ಬೀದರ್ | ಊರಿಗೆ ಬಸ್ ಇಲ್ಲವೆಂದು ಸರ್ಕಾರಿ ಬಸ್ಸನ್ನೇ ಚಲಾಯಿಸಿಕೊಂಡು ಹೋದ ವ್ಯಕ್ತಿ: ಮುಂದೇನಾಯ್ತು?
ಬೀದರ್: ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸರಕಾರಿ ಬಸ್ಸನ್ನು ವ್ಯಕ್ತಿಯೊಬ್ಬ ಓಡಿಸಿಕೊಂಡು ಹೋಗುವಾಗ ಅಪಘಾತ ಸಂಭವಿಸಿದ ಘಟನೆಯೊಂದು ಬೀದರ್ ನ ಔರಾದ್ ಎಂಬಲ್ಲಿ ವರದಿಯಾಗಿದೆ.
ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕರು ನಿಲ್ದಾಣದಲ್ಲಿ ಎಂಟ್ರಿ ಮಾಡಿಕೊಳ್ಳು ಹೋಗಿ ಬರುವ ಸಮಯದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಬಸ್ ಚಲಾಯಿಸಿಕೊಂಡು ಹೋದ ಯಶಪ್ಪ ಸೂರ್ಯವಂಶಿ ಎಂಬ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ವಿವರ:
‘ಸೋಮವಾರ ಬೆಳಗ್ಗೆಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಊರಿಗೆ ಹೋಗಲು ಬಸ್ಸಿಗೆ ಕಾಯುತ್ತಾ ಕುಳಿತಿದ್ದ ಯಶಪ್ಪ, ಊರಿಗೆ ಹೋಗಲು ಬಸ್ ಇಲ್ಲ ಎಂದು ಕೋಪಗೊಂಡು ನಿಲ್ದಾಣದಲ್ಲಿದ್ದ ಬಸ್ ಏರಿ ತಾನೇ ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ನಿಲ್ದಾಣ ಸಮೀಪದಲ್ಲೇ ಇರುವ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಅಲ್ಲಿಯೇ ಇದ್ದ ಜೀಪ್ ಗೆ ಕೂಡ ಹಾನಿಯಾಗಿದೆ. ಇದರಿಂದ ಒಳಗಿದ್ದ ಪ್ರಯಾಣಿಕರು ಗಾಬರಿಯಾಗಿ ಕಿರುಚಿದ್ದಾರೆ. ತಕ್ಷಣ ಅಲ್ಲಿದ್ದವರು ಯಶಪ್ಪನನ್ನು ಬಸ್ಸಿನಿಂದ ಕೆಳಗಿಳಿಸಿದ್ದಾರೆನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಯಶಪ್ಪನನ್ನು ವಶಕ್ಕೆ ಪಡೆದು ಔರಾದ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
''ಯಶಪ್ಪ ಮದ್ಯಪಾನ ಮಾಡಿದ್ದ. ತನ್ನೂರಿಗೆ ಬಸ್ ವಿಳಂಬವಾಗಿದೆ ಎಂದು ಸಿಟ್ಟಾಗಿ ಬೀದರ್‌ಗೆ ತೆರಳಬೇಕಿದ್ದ ಬಸ್ ಅನ್ನು ಓಡಿಸಿಕೊಂಡು ಹೋಗಲು ಮುಂದಾಗಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ. ಯಶಪ್ಪ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ''
ಎಸ್.ಪಿ. ರಾಠೋಡ್- ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