ಮತ್ತೆ ಮತ್ತೆ ಸರಕಾರದ ಅಸ್ತ್ರವಾಗುವ ತನಿಖಾ ಸಂಸ್ಥೆಗಳು
ತನ್ನ ಕೈಯಲ್ಲಿರುವ ಸಿಬಿಐ ನಿಷ್ಪಕ್ಷಪಾತಿ ತನಿಖೆ ಮಾಡುತ್ತದೆಂದು ಎಲ್ಲರೂ ನಂಬಬೇಕೆಂದು ಬಯಸುವ ಬಿಜೆಪಿಗೆ, ಬಿಜೆಪಿಯೇತರ ರಾಜ್ಯಗಳಲ್ಲಿನ ಎಸ್‌ಐಟಿ ತನಿಖೆ ಬಗ್ಗೆ ಮಾತ್ರ ಖಂಡಿತ ನಂಬಿಕೆಯಿಲ್ಲ. ಬಿಜೆಪಿಯ ದೊಡ್ಡ ವ್ಯಕ್ತಿಗಳೇ ಆಪರೇಷನ್ ಕಮಲ ಪ್ರಯತ್ನದಲ್ಲಿ ಸಿಕ್ಕಿಹಾಕಿಕೊಂಡು ಎಸ್‌ಐಟಿ ತನಿಖೆ ಎದುರಿಸುವ ಹಾಗಾದಾಗ ಏನೇನಾಯಿತು?
ಅಧಿಕಾರ ಹಿಡಿಯಲು ಬಿಜೆಪಿ ಬಳಸುವ ಅಡ್ಡದಾರಿ ಆಪರೇಷನ್ ಕಮಲ. ಇದಕ್ಕಾಗಿ ಅದು ಕೋಟ್ಯಂತರ ರೂ. ಆಮಿಷ ಒಡ್ಡುವುದು ಒಂದೆಡೆ, ಅದಕ್ಕೆ ಬಗ್ಗಲಿಲ್ಲವೆಂದಾದರೆ ಈ.ಡಿ., ಸಿಬಿಐನಂಥ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುವುದು. ತನ್ನ ಕೈಯಲ್ಲಿರುವ ಸಿಬಿಐ ನಿಷ್ಪಕ್ಷಪಾತಿ ತನಿಖೆ ಮಾಡುತ್ತದೆಂದು ಎಲ್ಲರೂ ನಂಬಬೇಕೆಂದು ಬಯಸುವ ಬಿಜೆಪಿಗೆ, ಬಿಜೆಪಿಯೇತರ ರಾಜ್ಯಗಳಲ್ಲಿನ ಎಸ್‌ಐಟಿ ತನಿಖೆ ಬಗ್ಗೆ ಮಾತ್ರ ಖಂಡಿತ ನಂಬಿಕೆಯಿಲ್ಲ. ಬಿಜೆಪಿಯ ದೊಡ್ಡ ವ್ಯಕ್ತಿಗಳೇ ಆಪರೇಷನ್ ಕಮಲ ಪ್ರಯತ್ನದಲ್ಲಿ ಸಿಕ್ಕಿಹಾಕಿಕೊಂಡು ಎಸ್‌ಐಟಿ ತನಿಖೆ ಎದುರಿಸುವ ಹಾಗಾದಾಗ ಏನೇನಾಯಿತು?
ಬಿಜೆಪಿಯೇತರ ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ಸದಾ ಪ್ರಯತ್ನ ಮಾಡುವ ಬಿಜೆಪಿ, ತೆಲಂಗಾಣದಲ್ಲಿ ಕೂಡ ಹಾಗೆ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿತ್ತು. ದಿಲ್ಲಿ, ಪಂಜಾಬ್‌ನಲ್ಲಿ ಆಪರೇಷನ್ ಕಮಲ ವಿಚಾರವಾಗಿ ಆಮ್ ಆದ್ಮಿ ಪಕ್ಷ ಹಲವು ಸಲ ಆರೋಪ ಮಾಡಿದ್ದರೂ ಮೈಕೊಡವಿಕೊಂಡು ಇರುತ್ತಿದ್ದವರು, ತೆಲಂಗಾಣದಲ್ಲಿ ಆಪರೇಷನ್ ಕಮಲ ಪ್ರಯೋಗಕ್ಕೆ ಹೋಗಿ ವಿಚಾರಣೆ ಎದುರಿಸಬೇಕಾಗಿ ಬಂದಿತ್ತು.
