ರಾಷ್ಟ್ರ ನಿರ್ಮಾಪಕರು
ನಾಗರಿಕ ಸೇವೆಗಳು, ಸಶಸ್ತ್ರ ಪಡೆಗಳು, ರೈಲ್ವೆ ಅಥವಾ ರಕ್ಷಣಾ ವಲಯಗಳಲ್ಲಿ ಉದ್ಯೋಗಿಯಾಗಿದ್ದರೂ, ಕೃಷಿ, ಕಾರ್ಖಾನೆ, ಶಾಲೆ, ಕಾಲೇಜು, ಆಸ್ಪತ್ರೆ ಅಥವಾ ಸಂಶೋಧನಾ ಪ್ರಯೋಗಾಲಯಗಳಲ್ಲಿ ಕೆಲಸ ಮಾಡುತ್ತಿದ್ದರೂ, ನಂತರದ ತಲೆಮಾರಿಗೆ ಮತ್ತಷ್ಟು ಕಟ್ಟಲು ಅಥವಾ (ಅವರು ಈಗ ಆರಿಸಿಕೊಂಡರೆ) ಹಾಳುಗೆಡವಲು ಒಂದು ಭಾರತವಿದೆ ಎಂದು ಅರಿತಿದ್ದ ಹತ್ತಾರು ಅನುಕರಣೀಯ ಭಾರತೀಯರಲ್ಲಿ ಸುಬ್ರಮಣ್ಯಂ ಚೆನ್ನಕೇಶು ಮತ್ತು ಗೋಪಾಲ್ ತ್ರಿವೇದಿ ಇಬ್ಬರು.
ನನ್ನ ಪರಿಚಯದ ಇಬ್ಬರು ಹಿರಿಯರು ಕಳೆದ ತಿಂಗಳು ನಿಧನರಾದರು, ಒಬ್ಬರು ಮುಂಬೈನಲ್ಲಿ, ಇನ್ನೊಬ್ಬರು ಬೆಂಗಳೂರಿನಲ್ಲಿ. ಇಬ್ಬರೂ ತೊಂಭತ್ತರ ಆಸುಪಾಸಿನಲ್ಲಿದ್ದವರು. ಮೊದಲನೆಯವರು ಉದಯಪುರದಲ್ಲಿ, ಎರಡನೆಯವರು ಮದ್ರಾಸ್ ಪ್ರೆಸಿಡೆನ್ಸಿಯ ಪಟ್ಟಣಗಳಲ್ಲಿ ಬೆಳೆದವರು. ಬ್ರಿಟಿಷರ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಇಬ್ಬರೂ ಪ್ರೌಢಾವಸ್ಥೆ ಮುಟ್ಟಿದರು. ಇಬ್ಬರೂ ತಮ್ಮ ಯೌವನದ ಮೊದಲಿನಿಂದಲೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದ್ದವರು. ಇಬ್ಬರೂ ಮೊದಲು ಬ್ರಿಟಿಷರ ಭಾರತದಲ್ಲಿ ಮತ್ತು ನಂತರ ಇಂಗ್ಲೆಂಡಿನಲ್ಲಿ ಇಂಜಿನಿಯರಿಂಗ್ ಓದಿದರು. ಇಬ್ಬರೂ ಅಲ್ಲಿಯೇ ಉಳಿಯಬಹುದಿತ್ತು ಮತ್ತು ಆರಾಮದಾಯಕ ಜೀವನ ನಡೆಸಬಹುದಿತ್ತು, ಆದರೆ ಇಬ್ಬರೂ 1947ರ ನಂತರ ಆಗಷ್ಟೇ ಸ್ವಾತಂತ್ರ್ಯ ಗಳಿಸಿದ್ದ ತಮ್ಮ ದೇಶದಲ್ಲಿ ಕೆಲಸ ಮಾಡಲು ಮರಳಿದರು. ಬಂದ ಬಳಿಕ ದೇಶದಲ್ಲಿ ಆಗ ಕಾರ್ಯನಿರ್ವಹಿಸುತ್ತಿದ್ದ ಬಹುರಾಷ್ಟ್ರೀಯ ಕಂಪೆನಿಗಳನ್ನಾಗಲೀ ಅಥವಾ ನಮ್ಮವರದ್ದೇ ಟಾಟಾ, ಕಿರ್ಲೋಸ್ಕರ್‌ಗಳಂತಹ ಖಾಸಗಿ ಇಂಜಿನಿಯರಿಂಗ್ ಸಂಸ್ಥೆಗಳನ್ನಾಗಲೀ ಸೇರಲಿಲ್ಲ. ಬದಲಾಗಿ ಕಡಿಮೆ ಆದಾಯದ (ಆದರೆ ಅವರ ದೃಷ್ಟಿಯಲ್ಲಿ ಹೆಚ್ಚು ಗೌರವಾನ್ವಿತ) ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಲು ಇಬ್ಬರೂ ಮುಂದಾದರು.
