ಹೃದಯದ ರಂಧ್ರಗಳು
‘ಉತ್ತಮ ಮಹಿಳೆ’ ಎಂಬ ಬಿರುದಿಗೆ ಹೆಣ್ಣು ಮಗಳೊಬ್ಬಳು ಎದುರಿಸಬೇಕಾದದ್ದೇನು?
ಕತೆಯೊಂದರ ಹಿಂದೆ...
ಅತ್ತೆ ಅಂದು ಹೇಳಿದ್ದು ಸರಿಯಾಗಿತ್ತು. ಆ ಸಮಯದಲ್ಲಿ ಅವರು ನನಗೆ ಹೇಳಲು ಪ್ರಯತ್ನಿಸಿದ್ದನ್ನು ನನಗೆ ಗ್ರಹಿಸಲು ಸಾಧ್ಯವಾಗಿರಲಿಲ್ಲ, ಆದರೆ ಒಂದು ದಿನ ಅವಳು ಹೇಳಿದ ಪ್ರತಿಯೊಂದು ಪದದ ಪೂರ್ಣ ಒಳಾರ್ಥವನ್ನು ಗ್ರಹಿಸುವ ದಿನ ಬರುತ್ತದೆ ಎಂದು ಗೊತ್ತಿತ್ತು. ಅದು ನಿಜವಾಯಿತು ಕೂಡ, ಒಂದು ದಿನ ನನ್ನ ಆತ್ಮೀಯ ಸ್ನೇಹಿತೆಯ ಹೃದಯದಲ್ಲಿ ರಂಧ್ರಗಳು ಕಾಣಿಸಿಕೊಂಡವು. ನಂತರ, ನನಗೆ ನನ್ನ ಚಿಕ್ಕಮ್ಮನ ಬಗ್ಗೆ ತಿಳಿಯಿತು. ವರ್ಷಗಳ ನಂತರ, ಒಂದು ರಂಧ್ರ ನನ್ನ ಹೃದಯದಲ್ಲಿ ಕಾಣಿಸಿಕೊಂಡಿತು, ನಂತರ ಇನ್ನೊಂದು ವರ್ಷ ಹಾಗೂ ಮತ್ತೊಂದು ವರ್ಷ ಹೀಗೆ ನಾನು ಲೆಕ್ಕಾಚಾರ ಮಾಡುವುದನ್ನು ನಿಲ್ಲಿಸುವವರೆಗೆ.
‘‘ಗರ್ಭಿಣಿಯಾಗಿದ್ದಾಗಲೇ ತನ್ನ ಕರುಗಳನ್ನು ಪದೇ ಪದೇ ಕಳೆದುಕೊಳ್ಳುತ್ತಿದ್ದ ಹಸುವಿನ ಕಥೆ ಕೇಳಿದ್ದೀಯಾ?’’ ಎಂದು ಅತ್ತೆ ಕೇಳಿದ್ದ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸಿದ್ದೆ. ಕುತೂಹಲ ತಡೆಯಲಾರದೆ ‘‘ಹಸುವಿಗೆ ಏನಾಗಿತ್ತು?’’ ಎಂದು ಕೇಳಿದ್ದೆ. ‘‘ಆ ಹಸು ಗರ್ಭ ಧರಿಸುತ್ತಿತ್ತು. ಆದರೆ ಪ್ರತೀ ಬಾರಿ ಸುಮಾರು ಆರು ಅಥವಾ ಏಳು ತಿಂಗಳಾಗುವಷ್ಟರಲ್ಲಿ ಗರ್ಭದಲ್ಲಿರುವ ಕರು ಸಾಯುತ್ತಿತ್ತು. ಹೀಗೆ ಐದನೇ ಬಾರಿಯೂ ತನ್ನ ಕರುವನ್ನು ಕಳೆದುಕೊಂಡಿತು.
