ಗೋವಧೆ ನಿಷೇಧ ಕಾಯ್ದೆ ಬೇಕಿತ್ತೇ?
ಪ್ರಸಕ್ತ ಸರಕಾರವೇ ಕೊಟ್ಟಿರುವ ಅಂಕಿಅಂಶದ ಪ್ರಕಾರ 2019ರಿಂದ 2022ರ ವರೆಗೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 15ಲಕ್ಷದಷ್ಟು ರಾಸುಗಳು ಇಲ್ಲವಾಗಿವೆ. ವರ್ಷದಿಂದ ವರ್ಷಕ್ಕೆ ವೃದ್ಧಿಯಾಗಬೇಕೆಂಬ ಉದ್ದೇಶದಿಂದ ಸರಕಾರ ಗೋವಧೆ ನಿಷೇಧ ಕಾನೂನು ಜಾರಿಗೆ ತಂದಿತ್ತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ರಾಸುಗಳು ಇಳಿಮುಖವಾಗುತ್ತಿವೆ. ಸರಕಾರ ಈ ಬಗ್ಗೆ ಉತ್ತರಿಸಲಾರದೆ ಮೌನವಾಗಿದೆ.
ಹಿಂದೂಗಳ ವೋಟ್ಬ್ಯಾಂಕಿನ ಮೇಲೆ ಕಣ್ಣಿಟ್ಟ ಬಿಜೆಪಿ ಸರಕಾರ ದಲಿತರು ಮತ್ತು ಅಲ್ಪಸಂಖ್ಯಾತರು ಗೋಮಾಂಸ ಭಕ್ಷಣೆಗಾಗಿ ದನಗಳನ್ನು ವಧಿಸುತ್ತಾರೆಂದು ಭಾವಿಸಿ ತರಾತುರಿಯಲ್ಲಿ ಗೋವಧೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದದ್ದು ಎಲ್ಲರಿಗೂ ತಿಳಿದ ವಿಚಾರವೇ. ಇಲ್ಲವಾಗಿದ್ದರೆ ಸಹಸ್ರಾರು ವರ್ಷಗಳಿಂದ ಇಲ್ಲದ ಭಯ ಈಗೇಕೆ ಬಂತು? ಆದರೆ ಅದರಿಂದಾದ ಪರಿಣಾಮವೇ ಬೇರೆ. ಅತ್ತ ರೈತರ ಆರ್ಥಿಕ ಪರಿಸ್ಥಿತಿಯೂ ಕುಸಿಯುತ್ತಿದೆ. ಇತ್ತ ಗೋಸಂತತಿಯೂ ಅಳಿಯುತ್ತಿದೆ. ಇನ್ನು ಕೋಟ್ಯಾನುಕೋಟಿ ರೂ. ಅನುದಾನ ಪಡೆಯುತ್ತಿರುವ ಗೋಶಾಲೆಗಳಂತೂ ಭ್ರಷ್ಟಾಚಾರ ತರಬೇತಿ ಶಾಲೆಗಳಾಗಿ ಪರಿಣಮಿಸುತ್ತಿವೆ.
