ತಬ್ಬಲಿಯು ನೀನಾದೆ ಮಗನೆ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದಲ್ಲಿ ಒಟ್ಟು 1.29 ಕೋಟಿ ಜಾನುವಾರುಗಳಿವೆ ಎಂದು 2019ರ ಮಾ. 25ರಂದು ಪಶುಸಂಗೋಪನಾ ಇಲಾಖೆಯ ನಿರ್ದೇಶಕರು ಮಾಹಿತಿ ನೀಡಿದ್ದರು. ಆದರೆ 2022ರ ಡಿಸೆಂಬರ್ 19ರಂದು ಅವರು ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 1.14 ಕೋಟಿ ಜಾನುವಾರುಗಳಷ್ಟೇ ಇವೆ. ಹಾಗಾದರೆ ಉಳಿದ 15 ಲಕ್ಷ ರಾಸುಗಳು ಎಲ್ಲಿ ಹೋಯಿತು? ಎನ್ನುವ ಮಹತ್ವದ ಪ್ರಶ್ನೆಯೊಂದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎತ್ತಿದ್ದಾರೆ. ಗುರುವಾರ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ರಾಜ್ಯದಲ್ಲಿ ಪ್ರತೀ ದಿನ 96 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಈಗ 78 ಲಕ್ಷ ಲೀಟರ್‌ಗೆ ಕುಸಿದಿದೆ. ಪ್ರತಿದಿನ 18 ಲಕ್ಷ ಲೀಟರ್ ಕುಸಿತ ಆದರೆ ಒಂದು ದಿನಕ್ಕೆ 6.66 ಕೋಟಿ ರೂ. ರಾಜ್ಯದ ರೈತರಿಗೆ ನಷ್ಟವಾಗುತ್ತದೆ. ಇದಕ್ಕೆ ಯಾರು ಹೊಣೆ?16 ಲಕ್ಷ ರೈತ ಕುಟುಂಬಗಳು ಹಾಲು ಉತ್ಪಾದನೆಯ ಮೇಲೆ ಅವಲಂಬಿತವಾಗಿವೆ. ರಾಜ್ಯದ ಗ್ರಾಮೀಣ ಪ್ರದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಇದು ಗಂಭೀರ ಪರಿಣಾಮ ಬೀರಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ವಿಪರ್ಯಾಸವೆಂದರೆ, ಪದೇ ಪದೇ ಗೋಶಾಲೆಗಳ ಬಗ್ಗೆ ಆಸಕ್ತಿಯಿಂದ ಮಾತನಾಡುವ ರಾಜಕಾರಣಿಗಳು, ಅದರ ಉಳಿವಿಗೆ ಧಾರಾಳತನ ತೋರುವ ಸರಕಾರ ನೇತೃತ್ವವನ್ನು ವಹಿಸಿದವರು ಹೈನೋದ್ಯಮವನ್ನು ಅವಲಂಬಿಸಿದ ರೈತರ ವಿಷಯ ಬಂದಾಗ ಮಾತ್ರ ವೌನವಾಗುತ್ತಾರೆ. 2019ರಿಂದ 2022ರ ವರೆಗೆ ಈ ರಾಜ್ಯದಲ್ಲಿ ಸರಕಾರದ ಅಂಕಿಅಂಶಗಳ ಪ್ರಕಾರವೇ 15 ಲಕ್ಷ ರಾಸುಗಳು ಕಾಣೆಯಾಗಿವೆ. ಈ ರಾಸುಗಳು ಎಲ್ಲಿ ಹೋಯಿತು ಎನ್ನುವ ಪ್ರಶ್ನೆಗೆ ಸರಕಾರ ಉತ್ತರ ಹೇಳಲೇಬೇಕಾಗಿದೆ.