ಆದರೆ ಆರನೇ ಬಾರಿ ಗರ್ಭಾವಸ್ಥೆಯನ್ನು ಪೂರ್ಣಗೊಳಿಸಿ ಕರುವಿಗೆ ಜನ್ಮ ನೀಡಿತ್ತು. ಇದಾಗಿ ಹಲವು ವರ್ಷಗಳ ನಂತರ ಹಸು ಕೊನೆಯುಸಿರೆಳೆದಿತ್ತು. ಜಾನುವಾರುಗಳು ವಯಸ್ಸಾದಾಗ ಅಥವಾ ಯಾವುದೇ ಪ್ರಯೋಜನವಿಲ್ಲವೆಂದಾಗ ಮಾಲಕರು ಮಾಂಸಕ್ಕಾಗಿ ಅವುಗಳನ್ನು ಕೊಲ್ಲುವುದು ಸಾಮಾನ್ಯ. ಹೀಗಾಗಿ ಆ ಹಸುವಿನ ಮಾಲಕನೂ ಸತ್ತ ಹಸುವನ್ನು ಮಾಂಸಕ್ಕಾಗಿ ಕತ್ತರಿಸಿದ್ದ. ಆಗ ಆತ ನೋಡಿದ್ದು ಆ ಹಸುವಿನ ಹೃದಯದಲ್ಲಿದ್ದ ರಂಧ್ರಗಳನ್ನು. ಈ ರೀತಿಯ ಹಸುವನ್ನು ತಿನ್ನಲು ಸಾಧ್ಯವಿಲ್ಲ. ಮಾಲಕ ಹೃದಯವನ್ನು ಕತ್ತರಿಸಿ ತೆಗೆದು ಪರಿಶೀಲಿಸಿದ್ದ. ಹೃದಯದಲ್ಲಿ ಐದು ರಂಧ್ರಗಳಿದ್ದವು’’
‘‘ಕಳೆದುಕೊಂಡ ಪ್ರತೀ ಕರುವಿಗೆ ಒಂದು ರಂಧ್ರ’’ ನಾನು ಪಿಸುಗುಟ್ಟಿದೆ. ಅತ್ತೆ ‘‘ಹೌದು’’ ಎಂದರು.
‘‘ಮಾಲಕ ಹಸುವನ್ನು ಏನು ಮಾಡಿದ?’’ ಎಂದು ಕುತೂಹಲದಿಂದ ಕೇಳಿದ್ದೆ ಮತ್ತು ಹಸುವನ್ನು ತಿನ್ನದೆ ದಫನ ಮಾಡಿರಬಹುದು ಎಂದು ಆಶಿಸಿದ್ದೆ.
‘‘ಅವನು ಹಸುವನ್ನು ಹೂಳಲಿಲ್ಲ’’ ಎಂದು ಅತ್ತೆ ಹೇಳಿದರು. ಮುಂದುವರಿದು ‘‘ಹೂಳಲಿ ಎಂದು ನೀನು ಆಶಿಸಿದ್ದೆ ಎನ್ನುವುದು ನನಗೆ ಗೊತ್ತು. ಆದರೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಮಾಲಕನಿಗೆ ಅದರ ಮಾಂಸವನ್ನು ಸೇವಿಸದೆ ಬೇರೆ ದಾರಿಯಿರಲಿಲ್ಲ ಮತ್ತು ಬೇರೆ ಮಾಂಸವನ್ನು ಖರೀದಿಸುವ ಶಕ್ತಿಯೂ ಆತನಿಗಿರಲಿಲ್ಲ. ಆದ್ದರಿಂದ ಅವರು ಆ ಹಸುವಿನ ಮಾಂಸವನ್ನೇ ಸೇವಿಸಿದರು. ಆದರೆ ನಾನು ಹಸುವಿನ ಕಥೆಯನ್ನು ನಿನಗೆ ಹೇಳಿದ ಉದ್ದೇಶ ಏನೆಂದರೆ ಇವತ್ತು ಫರ್ಹಾನಾಳೊಂದಿಗೆ ನಡೆದ ಘಟನೆಯಿಂದ ನೀನು ಏನನ್ನಾದರೂ ಕಲಿಯಬೇಕು’’ ಎಂದಳು.
