ಭ್ರಷ್ಟ ರಾಜಕೀಯ ವ್ಯವಸ್ಥೆಯ ಸುತ್ತ "ವಗಾಬಾಂಡ್"
ಕೆ-ಡ್ರಾಮ
‘‘ಒಬ್ಬ ತನಿಖಾಧಿಕಾರಿ ಯಾರಿಗಾಗಿ ಕೆಲಸ ಮಾಡಬೇಕು? ಸರಕಾರಕ್ಕಾಗಿಯೋ ಅಥವಾ ಜನರಿಗಾಗಿಯೋ? ದೇಶ ಎಂದರೆ ಸರಕಾರವೋ ಅಥವಾ ದೇಶದೊಳಗಿರುವ ಜನರೋ? ಯಾರ ಆಜ್ಞೆಯನ್ನು ಅಧಿಕಾರಿ ಪಾಲಿಸಬೇಕು? ದೇಶದ ಆದೇಶವನ್ನೋ ಅಥವಾ ಸರಕಾರದ ಆದೇಶವನ್ನೋ?’’ 2019ರಲ್ಲಿ ಬಿಡುಗಡೆಗೊಂಡ ಥ್ರಿಲ್ಲರ್ ಕಥಾನಕ ‘ವಗಾಬಾಂಡ್’ ಕೊರಿಯನ್ ಟಿವಿ ಸರಣಿ ಮೇಲಿನ ಪ್ರಶ್ನೆಗಳನ್ನು ಉದ್ದಕ್ಕೂ ಕೇಳುತ್ತದೆ.
ಒಂದು ‘ಪ್ರಯಾಣಿಕ ವಿಮಾನ’ ಹಾರಾಟದಲ್ಲಿರುವಾಗಲೇ ಸ್ಫೋಟಗೊಳ್ಳುತ್ತದೆ. ಸಂತ್ರಸ್ತ ಮಗುವಿನ ಪೋಷಕನೊಬ್ಬನಿಗೆ ಅದು ಉಗ್ರರ ಕೃತ್ಯ ಎನ್ನುವುದು ಸಣ್ಣ ವೀಡಿಯೋ ತುಣುಕಿನಿಂದ ಗೊತ್ತಾಗಿ ಬಿಡುತ್ತದೆ. ಆತ ಆ ಪ್ರಕರಣದ ಹಿಂದೆ ಬೀಳುತ್ತಾನೆ. ಒಬ್ಬ ಮಾಮೂಲಿ ಸ್ಟಂಟ್‌ಕಲಾವಿದ, ನ್ಯಾಶನಲ್ ಇಂಟೆಲಿಜೆಂಟ್ಸ್ ಸರ್ವಿಸ್(ಎನ್‌ಐಎಸ್)ನ ಒಬ್ಬ ಕೆಳ ದರ್ಜೆಯ ಮಹಿಳಾ ಸಿಬ್ಬಂದಿ ಜೊತೆಯಾಗಿ ಈ ಪ್ರಕರಣದ ತನಿಖೆಗೆ ಇಳಿಯುತ್ತಾರೆ.
ಆದರೆ ಅವರು ಇಳಿದ ನೀರಿನ ಆಳ ತಿಳಿಯುವಷ್ಟರಲ್ಲಿ ತಡವಾಗಿರುತ್ತದೆ. ಅತ್ಯುನ್ನತ ಹುದ್ದೆಯಲ್ಲಿರುವ ರಾಜಕಾರಣಿಗಳು, ಪೊಲೀಸರು, ಗೂಂಡಾಗಳು ಜೊತೆಗೆ ಉಗ್ರರು ಇವರೆಲ್ಲರ ಜೊತೆಗೆ ಸೆಣಸಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ತನಿಖೆ ನಡೆಸಬೇಕಾದ ಗುಪ್ತಚರ ಇಲಾಖೆಯ ಮೇಲಾಧಿಕಾರಿಗಳೇ ಇವರ ತನಿಖೆಯನ್ನು ಮಟ್ಟ ಹಾಕುತ್ತಾರೆ. ಸಾಕ್ಷಗಳನ್ನು ನಾಶಪಡಿಸುತ್ತಾರೆ. ಭಯೋತ್ಪಾದಕ ಕೃತ್ಯದಲ್ಲಿ ಪ್ರಮುಖ ಸಾಕ್ಷಿಯೊಬ್ಬನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಇವರು ನಡೆಸುವ ಪ್ರಯತ್ನಗಳನ್ನು ಇಡೀ ದಕ್ಷಿಣ ಕೊರಿಯಾದ ಭ್ರಷ್ಟ ವ್ಯವಸ್ಥೆ ಒಂದಾಗಿ ತಡೆಯಲು ಪ್ರಯತ್ನಿಸುತ್ತದೆ.
16ಕಂತುಗಳನ್ನು ಹೊಂದಿರುವ ‘ವಗಾಬಾಂಡ್’ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗುವ ಥ್ರಿಲ್ಲರ್ ಕಥಾ ವಸ್ತುವನ್ನು ಹಂದಿದೆ. ಡೈನಾಮಿಕ್ ಸಿಸ್ಟಮ್ಸ್ ಕಂಪೆನಿ ಮತ್ತು ಸರಕಾರದ ನಡುವೆ ನಡೆಯುವ ವಿಮಾನ ಖರೀದಿ ಒಪ್ಪಂದ, ಒಂದು ವಿಮಾನ ಸ್ಫೋಟದ ಕಾರಣದಿಂದ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತದೆ.
ಭಯೋತ್ಪಾದಕರ ಕೃತ್ಯದೊಳಗೆ ಶಾಮೀಲಾಗಿರುವ ಬೃಹತ್ ಕಾರ್ಪೊರೇಟ್ ಕಂಪೆನಿಗಳು, ಅವರ ಸೂತ್ರದ ಗೊಂಬೆಗಳಂತೆ ಆಡುವ ರಾಜಕಾರಣಿಗಳು, ರಾಜಕಾರಣಿಗಳ ಕೈಕೆಳಗೆ ಅಸಹಾಯಕರಾಗಿರುವ ತನಿಖಾಧಿಕಾರಿಗಳು, ಪೊಲೀಸ್ ಇಲಾಖೆ ಇವೆಲ್ಲವುಗಳನ್ನು ಎದುರಿಸುತ್ತಾ ಸತ್ಯವನ್ನು ಹುಡುಕಬೇಕಾದ ಅನಿವಾರ್ಯ ಸ್ಥಿತಿಯಲ್ಲಿರುವ ಸ್ಫೋಟ ಸಂತ್ರಸ್ತ ಛಾ ದಲ್ ಗುಣ್(ಲೀ ಸಿಯೋಂಗ್ ಗಿ).
ಅವನ ಹಾದಿಯಲ್ಲಿ ಜೊತೆಯಾಗುವವಳು ಪ್ರಕರಣದ ಗಂಭೀರತೆಯ ಅರಿವಿರದ ನ್ಯಾಶನಲ್ ಇಂಟೆಲಿಜೆಂಟ್ಸ್ ಸರ್ವಿಸ್‌ನ ಕಿರಿಯ ಸಿಬ್ಬಂದಿ ಗೋ ಹ್ಯಾರಿ(ಬೀ ಸುಝಿ). ನಡೆದಿರುವ ಸ್ಫೋಟ ಉಗ್ರರ ಕೃತ್ಯವೆನ್ನುವುದು ಮಾಧ್ಯಮಗಳ ಮುಂದೆ ಛಾ ದಲ್ ಗುಣ್ ಬಹಿರಂಗಪಡಿಸಿದಾಗ, ಸರಕಾರ ಅನಿವಾರ್ಯವಾಗಿ ಅದರ ತನಿಖೆಗಿಳಿಯುವ ನಾಟಕವಾಡುತ್ತದೆ. ಆದರೆ ತನಿಖೆ ಮುಂದುವರಿಯದಂತೆ ಗುಪ್ತಚರ ಸಂಸ್ಥೆಯ ಮುಖ್ಯಸ್ಥರೇ ತಡೆಯಾಗುತ್ತಾರೆ. ದೇಶದ ಪ್ರಧಾನಿಯಿಂದ ಹಿಡಿದು ಅಧ್ಯಕ್ಷರವರೆಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಈ ಸ್ಫೋಟದ ಜೊತೆಗೆ ನಂಟನ್ನು ಹೊಂದಿರುವವರೇ ಆಗಿದ್ದಾರೆ. ಇಡೀ ಸರಕಾರವನ್ನು ಕಾರ್ಪೊರೇಟ್ ಶಕ್ತಿಗಳು ನಿಯಂತ್ರಿಸುತ್ತಿರುವುದನ್ನೂ ಸರಣಿ ಅತ್ಯಂತ ಪರಿಣಾವುಕಾರಿಯಾಗಿ ಬಿಚ್ಚಿಡುತ್ತಾ ಹೋಗುತ್ತದೆ.