ಈ ಬಗ್ಗೆ ನಕಲಿ ಗೋರಕ್ಷಕದಳದ ಮಧ್ಯವರ್ತಿಗಳೂ ಈಗ ತೆಪ್ಪಗಾಗಿದ್ದಾರೆ. ಇತ್ತೀಚೆಗೆ ರಾಷ್ಟ್ರಾದ್ಯಂತ ದನಗಳಿಗೆ ಚರ್ಮಗಂಟು ರೋಗವೆಂಬ ಅಂಟು ಜಾಢ್ಯ ತಗಲಿ ಕೋಟ್ಯಂತರ ರಾಸುಗಳು ಉತ್ತರ ಇಂಡಿಯಾದ ಗಡಿ ಜಿಲ್ಲೆಗಳಲ್ಲಿ ಪ್ರಾಣ ಬಿಟ್ಟವು ಎಂಬ ವರದಿಗಳಿವೆ. ನಮ್ಮ ರಾಜ್ಯದಲ್ಲೂ ಗಂಟುರೋಗಕ್ಕೆ ರಾಸುಗಳು ಬಲಿಯಾಗುತ್ತಿವೆ. ಅದಕ್ಕೆ ಸೂಕ್ತ ಪಶುವೈದ್ಯಕೀಯ ಔಷಧೋಪಚಾರ ಇಲ್ಲವೆಂಬ ವರದಿ ಇದೆ. ಅವುಗಳ ಪೋಷಣೆ ಮಾಡುವ ಗೋಶಾಲೆ ಸಂಬಳದಾರರಿಗೆ ದನಗಳ ಮೇಲೆ ಪ್ರೀತಿ ಇಲ್ಲದೆ ಸಾಕಷ್ಟು ಸತ್ತಿವೆ- ಸಾಯುತ್ತಿವೆ. ಗೋಶಾಲೆಗಳಲ್ಲಿ ಮಂದೆ ಮಂದೆಯಾಗಿ ಕೂಡಿದಾಗ, ಅಂಟುರೋಗ ಬೇಗ ಹರಡುತ್ತದೆ. ಈ ಪರಿಜ್ಞಾನವೂ ಇಲ್ಲದೆ 'ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು' ಎಂಬಂತೆ ಗೋಶಾಲೆಗಳನ್ನು ತೆರೆದು ಗೋವುಗಳ ಅಭಿವೃದ್ಧಿಯಾಗುತ್ತದೆ ಎಂದು ಸರಕಾರ ಕೈ ತೊಳೆದುಕೊಂಡಿತು. ಆದರೆ ಮನೆಯ ಮಕ್ಕಳೆಂಬಂತೆ ಸಾಕುತ್ತಿದ್ದ ರೈತರನ್ನು ಮರೆತು ಬಿಟ್ಟಿತು. ಆದ್ದರಿಂದ ಗೋಶಾಲೆಗಳ ಸ್ಥಿತಿ-ಗತಿ ಹೀನಾಯವಾಯಿತು. ಅದಕ್ಕೆ ನೀಡುವ ಕೋಟಿ ಕೋಟಿ ಹಣವನ್ನು ರೈತರಿಗೆ ಸಬ್ಸಿಡಿಯಾಗಿ ಕೊಟ್ಟು ಸಾಕಲು ಹೇಳಿದ್ದರೆ, ಗೋತಳಿಗಳ ಅಭಿವೃದ್ಧಿಯೂ ಆಗುತ್ತಿತ್ತು, ರೈತರ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತಿತ್ತು.
ಎಂದೆಂದೂ ಗೋವುಗಳನ್ನು ಮುಟ್ಟಿ ಮೈಸವರದ, ಗೊಂದಿಗೆಗೆ ಕಟ್ಟಿ ಹುಲ್ಲು ನೀರು ಹಾಕದ, ಸೆಗಣಿ ಗಂಜಳ ಬಾಚಿ ದನದ ಕೊಟ್ಟಿಗೆಯನ್ನು ಶುದ್ಧ ಮಾಡದ ನಕಲಿ ಗೋಸಂರಕ್ಷಕರ ಬಗ್ಗೆ ಸರಕಾರಕ್ಕಿರುವ ನಂಬಿಕೆ ಶತಶತಮಾನಗಳಿಂದ ಗೋವುಗಳನ್ನು ಸಾಕಿ ಬೆಳೆಸಿ ದೇಶವನ್ನು