ಆರೋಗ್ಯ ಸಿಬ್ಬಂದಿಯ ರಕ್ಷಣೆಗೆ ಆರೋಗ್ಯ ಸೇವೆಗೆ ಸಂಬಂಧಿಸಿದ ಕಾಯಿದೆಗೆ ತಿದ್ದುಪಡಿ ಅನುಮೋದಿಸಿದ ಕೇರಳ ಸರ್ಕಾರ
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ಕೇರಳ ಆರೋಗ್ಯ ಸೇವೆ ಕಾರ್ಯಕರ್ತರ ಮತ್ತು ಆರೋಗ್ಯ ಸೇವಾ ಸಂಸ್ಥೆಗಳ (ಹಿಂಸೆ ಮತ್ತು ಆಸ್ತಿ ಹಾನಿ ತಡೆ) ತಿದ್ದುಪಡಿ ಅಧ್ಯಾದೇಶ 2012ಗೆ ಅನುಮೋದನೆ ನೀಡಿದೆ.
ಪ್ರಸ್ತುತ ಇರುವ ತಿದ್ದುಪಡಿಯಾಗದ ಕಾಯಿದೆಯು ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೋಂದಣಿ ಹೊಂದಿದ ವೈದ್ಯರು, ದಾದಿಯರು, ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಅನ್ವಯವಾಗುವುದಾದರೆ ಈಗ ತಿದ್ದುಪಡಿಯ ನಂತರ ಈ ಕಾಯಿದೆಯ ರಕ್ಷಣೆ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಅರೆವೈದ್ಯಕೀಯ ಕೋರ್ಸುಗಳ ವಿದ್ಯಾರ್ಥಿಗಳು, ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಆಡಳಿತ ಸಿಬ್ಬಂದಿ, ಅಂಬುಲೆನ್ಸ್ ಚಾಲಕರು, ಸಹಾಯಕರು ಹಾಗೂ ಕಾಲ ಕಾಲಕ್ಕೆ ಸರಕಾರ ಗಜೆಟ್‌ನಲ್ಲಿ ಸೂಚಿಸುವ ಆರೋಗ್ಯ ಕೆಲಸಗಾರರನ್ನು ಒಳಗೊಳ್ಳಲಿದೆ.
ಈ ಕಾಯಿದೆಯಡಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಗಂಭೀರ ಹಲ್ಲೆಗೈಯ್ದ ಪ್ರಕರಣದಲ್ಲಿ ದೋಷಿ ಎಂದು ಘೋಷಿತರಾದವರಿಗೆ ಒಂದು ವರ್ಷದಿಂದ ಏಳು ವರ್ಷಗಳ ತನಕ ಜೈಲು ಶಿಕ್ಷೆ ಹಾಗೂ ರೂ. 1 ಲಕ್ಷದಿಂದ ರೂ. 5 ಲಕ್ಷದ ತನಕದ ದಂಡವನ್ನು ವಿಧಿಸಬಹುದಾಗಿದೆ.
ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರಿಗೆ ಹಲ್ಲೆಗೈಯ್ಯುವ ಯತ್ನ ನಡೆಸಿದವರಿಗೆ ಅಥವಾ ಅವರ ಮೇಲೆ ಹಲ್ಲೆಗೆ ಪ್ರಚೋದಿಸಿದವರಿಗೆ ಆರು ತಿಂಗಳಿಗೆ ಕಡಿಮೆಯಿಲ್ಲದ ಹಾಗೂ 5 ವರ್ಷದ ತನಕದ ಜೈಲು ಶಿಕ್ಷೆ ಹಾಗೂ ರೂ. 50,000ದಿಂದ ರೂ 2 ಲಕ್ಷ ತನಕದ ದಂಡ ವಿಧಿಸಬಹುದಾಗಿದೆ.