ವಿಮಾನ ಖರೀದಿ ಒಪ್ಪಂದವೇ ಒಂದು ಸ್ಫೋಟಕ್ಕೆ ಕಾರಣವಾಯಿತೆ? ಎನ್ನುವ ಪ್ರಶ್ನೆಯ ಮೂಲಕ ಸರಣಿ ತೆರೆದುಕೊಳ್ಳುತ್ತದೆ. ದಕ್ಷಿಣ ಕೊರಿಯಾದ ಭ್ರಷ್ಟ ರಾಜಕೀಯ ವ್ಯವಸ್ಥೆ, ಕಾರ್ಪೊರೇಟ್ ಶಕ್ತಿಗಳ ಪ್ರಾಬಲ್ಯ, ಅವರ ಲಾಭಕ್ಕಾಗಿಯೇ ಸಾಕಿರುವ ಉಗ್ರರು ಎಲ್ಲವನ್ನೂ ನಿರ್ದೇಶಕ ಯೂ ಇನ್ ಸಿಕ್ ಬಿಗಿಯಾಗಿ ಒಂದಕ್ಕೊಂದು ಜೋಡಿಸುತ್ತಾ ಹೋಗುತ್ತಾರೆ.
ಗುಪ್ತಚರ ಇಲಾಖೆಯೇ ಎರಡಾಗಿ ಒಡೆಯುತ್ತದೆ. ಒಂದು ತಂಡ ತನಿಖೆ ನಡೆಸುತ್ತಾ ಹೋದರೆ, ಇನ್ನೊಂದು ತಂಡ ತನಿಖೆಯ ಸಾಕ್ಷಗಳನ್ನು ಅಳಿಸುವುದಕ್ಕೆ ಶತಪ್ರಯತ್ನ ನಡೆಸುತ್ತದೆ. ಉಗ್ರರನ್ನು ದಮನಿಸಬೇಕಾದ ಗುಪ್ತಚರ ಇಲಾಖೆ ಪರಸ್ಪರ ಹೊಡೆದಾಡಿಕೊಂಡು ಸಾಯಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ತನಿಖಾಧಿಕಾರಿಗಳೇ ದೇಶದ್ರೋಹದ ಆರೋಪದಲ್ಲಿ ಬಂಧನಕ್ಕೊಳಗಾಗಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ವಿಮಾನ ಖರೀದಿ ಒಪ್ಪಂದಕ್ಕಾಗಿ ರಾಜಕಾರಣಿಗಳನ್ನು ಸೂತ್ರದ ಗೊಂಬೆಗಳಂತೆ ಕುಣಿಸುವ ಕಾರ್ಪೊರೇಟ್ ಕಂಪೆನಿಗಳ ಒಳ ರಾಜಕೀಯಗಳನ್ನೂ ಈ ಸರಣಿ ತೆರೆದಿಡುತ್ತದೆ. ಹೊಡಿ ಬಡಿ ಥ್ರಿಲ್ಲರ್ ಸರಣಿಯಾಗಿ ಮುಗಿಯದೆ, ದಕ್ಷಿಣ ಕೊರಿಯಾದ ರಾಜಕೀಯ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಪರಿಚುಸುತ್ತಾ ಹೋಗುತ್ತದೆ ವಗಾಬಾಂಡ್.
ಇದು ದಕ್ಷಿಣ ಕೊರಿಯಾದಲ್ಲಿ ನಡೆಯುವ ವಿದ್ಯಮಾನವಾಗಿದ್ದರೂ, ಭಾರತದ ರಾಜಕೀಯ ಸನ್ನಿವೇಶಗಳಿಗೆ ಎಲ್ಲ ರೀತಿಯಲ್ಲೂ ಅನ್ವಯವಾಗುತ್ತದೆ. ಇತ್ತೀಚೆಗೆ ಭಾರತದಲ್ಲಿ ನಡೆದ ‘ರಫೇಲ್ ಯುದ್ಧ ವಿಮಾನ ಹಗರಣ’ವನ್ನು ಇಟ್ಟುಕೊಂಡು ಈ ಚಿತ್ರವನ್ನು ನೋಡಿದರೆ, ಇದು ಅಪ್ಪಟ ಭಾರತೀಯ ಸರಣಿಯಾಗಿ ನಮ್ಮನ್ನು ಕಾಡುತ್ತದೆ.