ಬೂತ್ ವಿಜಯ ಸಂಕಲ್ಪದೊಂದಿಗೆ ಕ್ಷೇತ್ರ, ರಾಜ್ಯವನ್ನು ಗೆಲ್ಲಿಸಿ: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಕರೆ
ಹಿರಿಯಡ್ಕ: ಜಿಲ್ಲೆಯ 1,111 ಬೂತ್‌ಗಳಲ್ಲೂ ಜ.2ರಿಂದ ಜ.12ರ ವರೆಗೆ ನಡೆಯಲಿರುವ ಬೂತ್ ವಿಜಯ ಅಭಿಯಾನದಲ್ಲಿ ಪಕ್ಷದ ಎಲ್ಲ ಸ್ಥರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಣ್ಣ ಪುಟ್ಟ ವಿಚಾರಗಳನ್ನು ಬದಿಗಿಟ್ಟು ಬೂತ್ ವಿಜಯದ ಸಂಕಲ್ಪದೊಂದಿಗೆ ಕ್ಷೇತ್ರ ಮತ್ತು ರಾಜ್ಯವನ್ನು ಗೆಲ್ಲಲು ಸನ್ನದ್ಧರಾಗಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಬಿಜೆಪಿ ವತಿಯಿಂದ ನಡೆದಿರುವ ‘ಬೂತ್ ವಿಜಯ ಅಭಿಯಾನ’ವನ್ನು ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೊಮ್ಮರಬೆಟ್ಟು ಗ್ರಾಮದ ಹಿರಿಯಡ್ಕ ಕೋಟ್ನಕಟ್ಟೆಯ ಹೋಟೆಲ್ ಸುರಭಿ ಸಭಾಂಗಣದಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬೂತ್ ಗೆಲ್ಲುವ ಮೂಲಕ ರಾಜ್ಯವನ್ನು ಗೆಲ್ಲುವ ಬಿಜೆಪಿ ರಾಷ್ಟ್ರೀಯ ನಿಕಟ ಪೂರ್ವ ಅಧ್ಯಕ್ಷ ಅಮಿತ್ ಶಾ ಕನಸು ನನಸಾಗಬೇಕು. ಕಾಪು ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ಧಿ ಕಾರ್ಯಗಳಾಗಿವೆ. ಈ ನಿಟ್ಟಿನಲ್ಲಿ ಪ್ರಚಾರದ ಅಗತ್ಯವಿದೆ. ಕಾಪು ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲುವು ಮುಂದುವರಿಸಲು ರೂಪುರೇಷೆ ರೂಪಿಸಬೇಕು ಎಂದವರು ಹೇಳಿದರು.
ಪ್ರತಿ ಬೂತಿನಲ್ಲೂ ಫಲಾನುಭವಿಗಳ ಸಮಾವೇಶ, ಪ್ರತಿ ಮಂಡಲದಲ್ಲೂ ವಿವಿಧ ಮೋರ್ಚಾಗಳ ಸಮಾವೇಶ ನಡೆಸಬೇಕು. ಪ್ರತಿ ಬೂತಿನಲ್ಲೂ ಬೂತ್ ಸಮಿತಿಗಳ ಪರಿಶೀಲನೆ, ಪೇಜ್ ಪ್ರಮುಖರ ನಿಯುಕ್ತಿ, ಮತಗಟ್ಟೆಗಳ ವಾಟ್ಸಾಪ್ ಗ್ರೂಪ್ ರಚನೆ, ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ, ಪ್ರಧಾನಿಯವರ ಮನ್ ಕೀ ಬಾತ್ ವೀಕ್ಷಣೆ ಮುಂತಾದ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸಂಘಟನಾತ್ಮಕ, ಅಲ್ಪಸಂಖ್ಯಾತರ ಪ್ರಾಬಲ್ಯವುಳ್ಳ ಕಾಪು ಕ್ಷೇತ್ರದಲ್ಲಿ ಎಸ್‌ಡಿಪಿಐ ರಾಜಕೀಯವಾಗಿ ಬೆಳವಣಿಗೆ ಕಾಣುತ್ತಿದ್ದು ಸಕಾರಾತ್ಮಕ ನೆಲೆಯಲ್ಲಿ ಬೂತ್ ಬಲವರ್ಧನೆಯಾಗಬೇಕು. 3,000 ಕೋಟಿ ರೂ. ಅಭಿವೃದ್ಧಿ ಕಾಮಗಾರಿ ಕ್ಷೇತ್ರದಲ್ಲಿ ಪ್ರಗತಿಯಲ್ಲಿದೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ ಮಾಂಬೆಟ್ಟು ಉಪಸ್ಥಿತರಿದ್ದರು.
ಕಾಪು ಮಂಡಲಾಧ್ಯಕ್ಷ ಶ್ರೀಕಾಂತ್ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಬೊಮ್ಮರಬೆಟ್ಟು ಬೂತ್ 2ರ ಅಧ್ಯಕ್ಷ ಶಿಶಿರ್ ಮನೆಯಲ್ಲಿ ಬಿಜೆಪಿ ಧ್ವಜವನ್ನು ಹಾರಿಸಲಾಯಿತು.