ಇತ್ತೀಚೆಗೆ ನಿಧನರಾದ ಈ ಇಬ್ಬರಿಗೂ ಪರಸ್ಪರರ ಬಗ್ಗೆ ಪೂರ್ತಿಯಾಗಿ ತಿಳಿದಿರಲಿಲ್ಲ. ಅವರಿಬ್ಬರನ್ನೂ ಚೆನ್ನಾಗಿ ತಿಳಿದುಕೊಳ್ಳುವ ಭಾಗ್ಯ ನನ್ನದಾಗಿತ್ತು. ಅವರಲ್ಲಿ ಒಬ್ಬರು ನನ್ನ ತಂದೆಯ ಕಿರಿಯ ಸಹೋದರ, ಇನ್ನೊಬ್ಬರು ನನ್ನ ಆಪ್ತ ಸ್ನೇಹಿತನ ತಂದೆ. ಅವರು ನಡೆಸಿದ ಅದ್ಭುತವಾದ ಜೀವನ ಮತ್ತು ಅವರು ತೊಡಗಿಸಿಕೊಂಡಿದ್ದ ವೃತ್ತಿ, ನಾವು ನಮ್ಮದೆಂದು ಬೀಗುವ ಈ ದೇಶವನ್ನು ಕಟ್ಟುವಲ್ಲಿ ಅವರು ನೀಡಿದ ಕೊಡುಗೆ ಈ ಮಹನೀಯರ ಬಗ್ಗೆ ಬರೆಯಲು ನನಗೆ ಪ್ರೇರಣೆ.
ಈ ಇಬ್ಬರೂ ಶ್ರೀಮಂತ ಮನೆತನಗಳಲ್ಲಿ ಹುಟ್ಟಿರದಿದ್ದರೂ, ಸಾಂಸ್ಕೃತಿಕ ಪರಿಭಾಷೆಯಲ್ಲಿ ಅವರು ಆನುವಂಶಿಕ ಹಿರಿಮೆಯ ಭಾಗವಾಗಿದ್ದರು. ಇಬ್ಬರೂ ಮೇಲ್ಜಾತಿಯವರಾಗಿದ್ದು, ಅಧಿಕಾರ ಮತ್ತು ಪ್ರತಿಷ್ಠೆಯ ಭಾಷೆಯಾದ ಇಂಗ್ಲಿಷ್‌ಗೆ ಆರಂಭದಿಂದಲೇ ತೆರೆದುಕೊಳ್ಳುವ ಅವಕಾಶ ಅವರದಾಗಿತ್ತು. ಈ ಸವಲತ್ತುಗಳು ಕಾರ್ಮಿಕ ವರ್ಗ ಅಥವಾ ಅವರ ತಲೆಮಾರಿನ ಹೆಣ್ಣುಮಕ್ಕಳಿಗಿಲ್ಲದ ಅನುಕೂಲಗಳನ್ನು ಅವರಿಗೆ ಒದಗಿಸಿದವು. ಉತ್ತಮ ಶಾಲಾ ಶಿಕ್ಷಣ, ಗುಣಮಟ್ಟದ ತಾಂತ್ರಿಕ ಶಿಕ್ಷಣ ಮತ್ತು ವ್ಯಾಪಕ ಶ್ರೇಣಿಯ ಉದ್ಯೋಗಾವಕಾಶಗಳು ಸಿಕ್ಕಿದವು. ಆದರೆ ಅವರು ಈ ಅನುಕೂಲಗಳನ್ನೆಲ್ಲ ತಮ್ಮ ವೈಯಕ್ತಿಕ ಯಶಸ್ಸಿಗೆ ಅಷ್ಟಾಗಿ ಬಳಸಲಿಲ್ಲ ಎಂಬುದು ಗಮನೀಯ. ಸ್ವಾತಂತ್ರ್ಯ ಹೋರಾಟದ ಆದರ್ಶಗಳಿಂದ ಮತ್ತು ನಿರ್ದಿಷ್ಟವಾಗಿ ಗಾಂಧಿ ಮತ್ತು ನೆಹರೂ ಅವರಂತಹ ನಾಯಕರಿಂದ ಸ್ಫೂರ್ತಿ ಪಡೆದ ಅವರು ತಮ್ಮ ಜ್ಞಾನ ಮತ್ತು ಪರಿಣತಿಯನ್ನು ದೇಶಸೇವೆಗೆ ತೊಡಗಿಸಿದರು.
