ಗಡಿ ವಿವಾದಗಳಿಗೆ ಭಾಷೆ ಒಂದು ನೆಪವಷ್ಟೆ!
ರಾಜ್ಯ ಸರಕಾರ ಬೆಳಗಾವಿ ಅಧಿವೇಶನವನ್ನು ನಡೆಸಿದ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜಕಾರಣಿಗಳು, ಬೆಳಗಾವಿ ನಮಗೆ ಸೇರಿದ್ದು ಎಂದು ಒಳನುಗ್ಗಿ ಬಂದದ್ದು, ನಮ್ಮ ಸರಕಾರ ಅವರನ್ನು ರಾಜ್ಯ ಗಡಿಯಲ್ಲಿ ತಡೆದದ್ದು; ನಂತರ ಮಹಾರಾಷ್ಟ್ರಕ್ಕೆ ಸೇರಿದ ಕೆಲವು ಹಳ್ಳಿಗರು ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಕೇಳಿಕೊಂಡಿದ್ದು; ಆ ಕಡೆಯ ರಾಜಕಾರಣಿಗಳು ಒಂದಿಂಚು ನೆಲವನ್ನು ಕರ್ನಾಟಕಕ್ಕೆ ಬಿಟ್ಟುಕೊಡುವುದಿಲ್ಲ ಎಂದದ್ದು, ಪ್ರತಿಯಾಗಿ ರಾಜ್ಯ ಸರಕಾರ ಮಹಾಜನ್ ವರದಿ ಅಂತಿಮ ಎಂದು ನೆನಪಿಸಿದ್ದು; ಅದಕ್ಕೆ ಆ ಕಡೆಯವರು ಬೆಳಗಾವಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಮರಾಠಿ ಮಾತನಾಡುವ ಜನರಿದ್ದಾರೆ ಆದ್ದರಿಂದ ಬೆಳಗಾವಿ ನಮಗೆ ಸೇರಿದ್ದು ಎಂದು ಕೋರ್ಟಿಗೆ ಹೋಗಿರುವುದು; ಅದಕ್ಕೆ ಉತ್ತರವಾಗಿ ರಾಜ್ಯ ರಾಜಕಾರಣಿಗಳು ಮುಂಬೈಯಲ್ಲಿ ಮರಾಠಿಗರು ಅಲ್ಪಸಂಖ್ಯಾತರು ಆದ್ದರಿಂದ ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಎಂದು ಹೇಳಿದ್ದು; ಮಹಾರಾಷ್ಟ್ರದ ಕಡೆಯ ಶಾಸಕರೊಬ್ಬರು ಮುಂಬೈ ಇವರಪ್ಪನ ಆಸ್ತಿಯಲ್ಲ ಎಂದು ಸಿಡಿದೆದ್ದದ್ದು; ಅದಕ್ಕೆ ಪ್ರತಿಯಾಗಿ ಈ ಕಡೆಯವರು ಬೆಳಗಾವಿ ನಿಮ್ಮ ತಾತನ ಆಸ್ತಿಯಲ್ಲ ಎಂದು ಉತ್ತರ ಕೊಟ್ಟಿದ್ದು; ಭಾರತದ ಗಡಿಯೊಳಕ್ಕೆ ಚೀನಾ ಸೇನೆ ನುಗ್ಗಿಸಿದಂತೆ ಮಹಾರಾಷ್ಟ್ರ ಪರ ವೀರನೊಬ್ಬ ಆಗ ಮೈಮೇಲೆ ಪ್ರಜ್ಞೆಯೇ ಇಲ್ಲದೆ ನಾವು ಕರ್ನಾಟಕದೊಳಕ್ಕೆ ನುಗ್ಗಿ ಬಿಡುತ್ತೇವೆ ಎಂದು ಉಛಾಯಿಸಿಬಿಟ್ಟ! ಇಂತಹ ಪ್ರಹಸನಗಳು ನಡೆದು ಹೋದವು. ಬೆಳಗಾವಿ ಅಧಿವೇಶನ ನಡೆದ ಸಂದರ್ಭಗಳಲ್ಲೆಲ್ಲಾ ಹೀಗೆ ಪ್ರಹಸನಗಳು ನಡೆದೇ ತೀರುತ್ತವೆ. ಕಳೆದ ಸಲ ಮಹಾದಾಯಿ-ಕಳಸಾ ಬಂಡೂರಿ ನೀರು ಹಂಚಿಕೆ ಬಗ್ಗೆ ವಿವಾದಗಳು ಗರಿಕೆದರಿದರೆ ಈ ಸಲ ಭಾಷಾ ವಿವಾದ ಗರಿಕೆದರಿತು. ಮುಂದಿನ ವರ್ಷಕ್ಕೆ ಇನ್ನಾವ ವಿವಾದ ಹುಟ್ಟಿಕೊಳ್ಳುವುದೋ!
ಕುಂಬಳಕಾಯಿ ನಿನ್ನದೆ ಕುಡುಗೋಲು ನಿನ್ನದೇ!