‘‘ಹಫೀಝಾಳ ಮೆಹೆಂದಿಯಲ್ಲಿ ಏನಾಯಿತು ಎಂದು ನೀನು ನೋಡಿದ್ದೀಯಲ್ಲಾ?’’ ಎಂದು ಪ್ರಶ್ನಿಸಿದರು. ನಾನು ತಲೆಯಾಡಿಸಿದೆ.
ಹಫೀಝಾ ಗ್ರಾಮದಲ್ಲಿ ವಾಸವಿದ್ದ ಯುವತಿ. ಮರುದಿನ ಅವಳ ಮದುವೆ ಇತ್ತು. ಅವಳ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟ ಮುಗಿಸಿ ನಾವು ಮನೆಗೆ ಹಿಂದಿರುಗಿದ್ದೆವು. ಕಾರ್ಯಕ್ರಮಕ್ಕೆ ಮೆಹೆಂದಿ ಹಚ್ಚುವವಳು ಬಂದ ತಕ್ಷಣ ಹುಡುಗಿಯರು ಮುಗಿಬಿದ್ದಿದ್ದರು. ಆಕೆಯೇನೋ ಎಲ್ಲರಿಗೂ ಮೆಹೆಂದಿ ಹಚ್ಚುವ ಸುಳ್ಳು ಭರವಸೆ ನೀಡಿ ವಧುವಿನ ಕೈಗೆ ಮೆಹೆಂದಿ ಹಚ್ಚಲು ಶುರು ಮಾಡಿದ್ದಳು.
ಹಫೀಝಾಳ ಕೈಗೆ ಮೆಹೆಂದಿ ಹಚ್ಚುತ್ತಿದಂತೆ ಅದೇ ಗ್ರಾಮದ ಫರ್ಹಾನಾ ಎಂಬಾಕೆ ಅಲ್ಲಿಗೆ ಬಂದಳು. ಅವಳು ಮದುವೆಯಾಗಿ ಹಲವು ವರ್ಷಗಳೇ ಕಳೆದಿದ್ದವು. ಆದರೆ ಮಕ್ಕಳಾಗಿರಲಿಲ್ಲ. ಸಮಯ ಕಳೆದಂತೆ, ಆಕೆಗೆ ಯಾಕೆ ಮಗುವಾಗುತ್ತಿಲ್ಲ ಎನ್ನುವ ಕುರಿತ ಕಾರಣಗಳೂ ದಿನಕ್ಕೊಂದರಂತೆ ಬದಲಾಗತೊಡಗಿದವು. ಕೆಲವರು ಸಿರಿವಂತನನ್ನು ಮದುವೆಯಾಗಲು ಆಕೆ ಸಂಬಂಧ ಕಡಿದುಕೊಂಡದ್ದಕ್ಕಾಗಿ ಆಕೆಯ ಮಾಜಿ ಪ್ರೇಮಿಯ ಶಾಪವೇ ಇದಕ್ಕೆ ಕಾರಣ ಎಂದರು.
ಇನ್ನು ಕೆಲವರು ಆಕೆ ರಹಸ್ಯವಾಗಿ ವಾಮಾಚಾರ ಮಾಡುತ್ತಿದ್ದಳು. ಇದೇ ಕಾರಣದಿಂದ ದೇವರು ಈ ರೀತಿಯಾಗಿ ಶಿಕ್ಷಿಸುತ್ತಿದ್ದಾನೆ ಎಂದು ಹೇಳುತ್ತಿದ್ದರು. ಇನ್ನು ಕೆಲವರು ಆಕೆ ಸುಂದರಿಯಾಗಿದ್ದು ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತಿರುವುದೇ ಇದಕ್ಕೆ ಕಾರಣ ಎನ್ನುತ್ತಿದ್ದರು. ಅವಳ ಬಂಜೆತನದ ಕಾರಣಗಳು ಆರೋಪ ಹೊರಿಸುವವರ ಇಚ್ಛಾನುಸಾರ ಬದಲಾಗುತ್ತಿದ್ದವು. ಆಕೆ ಬೀದಿಯಲ್ಲಿ ನಡೆದಾಡುವಾಗ, ಕೆಲ ಮಹಿಳೆಯರು ಆಕೆಯ ಜೊತೆ ಮಾತನಾಡುವ ಅವಕಾಶ ಸಿಗದಿರಲಿ ಎಂದು ಬಿಡುವಿಲ್ಲದವರಂತೆ ನಟಿಸುತ್ತಿದ್ದರು. ಆದ್ದರಿಂದ ಮೆಹೆಂದಿ ಕಾರ್ಯಕ್ರಮಕ್ಕೆ ಅವಳ ಭೇಟಿ ತೋರ್ಪಡಿಸಲಾಗದ ಕೋಲಾಹಲವನ್ನೇ ಸೃಷ್ಟಿ ಮಾಡಿತ್ತು. ವಧು ಮತ್ತು ಅವಳ ತಾಯಿ ದಿಗ್ಭ್ರಮೆಗೊಂಡವರಂತೆ ಅವಳನ್ನೇ ದಿಟ್ಟಿಸಿ ನೋಡಿದರು. ‘‘ಅವಳಿಗೆ ನಾಚಿಕೆ ಇಲ್ಲ’’ ಎಂದು ವಧುವಿನ ತಾಯಿ ಗೊಣಗಿದಳು.
