DAB ಕ್ಲೈಮ್ ನಿರಾಕರಿಸಿದ LIC: ನ್ಯಾಯಾಲಯದಿಂದ ನ್ಯಾಯ ಪಡೆದ ನಾಮಿನಿ
ಜೀವವಿಮಾ ಪಾಲಿಸಿದಾರ ತೀರಿಕೊಂಡಾಗ ವಿಮಾ ಸಂಸ್ಥೆಯು ಕ್ಲೈಮ್ (Claim) ಪಾವತಿಸಲು ನಿರಾಕರಿಸುವುದು ಅಥವಾ ವಿಳಂಬಿಸುವುದು ಮಾಮೂಲು. ಜನಸಾಮಾನ್ಯರ ಅನುಭವ - ಅಭಿಮತವಿದು. ಹಾಗಂತ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವೇ ? ಬಂದ ಎಲ್ಲ ಕ್ಲೈಮ್ ಗಳನ್ನು ಪರೀಕ್ಷಿಸದೇ ಪಾವತಿಸುವುದು ಸಿಂಧುವೇ? ಕ್ಲೈಮ್ ಪೇಪರು (Claim Paper)ಗಳ ನಡುವೆ ಅಡಗಿರುವ ಫೇಕ್ ಕ್ಲೈಮ್ (Fake Claim) ಗಳನ್ನು ಗುರುತಿಸುವ ಹದ್ದಿನ ಕಣ್ಣುಗಳು ಎಲ್ಲೈಸಿ(Life Insurance Corporation)ಗೆ ಇರಬೇಕೆನ್ನುವುದು ನಿರ್ವಿವಾದ.
ಅಫಘಾತವೊಂದರಲ್ಲಿ ಪಾಲಿಸಿದಾರ ಮೃತನಾದಾಗ D.A.B. (double accident benefit) ಪಾವತಿಸಲು ತಕರಾರು ಎತ್ತಿದ ಎಲ್ಲೈಸಿಯನ್ನು ನ್ಯಾಯಾಲಯವು ತಿದ್ದಿರುವ ಪ್ರಕರಣವಿದು. D.A.B. ಪ್ರಕಾರ ಆರು ಲಕ್ಷ ರೂ. ಪಾವತಿಸಬೇಕಾಗಿದ್ದ ಎಲ್ಲೈಸಿ ಮೂರು ಲಕ್ಷ ರೂ. ಮಾತ್ರ ಪಾವತಿಸುವುದಾಗಿ ಚೌಕಾಶಿ ಮಾಡಿತು. ಸಂತ್ರಸ್ತರು ನ್ಯಾಯಾಲಯವನ್ನು ಆಶ್ರಯಿಸಿ ನ್ಯಾಯ ಪಡೆದರು.
ಏನಿದು ಪ್ರಕರಣ: ಜೀವವಿಮಾ ಪಾಲಿಸಿ(Life Insurance Policy)ಯನ್ನು ನಿಮಗೆ ಪರಿಚಯಿಸುವ ಹೊತ್ತಿಗೆ ಏಜೆಂಟ್ ಕೇಳುವ ಸಾಮಾನ್ಯ ಪ್ರಶ್ನೆಯೊಂದಿದೆ. "ನಿಮ್ಮ ಪಾಲಿಸಿಗೆ D.A.B. ಬೇಕಾ ?" ಪ್ರೀಮಿಯಂ ಮೊತ್ತಕ್ಕೆ ಒಂದಿಷ್ಟು ನಿಗದಿತ ಹೆಚ್ಚುವರಿ ಮೊತ್ತವನ್ನು ಪಾವತಿಸಿ D.A.B ಆಯ್ಕೆ ಮಾಡಿದರೆ ಭವಿಷ್ಯದಲ್ಲಿ ಪಾಲಿಸಿದಾರ ಅಫಘಾತದಲ್ಲಿ ಮೃತಪಟ್ಟರೆ ದುಪ್ಪಟ್ಟು ಕ್ಲೈಮ್ ಮೊತ್ತವನ್ನು ಎಲೈಸಿ ಪಾವತಿಸುತ್ತದೆ.
