲು ಸಾಧ್ಯ. ಹಳೆಯ ರೂಢಿಯನ್ನು ಬಿಟ್ಟು ಹೊಸ ರೂಢಿಯನ್ನು ಮಾಡಿಕೊಳ್ಳಲು ಪರಿಶ್ರಮ ಬೇಕು. ಶ್ರಮವಹಿಸುವುದೆಂದರೆ ಸುಲಭವಾಗಿ ಇರುವುದು ಅಲ್ಲ ತಾನೇ?
ರೂಢಿ ಅನ್ನುವುದೇನು?
ಮನೋವೈಜ್ಞಾನಿಕವಾಗಿ ಹೇಳುವುದಾದರೆ ಸತತವಾಗಿ ಯಾವುದೋ ಒಂದು ಬಗೆಯ ಆಲೋಚನೆಯನ್ನು, ವರ್ತನೆಯನ್ನು, ಚಟುವಟಿಕೆಯನ್ನು ಮಾಡುತ್ತಲೇ ಇದ್ದು ಅದನ್ನು ತಮ್ಮ ವ್ಯಕ್ತಿತ್ವದ ಬಗೆಯನ್ನಾಗಿ ಅಥವಾ ಮನಸ್ಥಿತಿಯ ರೀತಿಯನ್ನಾಗಿಸಿಕೊಳ್ಳುವುದು. ತಿನ್ನುವುದು, ಕುಡಿಯುವುದು, ಮಲಗುವುದು, ಆಲೋಚಿಸುವುದು, ಪ್ರತಿಕ್ರಿಯಿಸುವುದು; ಯಾವುದನ್ನೇ ತೆಗೆದುಕೊಳ್ಳಿ. ಅವೆಲ್ಲವೂ ರೂಢಿಗತವೇ. ಇಷ್ಟು ಮಾತ್ರವಲ್ಲ; ಪ್ರೀತಿಸುವುದು, ದ್ವೇಷಿಸುವುದು, ಕೋಪಿಸಿಕೊಳ್ಳುವುದು, ಶಾಂತವಾಗಿರುವುದು ಎಲ್ಲವೂ ನಿರಂತರವಾದ ಅಭ್ಯಾಸದ ಪರಿಣಾಮವೇ. ಅವನಿಗೆ ಬಹುಬೇಗ ಕೋಪ ಬಂದುಬಿಡತ್ತೆ, ಅವನಿಗೆ ಏನು ಹೇಳಿದರೂ ಕೋಪಿಸಿಕೊಳ್ಳುವುದಿಲ್ಲ ಎಂಬುದರಿಂದ ಹಿಡಿದು, ಅವನು ಏನನ್ನಾದರೂ ನೆನಪಿನಲ್ಲಿಟ್ಟುಕೊಳ್ಳುತ್ತಾನೆ, ಅವನಿಗೆ ಏನೂ ನೆನಪಿನಲ್ಲಿರುವುದಿಲ್ಲ ಎಂಬುದೂ ಕೂಡಾ ರೂಢಿಯ ಫಲವೇ.