ನಾವೆಲ್ಲಾ ಫರ್ಹಾನಾಳ ಕಣ್ಣಿಗೆ ಬೀಳದೆ ಇರಲು ಪ್ರಯತ್ನಿಸಿದೆವು. ಅವಳು ನಮ್ಮಿಂದಿಗೆ ಕುಳಿತು ಕೊಳ್ಳುವುದು ಬೇಡ ಎಂದೇ ನಾವು ಬಯಸಿದ್ದೆವು. ಅವಳು ನಮ್ಮ ಜೊತೆ ಕುಳಿತುಕೊಳ್ಳುವುದು ಮುಜುಗರದ ಸಂಗತಿಯಾಗಿತ್ತು. ನಾವು ಯಾರೂ ಅವಳೊಂದಿಗೆ ಸಂಬಂಧ ಹೊಂದಲು ಬಯಸುತ್ತಿರಲಿಲ್ಲ. ಆಕೆ ಯಾರು ಆಹ್ವಾನಿಸದ ಮದುವೆಗೆ ಬರುವಷ್ಟು ಮುಗ್ಧೆಯಾಗಿದ್ದಳೆಂಬುದು ನಿಜ. ಆದರೆ ಆಕೆ, ತಾನು ಬಂದ ಬಳಿಕ ಎಲ್ಲರೂ ಮೌನವಾಗಿರು ವುದನ್ನು ಹಾಗೂ ಬದಲಾದ ವಾತಾವರಣವನ್ನು ಗಮನಿಸದಷ್ಟು ಮೂರ್ಖಳೂ ಆಗಿರಲಿಲ್ಲ.
ನೋವಿನ ಮೌನ
ಒಂದು ಸೆಕೆಂಡಿನ ಕಾಲ ಅಲ್ಲಿಯೇ ನಿಂತು ಕೋಣೆಯನ್ನು ಗಮನಿಸಿ ಮನೆಯಲ್ಲಿ ಏನನ್ನೋ ಮರೆತಿದ್ದೇನೆ ಎಂದು ನೆನಪಿಸಿಕೊಂಡಂತೆ ನಟಿಸಿ ಹಿಂದಿರುಗಿದ್ದಳು. ಅವಳು ಹೋದ ನಂತರವೂ ನಾವೆಲ್ಲರೂ ಹಬ್ಬದ ಮನಸ್ಥಿತಿಗೆ ಮರಳಲು ಸಾಧ್ಯವಾಗದೆ ಮೌನವಾಗಿ ಕುಳಿತೆವು. ಮೌನವು ಆವರಿಸಿದ್ದ ವಾತಾವರಣ ಅಲ್ಲಿದ್ದ ಮಕ್ಕಳನ್ನು ಹೆದರಿಸಿ ಅವರು ಅಳಲು ಶುರು ಮಾಡಿದ ನಂತರ ನಾವು ಮತ್ತೆ ಸಹಜಸ್ಥಿತಿಗೆ ಮರಳಿ ಹಾಡಲು ಮತ್ತು ಕುಣಿಯಲು ಆರಂಭಿಸಿದೆವು. ಅತ್ತೆ ಫರ್ಹಾನಾಳನ್ನು ಬಾಗಿಲಿನಾಚೆಗೂ ಹಿಂಬಾಲಿಸು ತ್ತಿರುವುದನ್ನು ನಾನು ಗಮನಿಸಿದ್ದೆ. ಸ್ವಲ್ಪಹೊತ್ತಿನ ನಂತರ ಅವರು ಒಬ್ಬರೇ ಹಿಂದಿರುಗಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಮನೆಯವರೆಗೂ ಮೌನವಾಗಿದ್ದ ಅವರು, ಮನೆಯಲ್ಲಿ ತನ್ನ ಕಪ್ಪುಕೀಪ್ (ಕಾಶ್ಮೀರಿ ಬುರ್ಕಾದ ಮೇಲಿನ ಭಾಗ) ತೆಗೆದು ಅಡುಗೆ ಮನೆಗೆ ಹೋದರು. ಡ್ಯಾನ್ (ಮಣ್ಣಿನ ಒಲೆ) ಪಕ್ಕದಲ್ಲಿದ್ದ ತನ್ನ ನೆಚ್ಚಿನ ಸ್ಥಳದಲ್ಲಿ ಕುಳಿತು ಎರಡು ಸಿಗರೇಟ್ ಸೇದಿ ಮುಗಿಸಿದರು. ನಂತರ ತನ್ನ ಕರುಗಳನ್ನು ಕಳೆದುಕೊಳ್ಳುತ್ತಿದ್ದ ತನ್ನ ಹಸುವಿನ ಕಥೆಯನ್ನು ಹೇಳಿದರು.
‘‘ಮಹಿಳೆಯಾಗುವುದು ಕಷ್ಟದ ಕೆಲಸ.. ಕೆಲಸ ಎಂದು ಯಾಕೆ ಹೇಳುತ್ತಿದ್ದೇನೆಂದರೆ ಮಹಿಳೆ ಎಂದರೆ ಕೆಲಸ ಮಾಡು ವುದು. ನಾವು ಮಾಡುವ ಕೆಲ ಕೆಲಸಗಳ ಸಾಮರ್ಥ್ಯದಿಂದಲೇ ಯಾವತ್ತಿಗೂ ನಮ್ಮ ಅರ್ಹತೆ ನಿರ್ಧರಿಸಲ್ಪಡುತ್ತದೆ. ‘ಉತ್ತಮ ಮಹಿಳೆ’ ಎಂಬ ಬಿರುದು ಪಡೆಯುವ ಮೊದಲು ಮಹಿಳೆ ಅನೇಕ ವಿಷಯಗಳನ್ನು ಎದುರಿಸಬೇಕು. ಉತ್ತಮ ಮಹಿಳೆ ಎಂಬ ಬಿರುದನ್ನು ಯಾವತ್ತೂ ಮಹಿಳೆಗೆ ಆಕೆಯ ಮರಣದ ನಂತರವೇ ನೀಡಲಾಗುತ್ತದೆ. ಬಹುಶಃ ನೀನು ಇದೀಗ ಇದನ್ನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವಳಿರಬಹುದು. ಆದರೆ ನಿನ್ನ ಶಿಕ್ಷಣ ಇದರಿಂದಲೇ ಆರಂಭವಾಗುವುದು ಉತ್ತಮ. ಹಸು ತನ್ನ ಕರುಗಳನ್ನು ಕಳೆದುಕೊಳ್ಳುತ್ತಿದ್ದಾಗ ಅದಕ್ಕೆ ಆಗುತ್ತಿದ್ದ ನೋವಿನ ಪರಿಣಾಮ ಯಾರಿಗೂ ತಿಳಿದಿರಲಿಲ್ಲ.
