ಅಂಗಾಂಗ ದಾನ, ದೇಹದಾನಕ್ಕಾಗಿ ವೆಬ್‌ಪೋರ್ಟಲ್ ಪ್ರಾರಂಭ
ಉಡುಪಿ: ಅಂಗಾಂಗ ದಾನ, ದೇಹ ದಾನ ಹಾಗೂ ರಕ್ತ ದಾನಿಗಳಿಗಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ವೆಬ್ ಪೋರ್ಟಲ್ ಒಂದನ್ನು ಪ್ರಾರಂಭಿಸಿದೆ.
ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಅವರು ಈ ವೆಬ್ ಪೋರ್ಟಲ್‌ನ್ನು ಅನಾವರಣಗೊಳಿಸಿದರು. ಈ ವೆಬ್ ಪೋರ್ಟಲ್‌ನ್ನು ಮಾಹೆ ಎಜ್ಯು ವೆಬ್‌ಸೈಟ್‌ಗೆ ಜೋಡಿಸಲಾಗಿದೆ (ಲಿಂಕ್) ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ದೇಹದಾನ ಹಾಗೂ ಅಂಗಾಂಗ ದಾನಗಳಿಗೆ ಮುಂದೆ ಬರುತಿದ್ದಾರೆ.ಆದರೆ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತಿರಲಿಲ್ಲ. ಹೀಗಾಗಿ ಈ ವೆಬ್‌ಪೋರ್ಟಲ್‌ನ್ನು ಆರಂಭಿಸಲಾಗಿದೆ. ಇದರಲ್ಲಿ ದೇಹದಾನ, ಅಂಗಾಂಗದಾನ, ರಕ್ತದಾನಗಳಿಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಎಲ್ಲಾ ಮಾಹಿ ದೊರೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಮಾಹೆಯ ಆಸ್ಪತ್ರೆಗಳಲ್ಲಿ ಇನ್ನೊಬ್ಬರಿಗೆ ಕಸಿ (ಟ್ರಾನ್ಸ್‌ಫ್ಲಾಂಟ್) ಮಾಡ ಬಹುದಾದ ಎಲ್ಲಾ ಅಂಗಾಂಗಗಳ ಬಗ್ಗೆ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ದೇಹದಾನದ ಸಂಪೂರ್ಣ ಮಾಹಿತಿ ಇದರಲ್ಲಿ ದೊರೆಯುತ್ತದೆ. ಇದಕ್ಕಾಗಿ ಇರುವ ನೋಂದಾವಣಿ ಅರ್ಜಿಗಳು ಪೋರ್ಟಲ್‌ನಲ್ಲಿದ್ದು, ಇದರ ಪ್ರಿಂಟೌಟ್‌ನ್ನು ಸಹ ಪಡೆಯಬಹುದಾಗಿದೆ.
ಅಂಗಾಂಗ ದಾನ ಹಾಗೂ ದೇಹದಾನಕ್ಕಿರುವ ಮಾರ್ಗಸೂಚಿಗಳು, ನೀತಿ ನಿಯಮಗಳ ಕುರಿತಂತೆಯೂ ಪೋರ್ಟಲ್‌ನಲ್ಲಿ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಹೀಗಾಗಿ ದಾನಿಗಳಿಗೆ ಬೇಕಾದ ಎಲ್ಲಾ ಮಾಹಿತಿಗಳು ಈ ಪೋರ್ಟಲ್‌ನಲ್ಲಿ ಅಡಕವಾಗಿದ್ದು, ಸುಲಭದಲ್ಲಿ ಇವುಗಳನ್ನು ಓದಬಹುದಾಗಿದೆ ಎಂದು ಪೋರ್ಟಲ್‌ನ ಸಂಯೋಜಕ ಡಾ.ಚಾಂದನಿ ಗುಪ್ತಾ ತಿಳಿಸಿದ್ದಾರೆ.