ಮಲ್ಪೆ: ಬಂಡೆಗೆ ಬಡಿದು ಮುಳುಗಿದ ಮೀನುಗಾರಿಕಾ ದೋಣಿ
ಮಲ್ಪೆ, ಜ.6: ಮಲ್ಪೆಯಿಂದ ಮೀನುಗಾರಿಕೆಗೆ ಹೊರಟಿದ್ದ ದೋಣಿಯೊಂದು ಸಮುದ್ರ ಮಧ್ಯೆ ಬಂಡೆಗೆ ಬಡಿದು ಹಾನಿಗೀಡಾದ ಘಟನೆ ವರದಿಯಾಗಿದೆ. ದೋಣಿಯಲ್ಲಿದ್ದ ಎಲ್ಲ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.
ಬಡಾನಿಡಿಯೂರಿನ ಭಾಸ್ಕರ್ ಎಂ. ಪುತ್ರನ್ ಎಂಬವರಿಗೆ ಸೇರಿದ ಸ್ವರ್ಣಗೌರಿ ದೋಣಿ ಡಿ.30ರಂದು ರಾತ್ರಿ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿತ್ತು. ಜ.3ರಂದು ಮುಂಜಾನೆ ಕಾಪುವಿನಿಂದ ನೇರ 8 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಬಂಡೆಗೆ ಬಡಿದ ಪರಿಣಾಮ ಹಲಗೆ ಒಡೆದು ನೀರು ನುಗ್ಗಲಾರಂಭಿಸಿತು. ಸ್ವರ್ಣಗೌರಿ ದೋಣಿಯ ತಾಂಡೇಲರು ಸಮೀಪದಲ್ಲೇ ಇದ್ದ ವರುಣ ದೋಣಿಗೆ ಮಾಹಿತಿ ರವಾನಿಸಿ ರಕ್ಷಣೆ ಕೋರಿದರು. ತತ್‌ಕ್ಷಣ ಧಾವಿಸಿ ಬಂದ ಆ ದೋಣಿಯವರು ಮುಳುಗುತ್ತಿದ್ದ ದೋಣಿಯಲ್ಲಿದ್ದ ಎಲ್ಲ ಐವರನ್ನು ರಕ್ಷಿಸಿದರು. ಬಂಡೆಗೆ ಬಡಿದ ದೋಣಿಯ ರಕ್ಷಣೆ ಸಾಧ್ಯವಾಗಲಿಲ್ಲ.
6 ಸೆಟ್ ಬಲೆ, ರೋಪು, ಡ್ರಮ್‌ವಿಂಚ್, ಎಂಜಿನ್, 2 ಸಾವಿರ ಲೀ. ಡೀಸೆಲ್ ಸಮುದ್ರಪಾಲಾಗಿದೆ. ಸುಮಾರು 30 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು | ಪೊಲೀಸರ ವಶದಲ್ಲಿದ್ದ ದಲಿತ ಯುವಕ ಸಾವು:ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