ಗೋಹತ್ಯೆ ನಿಷೇಧ ಕಾಯ್ದೆಯ ಮೂಲಕ ಜಾನುವಾರು ಮಾರಾಟ ಮಾಡುವ ರೈತರ ಹಕ್ಕಿನ ಮೇಲೆ ಸರಕಾರ ನಿಯಂತ್ರಣ ಹೇರಿ, ಆ ಮೂಲಕ ನಾವು ಗೋವುಗಳ ಸಂತಾನವನ್ನು ಉಳಿಸಿದ್ದೇವೆ ಎಂದು ಸರಕಾರ ಘೋಷಿಸಿಕೊಂಡಿತು. ಈ ನಾಡಿನಲ್ಲಿ ಸಾವಿರಾರು ವರ್ಷಗಳಿಂದ ಗೋವುಗಳನ್ನು ರೈತರು ಸಾಕುತ್ತಾ ಬಂದಿದ್ದಾರೆ. ಇಂದು ನಾಡಿನಲ್ಲಿ ಗೋವುಗಳು ಉಳಿದಿರುವುದೇ ಈ ರೈತರ ಕಾರಣದಿಂದ. ರಾಜ್ಯದಲ್ಲಿ ಸರಕಾರಿ ಅಂಕಿ ಅಂಶಗಳ ಪ್ರಕಾರ 16 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳು ಹಾಲು ಉತ್ಪಾದನೆ ಮಾಡುತ್ತಾ ಬದುಕನ್ನು ಕಂಡುಕೊಂಡಿವೆ. ಜಾನುವಾರುಗಳನ್ನು ಸಾಕುವುದೆಂದರೆ ಸುಲಭವಿಲ್ಲ. ಅದರ ಹಿಂದೆ ಆರ್ಥಿಕ ಲೆಕ್ಕಾಚಾರಗಳಿವೆ. ಯಾವ ರೈತರೂ, ‘ಗೋವು ಪವಿತ್ರ, ಅದು ನಮ್ಮ ದೇವತೆ’ ಎನ್ನುವ ಕಾರಣಕ್ಕೆ ಸಾಕುತ್ತಿಲ್ಲ. ಅವುಗಳು ಆರ್ಥಿಕವಾಗಿ ಲಾಭದಾಯಕ ಎನ್ನುವ ಕಾರಣಕ್ಕಾಗಿ ಸಾಕುತ್ತಿದ್ದಾರೆ. ಆ ಕಾರಣದಿಂದಲೇ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರತೀ ಹಟ್ಟಿಗಳಲ್ಲೂ ಗೋವುಗಳು ಉಳಿದುಕೊಂಡಿವೆ. ರೈತನ ಆರ್ಥಿಕ ಲೆಕ್ಕಾಚಾರಗಳೇ ಹೈನೋದ್ಯಮವನ್ನು ಲಾಭದಾಯಕಗೊಳಿಸುತ್ತಾ ಬಂದಿವೆ.
ನಾಡಿನಲ್ಲಿ ಗೋವುಗಳನ್ನು ಹೆಚ್ಚಿಸುವ ಉದ್ದೇಶ ಸರಕಾರಕ್ಕಿದೆಯಾದರೆ, ಗೋಸಾಕಣೆ ಮಾಡುತ್ತಿರುವ ರೈತರಿಗೆ ಹೆಚ್ಚು ಪ್ರೋತ್ಸಾಹಗಳನ್ನು ನೀಡಬೇಕು. ಹೈನೋದ್ಯಮಕ್ಕಿರುವ ಅಡೆತಡೆಗಳನ್ನು ನಿವಾರಿಸಬೇಕು. ಇದರಿಂದಾಗಿ ರೈತರು ಇನ್ನಷ್ಟು ಆಸಕ್ತಿಯಿಂದ ಗೋ ಸಾಕಣೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಇದು ನಾಡಿನಾದ್ಯಂತ ಗೋವುಗಳ ಸಂಖ್ಯೆಯನ್ನು ಸಹಜವಾಗಿಯೇ ಹೆಚ್ಚಿಸುತ್ತದೆ. ಆದರೆ ಸರಕಾರ ರೈತರಿಗೆ ಪ್ರೋತ್ಸಾಹ ನೀಡುವ ಬದಲು ತಮ್ಮ ಜಾನುವಾರುಗಳನ್ನು ಮಾರುವ ಹಕ್ಕನ್ನೇ ರೈತರಿಂದ ಕಿತ್ತುಕೊಂಡು, ಅದನ್ನು ಬೀದಿಯಲ್ಲಿರುವ ನಕಲಿ ಗೋರಕ್ಷಕರಿಗೆ, ಗೋಶಾಲೆಗಳ ಹೆಸರಿನಲ್ಲಿ ದಂಧೆ ನಡೆಸುತ್ತಿರುವ ಗೋ ಸಂರಕ್ಷಕರಿಗೆ ನೀಡಿತು. ತಮ್ಮ ಅನುಪಯುಕ್ತ ಹಸುಗಳನ್ನು ಮಾರಿ, ಅದರಿಂದ ಬಂದ ಹಣದಿಂದ ಇರುವ ಹಸುಗಳನ್ನು ಸಾಕುತ್ತಾ, ಇನ್ನಷ್ಟು ಹೊಸ ಹಸುಗಳನ್ನು ಕೊಂಡುಕೊಳ್ಳುವ ಉದ್ಯಮ ಸರಪಣಿಗೆ ಭಾರೀ ಧಕ್ಕೆಯಾಯಿತು. ಅನುಪಯುಕ್ತ ಹಸುಗಳನ್ನು ಹಟ್ಟಿಯಲ್ಲಿಟ್ಟು ಸಾಕಲೂ ಆಗದೆ, ಮಾರಲೂ ಆಗದೆ ರೈತರು ಅತಂತ್ರರಾದರು. ಉತ್ತರ ಭಾರತದಲ್ಲಂತೂ ಸರಕಾರದ ನೀತಿಯ ಕಾರಣದಿಂದ ರೈತರು ಅನುಪಯುಕ್ತ ಹಸುಗಳನ್ನು ಬೀದಿಗೆ ಬಿಡುತ್ತಿದ್ದಾರೆ. ರಸ್ತೆಗಳಲ್ಲಿ, ರೈಲ್ವೇ ಹಳಿಗಳಲ್ಲಿ ಈ ಹಸುಗಳು ಭಾರೀ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ರಸ್ತೆಯಲ್ಲೇ ರೋಗಪೀಡಿತಗೊಂಡು ಸಾಯುತ್ತಿವೆ. ಇದೇ ಸಂದರ್ಭದಲ್ಲಿ ಬೆಲೆಬಾಳುವ ತಮ್ಮ ಅನುಪಯುಕ್ತ ಹಸುಗಳನ್ನು ಗೋಶಾಲೆಗಳಿಗೆ ಪುಕ್ಕಟೆಯಾಗಿ ಒಪ್ಪಿಸಲು ಸಿದ್ಧರಿಲ್ಲದ ರೈತರು, ಅದನ್ನು ಮಾರಲು ಯತ್ನಿಸಿ ಪೊಲೀಸ್ ಕೇಸುಗಳನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಬೀದಿ ರೌಡಿಗಳಿಂದ ಹಲ್ಲೆಗೂ ಒಳಗಾಗಿದ್ದಾರೆ. ರೈತರು ಎಂದಿಗೂ ತಮ್ಮ ಗೋವುಗಳು ಕಳ್ಳತನವಾಗುತ್ತಿವೆ ಎಂದು ಬೀದಿಗಿಳಿದು ಪ್ರತಿಭಟನೆ ನಡೆಸಿದ ಉದಾಹರಣೆಗಳಿಲ್ಲ. ಎಲ್ಲ ಕಳ್ಳತನಗಳಂತೆಯೇ ಗೋವುಗಳ ಕಳ್ಳತನಗಳು ನಡೆದಿವೆಯಾದರೂ, ಅದರ ಬಗೆಗಿನ ಯಾವುದೇ ಅಂಕಿಅಂಶಗಳು ಸರಕಾರದ ಬಳಿ ಅಧಿಕೃತವಾಗಿ ಇಲ್ಲ. ಗೋರಕ್ಷಣೆಯ ಹೆಸರಿನಲ್ಲಿ ಗೋಹತ್ಯೆಯ ವಿರುದ್ಧ ಕಾನೂನು ತರಬೇಕೆಂದು ಹೋರಾಟ ನಡೆಸಿದವರು, ಈಗಲೂ ನಡೆಸುತ್ತಿರುವವರು ಗೋ ಸಾಕಣೆಯೊಂದಿಗೆ ಯಾವುದೇ ಸಂಬಂಧವಿಲ್ಲದ ಸಂಘಪರಿವಾರ ಸಂಘಟನೆಗಳು. ಇವರ ರಾಜಕೀಯ ಅಗತ್ಯಕ್ಕಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು, ರೈತರ ಗೋಸಾಕಣೆಯಲ್ಲಿ ಹಸ್ತಕ್ಷೇಪ ನಡೆಸಲಾಯಿತು.