ನನ್ನ ಸ್ನೇಹಿತನ ತಂದೆ, ಉದಯಪುರದ ಇಂಜಿನಿಯರ್. ಭಾರತೀಯ ರೈಲ್ವೆಯಲ್ಲಿ ತಮ್ಮ ವೃತ್ತಿಪರ ಜೀವನವನ್ನು ಕಳೆದರು. ಲಕ್ಷಾಂತರ ಭಾರತೀಯರು ಕೆಲಸ ಮಾಡಲು, ರಜೆಯ ಮೇಲೆ ಮನೆಗೆ ಹೋಗಲು, ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟುಗಳ ಸಂದರ್ಭಗಳಲ್ಲಿ ಭಾಗಿಯಾಗಲು ರೈಲುಗಳನ್ನು ಅವಲಂಬಿಸಿದ್ದಾರೆ. ರೈಲ್ವೆ ವ್ಯವಸ್ಥೆಯ ದಕ್ಷತೆ ಮತ್ತು ವಿಶ್ವಾಸಾರ್ಹತೆಯ ಮೇಲೆ ದೇಶದ ವ್ಯವಸ್ಥೆ ಅವಲಂಬಿತವಾಗಿರುತ್ತದೆ. ನನ್ನ ಸ್ನೇಹಿತನ ತಂದೆ ಈ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸಲು ಹೆಚ್ಚಿನ ಕೆಲಸ ಮಾಡಿದರು, ಇತರ ವಿಷಯಗಳ ಜೊತೆಗೆ, ಮುಂಬೈ-ವಡೋದರ ರೈಲು ಮಾರ್ಗವನ್ನು ಉಗಿಯಿಂದ ವಿದ್ಯುಚ್ಛಕ್ತಿಗೆ ಪರಿವರ್ತಿಸಲು ದುಡಿದರು. ಇದು ಪ್ರಮುಖ ಸಂವಹನ ನಾಡಿಯಂತಿದೆ. ರೈಲು ಪ್ರಯಾಣವನ್ನು ವೇಗ ಮತ್ತು ಕಡಿಮೆ ಮಾಲಿನ್ಯದ್ದಾಗಿಸಲು ಈ ರೈಲ್ವೆ ಇಂಜಿನಿಯರ್ ತನ್ನ ಕೆಲಸದ ಮೂಲಕ ಅಪಾರವಾಗಿ ನೆರವಾದರು.