ಆದರೆ, ಸಿಕ್ಕಿಹಾಕಿಕೊಂಡವರು ಸಾಮಾನ್ಯರಾಗಿರಲಿಲ್ಲ. ಹಾಗಾಗಿ, ಪ್ರಕರಣದ ತನಿಖೆಗೆ ನೇಮಿಸಲಾಗಿದ್ದ ಎಸ್‌ಐಟಿ ಬಗ್ಗೆ ತನಗೆ ನಂಬಿಕೆಯೇ ಇಲ್ಲ ಎಂದಿತು ಬಿಜೆಪಿ. ಎಸ್‌ಐಟಿ ರದ್ದಾಗಿ, ಪ್ರಕರಣ ನೇರ ಸಿಬಿಐ ಕೈಗೆ ಹೋಯಿತು.
ತಿಂಗಳ ಹಿಂದೆ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾದದ್ದು, ಆಪರೇಷನ್ ಕಮಲ ಆರೋಪವನ್ನು ತೆಲಂಗಾಣ ಬಿಜೆಪಿ ನಿರಾಕರಿಸುತ್ತಿದ್ದಾಗಲೇ, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಬಿಡುಗಡೆ ಮಾಡಿದ ಆ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೊಗಳು. ವೈರಲ್ ಆಗಿದ್ದ ಅವುಗಳಲ್ಲಿನ ಸಂಭಾಷಣೆಗಳಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೆಸರು ಪ್ರಸ್ತಾಪವಾಗಿತ್ತು. ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.
ದೊಡ್ಡ ಮೊತ್ತದ ಹಣದ ಆಮಿಷವೊಡ್ಡಿ ತಮ್ಮನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆಯಲು ಯತ್ನಿಸಿದೆ ಎಂದು ಬಿಆರ್‌ಎಸ್‌ನ ನಾಲ್ವರು ಶಾಸಕರು ಮಾಡಿದ ಆರೋಪದ ಹಿನ್ನೆಲೆಯಲ್ಲಿ ತನಿಖೆ ಶುರುವಾಗಿತ್ತು. ತೆಲಂಗಾಣದ ಫಾರ್ಮ್ ಹೌಸ್ ಒಂದರಲ್ಲಿ ಈ ನಾಲ್ವರು ಶಾಸಕರನ್ನು ಬಿಜೆಪಿ ಕಡೆಯವರೆನ್ನಲಾದ ಮೂವರು ಭೇಟಿಯಾಗಿ ಪಕ್ಷಕ್ಕೆ ಬರಲು ಹಣದ ಆಮಿಷವೊಡ್ಡಿದ್ದರು. ಇಂಥದೊಂದು ಪ್ರಯತ್ನ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ಪೊಲೀಸರು ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿ, ಆ ಮೂವರನ್ನೂ ಬಂಧಿಸಿದ್ದರು. ಜೊತೆಗೆ 15 ಕೋಟಿ ಹಣವನ್ನೂ ಸೀಜ್ ಮಾಡಲಾಗಿತ್ತು.