ಇದರಿಂದಾಗಿ ರೈತರ ಬದುಕಿನಲ್ಲಿ ಆದ ಅನಾಹುತಗಳು ಒಂದೆರಡಲ್ಲ. ರಾಜ್ಯಾದ್ಯಂತ ಪ್ರತೀ ತಿಂಗಳು ಗೋವುಗಳ ಜಾತ್ರೆ ನಡೆಯುತ್ತಿದ್ದವು. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಗೋವುಗಳ ಮಾರಾಟಗಳು ನಡೆಯುತ್ತಿದ್ದವು. ರೈತರಿಗೆ ಈ ಜಾತ್ರೆಯಿಂದ ಭಾರೀ ಅನುಕೂಲಗಳಿದ್ದವು. ಆದರೆ ಇಂದು ಹಳ್ಳಿಗಳಲ್ಲಿ ನಡೆಯುತ್ತಿರುವ ಈ ಜಾತ್ರೆಗಳು ನಿಂತಿವೆ. ಒಂದೆಡೆ ಈ ಜಾತ್ರೆಗಳಿಗೆ ಗೋವುಗಳನ್ನು ಸಾಗಿಸುವ ಸಂದರ್ಭದಲ್ಲಿ ಎದುರಾಗುವ ಕಾನೂನು ತೊಡಕುಗಳು. ಇನ್ನೊಂದೆಡೆ ನಕಲಿ ಗೋರಕ್ಷಕರ ವೇಷದಲ್ಲಿರುವ ಸಂಘಪರಿವಾರದ ಗೂಂಡಾಗಳ ದೌರ್ಜನ್ಯಗಳು. ಮಗದೊಂದೆಡೆ ಜಾತ್ರೆಗಳಲ್ಲಿ ಗೋವುಗಳನ್ನು ಕೊಂಡುಕೊಳ್ಳಲು ವ್ಯಾಪಾರಿಗಳೇ ಆಗಮಿಸದೇ ಇರುವುದು. ಇವೆಲ್ಲ ಕಾರಣದಿಂದಾಗಿ ಜಾತ್ರೆಗೆ ತಂದ ಗೋವುಗಳನ್ನು ಮಾರಲಾಗದೆ ರೈತರು ಕಣ್ಣೀರು ಹಾಕತೊಡಗಿದರು. ಸರಕಾರದ ಹೊಸ ಕಾನೂನು ಜಾರಿಗೆ ಬಂದ ದಿನದಿಂದ, ನಿಜಕ್ಕೂ ಗೋವುಗಳನ್ನು ಸಾಕುತ್ತಾ ಬಂದ ರೈತರು ತಬ್ಬಲಿಗಳಾದರು. ಅವರ ನೋವು ನಲಿವುಗಳನ್ನು ಕೇಳುವವರೇ ಇಲ್ಲವಾದರು. ಇದೇ ಸಂದರ್ಭದಲ್ಲಿ ಹೈನೋದ್ಯಮಗಳ ಜೊತೆಗೆ ಯಾವ ಸಂಬಂಧವೂ ಇಲ್ಲದ ನಕಲಿ ಗೋರಕ್ಷಕರು ಬೀದಿಗಳಲ್ಲಿ ಕೊಬ್ಬತೊಡಗಿದರು. ಇವರುಗಳ ನೇತೃತ್ವದಲ್ಲೇ ಗೋಶಾಲೆಗಳು ತೆರೆದುಕೊಂಡವು. ಈ ಅನುಪಯುಕ್ತ ಗೋವುಗಳನ್ನು ಸಾಕಲು ಸರಕಾರ ಕೋಟಿಗಟ್ಟಲೆ ಹಣವನ್ನು ಪ್ರತೀ ವರ್ಷ ಬಿಡುಗಡೆ ಮಾಡತೊಡಗಿತು. ಅಷ್ಟೇ ಅಲ್ಲ, ಈ ಗೋಶಾಲೆಗಳನ್ನು ಸಾಕುವುದಕ್ಕಾಗಿಯೇ ಸರಕಾರ ದೇಣಿಗೆ ಸಂಗ್ರಹಕ್ಕೂ ಇಳಿದಿದೆ.
ಈ ಸರಕಾರ ಉತ್ತರಿಸಬೇಕಾಗಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದ ದಿನದಿಂದ ರಾಜ್ಯದಲ್ಲಿ ಗೋವುಗಳ ಸಂಖ್ಯೆ ಯಾಕೆ ಇಳಿಮುಖವಾಗುತ್ತಿವೆ? ಈ ಕಾನೂನು ಜಾರಿಗೆ ಬರುವ ಮೊದಲು ರಾಜ್ಯದಲ್ಲಿದ್ದ ಗೋಸಾಕಣೆ ಮಾಡುತ್ತಿರುವ ರೈತರ ಕುಟುಂಬಗಳ ಸಂಖ್ಯೆ ಯಾಕೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿವೆ. 18 ಲಕ್ಷಕ್ಕೂ ಅಧಿಕ ಲೀಟರ್ ಹಾಲು ಕುಸಿತ ಕಾಣಲು ಕಾರಣವೇನು? ಇಂದು ಸರಕಾರದ ಕಾನೂನಿನ ಉಪಟಳದಿಂದ ರೈತರು ಗೋಸಾಕಣೆಯಿಂದ ದೂರ ಸರಿಯುತ್ತಿದ್ದಾರೆ. ಪರಿಣಾಮವಾಗಿ ದೇಶದಲ್ಲಿ ಗೋವುಗಳ ಸಂಖ್ಯೆ ಇಳಿಮುಖವಾಗುತ್ತಿವೆ. ಗೋವುಗಳ ಜೊತೆಗೆ ಯಾವ ಸಂಬಂಧವೂ ಇಲ್ಲದ ಜನರು ನಡೆಸುವ ಗೋಶಾಲೆಗಳಿಂದ ಗೋವುಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ ಎನ್ನುವುದು ಈಗಾಗಲೇ ಬಯಲಾಗಿದೆ. ಈ ಗೋಶಾಲೆಗಳು ಅಕ್ರಮಗಳ ಬೀಡಾಗಿವೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪೂಜಿಸುವುದಕ್ಕೂ ಗೋವುಗಳ ತತ್ವಾರವಾಗಲಿದೆ. ಅದಕ್ಕೆ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು. ರೈತರ ಗೋಸಾಕಣೆಯಲ್ಲಿ ಸರಕಾರ ನಡೆಸುತ್ತಿರುವ ಹಸ್ತಕ್ಷೇಪ ನಿಲ್ಲಬೇಕು. ತಾವು ಸಾಕಿದ ಗೋವುಗಳನ್ನು ಯಾರಿಗೆ, ಯಾವಾಗ, ಎಷ್ಟು ದರಕ್ಕೆ ಮಾರಬೇಕು ಎನ್ನುವ ಹಕ್ಕನ್ನು ರೈತರಿಗೆ ಮರಳಿಸಬೇಕು. ಎಲ್ಲ ಗೋಶಾಲೆಗಳನ್ನು ಮುಚ್ಚಿಸಿ ಅದಕ್ಕೆ ನೀಡುತ್ತಿರುವ ಅನುದಾನಗಳನ್ನು ಗೋವುಗಳನ್ನು ಸಾಕುತ್ತಿರುವ ರೈತರಿಗೆ ದೊರಕುವಂತೆ ಮಾಡಬೇಕು. ತಬ್ಬಲಿಯಾಗಿರುವ ರೈತರ ಅಳಲನ್ನು ಸರಕಾರ ಇನ್ನಾದರೂ ಆಲಿಸಬೇಕು.