ನನ್ನ ತಂದೆಯ ಕಿರಿಯ ಸಹೋದರ ದಕ್ಷಿಣ ಭಾರತದ ಇಂಜಿನಿಯರ್. ತಮ್ಮ ವೃತ್ತಿಜೀವನದ ಮೊದಲ ಭಾಗವನ್ನು ಭಾರತೀಯ ವಾಯುಪಡೆಯಲ್ಲಿ ಕಳೆದರು. ಎರಡನೆಯ ಮತ್ತು ಬಹಳ ಪ್ರಮುಖವಾದ ಹಂತ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿನದು. ಎಚ್‌ಎಎಲ್‌ನಲ್ಲಿ ಅವರು ರಕ್ಷಣಾ ಉತ್ಪಾದನೆಯಲ್ಲಿ ಭಾರತದ ರಾಷ್ಟ್ರೀಯ ಸಾಮರ್ಥ್ಯವನ್ನು ಉತ್ತಮಗೊಳಿಸಲು ದುಡಿದರು. ಮೊದಲು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಏಊ 24ನಂತಹ ವಿಮಾನಗಳಿಗಾಗಿ ಕೆಲಸ ಮಾಡಿದರು. ಬಳಿಕ ಐಎ 21ನಂತಹ ವಿದೇಶಿ ಮಾದರಿಗಳ ದೇಶೀಯ ಉತ್ಪಾದನೆಯಲ್ಲಿ ಕೆಲಸ ಮಾಡಿದರು. ಅವರು ಯಾವುದರ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರೋ ಆ ವಿಮಾನ ಭಾರತದ ಆಕಾಶ ನೆಲೆಯ ಸುರಕ್ಷತೆ ಮತ್ತು ಭಾರತದ ಜನರ ಹೆಚ್ಚು ಸ್ವಾವಲಂಬನೆಗೆ ಕಾರಣವಾಯಿತು.
ನಾನು ನನ್ನ ಚಿಕ್ಕಪ್ಪನಿಗೆ ಹತ್ತಿರವಾಗಿದ್ದೆ ಮತ್ತು ಈ ದೇಶದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ನನ್ನ ಬದ್ಧತೆಗೂ ಅವರೇ ಭಾಗಶಃ ಪ್ರೇರಣೆ. ಎಚ್‌ಎಎಲ್‌ನಿಂದ ನಿವೃತ್ತರಾದ ನಂತರ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಪಾಠ ಹೇಳಿದರು. ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾವನ್ನು ಬೆಳೆಸಲು ನೆರವಾದರು. ಒಬ್ಬ ಮಾನವತಾವಾದಿಯಾಗಿ ನನ್ನನ್ನು ನಾನು ರೂಪಿಸಿಕೊಳ್ಳುವಾಗ, ಚಿಕ್ಕಪ್ಪನ ತಾಂತ್ರಿಕ ಕೆಲಸದ ಬಗ್ಗೆ ಅಷ್ಟಾಗಿ ಗೊತ್ತಿರದಿದ್ದರೂ ಜಾತಿ, ಧರ್ಮದ ಪ್ರತಿಷ್ಠೆಯಿಂದ ದೂರವಿದ್ದ ಅವರ ನಿಲುವಿನಿಂದ ಪ್ರಭಾವಿತನಾಗಿದ್ದೆ. ಮೊದಲನೆಯದಾಗಿ ಅವರ ತಂದೆಯ ಚಿಕ್ಕಪ್ಪ, ಸಮಾಜ ಸುಧಾರಕ ಆರ್. ಗೋಪಾಲಸ್ವಾಮಿ ಅಯ್ಯರ್ ಮೈಸೂರು ಅರಸರ ಆಡಳಿತದಲ್ಲಿ ದಲಿತರ ವಿಮೋಚನೆಗಾಗಿ ಮಾಡಿದ ಹೋರಾಟದಿಂದ. ಎರಡನೆಯದು ಬಹುಶಃ ಭಾರತೀಯ ವಾಯುಪಡೆಯಲ್ಲಿನ ಅವರ ರಚನಾತ್ಮಕ ವರ್ಷಗಳಿಂದಾಗಿ. ಈ ಇಂಜಿನಿ ಯರ್‌ಗೆ ದೇಶದ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಅಪಾರ ತಿಳುವಳಿಕೆ ಮತ್ತು ಗೌರವವಿತ್ತು. ಮಂಗಳೂರಿನಲ್ಲಿ ಬೆಳೆದ ಹುಡುಗ ತನ್ನ ಮೊದಲ ಪದವಿಯನ್ನು ಬನಾರಸ್‌ನಲ್ಲಿ ಪಡೆದರು. ಕೊನೆಯ ಕೆಲಸ ಒಡಿಶಾದ ಬುಡಕಟ್ಟುಗಳಿರುವ ಪರ್ವತಗಳಲ್ಲಿನ ಎಚ್‌ಎಎಲ್ ಕಾರ್ಖಾನೆಯ ಹೊಣೆಗಾರಿಕೆಯಾಗಿತ್ತು. ಎಂಎ ವಿದ್ಯಾರ್ಥಿಯಾಗಿ ನಾನು ಆ ಕಾರ್ಖಾನೆಯಲ್ಲಿ ಕ್ಷೇತ್ರಕಾರ್ಯಕ್ಕಾಗಿ ಕೆಲವು ವಾರಗಳನ್ನು ಕಳೆದಿದ್ದೆ.
