ಈ 'ತುಳಸಿ ಪೂಜನ್' ಅಗತ್ಯವಿತ್ತೇ?
ಮಾನ್ಯರೇ,
ಈ ವರ್ಷ ಡಿಸೆಂಬರ್ 25ರಂದು ಹೊಸದಾಗಿ 'ತುಳಸಿ ಪೂಜನ್' ಎಂಬ ಹಬ್ಬವನ್ನು ಹಿಂದೂ ಮಹಿಳೆಯರೆಲ್ಲಾ ಆಚರಿಸಬೇಕು ಎಂದು ಹಿಂದುತ್ವ ಸಂಘಟನೆಗಳು ಹಾಗೂ ಅದಕ್ಕೆ ಸಲಗ್ನ ರಾಜಕೀಯ ಪಕ್ಷದವರು ಸಲಹೆ ಕೊಟ್ಟಿದ್ದರು. ಈ ತುಳಸಿ ಪೂಜೆಯ ಲಾಭದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪ್ರಚಾರ ಸಹ ನಡೆಯಿತು. ಆದರೆ ಇದರ ಹಿಂದೆ ಇರುವುದು ಕ್ರೈಸ್ತರ ಕ್ರಿಸ್ಮಸ್‌ಗೆ ಎದುರಾಗಿ ಅದೇ ದಿನ ಹಿಂದೂಗಳ ಹಬ್ಬವೊಂದು ಇರಬೇಕು ಎಂಬ ಉದ್ದೇಶದಿಂದ ಈ ಹೊಸ ತುಳಸಿ ಪೂಜೆಯನ್ನು ಆಚರಣೆಗೆ ತರುವ ಪ್ರಯತ್ನ ನಡೆಯುತ್ತಿರುವಂತಿದೆ. ಹಾಗೆ ನೋಡಿದರೆ ದೀಪಾವಳಿ ಆದ 11ನೆೇ ದಿನ ನಾವು ತುಳಸಿ ಹಬ್ಬ (ತುಳಸಿ ವಿವಾಹ) ಆಚರಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಹಾಗಿರುವಾಗ ಮತ್ತೊಂದು ತುಳಸಿ ಪೂಜೆಯ ಅಗತ್ಯವೇನಿದೆ? ಇನ್ನೊಂದು ಮುಖ್ಯ ವಿಷಯವೆಂದರೆ ಅದೇ ಡಿಸೆಂಬರ್ 25ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಶುರು ಮಾಡಿರುವ 'ಮನುಸ್ಮೃತಿ ದಹನ'ದ' ವಾರ್ಷಿಕ ಆಚರಣೆ ಕೂಡಾ ಇದೆ! ಇದರಿಂದಲೂ ಜನರ ಗಮನ ಬೇರೆಡೆ ಸೆಳೆಯಲು ಈ ಹೊಸ 'ತುಳಸಿ ಪೂಜನ್' ಆಚರಣೆ ಜಾರಿಗೆ ತಂದಿರಬಹುದೇ? ಕ್ರೈಸ್ತರು ಕ್ರಿಸ್ಮಸ್ ದಿನ 'ಕ್ರಿಸ್ಮಸ್ ಟ್ರೀ' ಎಂದು ಪೈನ್ ಅಥವಾ ಸ್ಪ್ರುಸ್ ಮರದ ಟೊಂಗೆಗಳನ್ನು ಸಿಂಗರಿಸಿ ಮನೆಯಲ್ಲಿ ಇಡುತ್ತಾರೆ. ಮೊದಲೆಲ್ಲಾ ನಿಜವಾದ ಗಿಡದ ಟೊಂಗೆಗಳನ್ನೇ ಬಳಸುತ್ತಿದ್ದರು, ಆದರೆ ಈಗ ಮರಗಿಡಗಳು ನಾಶ ಆಗಬಾರದು ಎಂಬ ಕಾರಣಕ್ಕೆ ಪ್ಲಾಸ್ಟಿಕ್ ಗಿಡಗಳನ್ನು ಬಳಸುತ್ತಾರೆ. ಅದಕ್ಕೆ ಎದುರಾಗಿ ಈಗ ಕೋಮುವಾದಿಗಳು ನಿಜವಾದ ತುಳಸಿ ಗಿಡ ತಂದಿದ್ದಾರೆ!
ಕಳೆದ ವರ್ಷ ಹಿಂದುತ್ವ ಸಂಘಟನೆಗಳು ಕ್ರೈಸ್ತರ ಹೊಸ ವರ್ಷವನ್ನು ಹಿಂದೂಗಳು ಆಚರಿಸಬಾರದು ಎಂದು ಆದೇಶ ಹೊರಡಿಸಿ ಹಲವೆಡೆ ಜನರು ಹೊಸ ವರ್ಷ ಆಚರಿಸುತ್ತಿದ್ದ ಸ್ಥಳಗಳಿಗೆ ದಾಳಿ ಮಾಡಿ ಕಿಡಿಗೇಡಿತನ ತೋರಿಸಿದ್ದವು. ಒಟ್ಟಾರೆ ಬೇರೆ ಧರ್ಮದವರ ಶಾಂತಿ ಮತ್ತು ಸಹೋದರತ್ವ ಸಾರುವ ಪರ್ವಗಳಿಂದಲೂ ಕೆಲವು ಕೋಮುವಾದಿ ಸಂಘಟನೆಗಳಿಗೆ ಅಲರ್ಜಿ ಇರುವುದು ಖೇದಕರ. ಸುಮಾರು 20 ವರ್ಷಗಳ ಹಿಂದೆ ಉತ್ತರ ಭಾರತೀಯ ಚಿನ್ನಾಭರಣ ವ್ಯಾಪಾರಿಗಳು ಒಟ್ಟುಗೂಡಿ 'ಅಕ್ಷಯ ತೃತೀಯ' ಎಂಬ ಹೊಸ ಹಬ್ಬವನ್ನು ಆಚರಣೆಗೆ ತಂದು ಅದನ್ನು ಇಡೀ ದೇಶಕ್ಕೆ ಹರಡಿ ಮೌಢ್ಯಭರಿತ ಮಹಿಳೆಯರಿಗೆ ದುಬಾರಿ ಚಿನ್ನಾಭರಣ ಮಾರಿ ಪ್ರತೀ ವರ್ಷ ದಂಡಿಯಾಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಕ್ಷಯ ತೃತೀಯದ ಹಿಂದೆ ಕೇವಲ ಲಾಭಬಡುಕ ವ್ಯಾಪಾರಿ ತಂತ್ರ ಇತ್ತೇ ವಿನಹ ದ್ವೇಷ ಇರಲಿಲ್ಲ. ಆದರೆ ಈಗಿನ ಡಿಸೆಂಬರ್ 25ರ ತುಳಸಿ ಪೂಜನದ ಹಿಂದೆ ದ್ವೇಷ ಸಾಧನೆಯ ತಂತ್ರ ಮಾತ್ರ ಇದೆ ಅನಿಸುತ್ತಿದೆ. ಪೂಜೆಗಳು ಹಬ್ಬಗಳು ಇರುವುದು ಸಮಾಜವನ್ನು ಬೆಸೆಯಲೇ ಹೊರತು ಸಮಾಜವನ್ನು ಒಡೆಯಲು ಅಲ್ಲ.!