ಪೊಲೀಸರಿಗೆ ಸಿಕ್ಕಿಬಿದ್ದ ಮೂವರು ಪ್ರಮುಖ ಆರೋಪಿಗಳು ಬಿಜೆಪಿ ಹಿನ್ನೆಲೆಯವರು ಎಂದು ವರದಿಯಾಗಿತ್ತು. ಆರೋಪಿಗಳನ್ನು ಹರ್ಯಾಣದ ಫರೀದಾಬಾದ್ ಮೂಲದ ಪೂಜಾರಿಯಾಗಿರುವ ರಾಮಚಂದ್ರ ಭಾರತಿ ಸ್ವಾಮೀಜಿ ಅಲಿಯಾಸ್ ಸತೀಶ್ ಶರ್ಮಾ (33), ತಿರುಪತಿಯ ಶ್ರೀಮನಾಥ ರಾಜಪೀಠದ ಪೀಠಾಧಿಪತಿ ಡಿ.ಸಿಂಹಯಾಜಿ (45) ಹಾಗೂ ಸರೂರನಗರದ ಉದ್ಯಮಿ ನಂದಕುಮಾರ್ (48) ಎಂದು ಗುರುತಿಸಲಾಗಿತ್ತು. ಈ ನಂದಕುಮಾರ್, ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿಯವರ ಆಪ್ತ ಎನ್ನಲಾಗಿದೆ. ಈ ಮೂವರೂ ಅಕ್ಟೋಬರ್ 26ರಂದು ಹೈದರಾಬಾದ್‌ನ ಅಝೀಝ್‌ನಗರ ಫಾರ್ಮ್‌ಹೌಸ್‌ನಲ್ಲಿ ಬಿಆರ್‌ಎಸ್ ಶಾಸಕರಾದ ಪಿ.ರೋಹಿತ್ ರೆಡ್ಡಿ, ಹರ್ಷವರ್ಧನ್ ರೆಡ್ಡಿ, ರೇಗ ಕಾಂತಾರಾವ್, ಗುವ್ವಲ ಬಾಲರಾಜ್‌ರನ್ನು ಖರೀದಿಸಲು ಮಾತುಕತೆಯಲ್ಲಿ ತೊಡಗಿದ್ದಾಗಲೇ ತೆಲಂಗಾಣದ ಸೈಬರಾಬಾದ್ ಪೊಲೀಸರು ದಾಳಿ ನಡೆಸಿ, 15 ಕೋಟಿ ರೂ. ನಗದಿನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಂಧಿತ ಮೂವರೂ ಆಪರೇಷನ್ ಕಮಲಕ್ಕಾಗಿ ಈ ಹಣದೊಂದಿಗೆ ಬಂದಿದ್ದರೆನ್ನಲಾಗಿತ್ತು.
ಮಾತುಕತೆ ನಡೆದ ಫಾರ್ಮ್‌ಹೌಸ್ ಶಾಸಕ ರೋಹಿತ್ ರೆಡ್ಡಿಗೆ ಸೇರಿದ್ದು, ಅವರ ದೂರಿನ ಮೇರೆಗೇ ಪೊಲೀಸ್ ದಾಳಿ ನಡೆದಿತ್ತು. ಶಾಸಕರನ್ನು ಖರೀದಿಸಲು ಒಬ್ಬೊಬ್ಬರಿಗೂ ತಲಾ 100 ಕೋಟಿ ರೂ. ಆಫರ್ ನೀಡಲಾಗಿದೆ. ಹಣ, ಕಾಂಟ್ರ್ಯಾಕ್ಟ್ ಮತ್ತು ಹುದ್ದೆಗಳ ಆಮಿಷವನ್ನೂ ಒಡ್ಡಲಾಗಿತ್ತು ಎಂದು ಬಿಆರ್‌ಎಸ್ ಆರೋಪಿಸಿತ್ತು. ಆರೋಪಿಗಳು ಶಾಸಕರ ಜೊತೆ ನಡೆಸಿದ್ದಾರೆನ್ನಲಾಗುವ ಸಂಭಾಷಣೆಗಳು ಇಡೀ ಆಪರೇಷನ್ ಕಮಲದ ಜಾತಕವನ್ನೇ ಬಯಲು ಮಾಡಿದ್ದವು. ಬಿ.