ಆರ್ಥಿಕವಾಗಿ ಸಮೃದ್ಧಗೊಳಿಸುತ್ತಿದ್ದ ರೈತರ ಮೇಲೆ ಇಲ್ಲದೆ ಹೋಯಿತು. ಈ ಕಾಯ್ದೆ ರೈತರ ಆರ್ಥಿಕ ಹಾಗೂ ಸಾಂಸ್ಕೃತಿಕ ಸಂಪತ್ತನ್ನೇ ಕಸಿದುಕೊಂಡುಬಿಟ್ಟಿತು. ಬೆದೆಗೆ ಬಂದ ಹಸುವಿಗೆ ಹೋರಿ ಬಿಡಿಸಲಾಗಲಿ, ಬರಡು ದನಗಳನ್ನು ಮಾರಾಟ ಮಾಡಲಾಗಲಿ, ಗಾಡಿಗೆ ಕೊಂಡ ಎತ್ತು-ಹೋರಿಗಳನ್ನು ಊರಿಂದ ಊರಿಗೆ ಹೊಡೆದುಕೊಂಡು ಹೋಗಲಾಗಲಿ ಕಡೆಗೆ ರೋಗ ಪೀಡಿತ ರಾಸುವನ್ನು ಆಸ್ಪತ್ರೆಗೆ ಸಾಗಿಸುವುದಕ್ಕಾಗಲಿ ರೈತ ಈಗ ಸ್ವತಂತ್ರನಲ್ಲ. ಪ್ರತಿಯೊಂದು ರಾಸುವಿನ ಜಾತಕ ಇಟ್ಟಿರಬೇಕು; ಎಲ್ಲಿಗೆ? ಯಾಕೆ? ಮುಂತಾಗಿ ಕರೆದುಕೊಂಡು ಹೋಗುತ್ತೇನೆಂಬುದಕ್ಕೆ ರೈತ ಪರವಾನಿಗೆ ಪತ್ರ ಹೊಂದಿರಬೇಕು. ಕಡೆಗೆ ಸತ್ತ ರಾಸುವನ್ನು ವಿಲೇವಾರಿ ಮಾಡುವುದಕ್ಕೂ ಅವನು ಸ್ವತಂತ್ರನಲ್ಲ. ಪ್ರತೀದಿನ ನಾನಾ ತಾಪತ್ರಯಗಳಲ್ಲಿ ಮುಳುಗಿರುವ ರೈತರು ದನಕರುಗಳ ಜಾತಕ ಕುಂಡಲಿ ವಗೈರೆ ಎಲ್ಲಿಡಬೇಕು? ಇದಕ್ಕೆಲ್ಲ ತಲೆ ರೋಸಿಹೋದ ಅವರು ಈಗ ದನಗಳ ಸಾಕಣೆಗೇ ವಿದಾಯ ಹೇಳುತ್ತಿದ್ದಾರೆ. ಇದರ ಪರಿಣಾಮ ದಿನಗಳೆದ ಹಾಗೆಲ್ಲ ಹಸುಗಳ ಸಂಖ್ಯೆ ಇಳಿಮುಖವಾಗುತ್ತಿದೆಯೇ ಹೊರತು ಹೆಚ್ಚಳವಾಗುತ್ತಿಲ್ಲ. ಅದನ್ನು ಸರಕಾರವೇ ಒಪ್ಪಿಕೊಂಡಿದೆ.
ಆದ್ದರಿಂದ ಈ ಸರಣಿ ಸಮಸ್ಯೆಗಳಿಗೆ ಒಂದೇ ಪರಿಹಾರವೆಂದರೆ ದನಗಳ ಕಾಯದ ಜನಗಳ ಮಾತು ಕೇಳದೆ, ಪ್ರತಿಷ್ಠೆಯ ವ್ಯಸನಕ್ಕೆ ಬೀಳದೆ, ಗೋವಧೆ ನಿಷೇಧ ಕಾಯ್ದೆಯನ್ನು ಬೇಷರತ್ತಾಗಿ ವಾಪಸು ಪಡೆಯುವುದೇ ಸೂಕ್ತ. ಇದರಿಂದ ಗೋಸಂತತಿ ವೃದ್ಧಿಯೊಂದಿಗೆ ರೈತರ ಅಭಿವೃದ್ಧಿಯನ್ನು ಸಾಧಿಸಿದಂತಾಗುತ್ತದೆ. ಇಲ್ಲವಾದರೆ, ಮುಂದೊಂದು ದಿನ ರೈತರು ಹಾಗೂ ಗೋವುಗಳೂ ಒಟ್ಟಾಗಿಯೇ ನೀನಾರಿಗಾದೆಯೋ ಎಲೆ ಮಾನವಾ? ಎಂದು ಶಾಪ ಹಾಕಬೇಕಾದೀತು!