ಆಲೋಚನೆಗಳ ಮಾದರಿ, ಧೋರಣೆಗಳನ್ನು ಹೊಂದುವುದು, ನೈತಿಕತೆಗೆ ಬದ್ಧವಾಗುವುದು, ಮೋಸ ಮಾಡುವುದು; ಹೌದು, ರೂಢಿಯ ಫಲವೇ. ಅವರ್ಯಾರೋ ಅಭಿನಯ ಚತುರರಾಗುವುದು, ಹಾಡುವುದು, ಕುಣಿಯುವುದು, ಸಂಗೀತ ವಾದ್ಯಗಳನ್ನು ಲೀಲಾಜಾಲವಾಗಿ ನುಡಿಸುವುದು, ಒಳ್ಳೆಯ ಮಾತುಗಳನ್ನು ಆಡುವುದು, ಸಭ್ಯತೆಯಿಂದ ನಡೆದುಕೊಳ್ಳುವುದು, ವಿಪರೀತವಾಗಿ ಗೋಳಿಡುವುದು, ಕಷ್ಟಗಳನ್ನು ಸಹಿಸುವುದು; ಇವೆಲ್ಲವೂ ರೂಢಿಯೇ. ರೂಢಿ ಎನ್ನುವುದು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ ಪಕ್ಷಿಗಳಿಗೂ ಕೂಡಾ. ಮನುಷ್ಯ ಮೂಲತಃ ಪ್ರಾಣಿಯೇ ತಾನೇ. ಮನುಷ್ಯ ಬಹಳ ನೈಸರ್ಗಿಕವಾದ ಪ್ರಾಣಿಯೇ ಆಗಿದ್ದು, ಪಶುಸ್ವಭಾವವು ಮನುಷ್ಯ ಸಮಾಜಕ್ಕೆ ಹೊಂದುವುದಿಲ್ಲವಾದ ಕಾರಣದಿಂದ ಅವನಿಗೆ ಮತ್ತೊಬ್ಬ ಮನುಷ್ಯನ ಜೊತೆಗೆ ಹೊಂದಿಕೊಂಡು ಹೋಗುವ, ಇತರರೊಂದಿಗೆ ಅನುಸರಿಸಿಕೊಂಡು ಬಾಳುವ ಒಂದೇ ಒಂದು ಮೂಲ ಕಾರಣಕ್ಕೆ ಅವನಿಗೆ ನಾನಾ ವಿಧವಾದ ಸೋಷಿಯಲೈಸೇಶನ್ ಎಂಬ ಸಂಸ್ಕಾರವನ್ನು ನೀಡುತ್ತಾ ಹೋಗುತ್ತಾರೆ. ಪ್ರಾದೇಶಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ರಾಷ್ಟ್ರೀಯ ವಾಗಿ ಈ ಸಂಸ್ಕಾರಗಳು ಭಿನ್ನವಾಗಿದ್ದರೂ ಅವುಗಳೆಲ್ಲದರ ಮೂಲ ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನ ಜೊತೆಗೆ ಬದುಕುವುದಕ್ಕೆ, ಇತರರನ್ನು ತನ್ನೊಡನೆ ಬದುಕಲು ಬಿಡುವುದಕ್ಕೆ ಮಾತ್ರವೇ ಹೊರತು ಬೇರೇನೂ ಅಲ್ಲ. ಅದಕ್ಕಾಗಿಯೇ ಬೇಕಾದಷ್ಟು ಸಿದ್ಧಾಂತಗಳನ್ನು, ಪರಿಕಲ್ಪನೆಗಳನ್ನು, ನೈತಿಕತೆಗಳನ್ನು, ಮೌಲ್ಯಗಳನ್ನು ಸೃಷ್ಟಿಸಲಾಯಿತು. ಈ ತತ್ವ ಸಿದ್ಧಾಂತಗಳು, ರೀತಿ, ನೀತಿ, ಧರ್ಮ ಮತ್ತು ಮೌಲ್ಯಗಳಾವುವೂ ನೈಸರ್ಗಿಕವೇನಲ್ಲ. ಮನುಷ್ಯನ ಮಾನಸಿಕ ಅನ್ವೇಷಣೆಯ ಫಲವೇ ಆಗಿರುತ್ತದೆ. ಆದರೆ ಈ ಮನಸ್ಸು ಕೂಡಾ ನೈಸರ್ಗಿಕವಾಗಿರುವುದೇ ಅಲ್ಲವೇ? ಇದೊಂದು ಪ್ರಶ್ನೆ. ಮನಸ್ಸೇನೋ ನೈಸರ್ಗಿಕ.