ಉದಯಪುರದ ಇಂಜಿನಿಯರ್ ಕುರಿತು ನನಗೆ ತಿಳಿದಿರುವುದು ತುಂಬಾ ಕಡಿಮೆ, ಆದರೆ ನನಗೆ ತಿಳಿದಿರುವ ಮಟ್ಟಿಗೆ ಅವರು ಭಾರತದ ಸಾಮರ್ಥ್ಯದ ಬಗ್ಗೆ ಇದೇ ರೀತಿಯ ಕಲ್ಪನೆಯನ್ನು ಹೊಂದಿದವರಾಗಿದ್ದರು. ಅವರು ತಮ್ಮ ಶಾಲಾ ದಿನಗಳಿಂದಲೇ ಈ ನಿಟ್ಟಿನಲ್ಲಿ ರೂಪುಗೊಂಡರು, ಪ್ರಗತಿಶೀಲ ಶಿಕ್ಷಣದಲ್ಲಿನ ಪ್ರವರ್ತಕ ಪ್ರಯೋಗ ಅವರಿಗೆ ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿತು. ರೈಲ್ವೆಗೆ ಸೇರುವ ಮೂಲಕ ಅವರ ಸಾಮಾಜಿಕ ತಿಳುವಳಿಕೆ ಆಳವಾಯಿತು. ಸೇನೆಯಲ್ಲಿನದಕ್ಕಿಂತ ಹೆಚ್ಚಾಗಿ ರೈಲ್ವೆ ಸಿಬ್ಬಂದಿ ವರ್ಗ ಭಾರತೀಯ ಜನರ ವೈವಿಧ್ಯತೆಯನ್ನು ಉತ್ತಮವಾಗಿ ಕಾಣಿಸುತ್ತದೆ. ಅವರು ಕೆಲಸ ಮಾಡುವ ಸ್ಥಳ ಅವರ ರಾಜಸ್ಥಾನದಿಂದ ಸಾಂಸ್ಕೃತಿಕ ಮತ್ತು ಭೌಗೋಳಿಕವಾಗಿ ಸಾಕಷ್ಟು ದೂರದಲ್ಲಿತ್ತು. ಅವರ ತಾಂತ್ರಿಕ ಪರಿಣತಿ ಯಾವ ಜನರಿಗಾಗಿ ರೈಲ್ವೆ ಪ್ರಯಾಣವನ್ನು ಸುಗಮವಾಗಿಸಿತೋ ಆ ಜನರು ಹೆಚ್ಚಾಗಿ ವಿಭಿನ್ನ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯವರಾಗಿದ್ದರು.
ಉತ್ತರದ ಇಂಜಿನಿಯರ್ ಮತ್ತು ದಕ್ಷಿಣದ ಇಂಜಿನಿಯರ್ ಇಬ್ಬರದೂ ಅರ್ಥಪೂರ್ಣ ವೃತ್ತಿಬದುಕು. ಅವರ ವೈಯಕ್ತಿಕ ಜೀವನವೂ ಅಷ್ಟೇ ಮೆಚ್ಚುವಂತಿತ್ತು. ಇಬ್ಬರೂ ದಯಾಳು ತಂದೆ, ಕಾಳಜಿಯುಳ್ಳ ಗಂಡಂದಿರಾಗಿದ್ದರು ಮತ್ತು ನಿಷ್ಠಾವಂತ ಸ್ನೇಹಿತರಾಗಿದ್ದರು. ಇಬ್ಬರೂ ಇಂಜಿನಿಯರಿಂಗ್ ವೃತ್ತಿಯ ಆಚೆಗೆ ಗಂಭೀರ ಪುಸ್ತಕಗಳ ಓದಿನಲ್ಲಿ ಆಸಕ್ತರಾಗಿದ್ದರು. ಪ್ರತಿಷ್ಠೆ ತೋರಿಸುವವರಾಗಿರಲಿಲ್ಲ. ನನ್ನ ಚಿಕ್ಕಪ್ಪ ತೀರಿಕೊಂಡಾಗ, ನಲವತ್ತು ವರ್ಷಗಳಿಂದ ಅವರನ್ನು ತಿಳಿದಿದ್ದ ನನ್ನ ಹೆಂಡತಿ ಹೇಳಿದ್ದು - ಆರ್ವೆಲ್ ಗಾಂಧಿಯ ಕುರಿತು ಹೇಳಿದಂತೆ - ‘‘ಎಷ್ಟು ಪರಿಶುದ್ಧ ನೆನಪನ್ನು ಉಳಿಸಿಹೋಗುತ್ತಾರಲ್ಲ’’ ಎಂದು. ನನ್ನ ಗೆಳೆಯನ ತಂದೆಯ ವಿಷಯದಲ್ಲಿಯೂ ಅದು ನಿಜವಾಗಿತ್ತು.
