ಈ ಯುದ್ಧಗಳ ಬಗ್ಗೆ ನ್ಯಾಷನಲ್ ಆರ್ಕೈವ್ನಲ್ಲಿ ದಾಖಲೆಗಳೇ ಇಲ್ಲ!
ಹೊಸದಿಲ್ಲಿ: ಭಾರತದ ನ್ಯಾಷನಲ್ ಆರ್ಕೈವ್ನಲ್ಲಿ (National Archives) ಭಾರತದ ದೊಡ್ಡ ಪ್ರಮಾಣದ ಯುದ್ಧಗಳು (wars) ಎನಿಸಿದ 1962, 1965 ಮತ್ತು 1971ರ ಯುದ್ಧಗಳ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಎಂಬ ಅಚ್ಚರಿದಾಯಕ ಅಂಶ ಬಹಿರಂಗವಾಗಿದೆ. ಅಂತೆಯೇ ದೇಶದ ಹಸಿರು ಕ್ರಾಂತಿಯ ಬಗ್ಗೆ ಕೂಡಾ ಆರ್ಕೈವ್ನಲ್ಲಿ ಯಾವುದೇ ದಾಖಲೆಗಳಿಲ್ಲ. ಕೇಂದ್ರ ಸರ್ಕಾರದ ಹಲವು ಇಲಾಖೆಗಳು ತಮ್ಮ ದಾಖಲೆಗಳನ್ನು NAI ಜತೆ ಹಲವು ವರ್ಷಗಳಿಂದ ಹಂಚಿಕೊಂಡಿಲ್ಲ. ರಕ್ಷಣಾ ಸಚಿವಾಲಯವಂತೂ 1960ರ ಬಳಿಕ ಯಾವುದೇ ದಾಖಲೆಗಳನ್ನು ಎನ್ಎಐಗೆ ನೀಡಿಲ್ಲ ಎಂದು ವರದಿಯಾಗಿದೆ.
ಎನ್ಎಐ ದೇಶದ ವರ್ಗೀಕೃತವಲ್ಲದ ಪ್ರಮುಖ ಐತಿಹಾಸಿಕ ದಾಖಲೆಗಳ ಸಂಗ್ರಹಾಗಾರವಾಗಿದೆ. ಆದರೆ ಎನ್ಎಐ ಸುಪರ್ದಿಯಲ್ಲಿ ಈ ದಾಖಲೆಗಳಿಲ್ಲ ಎಂದ ಮಾತ್ರಕ್ಕೆ ಸರ್ಕಾರದ ಬಳಿ ಈ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂಬ ಅರ್ಥವಲ್ಲ. ಎನ್ಎಐ ಸುಪರ್ದಿಗೆ ಇವುಗಳನ್ನು ವರ್ಗಾಯಿಸಿಲ್ಲ ಎನ್ನುವುದು ಇದರಿಂದ ತಿಳಿದುಬರುತ್ತದೆ. ರಕ್ಷಣಾ ಸಚಿವಾಲಯ ಸ್ವಾತಂತ್ರ್ಯದ ಬಳಿಕ ಇದುವರೆಗೆ ಕೇವಲ 476 ಕಡತಗಳನ್ನು ಮಾತ್ರ ಎನ್ಎಐಗೆ ವರ್ಗಾಯಿಸಿದೆ.
ಸಂಶೋಧಕರು ಮತ್ತು ಸಾರ್ವಜನಿಕರು ನಿಯತವಾಗಿ ಇಂಥ ದಾಖಲೆಗಳನ್ನು ಬಳಸುವುದರಿಂದ ಎನ್ಎಐನಲ್ಲಿ ದಾಖಲೆಗಳನ್ನು ಇರಿಸುವುದು ತೀರಾ ಮುಖ್ಯ ಎಂದು ಅಧಿಕಾರಿಗಳು ಹೇಳುತ್ತಾರೆ. ಸರ್ಕಾರಿ ಇಲಾಖೆಗಳಿಂದ ಹಳೆಯ ಕಡತಗಳನ್ನು ನೇರವಾಗಿ ಪಡೆಯುವುದು ಸಾರ್ವಜನಿಕರಿಗೆ ಕಷ್ಟಸಾಧ್ಯ. ಆದ್ದರಿಂದ ಸಂಶೋಧಕರು ಇತರ ಮೂಲಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ದೇಶದಲ್ಲಿ 151 ಸಚಿವಾಲಯಗಳು ಮತ್ತು ಇಲಾಖೆಗಳಿವೆ. ಆದರೆ ಎನ್ಎಐ ಬಳಿ ಕೇವಲ 36 ಸಚಿವಾಲಯ ಹಾಗೂ ಇಲಾಖೆಗಳು ಸೇರಿದಂತೆ 64 ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳಿವೆ ಎಂದ ಎನ್ಎಐ ಮಹಾನಿರ್ದೇಶಕ ಚಂದರ್ ಸಿನ್ಹಾ, ’ಉತ್ತಮ ಆಡಳಿತ’ ಕುರಿತು ಆಯೋಜಿಸಿದ್ದ ಸಮಾರಂಭದಲ್ಲಿ ಹೇಳಿದ್ದಾರೆ. ಭಾರತದ 1962ರ ಯುದ್ಧ, 1965ರ ಯುದ್ಧ ಹಾಗೂ 1971ರ ಯುದ್ಧಗಳು ಭಾರತದ ಐತಿಹಾಸಿಕ ವಿಜಯದ ಕ್ಷಣಗಳು. ಆದರೆ ಈ ಬಗೆಗಿನ ಇತಿಹಾಸವನ್ನು ನಾವು ಇಲ್ಲಿ ಇರಿಸಿಲ್ಲ. ಸ್ವಾತಂತ್ರ್ಯ ಬಳಿಕ ನಾವು ನಮ್ಮ ಇತಿಹಾಸದ ದೊಡ್ಡ ಪಾಲನ್ನು ಕಳೆದುಕೊಳ್ಳುತ್ತಿದ್ದೇವೆಯೇ ಎನ್ನುವುದು ಪ್ರಶ್ನೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಎನ್ಆರ್ಸಿ ಪ್ರಕ್ರಿಯೆಯಲ್ಲಿ ಅಕ್ರಮ: ಸಿಎಜಿ ವರದಿ