ಎಲ್.ಸಂತೋಷ್ ಪರವಾಗಿ ಮಾತನಾಡುತ್ತಿದ್ದೇನೆ ಎಂದು ರಾಮಚಂದ್ರ ಭಾರತಿ ಸ್ವಾಮೀಜಿ ಹೇಳಿರುವುದು, ‘‘ನೀವು ಬಿಜೆಪಿ ಸೇರಿ, ಸಂತೋಷ್ ಎಲ್ಲವನ್ನೂ ನೋಡಿಕೊಳ್ಳುತ್ತಾರೆ’’ ಎನ್ನುವುದು, ‘‘ಅವರು ಈ.ಡಿ. ಮತ್ತು ಸಿಬಿಐ ದಾಳಿ ಆಗದಂತೆ ನೋಡಿಕೊಳ್ಳುತ್ತಾರೆ’’ ಎನ್ನುವುದು ಎಲ್ಲವೂ ಬಯಲಾಗಿತ್ತು. ವೈರಲ್ ಆಗಿರುವ ವೀಡಿಯೊ ಒಂದರಲ್ಲಿ ಕೇರಳದಲ್ಲಿ ಬಿಜೆಪಿ ಮೈತ್ರಿ ಪಕ್ಷವಾಗಿರುವ ಬಿಜೆಡಿಎಸ್‌ನ ನಾಯಕ, ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ತುಷಾರ್ ವೆಳ್ಳಪ್ಪಳ್ಳಿ ಬಿಆರ್‌ಎಸ್ ಶಾಸಕನ ಜೊತೆ ಮಾತನಾಡಿರುವುದು ದಾಖಲಾಗಿತ್ತು. ಅಮಿತ್ ಶಾ ಆಪ್ತನೆನ್ನಲಾದ ತುಷಾರ್ ವೆಳ್ಳಪ್ಪಳ್ಳಿ, ಆಪರೇಷನ್ ಕಮಲದ ಬಗ್ಗೆ ಮಾತನಾಡಲು ಬಿ.ಎಲ್.ಸಂತೋಷ್ ಭೇಟಿಯ ಬಗ್ಗೆ ಹೇಳುವುದು ವೀಡಿಯೊದಲ್ಲಿತ್ತು. ವೆಳ್ಳಪ್ಪಳ್ಳಿ ಮಾತಿನಲ್ಲಿ ಜೆ.ಪಿ.ನಡ್ಡಾ ಹೆಸರೂ ಪ್ರಸ್ತಾಪವಾಗುತ್ತದೆ. ಇನ್ನುಳಿದ ದಲ್ಲಾಳಿಗಳು ಆಡಿರುವ ಮಾತುಗಳಲ್ಲಿ, ಬಿಜೆಪಿಗೆ ಸೇರಿದ ತಕ್ಷಣ ಬಿ ಫಾರ್ಮ್ ಗ್ಯಾರಂಟಿ, ರಾಜ್ಯ ತಂಡ ಇದರಲ್ಲಿ ತಲೆಹಾಕುವುದಿಲ್ಲ, ಎಲ್ಲವನ್ನೂ ಕೇಂದ್ರ ತಂಡವೇ ನೋಡಿಕೊಳ್ಳುತ್ತದೆ, ತಂಡದಲ್ಲಿ ಮೊದಲನೆಯವರು ಬಿ.ಎಲ್.ಸಂತೋಷ್, ಎರಡನೆಯವರು ಅಮಿತ್ ಶಾ, ಮೂರನೆಯವರು ಜೆ.ಪಿ.ನಡ್ಡಾ ಎಂಬ ವಿಚಾರಗಳೆಲ್ಲ ದಾಖಲಾಗಿದ್ದವು. ಪ್ರತೀ ಶಾಸಕರಿಗೆ 50 ಕೋಟಿ ರೂ. ನೀಡುವುದಾಗಿಯೂ ದಲ್ಲಾಳಿಗಳು ಹೇಳುವುದು ದಾಖಲಾಗಿತ್ತು. ಕರ್ನಾಟಕ, ಮಹಾರಾಷ್ಟ್ರ ಸರಕಾರಗಳನ್ನು ಉರುಳಿಸಿದ ಬಗ್ಗೆಯೂ ದಲ್ಲಾಳಿಯೊಬ್ಬ ಹೇಳುವುದು ವೀಡಿಯೊದಲ್ಲಿತ್ತು.