ನಾನೀಗ ಈ ಇಬ್ಬರು ವ್ಯಕ್ತಿಗಳು ಯಾರೆಂಬುದನ್ನು ಹೇಳಿಬಿಡುತ್ತೇನೆ. ಕರ್ನಾಟಕದ ಇಂಜಿನಿಯರ್ ಆಗಿದ್ದವರು ಸುಬ್ರಮಣ್ಯಂ ಚೆನ್ನಕೇಶು. ರಾಜಸ್ಥಾನದ ಇಂಜಿನಿಯರ್ ಗೋಪಾಲ್ ತ್ರಿವೇದಿ. ತಮ್ಮ ಸ್ನೇಹಿತರು, ಕುಟುಂಬ ಮತ್ತು ವೃತ್ತಿಪರ ಸಹೋದ್ಯೋಗಿಗಳಿಂದ ಅಪಾರವಾಗಿ ಪ್ರೀತಿ ಗಳಿಸಿದ್ದ ಇಬ್ಬರ ಬಗ್ಗೆಯೂ ಅವರ ಸ್ನೇಹವಲಯದಲ್ಲಿರುವುದು ತಮ್ಮ ಪಾಲಿಗೆ ಅವರು ಏನೆಲ್ಲ ಆಗಿದ್ದರು ಎಂಬುದರ ಕುರಿತ ನೆನಪು. ಆದರೂ ನಾನಿಲ್ಲಿ ಅವರ ಬಗ್ಗೆ ಬರೆಯುತ್ತಿರುವುದು, ಅವರ ಬದುಕು ಅವರನ್ನು ವೈಯಕ್ತಿಕವಾಗಿ ತಿಳಿದಿಲ್ಲದ ಭಾರತೀಯರಿಗೂ ಸಹ ಅರ್ಥಪೂರ್ಣ ಎಂಬ ಕಾರಣಕ್ಕೆ. ಅವರಿಬ್ಬರೂ ನಿಜವಾದ ರಾಷ್ಟ್ರ ನಿರ್ಮಾಪಕರಾಗಿದ್ದರು, ನಮ್ಮ ದೇಶದ ಗತಕಾಲದ ಈಗಿನ ಪ್ರಾತಿನಿಧ್ಯವು ಅವರನ್ನು ಹಾಗೆ ನೋಡಲು ಬಿಡದಿದ್ದರೂ ಇದು ನಿಜ.