ಆದರೆ ಈ ಸಲದ ಭಾಷಾವಿವಾದ ಕಳೆದ ಐವತ್ತು ವರ್ಷಗಳ ಹಿಂದೆಯೇ ಕೊನೆಗೊಂಡ ಈ ವಿವಾದ ಮತ್ತೆ ಭುಗಿಲೆದ್ದಿದ್ದು ಯಾಕೆ? ಅದೂ ಎರಡು ರಾಜ್ಯಗಳು ಕೇಂದ್ರ ಕೃಪಾಪೋಷಿತ ನಾಟಕ ಮಂಡಳಿಗೆ ಸೇರಿದ ಆಡಳಿತವನ್ನೇ ಹೊಂದಿವೆ. ಮಹಾರಾಷ್ಟ್ರದ ಏಕನಾಥ ಶಿಂದೆ ನೇತೃತ್ವದ ಸರಕಾರಕ್ಕೆ ಕೇಂದ್ರ ಸರಕಾರದ ಬೆಂಬಲವಿದ್ದರೆ, ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವೇ ಇದೆ. ಹಾಗಾದರೆ ಗಡಿ ಸಮಸ್ಯೆಯನ್ನು ಬಗೆಹರಿಸಲು ಸದ್ಯ ಕೇಂದ್ರಕ್ಕೆ ಇರುವ ಅಡಚಣೆ ಏನು? ಕುಂಬಳಕಾಯಿ ಕುಡುಗೋಲು ಎರಡೂ ಕೇಂದ್ರದ ಬಳಿಯೇ ಇದೆ. ಹಾಗಾದರೆ ಯಾಕೆ ಪ್ರೇಕ್ಷಕನಂತೆ ಸುಮ್ಮನಿದೆ? ಇನ್ನು ಈ ಗಡಿ ವಿವಾದ ಸಾಕು ಎಂದು ಗದರಿ ಹೇಳಬಾರದೇ?
ಆದರೆ ಈ ಮೌನಕ್ಕೆ ಅರ್ಥವಿದೆ. ಕುಂಬಳಕಾಯಿ ಇನ್ನೂ ಹದಕ್ಕೆ ಬಂದಿಲ್ಲ. ಬಹುಶಃ ರಾಜ್ಯ ಚುನಾವಣೆ ಕಾಲಕ್ಕೆ ಅದು ಹದಕ್ಕೆ ಬರಬಹುದು. ಅಷ್ಟರಲ್ಲಿ ದೈನಂದಿನ ಕದಡಿದ ಮತದಾರನ ಮನಸ್ಸು ತಿಳಿಯಾಗಬಹುದು. ಅದರಲ್ಲಿ ಹಿಂದುತ್ವದ ದೇವಾದಿ ದೇವತೆಗಳ ಮೆರವಣಿಗೆ ಪ್ರತಿಫಲಿಸಬಹುದು. ಅದನ್ನು ಕಂಡು ಮತದಾರ ಎಲ್ಲ ಸಮಸ್ಯೆಗಳನ್ನು ಮರೆಯಬಹುದು.
ಸದ್ಯ ಏನಾದರೂ ಬಾಯಿ ತೆರೆದರೆ ರಾಜ್ಯಸರಕಾರದ ಬೇಳೆ ಬಯಲಾಗುವ ಭಯ ಕಾಡುತ್ತಿದೆ. ಆ ಭಯಕ್ಕೆ ಕಾರಣವಾದ ಕೆಲವನ್ನು ಪ್ರಸ್ತಾಪಿಸುವುದಾದರೆ, ಭ್ರಷ್ಟಾಚಾರ ಮಿತಿಮೀರುತ್ತಿದೆ; ಪೊಲೀಸ್ ನೇಮಕಾತಿ ಹಗರಣ, ಗುತ್ತಿಗೆದಾರರ ಶೇ.40 ಕಮಿಷನ್ ದೂರು; ರಾಜ್ಯ ರಸ್ತೆಗಳ ಹೊಂಡದಲ್ಲಿ ಮುಳುಗಲಾರದೆ ಕೆಲವು ಕೈಗಾರಿಕೆಗಳು ದಕ್ಷಿಣದ ಕೆಲವು ರಾಜ್ಯಗಳಿಗೆ ವಲಸೆ ಕೀಳುತ್ತಿವೆ; ಅಲ್ಪಸಂಖ್ಯಾತ ಬಡ ವ್ಯಾಪಾರಿಗಳಿಗೆ ದಿಗ್ಬಂಧನಗಳಿವೆ; ಹಿಜಾಬ್, ಲವ್‌ಜಿಹಾದ್, ಎಸ್‌ಸಿ/ಎಸ್‌ಟಿ ಒಳ-ಹೊರ ಮೀಸಲಾತಿ ಏರುಪೇರು; ಗೋವಧೆ ನಿಷೇಧದಿಂದ ರಾಸುಗಳ ಸಂಖ್ಯೆ ಇಳಿಮುಖವಾಗುತ್ತಿರುವುದು; ಸುದ್ದಿ ಮಾಧ್ಯಮಗಳು ಹಿಂದುತ್ವದ ಕಡೆಗೆ ಒಮ್ಮುಖವಾಗಿ ವಾಲುತ್ತಿರುವುದು, ಬಹುಸಂಖ್ಯಾತ ಕೋಮುಗಳ ಬಡವರನ್ನು ಹತಾರಗಳನ್ನಾಗಿ ಮಾಡಿಕೊಂಡು ಅಲ್ಪಸಂಖ್ಯಾತರ ಕಡೆಗೆ ಝಳಪಿಸುತ್ತಿರುವುದು, ಶಾಲಾ ಪಠ್ಯಗಳು, ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಾಂಸ್ಕೃತಿಕ ಉತ್ಸವಗಳಲ್ಲಿ ಕೆಲವರಿಗೆ ಮನ್ನಣೆ ನೀಡಿ ಅಲ್ಪಸಂಖ್ಯಾತ ಹಾಗೂ ದಲಿತರನ್ನು ಅಸ್ಪಶ್ಯರಂತೆ ದೂರ ಇಟ್ಟಿರುವುದು... ಈ ಮುಂತಾದ ಬೆಳವಣಿಗೆಯಿಂದ ಆಳುವ ಸರಕಾರದ ಬಗ್ಗೆ ಜನಾಭಿಪ್ರಾಯ ಹಿಂಜರಿಯುತ್ತಿದೆ.