ಆದರೆ ಮನಸ್ಸು ಮಾಡುವ ಆಲೋಚನೆ ಅವನ ಕೃತಿ. ಮನುಷ್ಯನ ದೇಹದ ನಗ್ನತೆ ನೈಸರ್ಗಿಕ. ಅದನ್ನು ಮರೆ ಮಾಚುವ ವಸ್ತ್ರ ಮಾನವ ನಿರ್ಮಿತ. ವಸ್ತ್ರವನ್ನು ತೊಡಲು ಅವನಿಗೆ ಅವನದೇ ಆದಂತಹ ನೈತಿಕ, ಸಾಮಾಜಿಕ, ಲೌಕಿಕ ಕಾರಣಗಳು. ಮನುಷ್ಯ ತನ್ನ ನೈಸರ್ಗಿಕ ಪ್ರವೃತ್ತಿಯನ್ನು ತಹಬಂದಿಗೆ ತಂದುಕೊಂಡು ಇತರ ಮನುಷ್ಯರನ್ನು ಬಾಳಬಿಡಲೆಂದೇ ಅನೇಕ ರೂಢಿಗಳನ್ನು ಮಾಡಿಸಲು ಮನುಷ್ಯನೇ ಮುಂದಾಗಿದ್ದು. ಅದನ್ನೇ ಅವನು ಮೌಲ್ಯವನ್ನು ಆರೋಪಿಸಿ ಸಂಸ್ಕಾರ ಎಂದ. ಸಂಸ್ಕಾರದ ಉದ್ದೇಶವು ರೂಢಿಯನ್ನು ಮಾಡಿಸುವುದು. ಇಂತಹ ರೂಢಿಗಳೇ ಅನೇಕ ಬಗೆಗಳು. ಅವರವರಿಗೆ ಅವರವರದು ರೂಢಿಗಳಾಗಿದ್ದು, ಇತರರ ರೂಢಿಗಳು ತಮಗಿಲ್ಲದ ಕಾರಣ ಆ ರೂಢಿಗಳನ್ನು ಸಹಿಸಲು, ಒಪ್ಪಿಕೊಳ್ಳಲು, ಒಳಗೊಳ್ಳಲು ಆಗದು. ಆಗ ಅವರು ಇತರರ ರೂಢಿಗಳನ್ನು ಖಂಡಿಸುತ್ತಾ, ತಮ್ಮ ರೂಢಿಯನ್ನು ಮಂಡಿಸುತ್ತಾ, ಆ ರೂಢಿಗೆ ಇರುವಂತಹ ಚಾರಿತ್ರಿಕ ಹಿನ್ನೆಲೆ, ಸಾಂಸ್ಕೃತಿಕ ತಳಹದಿ, ನೈತಿಕ ಮೌಲ್ಯಗಳನ್ನೆಲ್ಲಾ ಹುಡುಕುತ್ತಾ, ಸೃಷ್ಟಿಸುತ್ತಾ, ಆರೋಪಿಸುತ್ತಾ ತಾವು ಇತರ ರೂಢಿಗಳನ್ನು ಹೊಂದಿರುವವರಿಗಿಂತ ಮೇಲು ಎಂದು ನಿರೂಪಿಸಲು ಹೋಗುತ್ತಾರೆ. ಇಂತವರನ್ನು ರೂಢಿಗೇಡಿ ಎಂದು ಕರೆಯುತ್ತೇವೆ.
ಯಾವುದೇ ಒಂದು ರೂಢಿಗೆ ವ್ಯಸನಿಯಾದವನನ್ನು, ಹೊಸ ರೂಢಿಗೆ ತೆರೆದುಕೊಳ್ಳದಿರುವವರನ್ನು, ಇನ್ನೊಬ್ಬರ ರೂಢಿಯನ್ನು ಸಹಿಸದವನನ್ನು, ತನ್ನ ರೂಢಿಯಲ್ಲಿ ಪ್ರತಿಷ್ಠಿತನಾಗಿ ಅದರಲ್ಲಿಯೇ ಸದಾ ಸುಖಿಯಾಗಿರುವವನನ್ನು ರೂಢಿಗೇಡಿ ಎಂದು ಗುರುತಿಸಬಹುದು. ಎಷ್ಟೋ ಸಂಪ್ರದಾಯಗಳನ್ನು ಚಾಚೂ ತಪ್ಪದೆ ಅನುಸರಿಸುತ್ತಿರುವವರನ್ನು ಕೇಳಿ, ''ನೀವು ಅದೇಕೆ ಹಾಗೆ ಮಾಡುವುದು?'' ಎಂದು ಮುಗ್ಧರು ಮತ್ತು ಪ್ರಾಮಾಣಿಕರು ಹೇಳುತ್ತಾರೆ, ''ಅದೇನೋ ಗೊತ್ತಿಲ್ಲ. ಮೊದಲಿನಿಂದಲೂ ರೂಢಿಯಾಗಿಬಿಟ್ಟಿದೆ'' ಎಂದು. ಹೌದು, ಅದು ಪ್ರಾಮಾಣಿಕವಾದ ಉತ್ತರ. ಕುಶಲಿಗಳು, ಓದು ಬರಹ ಬಲ್ಲವರು, ತಮ್ಮ ಬಗ್ಗೆ ಶ್ರೇಷ್ಠತೆಯ ವ್ಯಸನವನ್ನು ಹೊಂದಿರುವವರು ಅದಕ್ಕೆ ಚಾರಿತ್ರಿಕ ಸಂಗತಿಗಳನ್ನು ಸಂಶೋಧಿಸುತ್ತಾರೆ, ತಮ್ಮ ಹಿರಿಯರು ಮಾಡುತ್ತಿದ್ದ ಆ ಆಚರಣೆಗಳಿಗೆ ಇಂದಿನ ವೈಜ್ಞಾನಿಕ ಕಾರಣಗಳನ್ನು ಆರೋಪಿಸುತ್ತಾರೆ. ಏಕೆ ತಮ್ಮ ರೂಢಿಗಳನ್ನು ಬಿಡಲು ವ್ಯಕ್ತಿಗಳು, ಸಮೂಹಗಳು ಮತ್ತು ಸಮಾಜಗಳು ಒಲ್ಲವು?