ಹಸುವಿನ ನೋವು ಮತ್ತು ದುಃಖವು ಅದರ ಹೃದಯದ ಸಂಪೂರ್ಣ ಸ್ವರೂಪವನ್ನೇ ಬದಲಾಯಿಸಿತ್ತು. ಆದರೆ ಅದು ಎಲ್ಲರಿಗೂ ತಿಳಿದದ್ದು ಅದರ ದೇಹವನ್ನು ಕತ್ತರಿಸಿದಾಗಲೇ. ನಾವು ಫರ್ಹಾನಾಳನ್ನು ಅದೇ ರೀತಿ ಕತ್ತರಿಸಿದರೆ ಅಲ್ಲೇನನ್ನು ನೋಡಬಹುದು ಎಂದು ನೀನು ಭಾವಿಸುತ್ತೀಯಾ?, ಆಕೆಯ ಹೃದಯದಲ್ಲಿ ಅದೆಷ್ಟು ರಂಧ್ರಗಳಿರಬಹುದು ಎಂದು ನಿನಗನಿಸುತ್ತದೆ?, ಮುಂದಿನ ಬಾರಿ ನೀನು ಫರ್ಹಾನಾಳನ್ನು ನೋಡಿದಾಗ ಆ ಹಸುವಿನ ಬಗ್ಗೆ ಯೋಚಿಸಬೇಕೆಂದು ನಾನು ಬಯಸುತ್ತೇನೆ. ಯಾರಾದರೂ ಯಾವುದಾದರೂ ಮಹಿಳೆಯ ಬಗ್ಗೆ ಕೀಳಾಗಿ ಮಾತನಾಡಿದರೆ ಅದೇ ಹಸುವಿನ ಬಗ್ಗೆ ನೀನು ಯೋಚಿಸಬೇಕು.’’
ಅತ್ತೆ ಅಂದು ಹೇಳಿದ್ದು ಸರಿಯಾಗಿತ್ತು. ಆ ಸಮಯದಲ್ಲಿ ಅವರು ನನಗೆ ಹೇಳಲು ಪ್ರಯತ್ನಿಸಿದ್ದನ್ನು ನನಗೆ ಗ್ರಹಿಸಲು ಸಾಧ್ಯವಾಗಿರಲಿಲ್ಲ, ಆದರೆ ಒಂದು ದಿನ ಅವಳು ಹೇಳಿದ ಪ್ರತಿಯೊಂದು ಪದದ ಪೂರ್ಣ ಒಳಾರ್ಥವನ್ನು ಗ್ರಹಿಸುವ ದಿನ ಬರುತ್ತದೆ ಎಂದು ಗೊತ್ತಿತ್ತು. ಅದು ನಿಜವಾಯಿತು ಕೂಡ, ಒಂದು ದಿನ ನನ್ನ ಆತ್ಮೀಯ ಸ್ನೇಹಿತೆಯ ಹೃದಯದಲ್ಲಿ ರಂಧ್ರಗಳು ಕಾಣಿಸಿಕೊಂಡವು. ನಂತರ, ನನಗೆ ನನ್ನ ಚಿಕ್ಕಮ್ಮನ ಬಗ್ಗೆ ತಿಳಿಯಿತು. ವರ್ಷಗಳ ನಂತರ, ಒಂದು ರಂಧ್ರ ನನ್ನ ಹೃದಯದಲ್ಲಿ ಕಾಣಿಸಿಕೊಂಡಿತು, ನಂತರ ಇನ್ನೊಂದು ವರ್ಷ ಹಾಗೂ ಮತ್ತೊಂದು ವರ್ಷ ಹೀಗೆ ನಾನು ಲೆಕ್ಕಾಚಾರ ಮಾಡುವುದನ್ನು ನಿಲ್ಲಿಸುವವರೆಗೆ. **
ಇಂಗ್ಲೆಂಡಿನಲ್ಲಿ ನೆಲೆಸಿರುವ ಮೂಲತಃ ಕಾಶ್ಮೀರದವರಾದ ಸಬಾ ಮಹಜೂರ್ ಅವರು The Hinduವಿನಲ್ಲಿ ಬರೆದ ಅಂಕಣದ ಕನ್ನಡ ಅನುವಾದ.