ಜಮ್ಮು ನಿವಾಸಿ ಹಮೀದಾ ಬಾನೋ ಈ ಪ್ರಕರಣದ ಸಂತ್ರಸ್ತೆ. ಹಮೀದಾ ತನ್ನ ತಂದೆ 2006ರಲ್ಲಿ ಎಲೈಸಿಯಿಂದ ಮೂರು ಲಕ್ಷ ರೂಪಾಯಿಗಳ ಪಾಲಿಸಿಯನ್ನು D.A.B. ಸಹಿತ ಖರೀದಿಸಿದ್ದರು. ಪಾಲಿಸಿ ಊರ್ಜಿತದಲ್ಲಿ ಇರುವಾಗಲೇ ಅದೊಂದು ದಿನ ಅವರು ತಮ್ಮ ಮನೆಯ ವರಾಂಡದಲ್ಲಿ ಮೇಲಿನಿಂದ ಕೆಳಗೆ ಬಿದ್ದು ತಲೆಗೆ ಏಟು ಬಿದ್ದು ಗಾಯಗಳಾದವು. ಆಸ್ಪತ್ರೆಯ ದಾರಿಯಲ್ಲಿ ಮರಣ ಹೊಂದಿದರು. ಆಸ್ಪತ್ರೆಯ ವೈದ್ಯಾಧಿಕಾರಿ ನೀಡಿರುವ ಮೆಡಿಕಲ್ ಸರ್ಟಿಫಿಕೆಟ್, ಸ್ಥಳೀಯ ಪೋಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿರುವ ಪ್ರತ್ಯೇಕ ಮರಣ ಪ್ರಮಾಣ ಪತ್ರಗಳನ್ನು ಲಗತ್ತಿಸಿ ನಾಮಿನಿ(Nominee)ಯಾಗಿರುವ ಹಮೀದಾ D.A.B. ಸಹಿತ ಆರು ಲಕ್ಷ ರೂಪಾಯಿಗಳ ಕ್ಲೈಮ್ ಸಲ್ಲಿಸಿದರು.
ಎಲ್ಲೈಸಿಯ ಚೌಕಾಶಿ: ತಂದೆಯನ್ನು ಕಳೆದುಕೊಂಡ ತಬ್ಬಲಿ ಹಮೀದಾಗೆ ಇನ್ನೊಂದು ಆಘಾತ ಕಾದಿತ್ತು. ಎಫ್.ಐ.ಆರ್.(FIR) ಪ್ರತಿ ಹಾಜರುಪಡಿಸಿರುವುದಿಲ್ಲ ಎನ್ನುವ ಕಾರಣ ಕೊಟ್ಟು ತನಗೆ D.A.B. ಪಾವತಿಸುವ ಬಾಧ್ಯತೆ ಇಲ್ಲ. ಮೂರು ಲಕ್ಷ ರೂಪಾಯಿ ಮಾತ್ರ ಪಾವತಿಸಲು ಸಾಧ್ಯ ಎಂದುತ್ತರಿಸಿತು ಜೀವವಿಮಾ ನಿಗಮ.
ನಮ್ಮಲ್ಲಿ ಕೆಲವರು ಇಂತಹ ಸನ್ನಿವೇಶಗಳಲ್ಲಿ 'ನಮ್ಮ ನಸೀಬು ಇಷ್ಟೇ...' ಎನ್ನುವ ಮಾತನಾಡಿ ಕೊಟ್ಟದ್ದನ್ನು ಪ್ರಸಾದ ಎಂಬಂತೆ ಸ್ವೀಕರಿಸಿ ತೃಪ್ತರಾಗುತ್ತಾರೆ. ಆದರೆ ಈ ಪ್ರಕರಣದಲ್ಲಿ ಹಾಗಾಗಲಿಲ್ಲ. ಹಮೀದಾ ಎಲ್ಲೈಸಿಯ ನಿರಾಕರಣೆಯ ವಿರುದ್ಧ ಜಮ್ಮು ಕಾಶ್ಮೀರ ರಾಜ್ಯ ಗ್ರಾಹಕ ದೂರು ಪರಿಹಾರ ವೇದಿಕೆ(J&K State Consumer Grievance Redressal Commission)ಯಲ್ಲಿ ದೂರು(Appeal) ದಾಖಲಿಸಿದರು. ವಿಚಾರಣೆಯನ್ನು ನಡೆಸಿದ ವೇದಿಕೆಯು ಆರು ಲಕ್ಷ ರೂಪಾಯಿಗಳ ಕ್ಲೈಮ್ ಮೊತ್ತಕ್ಕೆ 9 ಶೇಕಡ ವಾರ್ಷಿಕ ಬಡ್ಡಿ ಮತ್ತು ಇಪ್ಪತ್ತೈದು ಸಾವಿರ ರೂ. ದಾವೆಯ ಖರ್ಚು ಸೇರಿಸಿ ನಾಮಿನಿಗೆ ಪಾವತಿಸುವಂತೆ ಎಲ್ಲೈಸಿಗೆ ಆದೇಶಿಸಿತು. ವರಾಂಡದಲ್ಲಿ ಮೇಲಿನಿಂದ ಕೆಳಗೆ ಬೀಳುವುದು ಅಪಘಾತವೆಂದು ಒಪ್ಪಿಕೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ಎಫ್.ಐ.ಆರ್. ಹಾಜರುಪಡಿಸುವುದು ಕಡ್ಡಾಯವಲ್ಲ ಎಂದು ಸ್ಪಷ್ಟವಾಗಿಸಿತು. ವೇದಿಕೆಯ ಆದೇಶವನ್ನು ಪಾಲಿಸುವ ಬದಲಿಗೆ ಎಲ್ಲೈಸಿಯು ರಾಜ್ಯದ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು.
ಹೈಕೋರ್ಟಿನ ಚಾಟಿ: ವಿಚಾರಣೆಯನ್ನು ನಡೆಸಿದ ರಾಜ್ಯ ಹೈಕೋರ್ಟ್ ಗ್ರಾಹಕ ವೇದಿಕೆಯ ನಿಲುವು ಸರಿಯಾಗಿಯೇ ಇದೆ ಎಂದು ಎಲ್ಲೈಸಿಯ ಮೇಲ್ಮನವಿಯನ್ನು ತಿರಸ್ಕರಿಸಿತು. ವರಾಂಡದಲ್ಲಿ ಬೀಳುವುದು ಅಪಘಾತ ಎಂದು ಒಪ್ಪಿಕೊಳ್ಳಬೇಕು. ಈ ರೀತಿಯ ಅಪಘಾತಗಳಿಗೆ ಯಾರೊಬ್ಬರನ್ನೂ ಹೊಣೆಗಾರನ್ನಾಗಿಸಲು ಅಸಾಧ್ಯ. ಸಹಜವಾಗಿ ಇಂತಹ ಪ್ರಕರಣಗಳಲ್ಲಿ ಎಫ್.ಐ.ಆರ್. ದಾಖಲಿಸಬೇಕೆಂದು ಸಂತ್ರಸ್ತರಿಗೆ ತಿಳಿಯದೇ ಇದ್ದರೆ ಅದನ್ನೇ ಕಾರಣವನ್ನಾಗಿಸಿ ಕ್ಲೈಮ್ ಮೊತ್ತ ಪಾವತಿಯನ್ನು ನಿರಾಕರಿಸುವಂತಿಲ್ಲ. ಎಫ್.ಐ.ಆರ್. ದಾಖಲಿಸದೇ ಇದ್ದರೂ ಲಭ್ಯ ದಾಖಲೆಗಳ ಆಧಾರದಲ್ಲಿ ನಾಮಿನಿಗೆ ಕ್ಲೈಮ್ ಪಾವತಿಸಲು ಎಲ್ಲೈಸಿಗೆ ಸಾಧ್ಯವಿದೆ ಹಾಗೂ ಬಾಧ್ಯತೆಯೂ ಇದೆ. ಈ ಪ್ರಕರಣದಲ್ಲಿ ಪಾಲಿಸಿದಾರ ಅಪಘಾತಕ್ಕೆ ಒಳಗಾಗಿರುವ ಹಾಗೂ ಅದರಿಂದ ಮರಣ ಹೊಂದಿರುವುದನ್ನು ಸಾಬೀತುಪಡಿಸಲು ಹಾಜರುಪಡಿಸಿರುವ ದಾಖಲೆಗಳು ಸಾಕಾಗುತ್ತವೆ ಎಂದು ರಾಜ್ಯ ಹೈಕೋರ್ಟ್ ತನ್ನ ಅದೇಶದಲ್ಲಿ ಸ್ಪಷ್ಟವಾಗಿಸಿದೆ.