ಈ ಆಪರೇಷನ್ ಕಮಲ ಪ್ರಕರಣದಲ್ಲಿ ಬಂಧಿತ ಮೂವರು ಆರೋಪಿಗಳ ಜೊತೆಗಿನ ಸಂಬಂಧದ ಆರೋಪದ ಮೇಲೆ ಬಿ.ಎಲ್.ಸಂತೋಷ್ ಸೇರಿದಂತೆ ನಾಲ್ವರಿಗೆ ತೆಲಂಗಾಣ ಹೈಕೋರ್ಟ್ ನಿರ್ದೇಶನದಂತೆ ತನಿಖೆ ಕೈಗೆತ್ತಿಕೊಂಡಿದ್ದ ಎಸ್‌ಐಟಿ ನೋಟಿಸ್ ಜಾರಿ ಮಾಡಿತ್ತು. ವೆಳ್ಳಪ್ಪಳ್ಳಿ ತುಷಾರ್, ಅಲ್ಲದೆ ಕೇರಳದ ಮತ್ತೋರ್ವ ವ್ಯಕ್ತಿ ಜಗ್ಗು ಸ್ವಾಮಿ ಹಾಗೂ ಬಿ.ಶ್ರೀನಿವಾಸ್ ಇತರ ಮೂವರು. ಇವರಲ್ಲಿ ಬಿ.ಶ್ರೀನಿವಾಸ್ ವಕೀಲರಾಗಿದ್ದು, ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಸಂಬಂಧಿ.
ಈ ನಾಲ್ವರಿಗೂ ಒಂದೇ ದಿನ ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿತ್ತಾದರೂ ನವೆಂಬರ್ 21ರಂದು ಎಸ್‌ಐಟಿ ಮುಂದೆ ಹಾಜರಾದದ್ದು ಬಿ.ಶ್ರೀನಿವಾಸ್ ಒಬ್ಬರೇ. ಮರುದಿನವೂ ಅವರು ವಿಚಾರಣೆಗೆ ಹಾಜರಾಗಿದ್ದರೆನ್ನಲಾಗಿದೆ. ಅವರನ್ನು ಸುಮಾರು ಏಳು ಗಂಟೆಗಳ ಕಾಲ ಪ್ರಶ್ನಿಸಲಾಗಿದೆ ಎಂದು ವರದಿಗಳಿವೆ. ಎಸ್‌ಐಟಿ ಇತರ ಮೂವರಿಗೂ ಲುಕ್‌ಔಟ್ ನೋಟಿಸ್ ಹೊರಡಿಸಿತ್ತು. ಅಲ್ಲದೆ ವಿಚಾರಣೆಗೆ ಬಿ.ಎಲ್.ಸಂತೋಷ್ ಮತ್ತಿಬ್ಬರು ಆರೋಪಿಗಳು ಹಾಜರಾಗದಿರುವ ಬಗ್ಗೆ ತೆಲಂಗಾಣ ಹೈಕೋರ್ಟ್‌ಗೂ ತಿಳಿಸಿತ್ತು. ಹೈಕೋರ್ಟ್‌ನ ಏಕಸದಸ್ಯ ಪೀಠವು ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸು ತ್ತಿರುವುದರಿಂದ, ತನಿಖೆಯ ಪ್ರಗತಿಯ ಬಗ್ಗೆ ಎಸ್‌ಐಟಿ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಮಧ್ಯೆ ಸಂತೋಷ್‌ಗೆ ನೀಡಲಾದ ನೋಟಿಸ್‌ಗೆ ತಡೆ ನೀಡುವಂತೆ ಬಿಜೆಪಿ ರಾಜ್ಯ ಘಟಕ ಮಾಡಿದ್ದ ಮನವಿಯನ್ನು ತಿರಸ್ಕರಿಸಿದ್ದ ತೆಲಂಗಾಣ ಹೈಕೋರ್ಟ್, ಸಂತೋಷ್ ಅವರನ್ನು ಬಂಧಿಸದಿರುವಂತೆ ಸೂಚಿಸಿತ್ತು. ಆದರೆ ಎಸ್‌ಐಟಿ ವಿಧಿಸಿರುವ ಷರತ್ತುಗಳನ್ನು ಪೂರೈಸಬೇಕೆಂಬ ಸೂಚನೆಯನ್ನು ಸಂತೋಷ್ ಅವರಿಗೂ ನ್ಯಾಯಾಲಯ ಕೊಟ್ಟಿತ್ತು. ಇದೆಲ್ಲ ಬೆಳವಣಿಗೆ ಬಳಿಕವೂ ಅವರು ವಿಚಾರಣೆಗೆ ಹಾಜರಾಗದಿರುವ ಹಿನ್ನೆಲೆಯಲ್ಲಿ ಗುರುವಾರ ಹೈಕೋರ್ಟ್ ನಿರ್ದೇಶನದಂತೆ ಎಸ್‌ಐಟಿ ಸಂತೋಷ್ ಅವರಿಗೆ ಎರಡನೇ ನೋಟಿಸನ್ನು ಜಾರಿ ಮಾಡಿತ್ತು. ನವೆಂಬರ್ 26 ಇಲ್ಲವೇ ಸೋಮವಾರ ಅಂದರೆ ನವೆಂಬರ್ 28ರಂದು ವಿಚಾರಣೆಗೆ ಹಾಜರಾಗುವಂತೆ ಎರಡನೇ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು.
ಆದರೆ, ಇದೆಲ್ಲದರ ನಡುವೆಯೇ ಎಸ್‌ಐಟಿ ತನಿಖೆಗೆ ನಿರ್ದೇಶಿಸಿದ್ದ ತೆಲಂಗಾಣ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಒಂದುವೇಳೆ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದಲ್ಲಿ ಅದನ್ನು ಪರಿಶೀಲಿಸುವಂತೆಯೂ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಇದಾದ ಬಳಿಕ ಬಂಧಿತ ಆರೋಪಿಗಳೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ನಂತರ, ಎಸ್‌ಐಟಿ ತನಿಖೆಯಲ್ಲಿ ತನಗೆ ನಂಬಿಕೆಯಿಲ್ಲ, ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆರೋಪಿಗಳು ಹಾಗೂ ತೆಲಂಗಾಣ ಬಿಜೆಪಿ ಘಟಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ನಿರ್ದೇಶನ ನೀಡಿತು. ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋಗಲು ತೆಲಂಗಾಣ ಸರಕಾರ ನಿರ್ಧಾರ ಮಾಡಿದೆ.
ಈ ನಡುವೆಯೇ ಕೆಸಿಆರ್ ಪುತ್ರಿ ಕವಿತಾ ಅವರನ್ನು ದಿಲ್ಲಿ ಮದ್ಯ ಹಗರಣದಲ್ಲಿ ಆರೋಪಿಯೆಂದು ಉಲ್ಲೇಖಿಸಿ, ಸಿಬಿಐ ವಿಚಾರಣೆ ನಡೆಸಿತು. ಇನ್ನೊಂದೆಡೆ, ಆಪರೇಷನ್ ಕಮಲ ವಿಚಾರವಾಗಿ ದೂರು ನೀಡಿದ್ದ ಶಾಸಕ ರೋಹಿತ್ ರೆಡ್ಡಿಗೂ ಈ.ಡಿ. ಸಮನ್ಸ್ ಜಾರಿಗೊಳಿಸಿತ್ತು. ಅವರು ಎರಡು ಬಾರಿ ಏಜೆನ್ಸಿಯೆದುರು ಹಾಜರಾಗಿದ್ದರು. ಆದರೆ ಸಮನ್ಸ್ ಹೊರಡಿಸಿದ್ದೇಕೆ ಎಂದೇ ಈ.ಡಿ. ಅಧಿಕಾರಿಗಳು ತಿಳಿಸಲಿಲ್ಲ ಎಂದು ರೋಹಿತ್ ರೆಡ್ಡಿ ಹೇಳಿದ್ದರು.