ರೂಢಿಯಾಗಿರುವುದನ್ನೇ ಆಧರಿಸಿಕೊಂಡು ತಮ್ಮ ಅನುಕೂಲಕ್ಕೆ ಅನೇಕ ಬಗೆಯ ವ್ಯವಸ್ಥೆಗಳನ್ನು ರೂಪಿಸಿಕೊಂಡುಬಿಟ್ಟಿರುತ್ತಾರೆ. ಆ ರೂಢಿಯನ್ನು ಬದಲಿಸುವುದೆಂದರೆ, ಇದುವರೆಗೂ ಆ ರೂಢಿಯ ಕಾರಣಕ್ಕಾಗಿಯೇ ಯಾವುದನ್ನು ಶ್ರೇಷ್ಠವೆಂದು ಕರೆದಿರುತ್ತಾರೋ, ಆ ರೂಢಿಯನ್ನು ಮಾಡಿಸಿದವರನ್ನು ಮಹಾಂತರೆಂದು ಕರೆದು ತಮ್ಮ ನಾಯಕರನ್ನಾಗಿ ಮಾಡಿಕೊಂಡಿರುತ್ತಾರೋ, ಅದರಿಂದಾಗಿಯೇ ರೂಪುಗೊಂಡ ಸಮೂಹಗಳ ಹೆಮ್ಮೆಯಿಂದ ಗುರುತಿಸಿಕೊಂಡಿರುತ್ತಾರೋ ಅದೆಲ್ಲವನ್ನೂ ಒಮ್ಮಿಂದೊಮ್ಮೆಲೇ ತಿರಸ್ಕರಿಸಬೇಕಾಗುತ್ತದೆ. ಅದರಿಂದ ದೊಡ್ಡ ದೊಡ್ಡ ಸಮೂಹಗಳು, ಸಮುದಾಯಗಳು, ಸಮಾಜಗಳು, ಧರ್ಮಗಳು, ಅವುಗಳ ನಾಯಕರು ತಮ್ಮ ತಮ್ಮ ಸ್ಥಾನಗಳಿಂದ ಕೆಳಕ್ಕೆ ಬೀಳುತ್ತಾರೆ. ಸರಿ, ರೂಢಿಗೇಡಿಗಳಾಗೇ ಇದ್ದುಬಿಡುವುದು ಉತ್ತಮ. ಮನುಷ್ಯ ಮತ್ತು ಪ್ರಸಂಗಗಳ ಆಯುಷ್ಯ ಅದೆಷ್ಟಿರುತ್ತದೆ? ನಾನು ಜೀವಿಸುವವರೆಗೂ ಈ ರೂಢಿಯಲ್ಲೇ ಹೇಗೋ ಜೀವನವನ್ನು ದೂಡಿ ಮುಗಿಸಿಬಿಡುತ್ತೇನೆ. ಉಳಿದವರು ಅವರ ಸಮಯ ಬಂದಾಗ ಸಾಯುತ್ತಾರೆ ಅಷ್ಟೇ. ರೂಢಿ ಉಳಿಯುತ್ತದೆ. ರೂಢಿಗೇಡಿಗಳು ಉಳಿದೇ ಇರುತ್ತಾರೆ.