ತಮ್ಮ ಇತ್ತೀಚಿನ ಹಲವು ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯ ಬಗ್ಗೆ ಮಾತನಾಡಿರುವಂತೆ ಅವರು ಅಂದುಕೊಡಿರುವುದು, ಈ ದೇಶ ನಿರ್ಮಾಣವಾಗಿದ್ದು ತಾನು ಅಧಿಕಾರದಲ್ಲಿರುವ ಕಳೆದ ಎಂಟೊಂಭತ್ತು ವರ್ಷಗಳಲ್ಲಿ, ‘ಪಿಚ್ಲೆ ಆಟ್-ನೌ ಸಾಲ್ ಮೆ’ ಮಾತ್ರ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಹಿಂದಿನ ಎನ್‌ಡಿಎ ಸರಕಾರ ಮಾಡಿದ್ದ ರಚನಾತ್ಮಕ ಕೆಲಸಗಳ (ಉದಾಹರಣೆಗೆ ಮೂಲಸೌಕರ್ಯ ಮತ್ತು ನಿಯಂತ್ರಣದ ಕುರಿತು) ನೆನಪನ್ನೂ ಮೋದಿ ಮಾಡಿಕೊಳ್ಳುತ್ತಿಲ್ಲ ಎಂಬುದನ್ನು ಗಮನಿಸಬೇಕು. ಮೋದಿ ತಮ್ಮ ಕಣ್ಗಾವಲಿನಲ್ಲಿನ ರಾಷ್ಟ್ರದ ‘ಪ್ರಗತಿ’ಯ ಬಗ್ಗೆ ನೀಡುವ ಗರ್ವದ ಹೇಳಿಕೆಗಳನ್ನು ಬಳಿಕ ಅವರ ಸಂಪುಟದ ಮಂತ್ರಿಗಳು ಮತ್ತು ಬಿಜೆಪಿಯ ಸೋಷಿಯಲ್ ಮೀಡಿಯಾ ಘಟಕ ಇನ್ನಷ್ಟು ಉಬ್ಬಿಸಿ ಹೇಳುತ್ತದೆ. ಅವುಗಳನ್ನು ಓದಿದಾಗ ಅಥವಾ ಕೇಳಿದಾಗ, ಭಾರತವು ಮೇ 2014ಕ್ಕಿಂತ ಮೊದಲು ಆರ್ಥಿಕ ಮತ್ತು ತಾಂತ್ರಿಕವಾಗಿ ಏನೇನೂ ಇಲ್ಲವೆನ್ನುವಷ್ಟು ಹಿಂದಿತ್ತು ಎಂದೇ ಯಾರಾದರೂ ಭಾವಿಸುತ್ತಾರೆ.
ಖಚಿತವಾಗಿ ಹೇಳುವುದಾದರೆ, ದೇಶದ ಪ್ರಗತಿಯ ಕಾಲವನ್ನು ಸ್ವಲ್ಪಹಿಂದಕ್ಕೆ ಜೋಡಿಸುವ ಪರ್ಯಾಯ ನಿರೂಪಣೆಯಿದೆ. ಮುಕ್ತ ಮಾರುಕಟ್ಟೆಯ ಪರಿಣಿತರು ಹೇಳುವ ಪ್ರಕಾರ, ಭಾರತವು ನಿಜವಾಗಿಯೂ ಬೆಳೆಯಲು ಶುರುವಾದದ್ದು 1991ರ ಉತ್ತರಾರ್ಧದ ನಂತರ, ಆರ್ಥಿಕ ಉದಾರೀಕರಣದ ನೀತಿಗಳನ್ನು ಮೊದಲು ಜಾರಿಗೊಳಿಸಿದಾಗ. ಈ ಅಭಿಪ್ರಾಯ, ಸ್ವಾತಂತ್ರ್ಯ ಬಂದ ಸಮಯದಿಂದ ಶುರುವಾಗಿ ನರಸಿಂಹರಾವ್ ಪ್ರಧಾನಿ ಮತ್ತು ಮನಮೋಹನ್ ಸಿಂಗ್ ಹಣಕಾಸು ಸಚಿವರಾಗುವವರೆಗಿನ ನಲವತ್ನಾಲ್ಕು ವರ್ಷಗಳಲ್ಲಿ ದೇಶದ ಅಭಿವೃದ್ಧಿಗಾಗಿ ದಣಿವರಿಯಿಲ್ಲದೆ ದುಡಿದ ಭಾರತೀಯರನ್ನು ಅವಹೇಳನ ಮಾಡುವ ನರೇಂದ್ರ ಮೋದಿಯವರ ಸ್ವಯಂ ಪ್ರಚಾರದ ವಿಜಯೋತ್ಸವಕ್ಕಿಂತ ಹೆಚ್ಚು ನಿಜವಾದುದಾಗಿದೆ.