ಉಪಸಂಹಾರ: ನಮ್ಮ ನಡುವೆ ಘಟಿಸುವ ದುರಂತಗಳನ್ನು ನಾವು ಯಾವ ದೃಷ್ಟಿಯಲ್ಲಿ ನೋಡುತ್ತೇವೆ ಎನ್ನುವುದರ ಆಧಾರದಲ್ಲಿ ಆ ದುರಂತಗಳ ಫಲಿತಾಂಶವು ಅಡಗಿದೆ.
ಸುಮಾರು ಎರಡು ವರ್ಷಗಳ ಹಿಂದೆ ಅದೊಂದು ರಾತ್ರಿ ಮೂಡುಬಿದಿರೆಯ ರಾಷ್ಟ್ರೀಯ ಹೆದ್ದಾರಿಯೊಂದರ ಹೊಂಡದಲ್ಲಿ ಬಿದ್ದ ಸ್ಕೂಟರ್ ಸವಾರನಿಗೆ ತಲೆಗೆ ಏಟು ಬಿತ್ತು. ಸಹಸವಾರಳಾಗಿದ್ದ ಮಗಳು ಜನರ ನೆರವು ಪಡೆದು ತಂದೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದಳು. ನಾಲ್ಕೈದು ತಿಂಗಳುಗಳ ಆಸ್ಪತ್ರೆ ವಾಸ, ಶಸ್ತಚಿಕಿತ್ಸೆ, ಹತ್ತಾರು ಲಕ್ಷ ರೂಪಾಯಿಗಳ ಬಿಲ್ ಪಾವತಿಸಿದರೂ ಮಗಳಿಗೆ ಪ್ರೀತಿಯ ಅಪ್ಪನನ್ನು ಉಳಿಸಿಕೊಳ್ಳಲು ಆಗಲೇ ಇಲ್ಲ. ಸಂಬಂಧಿಕರೊಬ್ಬರು ಸ್ಕೂಟರಿನ ಇನ್ಸೂರೆನ್ಸ್ ಪಾಲಿಸಿಯ ಆಧಾರದಲ್ಲಿ ಕ್ಲೈಮ್ ಮಾಡುವ ಬಗ್ಗೆ ಮಾಹಿತಿಯನ್ನು ಸಕಾಲದಲ್ಲಿ ನೀಡಿದರೂ ದುಃಖತಪ್ತ ಮನೆಯವರು "ಯಜಮಾನರನ್ನೇ ಕಳೆದುಕೊಂಡುಬಿಟ್ಟೆವು.. ಅವರ ಮರಣದಲ್ಲಿ ಲಾಭ ಆಗುವುದು ಬೇಕಿಲ್ಲ..." ಎಂದುಬಿಟ್ಟರು.
ಯಜಮಾನರನ್ನು ಕಳೆದುಕೊಂಡ ಮನೆಗೆ ಲಕ್ಷ ರೂಪಾಯಿಗಳ ಕ್ಲೈಮ್ ಮೊತ್ತ ಸಂತೋಷ ತರುವುದಿಲ್ಲ. ಆದರೆ ಬೆನ್ನೆಲುಬನ್ನೇ ಕಳೆದುಕೊಳ್ಳುವ ಕುಟುಂಬಕ್ಕೆ ಆರ್ಥಿಕ ಭದ್ರತೆಯೂ ಬೇಕೆನ್ನುವುದು ವಿಮೆಯ ಉದ್ದೇಶ.
ಸಂಪಾದನೆಯ ಮೂಲವನ್ನು ಅಕಾಲದಲ್ಲಿ ಕಳೆದುಕೊಂಡ ಕುಟುಂಬಗಳು ಬೀದಿಪಾಲಾಗುತ್ತವೆ. ಹಾಗೆ ಆಗಬಾರದು. ನಮ್ಮ ಆದಾಯದ ಮೊತ್ತಕ್ಕೆ ಅನುಗುಣವಾಗಿ ವಿಮಾ ಪಾಲಿಸಿಯ ಸುರಕ್ಷೆಯನ್ನು ಹೊಂದುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಆಗಷ್ಟೇ ನಮ್ಮ ನಂತರವೂ ನಮ್ಮ ಅವಲಂಬಿತರು ಸುರಕ್ಷಿತರಾಗಿರಬಲ್ಲರು.
ಮಾಹಿತಿ: https://www.barandbench.com/news/registration-fir-not-required-processing-life-insurance-policy-insured-dies-accident-jammu-kashmir-high-court