ಬಿಜೆಪಿಯ ಮುಜುಗರಕ್ಕೆ ಇಂತಹ ಸಾಲುಗಟ್ಟಿದ ಕಾರಣಗಳುಂಟು. ಇದು ಮುಂಬರುವ ಚುನಾವಣೆಯಲ್ಲಿ ಉತ್ತಮ ಫಲ ನೀಡಲಾರದು ಎಂಬ ಭಯ ಅದಕ್ಕಿದೆ. ಅತ್ತ ಮಹಾರಾಷ್ಟ್ರದಲ್ಲಿ ಆಳುವ ಶಿಂದೆಯ ಕೂಟ ಸರಕಾರವೂ ಸಹ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ. ಹೀಗಾಗಿ ಎರಡೂ ಕಡೆಯ ರಾಜಕಾರಣಿಗಳು ಗಡಿಯತ್ತ ಗುರಿ ಮಾಡಿ ತೊಡೆ ತಟ್ಟಿ ಜನರ ಗಮನ ಅತ್ತ ಸೆಳೆಯಲು ಹೊರಟಂತೆ ಕಾಣುತ್ತಿದೆ. ಸದ್ಯ ಬೆಳಗಾವಿ ಅಧಿವೇಶನ ಮುಗಿಯಿತು. ಗಡಿ ವಿವಾದ ತನಗೆ ತಾನೇ ನಿಂತಿತು. ಈಗ ತಿಳಿಯಿತಲ್ಲ ಈ ಭಾಷಾ ವಿವಾದ ಬೇಕಾಗಿರುವುದು ಕೇವಲ ರಾಜಕಾರಣಿಗಳಿಗಷ್ಟೆ. ಇಲ್ಲವಾದರೆ ಜನರು ನೆಮ್ಮದಿಯಿಂದಲೇ ಬದುಕುತ್ತಾರೆ.
'ಕೋಣವೆರಡು ಹೋರಾಡೆ ನಡುವೆ ಗಿಡುವಿಂಗೆ ಮೃತ್ಯು' ಎಂಬಂತೆ ಪ್ರಸಕ್ತ ಗಡಿ ಪ್ರಹಸನಗಳಿಂದ ಮರಾಠಿಗರ ಹಾಗೂ ಕನ್ನಡಿಗರ ಶತಮಾನದ ಭಾಷಿಕನಂಟು ಪದೇ ಪದೇ ಛಿದ್ರಗೊಳ್ಳುವ ಅಪಾಯದಲ್ಲಿದೆ. ಆದ್ದರಿಂದ ಮಾತು ಮಾತಿಗೆ ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮ, ಒಂದು ಜನಾಂಗ ಇತ್ಯಾದಿ ಎಂದು ಭಾವೈಕ್ಯತೆಯ ಸೊಲ್ಲೆತ್ತುವ ಬಿಜೆಪಿ ಸರಕಾರ ಗಡಿ ಸಮಸ್ಯೆ ಇನ್ನು ಮುಂದೆ ಉಲ್ಬಣಗೊಳ್ಳದಂತೆ ಮಹಾಜನ್ ವರದಿಯೇ ಅಂತಿಮ ಎಂದು ಹೇಳುವ ಮೂಲಕ ಎರಡೂ ರಾಜ್ಯದ ಗಡಿ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು. ಯಾಕೆಂದರೆ ಈಗ ಕಾಯಿ ಮತ್ತು ಕುಡುಗೋಲು ಎರಡೂ ಕೇಂದ್ರ ಸರಕಾರದ ಬಳಿಯೇ ಇದೆ. 2023ರ ಹೊಸವರ್ಷದ ಶುಭಾಶಯ ಕೊಡುಗೆ ಇದಾಗಬಹುದೆಂದು ನಾವು ನಿರೀಕ್ಷಿಸಬಹುದೇ?