1947ರಲ್ಲಿ ಭಾರತ ಹತಾಶವೆನ್ನುವಷ್ಟು ಬಡವಾಗಿತ್ತು, ಆಳವಾಗಿ ಒಡೆದುಹೋಗಿತ್ತು ಮತ್ತು ತೀವ್ರ ಅನಕ್ಷರಸ್ಥವಾಗಿತ್ತು. ಅಂತರ್ಯುದ್ಧ, ಕ್ಷಾಮ ಅಥವಾ ಮಿಲಿಟರಿ ಸರ್ವಾಧಿಕಾರದಂಥವುಗಳು ಒಂದರ ಬೆನ್ನಲ್ಲೊಂದು ಅಥವಾ ಒಟ್ಟಿಗೇ ಆವರಿಸಿ, ದೇಶ ತನ್ನ ದೌರ್ಬಲ್ಯಗಳು ಮತ್ತು ವಿರೋಧಾಭಾಸಗಳ ಭಾರದಿಂದ ಕುಸಿದೀತು ಎಂಬ ಅತಂಕವೊಂದು ವ್ಯಾಪಕವಾಗಿತ್ತು. ಆದರೆ ಆ ಭಯಾನಕ ಆತಂಕಗಳೆಂದೂ ನಿಜವಾಗಲಿಲ್ಲ. ಭಾರತ ಒಗ್ಗೂಡಿಯೇ ಉಳಿಯಿತು, ಪ್ರಜಾಸತ್ತಾತ್ಮಕ ಮಾದರಿಯನ್ನು ಕಟ್ಟಿತು. ಆಹಾರ ಸ್ವಾವಲಂಬನೆಯನ್ನು ಸಾಧಿಸಿತು ಮತ್ತು ಸಮಂಜಸವಾದ, ದೃಢವಾದ ತಾಂತ್ರಿಕ ಮತ್ತು ಕೈಗಾರಿಕಾ ನೆಲೆಯನ್ನು ರೂಪಿಸಿತು. ಈ ಏಕೀಕೃತ ಸಾಂಸ್ಥಿಕ ಮತ್ತು ಮೂಲಸೌಕರ್ಯದ ಅಡಿಪಾಯಗಳನ್ನು 1947ರಿಂದ 1991ರ ಅವಧಿಯಲ್ಲಿ ಹಾಕದೇ ಹೋಗಿದ್ದರೆ ಯಾವುದೇ ಐಟಿ, ಬಿಟಿ ಕ್ರಾಂತಿಯಾ ಗುತ್ತಿರಲಿಲ್ಲ, ಯಾವುದೇ ಸ್ಟಾರ್ಟ್‌ಅಪ್ ಸಂಸ್ಕೃತಿ ಇರುತ್ತಿರಲಿಲ್ಲ.
ಈ ಅಂಕಣದಲ್ಲಿ ಹೇಳಲಾದ ವ್ಯಕ್ತಿಗಳ ವ್ಯಾಪಕ ಪ್ರಸ್ತುತತೆ ಇರುವುದೇ ಇಲ್ಲಿ. ನಾಗರಿಕ ಸೇವೆಗಳು, ಸಶಸ್ತ್ರ ಪಡೆಗಳು, ರೈಲ್ವೆ ಅಥವಾ ರಕ್ಷಣಾ ವಲಯಗಳಲ್ಲಿ ಉದ್ಯೋಗಿಯಾಗಿದ್ದರೂ, ಕೃಷಿ, ಕಾರ್ಖಾನೆ, ಶಾಲೆ, ಕಾಲೇಜು, ಆಸ್ಪತ್ರೆ ಅಥವಾ ಸಂಶೋಧನಾ ಪ್ರಯೋಗಾಲಯಗಳಲ್ಲಿ ಕೆಲಸ ಮಾಡುತ್ತಿದ್ದರೂ, ನಂತರದ ತಲೆಮಾರಿಗೆ ಮತ್ತಷ್ಟು ಕಟ್ಟಲು ಅಥವಾ (ಅವರು ಈಗ ಆರಿಸಿಕೊಂಡರೆ) ಹಾಳುಗೆಡವಲು ಒಂದು ಭಾರತವಿದೆ ಎಂದು ಅರಿತಿದ್ದ ಹತ್ತಾರು ಅನುಕರಣೀಯ ಭಾರತೀಯರಲ್ಲಿ ಸುಬ್ರಮಣ್ಯಂ ಚೆನ್ನಕೇಶು ಮತ್ತು ಗೋಪಾಲ್ ತ್ರಿವೇದಿ ಇಬ್ಬರು.